ಧಾರವಾಡ: ಸರ್ಕಾರಗಳು ಪ್ರತಿಯೊಬ್ಬರ ಜೀವದ ರಕ್ಷಣೆ ಹಾಗೂ ಜೀವನದ ಭದ್ರತೆ, ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತವೆ. ಆದರೆ ಜನರ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಪೊಲೀಸ್ ಸ್ನೇಹ ಜನವ್ಯವಸ್ಥೆ ರೂಪುಗೊಂಡಾಗ ಮಾತ್ರ ಆ ಯೋಜನೆಗಳು ಯಶಸ್ವಿಯಾಗುತ್ತವೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್ ಹೇಳಿದರು.
ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯು ಜಿಲ್ಲಾಡಳಿತ, ಸಾರಿಗೆ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ 30 ನೆಯ ರಾಷ್ಟಿಯ ರಸ್ತೆ ಸುರಕ್ಷತಾ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಗಳು ಜನರಿಗಾಗಿ ಯೋಜನೆಗಳನ್ನು ಜಾರಿಗೆ ತರುತ್ತವೆ. ಅವರ ಪಾಲ್ಗೊಳ್ಳುವಿಕೆಯಿಂದ ಯೋಜನೆ ಉದ್ದೇಶ ಈಡೇರುತ್ತದೆ. ಜನಗಳು ಪೊಲೀಸ್ ಆಗಬೇಕು ಮತ್ತು ಪೊಲೀಸರು ಸಹೃದಯ ನಾಗರಿಕರಾಗಬೇಕು. ಅಂದಾಗ ಮಾತ್ರ ಅಪಘಾತ, ಅಪರಾಧ, ಅನಾಹುತಗಳು ಕಡಿಮೆ ಆಗುತ್ತವೆ ಎಂದರು.
ಅವಳಿ ನಗರದಲ್ಲಿ ಚಾಲಕರ ಸುರಕ್ಷತೆಗಾಗಿ ಹೆಲ್ಮೆಟ್ ಇಲ್ಲದವರಿಗೆ ಪೆಟ್ರೋಲ್ ಬೇಡ ಎಂಬ ನಿಯಮ ಜಾರಿಗೆ ತರಲಾಗಿತ್ತು. ಆದರೆ ವಾಹನ ಸವಾರರು ನಿರಾಸಕ್ತಿ ತೋರಿಸಿದರು. ವಾಹನ ಚಾಲನೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅವಳಿ ನಗರದಲ್ಲಿ 2016 ರಲ್ಲಿ 3 ಕೋಟಿ, 2017 ರಲ್ಲಿ 4.5 ಕೋಟಿ ಮತ್ತು 2018 ರಲ್ಲಿ 6.5 ಕೋಟಿ ರೂ.ಗಳನ್ನು ವಾಹನ ಸವಾರರಿಂದ ದಂಡ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕಳೆದ ವರ್ಷ ಅವಳಿ ನಗರ ವ್ಯಾಪ್ತಿಯಲ್ಲಿ 26 ಕೊಲೆ ಪ್ರಕರಣ ಮತ್ತು 400 ಅಪಘಾತದಲ್ಲಿ ಸಾವು ಸಂಭವಿಸಿವೆ. ಪೊಲೀಸ್ ಇಲಾಖೆ ಪರಿಣಾಮಕಾರಿ ಕಾರ್ಯ ಮತ್ತು ಮುಂಜಾಗೃತೆಗಳಿಂದಾಗಿ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಶೇ.38 ರಷ್ಟು ಕೊಲೆ, ಅಪರಾಧ ಪ್ರಕರಣಗಳು ಪ್ರಸಕ್ತ ಸಾಲಿನಲ್ಲಿ ಕಡಿಮೆ ಆಗಿವೆ. ತಿಳುವಳಿಕೆ ಕೊರತೆ, ಮುಂಜಾಗ್ರತೆ ಇಲ್ಲದಿರುವುದು ದಿನನಿತ್ಯದ ಅಪಘಾತಗಳಿಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ ಮತ್ತು ನೇಚರ್ ಫಸ್ಟ್ ಇಕೋ ವಿಲೇಜ್ ಅಧ್ಯಕ್ಷ ಪಿ.ವಿ. ಹಿರೇಮಠ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಸಿಇಓ ಡಾ.ಬಿ.ಸಿ. ಸತೀಶ ಮಾತನಾಡಿದರು.
ಉಪಪೊಲೀಸ್ ಆಯುಕ್ತ ರವೀಂದ್ರ ಗಡಾದಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ಎಂ. ದೊಡ್ಡಮನಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆÃಶಕ ಆರ್.ಎಸ್. ಮುಳ್ಳೂರ, ಎನ್‌ಡಬ್ಲೂಕೆಎಸ್‌ಆರ್‌ಟಿಸಿ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ವಿಶ್ವಜ್ಞ, ಜಿಲ್ಲಾ ಉಪಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮನಗೌಡ ಹಟ್ಟಿ, ಜಿಲ್ಲಾ ಅರ್ಥೊಪೇಡಿಕ್ ಅಸೋಸಿಯೇಷನ್ ಅಧ್ಯಕ್ಷ ಡಾ.ಸತೀಶ್ ಇರಕಲ್ಲ, ಧಾರವಾಡ ಬಾಂಡ್ಸ್ ಅಧ್ಯಕ್ಷ ಕಿರಣ ಹಿರೇಮಠ, ಸಹಾಯಕ ಪೊಲೀಸ್ ಆಯುಕ್ತ ಎಂ.ಎನ್. ನಾಗನೂರ ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆ ಕುರಿತ ಕರಪತ್ರಗಳನ್ನು ಸಿಇಓ ಡಾ.ಬಿ.ಸಿ. ಸತೀಶ್, ಸ್ಟಿಕರ್‌ಗಳನ್ನು ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ, ಸುರಕ್ಷತಾ ಜಾಗೃತಿಯ ವಿಡಿಯೋ ಕ್ಲಿಪ್‌ಗಳನ್ನು ಉಪಪೊಲೀಸ್ ಆಯುಕ್ತ ರವೀಂದ್ರ ಗಡಾದಿ ಮತ್ತು ಮಾಹಿತಿ ಪುಸ್ತಕಗಳನ್ನು ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್ ಬಿಡುಗಡೆ ಮಾಡಿದರು.
ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂಚಾರಿ ಪೊಲೀಸ್ ಇನ್ಸ್’ಪೆಕ್ಟರ್ ಮುರಗೇಶ್ ಚಣ್ಣನ್ನವರ ಸ್ವಾಗತಿಸಿ, ವಂದಿಸಿದರು. ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಕಾರ್ಯದರ್ಶಿ ಆಗಿರುವ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ರವೀಂದ್ರ ಕವಲಿ ಪ್ರಾಸ್ತಾವಿಕವಾಗಿ ಮಾತನಾಡಿ, ರವಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.
Discussion about this post