ಕಲ್ಪ ಮೀಡಿಯಾ ಹೌಸ್
ಹುಬ್ಬಳ್ಳಿ: ನಗರದ ದೇಶಪಾಂಡೆ ಫೌಂಡೇಷನ್ ಸೇರಿದಂತೆ ಹಲವು ಎನ್‌ಜಿಓಗಳಿಂದ ಇಂದು 70 ಆಕ್ಸಿಜನ್ ಸಾಂದ್ರಕಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.
ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಹಾಗೂ ರಾಜ್ಯ ಸರ್ಕಾರದಿಂದ 80 ಆಕ್ಸಿಜನ್ ಸಾಂದ್ರಕಗಳು ಜಿಲ್ಲೆಗೆ ಲಭಿಸಲಿವೆ. ಇವುಗಳನ್ನು ಹೊಸದಾಗಿ ನಿರ್ಮಿಸುವ ಕೋವಿಡ್ ಆಸ್ಪತ್ರೆಗಳಲ್ಲಿ ಬಳಸಲಾಗುವುದು ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ವೇದಾಂತ ಫೌಂಡೇಷನ್ ವತಿಯಿಂದ ಕಿಮ್ಸ್‌ನಲ್ಲಿ 100 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಿ ದೇಣಿಗೆ ನೀಡುತ್ತಿದ್ದಾರೆ. ಒನ್ ಮೋರ್ ಬ್ರೆಥ್ ಎನ್ನುವ ಎನ್‌ಜಿಓ ವತಿಯಿಂದ ಜಿಲ್ಲಾ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಲಿದ್ದಾರೆ. ದೇಶಪಾಂಡೆ ಫೌಂಡೇಷನ್ ವತಿಯಿಂದ 250 ಲೀಟರ್ ಸಾಮರ್ಥ್ಯದ ೨ ಡೋರಾ ಸಿಲೆಂಡರ್‌ಗಳನ್ನು ನೀಡಿದ್ದಾರೆ ಎಂದು ವಿವರಿಸಿದರು.
ಎಂಆರ್‌ಪಿಎಲ್ ಹಾಗೂ ಓಎನ್‌ಸಿಸಿ ಕಂಪನಿ ವತಿಯಿಂದ 4 ಟನ್ ಸಾಮರ್ಥ್ಯದ ಆಕ್ಸಿಜನ್ ಜೆನರೇಟರ್ ನೀಡಲಿದ್ದಾರೆ. ಎಲ್&ಟಿ ಕಂಪನಿ ವತಿಯಿಂದ ಕಿಮ್ಸ್ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕ ನಿರ್ಮಿಸಲು ಮಾತುಕತೆ ನಡೆಸಲಾಗಿದೆ ಎಂದರು.
ಎನ್‌ಜಿಓ ಹಾಗೂ ವಿವಿಧ ಕಂಪನಿಗಳಿಂದ ಸಾಕಷ್ಟು ನೆರವು ಹರಿದು ಬರುತ್ತಿದ್ದು, ಸರ್ಕಾರದೊಂದಿಗೆ ಕೈಜೋಡಿಸಿ, ಸಾರ್ವಜನಿಕರ ಸಹಕಾರಕ್ಕೆ ಮುಂದಾಗಿರುವ ಖಾಸಗಿ ಸಂಸ್ಥೆಗಳಿಗೆ ಇದೇ ಸಂದರ್ಭದಲ್ಲಿ ಸಚಿವರು ಅಭಿನಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post