ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಪಿಎಸ್ʼಐ ಆಯ್ಕೆ ಪರೀಕ್ಷೆಯನ್ನೂ PSI Exam ರದ್ದು ಮಾಡಿ, ಮತ್ತೆ ಹೊಸದಾಗಿ ಪರೀಕ್ಷೆ ನಡೆಸುವ ರಾಜ್ಯ ಸರಕಾರದ ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ Former CM H D Kumaraswamy ವಿರೋಧಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ತಮ್ಮನ್ನು ಭೇಟಿಯಾದ ಪಿಎಸ್ʼಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಜತೆ ಚರ್ಚೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಹಣದ ದುರಾಸೆಗೆ ಬಿದ್ದು ಕೆಲ ಧನ ಪಿಶಾಚಿಗಳು ತಪ್ಪು ಮಾಡಿದ್ದಾರೆ. ಸುಲಭವಾಗಿ ದುಡ್ಡು ಮಾಡುವ ದುರುದ್ದೇಶದಿಂದ ಇಡೀ ವ್ಯವಸ್ಥೆಯನ್ನು ಹಾಳು ಮಾಡಲು ಹೊರಟಿರುವ ಅಂಥವರನ್ನು ಮೊದಲು ಹಿಡಿದು ಶಿಕ್ಷಿಸಿ. ಯಾವ ಅಭ್ಯರ್ಥಿಗಳು ಅಡ್ಡದಾರಿಯಲ್ಲಿ ಪಾಸಾಗಿದ್ದಾರೋ ಅಂಥವರನ್ನು ಪತ್ತೆ ಹಚ್ಚಿ. ಅದರ ಹೊರತಾಗಿ ಈಗಾಗಲೇ ಪ್ರಾಮಾಣಿಕತೆಯಿಂದ ಪರೀಕ್ಷೆ ಬರೆದು ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗೆ ಅನ್ಯಾಯ ಆಗಲು ಬಿಡಬಾರದು. ಅನೇಕ ಬಡ ಅಭ್ಯರ್ಥಿಗಳು ಪಾಸಾಗಿದ್ದು, ಅವರಿಗೆ ತೊಂದರೆ ಆಗಬಾರದು ಎಂದು ಅವರು ಹೇಳಿದರು.
ಪರೀಕ್ಷೆಯ ಅಕ್ರಮ ಈಗ ತನಿಖೆಯ ಹಂತದಲ್ಲಿದ್ದು, ಈಗಲೇ ಮರು ಪರೀಕ್ಷೆ ನಡೆಸುತ್ತೇವೆ ಎಂದರೆ ಏನರ್ಥ? ಇಲ್ಲಿ ಸರಕಾರದ ತಪ್ಪಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ಈಗೇನೋ ಪರೀಕ್ಷೆಯನ್ನು ರದ್ದು ಮಾಡುತ್ತಾರೆ, ಮುಂದಿನ ಪರೀಕ್ಷೆಯನ್ನು ಸರಿಯಾಗಿ, ಪಾರದರ್ಶಕವಾಗಿ ನಡೆಸುತ್ತಾರೆ ಎನ್ನುವುದಕ್ಕೆ ಏನು ಗ್ಯಾರಂಟಿ? ಎಂದು ಕೇಳಿದ ಮಾಜಿ ಮುಖ್ಯಮಂತ್ರಿಗಳು; “ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಸಿ ಅಪರಾಧಿಗಳನ್ನು ಕಠಿಣವಾಗಿ ಶಿಕ್ಷಿಸಬೇಕು. ಆಗ ಮಾತ್ರ ಇಂಥ ಪರೀಕ್ಷೆಗಳ ಬಗ್ಗೆ ನಂಬಿಕೆ ಬರುತ್ತದೆ” ಎಂದರು.
ತಪ್ಪು ಆಗಿರುವುದು ಸರಕಾರದಿಂದ. ಪರೀಕ್ಷೆ ನಡೆಸುವ ವಿಚಾರದಲ್ಲಿ ಸರಕಾರ ಮತ್ತು ಅಧಿಕಾರಿಗಳಿಂದ ಗುರುತರ ಲೋಪ ಆಗಿದೆ. ಹಾಗಂತ, ಇಡೀ ಪರೀಕ್ಷೆಯನ್ನೇ ರದ್ದು ಮಾಡಿ, ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯ ಮಾಡುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಕೆಪಿಎಸ್ಸಿ ಉದಾಹರಣೆ ಕೊಟ್ಟ ಮಾಜಿ ಸಿಎಂ:
2011ರಲ್ಲಿ ಕೆಪಿಎಸ್ಸಿ ಪರೀಕ್ಷೆ ಬರೆದು ಸಂದರ್ಶನದಲ್ಲಿ ಪಾಸಾಗಿದ್ದ 300ಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯವನ್ನು ಹೇಗೆ ಹಾಳು ಮಾಡಿದರು ಎನ್ನುವುದು ನಮ್ಮ ಮುಂದೆಯೇ ಇದೆ. ಇಷ್ಟು ವರ್ಷಗಳಾದರೂ ಅವರಿಗೆ ನ್ಯಾಯ ಸಿಕ್ಕಿಲ್ಲ. ಯಾರೋ ಒಬ್ಬರು ಕೊಟ್ಟ ದೂರಿನ ಕಾರಣಕ್ಕೆ ನ್ಯಾಯಯುತವಾಗಿ ಪರೀಕ್ಷೆ ಬರೆದು ಪಾಸಾದವರೆಲ್ಲ ಸಂಕಷ್ಟಕ್ಕೆ ಸಿಲುಕಬೇಕಾಯಿತು. ಅವರಲ್ಲಿ ಒಬ್ಬೊಬ್ಬರದ್ದೂ ನೋವಿನ ಕಥೆ ಇದೆ. ಆಗಲೂ ಆ ನೇಮಕಾತಿಯನ್ನು ಅಂದಿನ ಸರಕಾರ ರದ್ದು ಮಾಡಿತ್ತು. ರದ್ದು ಮಾಡಬೇಡಿ ಎಂದು ನಾವು ಕೇಳಿದರೂ ಆ ಸರಕಾರ ಕೇಳಿಲಿಲ್ಲ. ಪಿಎಸ್ಐ ನೇಮಕಾತಿಯೂ ಅದೇ ರೀತಿ ಆಗುತ್ತದೆ ಎಂದು ಕುಮಾರಸ್ವಾಮಿ ಅವರು ಎಚ್ಚರಿಸಿದರು.
ಸಹಕಾರಿ ಬ್ಯಾಂಕುಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದೆ. ಡೈರಿ, ಭೂ ಅಭಿವೃದ್ಧಿ ಬ್ಯಾಂಕ್ ಸೇರಿದಂತೆ ಸಹಕಾರ ಇಲಾಖೆಯಲ್ಲಿ ಹೇಗೆಲ್ಲ ನೇಮಕಾತಿಗಳು ನಡೆಯುತ್ತವೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅಲ್ಲೂ ಲಕ್ಷಾಂತರ ರೂಪಾಯಿ ಕೊಟ್ಟು ಕೆಲಸಕ್ಕೆ ಸೇರಬೇಕಾದ ಪರಿಸ್ಥಿತಿ ಇದೆ ಎಂದು ಅವರು ಹೇಳಿದರು.
ಕೆಪಿಎಸ್ಸಿ ಶುದ್ಧ ಆಯಿತಾ ಸಿದ್ದರಾಮಯ್ಯ?:
ಸಿದ್ದರಾಮಯ್ಯ ಅವರು ಕೆಪಿಎಸ್ಸಿಯನ್ನು ಶುದ್ಧ ಮಾಡುವೆ ಎಂದು ಶ್ಯಾಂಭಟ್ಟರನ್ನು ಅದರ ಅಧ್ಯಕ್ಷರನ್ನಾಗಿ ಮಾಡಿದರು. ಅವರು ಅಧ್ಯಕ್ಷರಾಗಿದ್ದೇ ತಡ ಮುಕ್ತ ಮಾರುಕಟ್ಟೆಯಲ್ಲಿ ರೇಟು ಫಿಕ್ಸ್ ಆಗುವಂತೆ ಪ್ರತಿ ಉದ್ಯೋಗಕ್ಕೆ ಕೋಟಿ ಲೆಕ್ಕದಲ್ಲಿ ರೇಟು ನಿಗದಿ ಆಯಿತು. ಬಿಡಿಎದಲ್ಲಿ ಕೂತು ಅರ್ಕಾವರಿ ಬಡಾವಣೆ ರೀಡೂ ವ್ಯವಹಾರದಲ್ಲಿ ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆದು ಕೊಟ್ಟಿದ್ದರಲ್ಲ, ಅದಕ್ಕೆ ಕೆಪಿಎಸ್ಸಿಯನ್ನು ಶ್ಯಾಂಭಟ್ಟರಿಗೆ ಸಿದ್ದರಾಮಯ್ಯ ಉಡುಗೊರೆಯಾಗಿ ನೀಡಿದರು. ಇದು ಬಹಿರಂಗ ಸತ್ಯ. ಯಾರು ಏನೂ ಮಾಡಲಾಗಲಿಲ್ಲ. ನೀವು ಹೇಳಿದಂತೆ ಕೆಪಿಎಸ್ಸಿ ಶುದ್ಧ ಆಯಿತಾ ಸಿದ್ದರಾಮಯ್ಯ ಎಂದು ಕುಮಾರಸ್ವಾಮಿ ಅವರು ಕೇಳಿದರು.
Also read: ಆಯುಷ್ಮಾನ್ ಭಾರತ್: ರೋಗಿಗಳ ಹೆಚ್ಚುವರಿ ಚಿಕಿತ್ಸೆಗಾಗಿ ‘ಅಂತರ್ಜಾಲ ರೆಫರಲ್ ವ್ಯವಸ್ಥೆ’ ಜಾರಿ – ಸಚಿವ ಸುಧಾಕರ್
ಈ ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಶ್ಯಾಂಭಟ್ಟರನ್ನು ಕೆಪಿಎಸ್ಸಿಗೆ ತಂದು ಕೂರಿಸಿದ್ದು ನೀವೇ ಅಲ್ಲವೆ? ಅಲ್ಲಿ ಏನೆಲ್ಲಾ ಆಯಿತು ಎನ್ನುವುದು ನಿಮಗೆ ಗೊತ್ತಿಲ್ಲವೇ ಸಿದ್ದರಾಮಯ್ಯ ಎಂದು ಮಾಜಿ ಮುಖ್ಯಮಂತ್ರಿಗಳು ನೇರವಾಗಿ ಕೇಳಿದರು.
ಈ ವ್ಯವಸ್ಥೆ ಉಳ್ಳವರಿಗಷ್ಟೇ ಎನ್ನುವಂತೆ ಆಗಿದೆ. ದುಡ್ಡಿದ್ದವರಿಗೆ ಕೆಲಸ ಸಿಗುತ್ತದೆ. ಪ್ರತಿಭಾವಂತ ಬಡವರಿಗೆ ಅನ್ಯಾಯ ಆಗುತ್ತದೆ. ಕೆಲವರಂತೂ ಇದ್ದ ಆಸ್ತಿಯನ್ನು ತಂದು ಇಂಥ ಭ್ರಷ್ಟರಿಗೆ ಕೊಡುತ್ತಾರೆ. ಅನೇಕರಿಗೆ ದುಡ್ಡು ಇಲ್ಲ, ಕೆಲಸವೂ ಇಲ್ಲ. ಈ ರೀತಿ ನೇಮಕ ಆದವರು ಎಷ್ಟು ಪ್ರಾಮಾಣಿಕರಾಗಿ ಜನರ ಕೆಲಸ ಮಾಡುತ್ತಾರೆ? ಎಂದು ಪ್ರಶ್ನಿಸಿದರು ಕುಮಾರಸ್ವಾಮಿ.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post