ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಹುಬ್ಬಳ್ಳಿಯ ವಿಭಾಗೀಯ ರೈಲ್ವೆ ಕಚೇರಿಯಲ್ಲಿ ಇಂದು 77ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು. ವಿಭಾಗೀಯ ವ್ಯವಸ್ಥಾಪಕರಾದ ಬೇಲಾ ಮೀನಾ ಅವರು ಧ್ವಜಾರೋಹಣ ನೆರವೇರಿಸಿ, ರೈಲ್ವೆ ರಕ್ಷಣಾ ದಳದಿಂದ ಗೌರವ ಸ್ವೀಕರಿಸಿದರು.
ನಂತರ ಮಾತನಾಡಿದ ಅವರು ಏಪ್ರಿಲ್ 2025 ರಿಂದ ಡಿಸೆಂಬರ 2025 ವರೆಗಿನ ವಿಭಾಗೀಯ ರೈಲ್ವೆಯ ಸಾಧನೆಗಳ ವಿವರಣೆ ನೀಡಿದರು.
ಈ ಅವಧಿಯಲ್ಲಿ ಹುಬ್ಬಳ್ಳಿ ವಿಭಾಗವು 28.73 ಮಿಲಿಯನ್ ಟನ್ ಸರಕು ಸಾಗಣೆ ಸಾಧಿಸಿ ಶೇಕಡಾ 25ಕ್ಕಿಂತ ಹೆಚ್ಚು ಬೆಳವಣಿಗೆ ದಾಖಲಿಸಿದೆ. ಡಿಸೆಂಬರ್ 2025ರಲ್ಲಿ ಒಂದೇ ತಿಂಗಳಲ್ಲಿ 3.783 ಮಿಲಿಯನ್ ಟನ್ ಸರಕು ಲೋಡಿಂಗ್ ಹಾಗೂ 31.12.2025ರಂದು ಒಂದೇ ದಿನ 3,025 ವ್ಯಾಗನ್’ಗಳ ಲೋಡಿಂಗ್ ಮೂಲಕ ಇತಿಹಾಸದ ಗರಿಷ್ಠ ದಾಖಲೆ ನಿರ್ಮಿಸಲಾಗಿದೆ ಎಂದರು.
ಡಿಸೆಂಬರ್ 2025ರವರೆಗೆ ಒಟ್ಟು ಆದಾಯವಾಗಿ 3,490.72 ಕೋಟಿ ಸಾಧಿಸಿ, ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ ಶೇ. 23.49ರಷ್ಟು ವೃದ್ಧಿ ಕಂಡುಬAದಿದೆ. ಮೇಲ್ ಮತ್ತು ಎಕ್ಸ್’ಪ್ರೆಸ್ ರೈಲುಗಳ ಸಮಯಪಾಲನೆ ಶೇಕಡಾ 93.79ಕ್ಕೆ ಸುಧಾರಣೆಯಾಗಿದ್ದು, ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿ 265 ವಿಶೇಷ ರೈಲುಗಳನ್ನು ಸಂಚರಿಸಲಾಗಿದೆ. ಮಾರ್ಗ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ರೈಲು ವೇಗ ವೃದ್ಧಿ, ಟ್ರ್ಯಾಕ್ ಮೇಲ್ದರ್ಜೆಗೇರಿಕೆ ಹಾಗೂ ತಂತ್ರಜ್ಞಾನ ಬಳಕೆಯಿಂದ ಸಿಗ್ನಲ್ ವೈಫಲ್ಯಗಳಲ್ಲಿ ಶೇ. 46ರಷ್ಟು ಇಳಿಕೆ ಸಾಧಿಸಲಾಗಿದೆ ಎಂದರು.
ರಕ್ಷಣಾ ಕಾರ್ಯಾಚರಣೆಯಲ್ಲಿ 46 ಮಕ್ಕಳ ರಕ್ಷಣೆ ಸೇರಿದಂತೆ ಮಹತ್ವದ ಸಾಧನೆಗಳು ನಡೆದಿದ್ದು, ಕಳ್ಳತನ, ಮಾದಕ ವಸ್ತು ಹಾಗೂ ಮದ್ಯ ವಶಪಡಿಕೆ ಪ್ರಕರಣಗಳಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿದೆ. 2025-26 ಹಣಕಾಸು ವರ್ಷದಲ್ಲಿ RPFಗಾಗಿ ಕ್ಯಾಸಲ್ ರಾಕ್, ಘಟಪ್ರಭಾ ಹಾಗೂ ಬಳ್ಳಾರಿಯಲ್ಲಿ ಬ್ಯಾರಕ್’ಗಳನ್ನು ನಿರ್ಮಿಸಿ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸೇವೆ, ಸುರಕ್ಷತೆ, ಕಾರ್ಯಕ್ಷಮತೆ ಮತ್ತು ಪಾರದರ್ಶಕತೆಯನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ತಿಳಿಸಿದರು. ಹಿರಿಯ ರೈಲ್ವೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















