ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದಲ್ಲಿ #South Western Railway Hubli Division ಭಾರತೀಯ ರೈಲ್ವೆ ಸಿಗ್ನಲ್ ಇಂಜಿನಿಯರ್ಸ್ ಸೇವೆ (IRSSE) 2015 ಬ್ಯಾಚ್‌ನ ಅಧಿಕಾರಿಯಾಗಿರುವ ಎಸ್.ಪಿ. ಪ್ರವೀಣ್ ಅವರು ವಿಭಾಗೀಯ ಸಾರ್ವಜನಿಕ ಸಂಪರ್ಕ ಅಧಿಕಾರಿ (Divisional Public Relations Officer – PRO) ಆಗಿ ಹೆಚ್ಚುವರಿ ಜವಾಬ್ದಾರಿಯನ್ನು ಸ್ವೀಕರಿಸಿದ್ದಾರೆ.
ಪ್ರಸ್ತುತ ಅವರು ಹಿರಿಯ ವಿಭಾಗೀಯ ಸಿಗ್ನಲ್ ಮತ್ತು ದೂರಸಂಪರ್ಕ ಇಂಜಿನಿಯರ್ (Sr.DSTE) ಆಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಮೂಲ ಕರ್ತವ್ಯಗಳೊಂದಿಗೆ ಸಾರ್ವಜನಿಕ ಸಂಪರ್ಕಾಧಿಕಾರಿಯ ಜವಾಬ್ದಾರಿಗಳನ್ನೂ ಹೆಚ್ಚುವರಿಯಾಗಿ ನಿರ್ವಹಿಸಲಿದ್ದಾರೆ.
ತಮ್ಮ ಸೇವಾ ಅವಧಿಯಲ್ಲಿ ಶ್ರೀ ಎಸ್.ಪಿ. ಪ್ರವೀಣ್ ಅವರು ನೂತನ ತಂತ್ರಜ್ಞಾನಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಬಳಕೆಯ ಮೂಲಕ ಹಲವು ಮಹತ್ವದ ಸಾಧನೆಗಳನ್ನು ಮಾಡಿದ್ದಾರೆ. ಕಾರ್ಯಕ್ಷಮತೆ, ನವೀನತೆ ಮತ್ತು ವೃತ್ತಿಪರತೆಗಾಗಿ 2025–26ನೇ ಸಾಲಿನ ಜನರಲ್ ಮ್ಯಾನೇಜರ್ (GM) ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕ್ರೀಡಾಭಿಮಾನಿಯಾಗಿರುವ ಶ್ರೀ ಪ್ರವೀಣ್ ಅವರು ಭಾರತೀಯ ರೈಲ್ವೆಯಲ್ಲಿ ಕ್ರೀಡೆ ಹಾಗೂ ನೌಕರರ ಕಲ್ಯಾಣ ಚಟುವಟಿಕೆಗಳ ಉತ್ತೇಜನದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಕಾರ್ಯಕ್ರಮ ನಿರ್ವಹಣೆ, ಕ್ರೀಡಾ ಅಭಿವೃದ್ಧಿ ಹಾಗೂ ಕ್ಲಬ್ ಮೂಲಸೌಕರ್ಯಗಳ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಕ್ರೀಡಾ ಕಾರ್ಯಕ್ರಮಗಳ ಆಯೋಜನೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.
ಭಾರತೀಯ ರೈಲ್ವೆಯಲ್ಲಿ ತಮ್ಮ ಸಮೃದ್ಧ ಅನುಭವದೊಂದಿಗೆ ಆಡಳಿತಾತ್ಮಕ ಸುಧಾರಣೆ ಹಾಗೂ ತಾಂತ್ರಿಕ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಗಮನಾರ್ಹವಾಗಿದೆ. ಹುಬ್ಬಳ್ಳಿ ವಿಭಾಗದ ಸಿಗ್ನಲ್ ಮತ್ತು ದೂರಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದರೊಂದಿಗೆ, ಸಾರ್ವಜನಿಕ ಸಂಪರ್ಕ, ಮಾಧ್ಯಮ ಸಮನ್ವಯ ಹಾಗೂ ಹಿತಾಸಕ್ತಿದಾರರ ಸಂಪರ್ಕ ವೃದ್ಧಿಯಲ್ಲಿ ಅವರು ಪರಿಣಾಮಕಾರಿಯಾಗಿ ಕೊಡುಗೆ ನೀಡುವ ನಿರೀಕ್ಷೆಯಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















