ಶಿವಮೊಗ್ಗ: ನಗರ ಸೇರಿದಂತೆ ಜಿಲ್ಲೆಯ ಹತ್ತಾರು ಮಹತ್ತರ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಮೂಲಕ ಅಭಿವೃದ್ದಿ ಮಾಡಬೇಕೆನ್ನುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತವರು ಪ್ರೀತಿಗೆ ಪೂರಕವಾಗಿ ಸಾಕಷ್ಟು ಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಳ್ಳುತ್ತಿದೆ. ಇದಕ್ಕೆ ಶಿವಮೊಗ್ಗ ಜಿಲ್ಲೆಯ ಶಾಸಕರು, ಸಚಿವರು ವಿಶೇಷವಾಗಿ ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಯತ್ನಗಳು ನಡೆಯುತ್ತಿವೆ.
ಶಿವಮೊಗ್ಗದ ಹೊರವರ್ತುಲ ಕಾಮಗಾರಿ, ವಿನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ವಿದ್ಯಾನರದ ರೈಲ್ವೆ ನಿಲ್ದಾಣ ಕಾಮಗಾರಿ ಸೇರಿದಂತೆ ವಿಮಾನ ನಿಲ್ದಾಣ ಕಾಮಗಾರಿ ಮುಗಿಸುವ ಒಂದು ಹಂತದ ಪ್ರಯತ್ನದ ಜೊತೆಗೆ ವಿನೂತನವಾಗಿ ಶಿವಮೊಗ್ಗದ ಪಾಲಿಗೆ ಅದೃಷ್ಠವೆಂಬಂತೆ ವಾಹನ ದಟ್ಟಣೆ ತಪ್ಪಿಸಲು ಇಲ್ಲಿನ ಬಸ್ ನಿಲ್ದಾಣ ಹಾಗೂ ಆಲ್ಕೋಳ ಸರ್ಕಲ್‌ನಲ್ಲಿ ಸುಮಾರು ಅರ್ಧ ಕಿಮೀ ದೂರದ ಫ್ಲೈಓವರ್ ಅಂದರೆ ಗ್ರೇಡ್ ಸಪರೇಟರ್ ನಿರ್ಮಿಸಲು ಸಕಲ ತಯಾರಿಗಳು ನಡೆಯುತ್ತಿರುವುದು ಸಂತಸದ ಸಂಗತಿ.
ಈ ಫ್ಲೈಓವರ್‌ಗಳನ್ನು ತಲಾ ಎಂಬಂತೆ ಸುಮಾರು 65 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಕುರಿತಂತಹ ಯೋಜನೆಗಳನ್ನು ಸಿದ್ದಪಡಿಸಿಕೊಂಡು ಸಕ್ಷಮ ಪ್ರಾಧಿಕಾರದಿಂದ ಮಂಜೂರಾತಿ ಪಡೆಯಲು ಬಹುದೊಡ್ಡ ಮಟ್ಟದ ಪ್ರಯತ್ನಗಳು ನಡೆಯುತ್ತಿದ್ದು, ಶಿವಮೊಗ್ಗಕ್ಕೆ ಈ ಎರಡು ಸೌಭಾಗ್ಯಗಳು ದೊರಕುವ ಎಲ್ಲಾ ಲಕ್ಷಣಗಳು ನಿಶ್ಚಳವಾಗಿ ಕಂಡುಬರುತ್ತಿವೆ.
ಮುಖ್ಯಮಂತ್ರಿಗಳ ಕಾರ್ಯದರ್ಶಿಗಳಾಗಿರುವಂತಹ ಒಂದಿಬ್ಬರು ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಒಂದಿಬ್ಬರು ನುರಿತ ಅಭಿಯಂತರರು ಸಂಸದ ಬಿ.ವೈ. ರಾಘವೇಂದ್ರ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ಈ ಮಾಹಿತಿಯನ್ನು ನೀಡಿದ್ದಾರೆಂದು ಖಚಿತ ಮೂಲಗಳು ತಿಳಿಸಿವೆ.
ವಿಶೇಷವೆಂದರೆ, ಮುಖ್ಯಮಂತ್ರಿಗಳು ಈ ಯೋಜನೆಯ ಬಗ್ಗೆ ವಿಶೇಷ ಕಾಳಜಿವಹಿಸಿ ಅದಷ್ಟೂ ಬೇಗನೆ ಇದಕ್ಕೆ ಮಂಜೂರಾತಿ ಪಡೆದು ಅದನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ತಯಾರಾಗಿರುವಂತೆ ಹಲವು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆಂದು ಮೂಲಗಳು ಹೇಳಿವೆ.
ಫ್ಲೈ ಓವರ್ ವಿನ್ಯಾಸ
ಸುಮಾರು 300 ಮೀಟರ್ ಉದ್ದದ ಮೇಲ್ಮುಖ ಸಂಚಾರ ಭಾಗ್ಯ ಹೊಂದಿದಂತಹ ರಸ್ತೆ ನಿರ್ಮಿಸುವ ಕಾಮಗಾರಿ ನಡೆಯಬೇಕಿದೆ. ಬಸ್ ನಿಲ್ದಾಣದ ಅಂದಾಜುಗಳನ್ನು ಅವಲೋಕಿಸಿದಾಗ ಅಲ್ಲಿ ವಾಹನ ದಟ್ಟಣೆ ಅತಿ ಹೆಚ್ಚಾಗಿರುವುದನ್ನು ಗಮನಿಸಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಕಚೇರಿಯ ಪಕ್ಕದ ಶಾಲೆಯ ಬಳಿಯ ಎನ್’ಟಿ ರಸ್ತೆಯಿಂದ ಸಂಚಾರಿ ಮೆಗ್ಗಾನ್ ಆಸ್ಪತ್ರೆ ಹಿಂದಿನ ಬಾಗಿಲ ತನಕದ ಬಿಎಚ್ ರಸ್ತೆಗೆ ಸೇರಿಕೊಳ್ಳುವ ಫ್ಲೈ ಓವರ್ ಸಿದ್ದಪಡಿಸುವುದು ಇದರ ಉದ್ದೇಶ.
ಈ ಫ್ಲೈ ಓವರ್ ನಿರ್ಮಾಣದಿಂದ ಶಿವಮೊಗ್ಗ ನಗರದ ಬಿಎಚ್ ರಸ್ತೆಯ ವಾಹನ ಸಂಚಾರಕ್ಕೆ ಮುಂದೇ ಯಾವುದೇ ದಟ್ಟಣೆ ಕಾಣುವುದಿಲ್ಲ ಎಂಬ ಉದ್ದೇಶದಿಂದ ಈ ಫ್ಲೈ ಓವರ್ ನಿರ್ಮಿಸಲಾಗುತ್ತಿದೆ. ಮತ್ತೊಂದೆಡೆ ಎನ್’ಟಿ ರಸ್ತೆಯ ಮೂಲಕವಾಗಿ ಸಾಗರ ರಸ್ತೆಗೆ ಹೋಗುವಂತಹ ವಾಹನಗಳು ಜನಜಂಗುಳಿಯ, ವಾಹನ ದಟ್ಟಣೆಯ ಬಸ್ ನಿಲ್ದಾಣದ ಬಳಿ ಬರುವ ಸಾಧ್ಯತೆಗಳೇ ಇಲ್ಲ. ಶಿವಮೊಗ್ಗ ನಗರದೊಳಗೆ ಬರುವಂತಹವರು ಫ್ಲೈ ಓವರ್’ನಲ್ಲಿ ಹೋಗದೇ ವಾಹನ ದಟ್ಟಣೆ ಇಲ್ಲದ ರೀತಿಯಲ್ಲಿಯೇ ಬಂದು ಸೇರಬಹುದಾಗಿದೆ.
ಅದೇ ಮಾದರಿಯಲ್ಲಿ ಅತ್ಯಂತ ವಾಹನ ದಟ್ಟಣೆಯಿಂದ ರಸ್ತೆ ಕ್ರಾಸ್ ಮಾಡಲು ಅಸಾಧ್ಯವೆನ್ನುವಂತಹ ವಾತಾವರಣವನ್ನು ನಿರ್ಮಿಸಿರುವ ಆಲ್ಕೋಳ ಸರ್ಕಲ್‌ನಲ್ಲಿ ಸಾಗರ ರಸ್ತೆಗೆ ಮುಕ್ತ ಅವಕಾಶ ನೀಡುವಂತಹ ಫ್ಲೈ ಓವರ್ ನಿರ್ಮಾಣವಾಗಲಿದೆ. ಎಪಿಎಂಸಿ ಆವರಣದಿಂದ ಲಗಾನ್ ಕಲ್ಯಾಣ ಮಂದಿರ ದವರೆಗೆ ಫ್ಲೈ ಓವರ್ ನಿರ್ಮಾಣವಾದರೆ ಆ ಮುಖ್ಯರಸ್ತೆ ಅತ್ಯಂತ ಸುಲಭವಾಗಿ ವಾಹನ ಸಂಚಾರಕ್ಕೆ ಮುಕ್ತತೆ ನೀಡುತ್ತದೆ ಅದೇ ಬಗೆಯಲ್ಲಿ ಆಲ್ಕೊಳ ಸರ್ಕಲ್ ಶಿವಮೊಗ್ಗ ನಗರದ 100 ಅಡಿ ರಸ್ತೆಯ ಅಂದರೆ ವಿನೋಬನಗರದಿಂದ ಗೋಪಾಳಕ್ಕೆ ಹೋಗುವ ರಸ್ತೆಗೆ ಮುಕ್ತ ಅವಕಾಶ ನೀಡುತ್ತದೆ. ಜನ ಸಹ ಅತ್ಯಂತ ಸುಲಭವಾಗಿ ದಾಟುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ ಎಂಬುದು ಈ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.
ಒಟ್ಟಾರೆ ಶಿವಮೊಗ್ಗ ಈ ಎರಡು ಫ್ಲೈ ಓವರ್‌ಗಳು ಸಿದ್ದವಾಗುವ ಯತ್ನಗಳು ನಡೆಯುತ್ತಿದೆ. ಅದು ಈಡೇರಲಿ ಎಂಬುದು ಶಿವಮೊಗ್ಗ ಜನರ ಪರವಾಗಿ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಅತ್ಯಂತ ಆತ್ಮೀಯ, ಪ್ರೀತಿಯ ಕಳಕಳಿಯ ಮನವಿ.
(ವಿಶೇಷ ಲೇಖನ: ಎಸ್.ಕೆ. ಗಜೇಂದ್ರಸ್ವಾಮಿ, ಪತ್ರಕರ್ತರು, ಶಿವಮೊಗ್ಗ)
Discussion about this post