ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊಳವೆ ಬಾವಿ ಹಾಗೂ ಆರ್’ಒ ಘಟಕಗಳ ಸುಮಾರು 702 ಕೋಟಿ ರೂ.ಗಳ ಹಗರಣಕ್ಕೆ ಸಂಬಂಧಿಸಿದಂತೆ ಮಹಾನಗರಪಾಲಿಕೆಯ ಹೊಸ 5 ವಲಯಗಳಲ್ಲಿ ಕಾರ್ಯ ನಿರ್ವಹಿಸಿದ್ದ ಹಿಂದಿನ ಜಂಟಿ ಆಯುಕ್ತರುಗಳು, ಮುಖ್ಯ ಅಭಿಯಂತರರು ಮತ್ತು ಕಾರ್ಯಪಾಲಕ ಅಭಿಯಂತರರುಗಳ ವಿರುದ್ಧ ಎಸಿಬಿ ಅಧಿಕಾರಿಗಳು ಎಫ್’ಐಆರ್ ದಾಖಲಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾವೇರಿ ನೀರಿನ ಪೂರೈಕೆ ಅಸಮರ್ಪಕವಾಗಿರುವ ಹೊಸ 5 ವಲಯಗಳಲ್ಲಿ ದಿನ ನಿತ್ಯದ ಸಮಸ್ಯೆಯಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಸದುದ್ದೇಶದಿಂದ 9,588 ಕೊಳವೆ ಬಾವಿಗಳು ಮತ್ತು 976 ಆರ್’ಒ ಘಟಕಗಳಿಗೆ ಅನುಮೋದನೆ ನೀಡಲಾಗಿತ್ತು.
2016-17, 2017-18 ಮತ್ತು 2018-19 ರ ಅವಧಿಯಲ್ಲಿ ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕ ಮತ್ತು ದಾಸರಹಳ್ಳಿ ಈ 5 ಹೊಸ ವಲಯಗಳಲ್ಲಿರುವ 66 ವಾರ್ಡ್‌ಗಳಿಗೆ ಮಾತ್ರವೇ ಬೋರ್’ವೆಲ್ ಗಳು ಮತ್ತು ಆರ್’ಒ ಘಟಕಗಳಿಗೆ ಒಟ್ಟು 701,34,00,000 ರೂ. ಬಿಡುಗಡೆಯಾಗಿತ್ತು.
ಈ 66 ವಾರ್ಡ್ ಗಳಲ್ಲಿ ಕೊಳವೆ ಬಾವಿ ಕೊರೆಸಲು ಒಟ್ಟು 589,82,00,000 ರೂ. ಬಿಡುಗಡೆಯಾಗಿದೆ ಮತ್ತು ಆರ್’ಒ ಘಟಕಗಳ ನಿರ್ಮಾಣಕ್ಕೆ ಒಟ್ಟು 111,52,00,000 ರೂ. ಬಿಡುಗಡೆಯಾಗಿದೆ ಎಂಬ ಆಘಾತಕಾರಿ ಮಾಹಿತಿ ಆರ್’ಟಿಐ ದಾಖಲೆಗಳಿಂದ ದೊರಕಿತ್ತು.
5 ವಲಯಗಳ 66 ವಾರ್ಡ್ ಗಳಲ್ಲಿ ಪ್ರತಿ ವಾರ್ಡ್ ಒಂದರಲ್ಲಿ ಸರಾಸರಿ 128 ಕೊಳವೆ ಬಾವಿಗಳು ಮತ್ತು 11 ಆರ್’ಒ ಘಟಕಗಳನ್ನು ಅಂದರೆ, ಒಟ್ಟು 8,426 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ ಮತ್ತು 697 ಆರ್’ಒ ಘಟಕಗಳನ್ನು ನಿರ್ಮಿಸಲಾಗಿದೆ ಎಂಬ ನಂಬಲಸಾಧ್ಯವಾದ ಮಾಹಿತಿ ಆರ್’ಟಿಐ ದಾಖಲೆಗಳಿಂದ ದೊರಕಿತ್ತು.
ಆರ್’ಒ ಘಟಕದ ನಿರ್ಮಾಣಕ್ಕೆ ವಾಸ್ತವವಾಗಿ ತಗಲುವ ವೆಚ್ಛ 7.5 ಲಕ್ಷ ರೂ. ಮಾತ್ರ. ಆದರೆ, ಬಹುತೇಕ ಆರ್’ಒ ಘಟಕಗಳ ನಿರ್ಮಾಣಕ್ಕೆ 16 ಲಕ್ಷ ಬಿಡುಗಡೆ ಮಾಡುವ ಮೂಲಕ ದೊಡ್ಡ ಮಟ್ಟದ ಹಗಲು ದರೋಡೆ ಮಾಡಲಾಗಿರುವ ಅಂಶ ಬೆಳಕಿಗೆ ಬಂದಿತ್ತು.
ಈ ಬೃಹತ್ ಹಗರಣದಲ್ಲಿ ಕೊಳವೆ ಬಾವಿಗಳು ಮತ್ತು ಆರ್’ಒ ಘಟಕಗಳ ಹೆಸರಿನಲ್ಲಿ ಶೇ. 80 ಕ್ಕೂ ಹೆಚ್ಚು ಅನುದಾನವನ್ನು ಲೂಟಿ ಮಾಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದೆ. ಕೊಳವೆ ಬಾವಿಗಳನ್ನು ಕೊರೆಸುವ ಮತ್ತು ಆರ್’ಒ ಘಟಕಗಳನ್ನು ನಿರ್ಮಿಸುವ ಹೆಸರಿನಲ್ಲಿ 400 ಕೋಟಿಗಳಿಗೂ ಹೆಚ್ಚು ಹಣವನ್ನು ಲೂಟಿ ಮಾಡಿರುವ ಬೃಹತ್ ಹಗರಣವನ್ನು ಕೂಡಲೆ ಸಿಬಿಐ ಅಥವಾ ಸಿಐಡಿ ತನಿಖೆಗೆ ವಹಿಸಬೇಕೆಂದು ಈ ಹಿಂದೆ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕರು ಹಾಗೂ ಬೆಂಗಳೂರು ನಗರ ಜಿಲ್ಲೆ ಭಾರತೀಯ ಜನತಾ ಪಾರ್ಟಿಯ ವಕ್ತಾರರಾಗಿದ್ದ ಎನ್.ಆರ್. ರಮೇಶ್ ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದರು.
ಈ ಸಂಬಂಧ 2019ರ ಮೇ 15ರಂದು ಪತ್ರಿಕಾಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದರಲ್ಲದೇ, ಎಸಿಬಿ, ಬಿಎಂಟಿಎಫ್ ಮತ್ತು ಲೋಕಾಯುಕ್ತದಲ್ಲಿ ದೂರುಗಳನ್ನು ದಾಖಲು ಮಾಡಿದ್ದರು. ಈ ಸಂಬಂಧ, ಸದರಿ ಹಗರಣದ ತನಿಖೆಯನ್ನು ಎಸಿಬಿಗೆ ವಹಿಸಿ ಸರ್ಕಾರಿ ಆದೇಶವೂ ಆಗಿತ್ತು.
ಸರ್ಕಾರದ ಆದೇಶದಂತೆ ತನಿಖೆ ನಡೆಸಿರುವ ಅಇಆ ಅಧಿಕಾರಿಗಳು ಈ ಪ್ರಕರಣದಲ್ಲಿ ಬೃಹತ್ ಮಟ್ಟದ ಹಗರಣ ನಡೆಸಿರುವ ಹೊಸ 05 ವಲಯಗಳಾದ ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕ ಮತ್ತು ದಾಸರಹಳ್ಳಿ ವಲಯಗಳ ಹಿಂದಿನ ಜಂಟಿ ಆಯುಕ್ತರುಗಳು, ಮುಖ್ಯ ಅಭಿಯಂತರರು ಮತ್ತು ಕಾರ್ಯಪಾಲಕ ಅಭಿಯಂತರರುಗಳ ವಿರುದ್ಧ ಹಾಗೂ ಗುತ್ತಿಗೆದಾರರುಗಳ ವಿರುದ್ಧ ಎಫ್’ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get In Touch With Us info@kalpa.news Whatsapp: 9481252093







Discussion about this post