ಬೆಂಗಳೂರು: ನನ್ನನ್ನು ಕುಯ್ದು ಹಾಕೋಕೆ ನಾನೇನು ಕೋಳಿನಾ ಅಥವಾ ಕುರಿನಾ ಎಂದು ಖ್ಯಾತ ನಟ ಯಶ್ ಪ್ರಶ್ನಿಸಿದ್ದಾರೆ.
ತಮ್ಮ ಕೊಲೆಗೆ ಸುಪಾರಿ ನೀಡಲಾಗಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಇಂದು ಸಂಜೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಷ್ಟು ಸುಲಭವಾಗಿ ನನ್ನನ್ನು ಯಾರೂ ಟಚ್ ಮಾಡಲು ಸಾಧ್ಯವಿಲ್ಲ ಎಂದರು.
ನನ್ನನ್ನು ಹತ್ಯೆ ಮಾಡಲು ಯಾರೂ ಸಂಚು ರೂಪಿಸಿಲ್ಲ. ಅವೆಲ್ಲಾ ಕೇವಲ ವದಂತಿಯಷ್ಟೆ. ಈ ಕುರಿತು ಮಾಧ್ಯಮಗಳಿಗೆ ಯಾರೂ ಮಾಹಿತಿ ನೀಡುತ್ತಿದ್ದಾರೋ ಅವರ ಬಗ್ಗೆ ನಮಗೆ ತಿಳಿಸಿ. ಅವರಿಂದಲೆ ಸತ್ಯ ಏನೆಂದು ತಿಳಿದುಕೊಳ್ಳೋಣ ಎಂದರು.
ಸಮಾಜಘಾತುಕ ವ್ಯಕ್ತಿಗಳ ಬಂಧನವಾದಾಗಲೆಲ್ಲ ನನ್ನ ಹೆಸರು ತರುವುದು ಸರಿಯಾದುದುಲ್ಲ ನನ್ನ ಕೊಲೆಗೆ ಸುಪಾರಿ ಎಂಬ ಸುದ್ದಿಗಳಿಂದ ನನಗೆ ಬೇಸರವಾಗಿದೆ. ನನ್ನ ಮನೆಯವರು, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಕಿರಿಕಿರಿಯಾಗುತ್ತಿದೆ. ದಯವಿಟ್ಟು ಇಂತಹ ಸುದ್ದಿ ಪ್ರಸಾರ ಮಾಡುವುದನ್ನು ನಿಲ್ಲಿಸಿ. ನನ್ನ ಹತ್ಯೆಗೆ ಸಂಚು ಸುದ್ದಿ ಕುರಿತಂತೆ ನಿಮಗೆ ಯಾರು ಮಾಹಿತಿ ಕೊಡುತ್ತಿದ್ದಾರೆ ಎಂದು ದಯವಿಟ್ಟು ನಮಗೆ ತಿಳಿಸಿ. ಸತ್ಯಾಸತ್ಯತೆಯನ್ನು ಪೊಲೀಸರು ಪತ್ತೆ ಮಾಡುತ್ತಾರೆ ಎಂದರು.
ಇನ್ನು ಈ ಕುರಿತಂತೆ ಸ್ವತಃ ಗೃಹ ಸಚಿವರ ಜೊತೆಯಲ್ಲಿ ನಾನು ಚರ್ಚಿಸಿದ್ದೇನೆ. ಅವರಿಗೆ ಇರುವ ಮಾಹಿತಿಯಂತೆ ನನ್ನ ಕೊಲೆಗೆ ಸುಪಾರಿ ನೀಡಿರುವುದು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಈ ವಿಚಾರದಲ್ಲಿ ಯಾವುದೇ ರೀತಿಯ ಗೊಂದಲಗಳು ಬೇಡ ಎಂದಿದ್ದಾರೆ.
Discussion about this post