ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಗೋವಾದಲ್ಲಿ ಮಗಳ ಮದುವೆಯಲ್ಲಿ ಪಾಲ್ಗೊಂಡು ಡ್ಯಾನ್ಸ್ ಮಾಡಿದ್ದೇನೆ. ಮಾತ್ರವಲ್ಲ ಇಲ್ಲಿನ ಸ್ಥಳೀಯ ಸಂಸ್ಕೃತಿಯನ್ನು ನಾನು ಅನುಸರಿಸಿದ್ದೇನೆ ಅಷ್ಟೇ…
ಇದು ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಯುವತಿಯೊಂದಿಗೆ ನೃತ್ಯ ಮಾಡಿರುವ ವೀಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಸ್ವತಃ ಅವರೇ ನೀಡಿರುವ ಸ್ಪಷ್ಟನೆ.
ಹೌದು. ಶಾಸಕ ಸಂಗಮೇಶ್ವರ್ ಹಾಗೂ ಕುಟುಂಬಸ್ಥರು ತಮ್ಮ ಕುಟುಂಬದ ಗೋವಾದಲ್ಲಿ ನಡೆಯುತ್ತಿರುವ ವಿವಾಹ ಕಾರ್ಯಕ್ರಮದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಪಾಲ್ಗೊಂಡಿದ್ದಾರೆ. ಇದು ತೀರಾ ಖಾಸಗೀ ಕಾರ್ಯಕ್ರಮವಾಗಿದ್ದು, ಇದರಲ್ಲಿ ಆಯೋಜನೆ ಮಾಡಲಾಗಿದ್ದ ಪಾರ್ಟಿಯೊಂದರಲ್ಲಿ ಶಾಸಕರು ಹುಡುಗಿಯ ಸೊಂಟ ಹಿಡಿದು ಡ್ಯಾನ್ಸ್ ಮಾಡಿದ್ದಾರೆ ಎಂಬ ವೀಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಹಿನ್ನೆಲೆಯಲ್ಲಿ ಸ್ವತಃ ಶಾಸಕರು ಕಲ್ಪ ನ್ಯೂಸ್ ಜೊತೆಯಲ್ಲಿ ದೂರವಾಣಿ ಮೂಲಕ ಮಾತನಾಡಿದ್ದು, ನಾನು ನನ್ನ ಮಗಳ ವಿವಾಹದಲ್ಲಿ ಪಾಲ್ಗೊಂಡಿದ್ದೇನೆ. ಗೋವಾದಲ್ಲಿ ವಿವಾಹ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಸ್ಥಳೀಯ ಸಂಸ್ಕೃತಿಯಂತೆಯೇ ಎಲ್ಲ ಆಚರಣೆಗಳೂ ಸಹ ನಡೆಯುತ್ತಿವೆ. ಇದರ ಭಾಗವಾಗಿಯೇ ಡಿಸ್ಕೋ ಪಾರ್ಟಿ ಸಹ ನಡೆಯಿತು. ಇದರಲ್ಲಿ ನನ್ನ ಮಗಳ ಸಮಾನವಾದ ಯುವತಿಯೊಂದಿಗೆ ನೃತ್ಯ ಮಾಡಿದ್ದೇನೆಯೇ ಹೊರತು ಬೇರಾವುದೇ ರೀತಿಯ ಮೋಜು ಮಸ್ತಿ ಮಾಡಿಲ್ಲ. ಅಲ್ಲದೇ, ಈ ಭಾಗದಲ್ಲಿ ಮದುವೆ ಕಾರ್ಯಕ್ರಮಗಳಲ್ಲಿ ಇಂತಹ ನೃತ್ಯ ಕಾರ್ಯಕ್ರಮಗಳು ತೀರಾ ಸಹಜ. ಹೀಗಾಗಿ, ಸ್ನೇಹಿತರ ಹಾಗೂ ಸಂಬಂಧಿಗಳ ಒತ್ತಡಕ್ಕೆ ಮಣಿದು ನೃತ್ಯ ಮಾಡಿದ್ದೇನೆ ಅಷ್ಟೆ. ಇದನ್ನು ಯಾರೂ ಸಹ ತಪ್ಪಾಗಿ ಭಾವಿಸುವುದು ಬೇಡ ಎಂದಿದ್ದಾರೆ.
ಇನ್ನು, ಈ ಕುರಿತಂತೆ ಸ್ಪಷ್ಟನೆ ನೀಡಿದ ಶಾಸಕರ ಪುತ್ರ ಗಣೇಶ್, ನನ್ನ ಸಹೋದರಿಯ ವಿವಾಹ ಇಲ್ಲಿ ನಡೆಯುತ್ತಿದ್ದು, ಮದುವೆ ಕಾರ್ಯ ಉತ್ತರ ಭಾರತೀಯ ಶೈಲಿಯಲ್ಲಿಯೇ ನಡೆಯುತ್ತಿದೆ ಎಂದರು.
ಇದರಲ್ಲಿ ನಮ್ಮ ಇಡಿಯ ಕುಟುಂಬ ಪಾಲ್ಗೊಂಡಿದ್ದು, ಒಂದು ದಿನ ಮೆಹಂದಿ ಕಾರ್ಯಕ್ರಮ, ಮತ್ತೊಂದು ದಿನ ಅರಿಶಿನ ಕಾರ್ಯ, ಇನ್ನೊಂದು ದಿನ ಡಿಸ್ಕೋ, ಮಗದೊಂದು ದಿನ ಸಾಂಪ್ರದಾಯಿಕ ಕಾರ್ಯ ಹೀಗೆ ಎಲ್ಲವೂ ಸಹ ನಡೆಯುತ್ತಿದೆ. ನಮ್ಮ ಕುಟುಂಬದ ಕಾರ್ಯಕ್ರಮವಾದ ಕಾರಣ ತಂದೆಯುವರು ಎಲ್ಲದರಲ್ಲೂ ಸಹ ಪಾಲ್ಗೊಂಡಿದ್ದಾರೆ. ಅದೇ ರೀತಿಯಲ್ಲಿ ಈ ನೃತ್ಯ ಕಾರ್ಯಕ್ರಮವೂ ಸಹ ನಡೆದಿದೆ. ತಂದೆಯವರೊಂದಿಗೆ ನೃತ್ಯ ಮಾಡಿದ ಯುವತಿ ಅವರ ಮಗಳ ಸಮಾನ. ಅಲ್ಲದೇ, ಈ ಸಂದರ್ಭದಲ್ಲಿ ಕುಟುಂಬಸ್ಥರೂ ಸಹ ಇದ್ದರು. ಹೀಗಿರುವಾಗಿ, ಇದಕ್ಕೆ ಬೇರೆ ಅರ್ಥ ಕಲ್ಪಿಸುವುದೂ ಸಹ ಬೇಡ ಎಂದು ಮನವಿ ಮಾಡಿದ್ದಾರೆ.
ಉತ್ತರ ಭಾರತದ ವಿಭಿನ್ನ ಸಂಸ್ಕೃತಿಯ ಛಾಯೆ ಹೊಂದಿರುವ ಗೋವಾದಲ್ಲಿಯೂ ಸಹ ಅದೇ ರೀತಿಯ ಮದುವೆ ಕಾರ್ಯಗಳು ಒಂದು ವಾರಗಳ ಕಾಲ ನಡೆಯುತ್ತವೆ. ನಾವು ಇಲ್ಲಿಗೆ ಆಗಮಿಸಿರುವ ಕಾರಣ ಇಲ್ಲಿನ ಸಂಸ್ಕೃತಿಯನ್ನು ಪಾಲಿಸಿದ್ದೇವೆ ಅಷ್ಟೇ. ಯಾರೂ ಸಹ ಅನ್ಯಥಾ ಭಾವಿಸಬೇಡಿ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post