ಬೆಂಗಳೂರು: ಸಂಘಟನೆ ಉದ್ಧಾರದ ಹಾದಿಯಾದರೆ, ವಿಘಟನೆ ವಿನಾಶದ ಹಾದಿ. ಸಂಘಟನೆ ಹವ್ಯಕ ಮಹಾಸಭೆಯ ಉಸಿರಾಗಿರುವುದರಿಂದ ನಾವು ಹವ್ಯಕ ಮಹಾಸಭೆಯನ್ನು ಸಮರ್ಥಿಸಬೇಕು. ನಾವು ಸಂಘಟನೆಯ ಜೊತೆಗೋ? ವಿಘಟನೆಯ ಜೊತೆಗೋ?? ಎಂದು ಪ್ರಶ್ನಿಸಿಕೊಳ್ಳಬೇಕು ಎಂದು ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.
ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಸಮಾಜವನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಒಬ್ಬೊಬ್ಬ ಹವ್ಯಕನೂ ಒಂದೊಂದು ದೀಪ ಇದ್ದಂತೆ, ಹವ್ಯಕತ್ವ ಎಂದರೆ ಬೆಳಕು. ಬಾಹುಬಲ, ಹಣಗಳು ಹವ್ಯಕತ್ವವಲ್ಲ, ಅರಿವಿನ ದೀಪದಂತಿರುವ ಹವ್ಯಕರು ಇಂದು ಅರಮನೆ ಮೈದಾನವನ್ನು ಬೆಳಗುತ್ತಿದ್ದಾರೆ. ಒಟ್ಟು ಹವ್ಯಕರು ಸಂಘಟಿತರಾಗಿ ಸಮಾವೇಶ ನಡೆದಿರುವುದು ಸಮಾಜಕ್ಕಷ್ಟೇ ಅಲ್ಲ, ದೇಶಕ್ಕೆ ಶೋಭೆ ಎಂದು ಅಭಿಪ್ರಾಯಪಟ್ಟರು.
ಬೆಳಕು ಬೆಳಕು ಸೇರುವುದು ಸುಲಭ ಹಾಗೂ ಸರಳ, ಆದರೆ ಕತ್ತಲೆ ಬೆಳಕಿನ ಜೊತೆ ಸೇರುವುದಿಲ್ಲ. ಅದಕ್ಕೆ ಅದೇ ಹೊಣೆ ಹೊರತು ಬೇರೆಯವರಲ್ಲ ಎಂದ ಶ್ರೀಗಳು, ದುರ್ಯೋಧನ ಹಾಗೂ ಧರ್ಮರಾಯನ ದೃಷ್ಟಾಂತವನ್ನು ಉದಾಹರಿಸಿ, ನಾನು ಮೊದಲು ನಾನು ಮೇಲೆ ಎನ್ನುವುದು ದುರ್ಯೋಧನತ್ವ, ದುರ್ಯೋಧನ ರತ್ನಗಳಿಂದ ಖಜಾನೆ ತುಂಬಿದ ಆದರೆ ಅವುಗಳ ನಡುವೆ ಅಂತರವಿತ್ತು. ಆದರೆ ಧರ್ಮರಾಯ ದೀಪಗಳಿಂದ ಖಜಾನೆಯನ್ನು ತುಂಬಿದ. ಆ ಬೆಳಕಿನಲ್ಲಿ ಆವರಣದಲ್ಲಿ ಅಂತರವಿರಲಿಲ್ಲ. ಆಮೂಲಕ ಕೃಷ್ಣ ಆ ಪಂಥವನ್ನು ಗೆದ್ದ ಎಂದರು.
‘ಉದ್ಧರೇದಾತ್ಮನಾತ್ಮಾನಮ್’ ಎಂದು ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ನಿನಗೆ ನೀನೆ ಬಂಧು, ನಿನಗೆ ನೀನೆ ಶತೃ, ನಮ್ಮ ಉದ್ಧಾರವನ್ನು ನಾವೇ ಮಾಡಿಕೊಳ್ಳಬೇಕು. ಭಗವದ್ಗೀತೆಯ ಈ ಮಾತುಗಳು ಎಲ್ಲಾ ಸಂದರ್ಭ ಸನ್ನಿವೇಶಗಳಿಗೂ ಅನ್ವಯವಾಗುತ್ತದೆ. ಸಂಘಟಿತರಾಗುವ ಮೂಲಕ ನಾವು ನಮ್ಮ ಸಮಾಜವನ್ನು ಉದ್ಧಾರ ಮಾಡಬಹುದು. ಹವ್ಯಕ ಮಹಾಸಭೆ ಎಲ್ಲರನ್ನೂ ಒಂದುಗೂಡಿಸುವ ದಿಶೆಯಲ್ಲಿ ಇರುವುದರಿಂದ ನಾವು ಅವರ ಜೊತೆ ಇರಬೇಕು,
ಪ್ರೀತಿ ಇರುವಲ್ಲಿ ಷರತ್ತಿಲ್ಲ : ರಾಮಚಂದ್ರಾಪುರಮಠ ಅಖಿಲ ಹವ್ಯಕ ಮಹಾಸಭೆಯ ಜೊತೆಗೆ ಸದಾ ಇದೆ. ಸಂಘಟನೆಗೆ ಬೆಂಬಲವಾಗಿ ಇರುತ್ತೇವೆ, ಆದರೆ ಪ್ರತಿಯಾಗಿ ಯಾವ ಫಲಪೇಕ್ಷೆಯೂ ಇಲ್ಲ ಹಾಗೂ ಷರತ್ತು ಇಲ್ಲ. ಪ್ರೀತಿ ಇರುವಲ್ಲಿ ಷರತ್ತು ಉದ್ಭವಿಸುವುದಿಲ್ಲ. ಮಹಾಸಭೆಯ ಸಂಘಟನೆಯಲ್ಲಿ ನಮಗೆ ಪ್ರೀತಿ ಇದೆ. ನಾವು ಸಂಘಟನೆಗೆ ಎಂದೂ ತೊಡಕಾಗುವುದಿಲ್ಲ, ಶಕ್ತಿಯಾಗಿ ಇರುತ್ತೇವೆ. ನಮಗೆ ಸ್ಥಾನಮಾನದ ಅಪೇಕ್ಷೆ ಇಲ್ಲ, ಗುರುವೇ ಸಣ್ಣವರಾದರೆ ಸಮಾಜ ದೊಡ್ಡದಾಗುವುದು ಹೇಗೆ? ಗುರುಗಳು ಎಂದೂ ಉದಾರವಾಗಿರಬೇಕು ಎಂದರು.
ಸಮಾಜಕ್ಕೆ ಸಂಘಟನೆಯ ಹಸಿವಿದೆ : ಸಮ್ಮೇಳನಕ್ಕೆ ಸಾಮಾನ್ಯರು ಹಾಗೂ ಗಣ್ಯರು ಬರದಂತೆ ತಡೆಯಲು ಅನೇಕ ಪ್ರಯತ್ನಗಳು ನಡೆದಿವೆ. ಆದರೆ ಎಲ್ಲಾ ಭಾಗಗಳಿಂದ ಜನಸಾಗರ ಸಮ್ಮೇಳನದಲ್ಲಿ ನೆರೆದಿದೆ. ಗಣ್ಯರು ಕೂಡ ಎಲ್ಲಾ ಆಗಮಿಸಿದ್ದಾರೆ. ಇದು ಸಮಾಜಕ್ಕೆ ಸಂಘಟನೆಯ ಬಗ್ಗೆ ಇರುವ ಹಸಿವನ್ನು ತೋರಿಸುತ್ತದೆ. ಇದು ಸಮಾಜ ಎಲ್ಲಿದೆ, ಯಾವುದರ ಜೊತೆ ಸಮಾಜ ಇದೆ ಎಂಬುದನ್ನು ಸಿದ್ಧಪಡಿಸುತ್ತದೆ. ಇದು ಆತ್ಮಾವಲೋಖನವನ್ನು ಮಾಡಿಕೊಳ್ಳುವ ಸಂದರ್ಭವಾಗಿದೆ. ಈಗಲೂ ಸಂಘಟನೆಯಾಗದಿದ್ದರೆ ಇನ್ನು ಯಾವಾಗ? ಪ್ರಪಂಚ ನಮ್ಮ ಸಮಾಜದತ್ತ ನೋಡುತ್ತಿದೆ. ಜೀವ ದೇವಾತ್ಮಗಳ ಸಾಧನೆ ಮಾಡುವ ಮೊದಲು, ಜೀವ ಜೀವಾತ್ಮಗಳು ಒಂದಾಗಬೇಕು. ಜೀವ – ಜೀವಾತ್ಮಗಳಲ್ಲಿ ಒಂದಾಗದವನು ಅದ್ವೈತದ ಸಾಧನೆ ಮಾಡಲಾರ ಎಂದರು.
ಸರ್ಕಾರ ಮಾಡಲಾಗದ ಕಾರ್ಯವನ್ನು ಮಠ ಮಹಾಸಭೆಗೆ ಮಾಡುತ್ತದೆ : ಧರ್ಮ ಸರ್ಕಾರವಾದ ಮಠ ಮಹಾಸಭೆಗೆ ಸರ್ಕಾರ ಮಾಡಲಾಗದ ಒಳಿತನ್ನೂ ಮಾಡಲು ಸಶಕ್ತವಾಗಿದೆ. ಶ್ರೀರಾಮಚಂದ್ರಾಪುರಮಠದ ಕೈಕಟ್ಟುವ ಪ್ರಯತ್ನಗಳು ನಡೆಯುತ್ತಿವೆ, ಅವುಗಳ ಮಧ್ಯೆಯೂ ಮಹಾಸಭೆಯ ಉತ್ತಮ ಕಾರ್ಯಗಳ ಜೊತೆ ಮಠ ಇರುತ್ತದೆ.
ಕುಮಟಾದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ರಾಜಕಾರಣಿಗಳು ಇಂತದ್ದೊಂದು ಸಭೆ ಮಾಡಬೇಕು, ಇಷ್ಟು ದೊಡ್ಡ ಮಟ್ಟದಲ್ಲಿ ಜನ ಸೇರಬೇಕು ಎಂದರೆ ಹಣವನ್ನು ಕೊಟ್ಟು ವಾಹನಗಳಲ್ಲಿ ಜನರನ್ನು ಕರೆತರಬೇಕಾಗುತ್ತದೆ. ಆದರೆ ಇಲ್ಲಿ ಸಮಾಜದ ಮೇಲಿರುವ ಅಭಿಮಾನದಿಂದ ಸ್ವಯಂ ಸ್ಪೂರ್ತಿಯಿಂದ ಜನ ಸೇರಿರುವುದು ಶ್ಲಾಘನೀಯ ಎಂದು ಹವ್ಯಕ ಸಮಾಜದ ಜೊತೆ ಹಾಗೂ ರಾಮಚಂದ್ರಾಪುರಮಠದ ಶ್ರೀಗಳ ಜೊತೆಗಿನ ತಮ್ಮ ಒಡನಾಟವನ್ನು ಹಂಚಿಕೊಂಡರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಈಶ್ವರಪ್ಪ ಮಾತನಾಡಿ, ದೇವಲೋಕಕ್ಕೆ ಹೋಗಿ ದೇವರನ್ನು ನೋಡಲು ಸಾಧ್ಯವಿಲ್ಲದಿರಬಹುದು, ಆದರೆ ಈ ವೇದಿಕೆಯಲ್ಲಿ ಪೇಜಾವರ ಶ್ರೀ ಹಾಗೂ ರಾಘವೇಶ್ವರ ಶ್ರೀಗಳಲ್ಲಿ ನಾವಿಂದು ದೇವರನ್ನು ನೋಡುತ್ತಿದ್ದೇನೆ. ಗೋವು ಎಂದರೆ ರಾಘವೇಶ್ವರ ಶ್ರೀಗಳ ನೆನಪಾಗುತ್ತದೆ. ಭಾರತೀಯ ಸಂಸ್ಕೃತಿ ವಿಶ್ವಕ್ಕೆ ಮಾದರಿ, ಅದನ್ನು ಉಳಿಸಿಬೆಳೆಸೋಣ ಎಂದು ಕರೆ ನೀಡಿದರು.
ಕರ್ನಾಟಕ ಬ್ಯಾಂಕ್ ನ ಸಿಇಓ ಮಹಾಬಲೇಶ್ವರ ಎಂ ಎಸ್, ಬಿಟಿವಿ ಮುಖ್ಯಸ್ಥ ಶ್ರೀ ಕುಮಾರ್ , ಡಾ. ವೀಣಾ ಬನ್ನಂಜೆ, ಕೊಂಕೋಡಿ ಪದ್ಮನಾಭ ಭಟ್, ಸತೀಶ್ಚಂದ್ ಎಸ್ ಆರ್, ವಿದ್ವಾನ್ ಉಮಾಕಾಂತ ಭಟ್, ವಿ. ಬಿ ಅರ್ತಿಕಜೆ ಸೇರಿಂದತೆ ಅನೇಕ ಗಣ್ಯಾತಿ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಗೌರವಾಧ್ಯಕ್ಷರಾದ ಭೀಮೇಶ್ವರ ಜೋಷ್ಸರು ಅತಿಥಿಗಳಿಗೆ ಗೌರವ ಸಮರ್ಪಿಸಿದರು, ಅಧ್ಯಕ್ಷರಾದ ಡಾ ಗಿರಿಧರ್ ಕಜೆ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಮಹಾಸಭೆಯ ನೂತನ ಧ್ವಜ ಲೋಕಾರ್ಪಿತವಾಯಿತು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಾಮೂಹಿಕ ಭಗವದ್ಗೀತಾ ಪಠಣ ನಡೆಯಿತು, ಮಾತೆಯರು ಹಾಗೂ ಮಹನಿಯರು ಪಾಲ್ಗೊಂಡು ೮ ನೇ ಅಧ್ಯಾಯವನ್ನು ಪಠಿಸಿದರು. ಹವ್ಯಕ ಕಿರುತೆರೆ – ಹಿರಿತೆರೆ ಕಲಾವಿದರ ಕೂಡುವಿಕೆಯೊಂದಿಗೆ ನಡೆದ “ಅಭಿನಯ ರಂಗ” ಜನಮನಸೆಳೆಯಿತು. ಸಂಜೆ ಖ್ಯಾತ ಕಲಾವಿದರ ಕೂಡುವಿಕೆಯೊಂದಿಗೆ ತೆಂಕು ಹಾಗೂ ಬಡಗು ಶೈಲಿಗಳ “ಯಕ್ಷ ನೃತ್ಯ ವೈಭವ” ಯಕ್ಷಗಾನ ಪ್ರಿಯರನ್ನು ರಂಜಿಸಿತು.ಯಲ್ಲಾಪುರ, ಶಿರಸಿ, ಸಾಗರ, ಸಿದ್ಧಪುರ, ಮಂಗಳೂರು, ಕುಮಟ ಮೂಂತಾದ ಭಾಗಗಳ ಹವ್ಯಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರೆ, ಬೆಂಗಳೂರಿಗರು ಹವ್ಯಕ ಪಾಕೋತ್ಸವ ಹಾಗೂ ಆಲೆಮನೆಗಳನ್ನು ಆಸ್ವಾದಿಸಿದರು.
ಹವ್ಯಕ ಕೃಷಿರತ್ನ : ಹೆಗಡೆ ಸುಬ್ಬರಾವ್, ಗಜಾನನ ಹೆಗಡೆ, ಎಂ ಜಿ ಶ್ರೀಪಾದ್ ರಾವ್,ರಾಮಚಂದ್ರ ಗಣೇಶ್ ಹೆಗಡೆ, ಶ್ರೀಮತಿ ಮಧುಮತಿ ಸೇರಿದಂತೆ 75 ಕೃಷಿಕರಿಗೆ “ಹವ್ಯಕ ಕೃಷಿರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
Discussion about this post