ಹೊಸನಗರ: ಹಲವು ವರ್ಷಗಳಿಂದ ಕಾರ್ಮಿಕರ ಮತ್ತು ನೌಕರರು ಪರವಾಗಿ ಗಂಭೀರ ಸ್ವರೂಪದ ಹೋರಾಟ ಮಾಡುತ್ತಾ ಬಂದಿದ್ದೇನೆ. ಮುಂದೆಯೂ ಸಹ ಇವರ ಪರವಾದ ನನ್ನ ಹೋರಾಟ ನಿಲ್ಲದು ಎಂದು ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು.
ಹೊಸನಗರದ ಗಾಯತ್ರಿ ಮಂದಿರದಲ್ಲಿ ನಡೆದ ಮತದಾರರ ಸ್ನೇಹ ಮಿಲನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಕಾರ್ಮಿಕರ ಮತ್ತು ನೌಕರ ಪರವಾಗಿ ಹೋರಾಟವನ್ನು ಮಾಡಿದ್ದೇನೆ ಈ ಹೋರಾಟದಲ್ಲಿ ನಾನು ಜೈಲುವಾಸವನ್ನು ಅನುಭವಿಸಿದ್ದೇನೆ ಈ ರೀತಿಯ ಹೋರಾಟಗಳು ನನಗೆ ಹೊಸತಲ್ಲ ಸದಾ ಕಾರ್ಮಿಕ ಸಂಘಟನೆ ಕಟ್ಟುವುದರ ಮುಖಾಂತರ ಸಾಕಷ್ಟು ಹೋರಾಟವನ್ನು ನಾನು ಮಾಡಿದ್ದೇನೆ ಮುಂದೆಯೂ ನಿರಂತರ ಹೋರಾಟ ನನ್ನದು ಎಂದರು.
ನಾನು ಶಾಸಕನಾದಾಗ ಶಿವಮೊಗ್ಗ ಜಿಲ್ಲೆ ಸೇರಿದಂತೆ ನೆರೆಹೊರೆ ಜಿಲ್ಲೆಗಳಲ್ಲೂ ಸಹ ಕಾರ್ಮಿಕರ ಮತ್ತು ನೌಕರರ ಕಷ್ಟ ನಷ್ಟಗಳ ಬಗ್ಗೆ ಪ್ರಾಮಾಣಿಕವಾಗಿ ವಿಧಾನಸಭೆಯಲ್ಲಿ ಚರ್ಚಿಸಿದ್ದೆ. ಸಾಂಸದರಾಗಿಯೂ ಸಹ ಲೋಕಸಭೆಯಲ್ಲಿ ಗಂಭೀರ ಚರ್ಚೆಯಲ್ಲಿ ಪಾಲ್ಗೊಂಡಿದ್ದೆ. ಈ ಜನಪರ ಕಾಳಜಿಯ ಬಗ್ಗೆ ಈಗಿನ ಸ್ಪೀಕರ್ ರಮೇಶ್ ಕುಮಾರ್ ಸಹ ಅಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ದೇಶದ ಅಭಿವೃದ್ಧಿಯ ಚಿಂತಕರಾದ ಸಮರ್ಥವಾಗಿ ದೇಶವನ್ನು ಮುನ್ನಡೆಸುತ್ತಿರುವ ನರೇಂದ್ರ ಮೋದಿಯವರು ಮತ್ತು ಕರ್ನಾಟಕದ ಅಭಿವೃದ್ಧಿಯ ನೇತಾರರಾದ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಕಾರ್ಮಿಕರ ಮತ್ತು ನೌಕರರ ಹಿತ ಕಾಯಲು ನಾನು ಬದ್ಧನಾಗಿದ್ದೇನೆ. ಕಾರ್ಮಿಕರು ಮತ್ತು ನೌಕರರ ಎಲ್ಲಾ ಕಷ್ಟಗಳಿಗೆ ನಾನು ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ನಮ್ಮನ್ನು ಈ ಬಾರಿ ಪದವೀಧರ ಕ್ಷೇತ್ರದಿಂದ ಈ ಬಾರಿಯ ಚುನಾವಣೆಯಲ್ಲಿ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಗಣೇಶ್ ಕಾರ್ಣಿಕ್ ಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ಕೊಡುವಂತೆ ಈ ಸಂದರ್ಭದಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಬಿ. ಸ್ವಾಮಿರಾವ್, ತಾಲೂಕು ಬಿಜೆಪಿ ಅಧ್ಯಕ್ಷ ಎ.ವಿ. ಮಲ್ಲಿಕಾರ್ಜುನ್, ಜಿಲ್ಲಾ ಪಂಚ ಸದಸ್ಯ ಸುರೇಶ್ ಸ್ವಾಮಿರಾವ್, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಕೆ.ವಿ. ಕೃಷ್ಣಮೂರ್ತಿ, ಜಿಲ್ಲಾ ಮುಖಂಡರಾದ ಸಾಲೇಕೊಪ್ಪ ರಾಮಚಂದ್ರ ಮತ್ತು ಎನ್.ಆರ್. ದೇವಾನಂದ್ ಸೇರಿದಂತೆ ಇನ್ನಿತರರು ಈ ಸಮಯದಲ್ಲಿ ಉಪಸ್ಥಿತರಿದ್ದರು.
Discussion about this post