ಬೆಂಗಳೂರು: ಕನ್ನಡ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿರುವ ಸ್ಟಾರ್ ನಟ ಹಾಗೂ ನಿರ್ಮಾಪಕರ ಮೇಲಿನ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗೆ ಕಾರಣಗಳನ್ನು ವಿಮರ್ಷಿಸುತ್ತಿರುವ ಬೆನ್ನಲ್ಲೇ, ವಿತರಕರೊಬ್ಬರು ನಿಜವಾದ ಕಾರಣವನ್ನು ತೆರೆದಿಟ್ಟಿದ್ದಾರೆ.
ಖ್ಯಾತ ವಕೀಲ, ಉದ್ಯಮಿ ಹಾಗೂ ವಿತರಕ ಪ್ರಶಾಂತ್ ಸಂಬರಗಿ ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಆದಾಯ ತೆರಿಗೆ ಅಧಿಕಾರಿಗಳ ದಾಳಿಗೆ ಓರ್ವ ವಿತರಕ ಕಾರಣ ಎಂದು ಹೇಳುವ ಮೂಲಕ ಸ್ಪೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ.
ಐಟಿ ದಾಳಿಗೆ ಚಿತ್ರರಂಗದ ವಿತರಕರೊಬ್ಬರು ತಮ್ಮ ಸ್ವಾರ್ಥ ಸಾಧನೆಗಾಗಿ ಮಾಡಿದ ಕೆಲಸವೇ ಕಾರಣ ಎಂದು ಹೇಳಿಕೆ ನೀಡಿದ್ದಾರೆ.
ಅಲ್ಲದೇ, ಇತರ ಕಾರಣಗಳನ್ನು ಉಲ್ಲೇಖಿಸಿರುವ ಅವರು, ದಕ್ಷಿಣ ಭಾರತದ ಸಿನಿಮಾ ಕ್ಷೇತ್ರಗಳಿಗೆ ಹೊಲಿಕೆ ಮಾಡಿ ನೋಡಿದರೆ ಸ್ಯಾಂಡಲ್’ವುಡ್ ಕಡಿಮೆ ಜಿಎಸ್’ಟಿ ಬರುತ್ತಿರುವುದೇ ದಾಳಿಗೆ ಮೂಲ ಕಾರಣವಾಗಿದೆ. ಮುಖ್ಯವಾಗಿ ರಾಜ್ಯದ ಇತರೆ ಭಾಗಗಳಲ್ಲಿ ವಿತರಕರು ಯಾವುದೇ ದಾಖಲೆಗಳಿಲ್ಲದೇ ಚಿತ್ರ ಬಿಡುಗಡೆ ಮಾಡುತ್ತಾರೆ. ಅದೇ ರೀತಿಯಲ್ಲಿ ದಾಖಲೆಯಿಲ್ಲದ ಹಣವೂ ಸಹ ನಿರ್ಮಾಪಕರ ಕೈ ಸೇರುತ್ತದೆ. ಇದೇ ಐಟಿ ದಾಳಿಗೆ ಕಾರಣ ಎಂದಿದ್ದಾರೆ.
ಚಿತ್ರ ನಟರೂ ಸಹ ತಮ್ಮ ಸಂಭಾವನೆಯನ್ನು ಹಣದ ಮೂಲಕವೇ ಪಡೆಯುತ್ತಾರೆ. ಇದರ ಬದಲಾಗಿ, ಚೆಕ್ ಮೂಲಕ ಪಡೆದರೆ ಯಾವುದೇ ತೊಂದರೆಯಿರುವುದಿಲ್ಲ. ಆಗ ಅದು ತೆರಿಗೆ ವ್ಯಾಪ್ತಿಗೆ ಬರುವುದರಿಂದ ತಮ್ಮ ಸಂಭಾವನೆಯನ್ನು ಘೋಷಣೆ ಮಾಡಿಕೊಂಡು ಯಾವುದೇ ಸಮಸ್ಯೆಯಿಲ್ಲದೇ ಇರಬಹುದು ಎಂದಿದ್ದಾರೆ.
Discussion about this post