ಮಂಡ್ಯ: ‘ಅವರು ಕಾಲ್ ಮಾಡಿದ ಸಂದರ್ಭದಲ್ಲಿ ನನಗೆ ಮಾತನಾಡಲು ಆಗಲಿಲ್ಲ ; ಆದರೆ ಈಗ ಮಾತನಾಡೋಣ ಅಂದ್ರೆ ಅವರೇ ಇಲ್ಲ, ನನಗೆ ಅವರು ಬೇಕು..’ ಇದು ನಿನ್ನೆ ಪುಲ್ವಾಮಾದ ಉಗ್ರರ ದಾಳಿಯಲ್ಲಿ ವೀರಸ್ವರ್ಗ ಸೇರಿದ ಮಂಡ್ಯದ ಯೋಧ ಎಚ್. ಗುರು ಅವರ ಪತ್ನಿಯ ಆಕ್ರಂದನ..
ನಿಜಕ್ಕೂ ಅಲ್ಲಿನ ದೃಶ್ಯ ಎಂತಹವರ ಕರಳನ್ನೂ ಕಿವುಚುವಂತಿತ್ತು.
ಜಮ್ಮುವಿನ ಪುಲ್ವಾಮದಲ್ಲಿ ನಿನ್ನೆ ಜೈಶ್ ಉಗ್ರರ ಅಟ್ಟಹಾಸಕ್ಕೆ ಒಳಗಾಗಿ ಹುತಾತ್ಮರಾದ 42 ಯೋಧರ ಪೈಕಿ ನಮ್ಮ ರಾಜ್ಯದ ಮಂಡ್ಯ ಜಿಲ್ಲೆಯ ವೀರ ಯೋಧ ಗುರು ಎಚ್. ಅವರೂ ಸೇರಿದ್ದಾರೆ. ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಯೋಧ ಇವರು. ಯೋಧ ಗುರು ಅವರಿಗೆ ೧೦ ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಗುಡಿಗೆರೆ ಕಾಲನಿಯ ಕಲಾವತಿ ಅವರನ್ನು ಯೋಧ ಗರು ಅವರು ವಿವಾಹವಾಗಿದ್ದರು.
ಉಗ್ರ ದಾಳಿಯಲ್ಲಿ ಯೋಧ ಗುರು ಮೃತಪಟ್ಟ ಸುದ್ದಿ ಇವರ ಮನೆಗೆ ಮುಟ್ಟುತ್ತಿದ್ದಂತೆ ಅವರ ಪತ್ನಿ ತೀವ್ರ ಆಘಾತಕ್ಕೊಳಗಾದರು. ಅವರ ರೋದನ ಅಲ್ಲಿದ್ದವರ ಮನಕಲುಕುವಂತಿತ್ತು.
ಯೋಧ ಗುರು ಅವರು ನಿನ್ನೆ ಬೆಳಿಗ್ಗೆ ತಮ್ಮ ಪತ್ನಿಗೆ ದೂರವಾಣಿ ಕರೆ ಮಾಡಿದ್ದರು. ಆದರೆ ಪತ್ನಿ ಅವರು ಮನೆ ಕೆಲಸದಲ್ಲಿದ್ದ ಕಾರಣ ತನ್ನ ಪತಿಯೊಂದಿಗೆ ಮಾತನಾಡಲು ಸಾಧ್ಯವಾಗಿರಲಿಲ್ಲ. ಬಳಿಕ ಸಂಜೆ ಕಲಾವತಿ ಅವರು ಮರಳಿ ಪತಿಗೆ ಕರೆ ಮಾಡಿದ ಸಂದರ್ಭದಲ್ಲಿ ಆ ಕಡೆಯಿಂದ ಯಾವುದೇ ಪ್ರತ್ಯುತ್ತರ ಸಿಕ್ಕಿರಲಿಲ್ಲ. ಸಂಜೆಯ ಹೊತ್ತಿಗೆ ಪುಲ್ವಾಮದಲ್ಲಿ ಸೇನಾ ವಾಹನದ ಮೇಲೆ ಉಗ್ರದಾಳಿಯಾಗಿದೆ ಎಂಬ ಸುದ್ದಿ ಸಿಕ್ಕಿತ್ತು, ರಾತ್ರಿ ಹೊತ್ತಿಗೆ ಯೋಧ ಗುರು ಹುತಾತ್ಮರಾಗಿರುವ ಸುದ್ದಿಯೂ ಹೊರಬಿತ್ತು. ಅಲ್ಲಗೆ ಇಡಿಯ ಕುಟುಂಬಕ್ಕೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಕಣ್ಣೀರ ಕೋಡಿಯೇ ಅವರ ಮನ, ಮನೆ ತುಂಬಿತು..
ಇತ್ತೀಚೆಗೆ ಗೃಹ ಪ್ರವೇಶ ಮಾಡಿದ್ದರು
ತಮ್ಮ ಮಗ ಮತ್ತು ಸೊಸೆಗಾಗಿ ಯೋಧ ಗುರು ಅವರ ತಂದೆ ಹೊಸ ಮನೆಯೊಂದನ್ನು ಕಟ್ಟಿಸಿದ್ದರು ಮತ್ತು ಇತ್ತೀಚೆಗೆ ತಾನೆ ಅದರ ಗೃಹ ಪ್ರವೇಶವೂ ನಡೆದಿತ್ತು. ಆದರೆ ನೂತನ ಮನೆಯಲ್ಲಿ ಸಂಸಾರ ಮಾಡುವ ಅವರ ಆಸೆ ಕೊನೆಗೂ ಈಡೇರಲೇ ಇಲ್ಲ.
ಸಂಕ್ರಾಂತಿ ಸಮಯದಲ್ಲಿ ರಜೆ ಹಾಕಿ ಊರಿಗೆ ಬಂದಿದ್ದು ಒಂದು ತಿಂಗಳು ಇದ್ದು ಕಳೆದ ಫೆಬ್ರವರಿ 10ರಂದು ಹೋಗಿದ್ದರು. ಈ ಬೆನ್ನಲ್ಲೇ ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದು ಅವರ ಪತ್ನಿ ಮತ್ತು ಕುಟುಂಬದವರಿಗೆ ತೀವ್ರ ಆಘಾತವನ್ನುಂಟುಮಾಡಿದೆ.
ಗುರು ಅವರ ಸಾವಿನಿಂದ ಅವರ ತಂದೆ-ತಾಯಿ ಮತ್ತು ಸಹೋದರರು ಕೂಡ ತೀವ್ರ ಆಘಾತಕ್ಕೀಡಾಗಿದ್ದಾರೆ.
Discussion about this post