ಬೆಂಗಳೂರು: ಅಂಬರೀಶ್ ಅವರ ಮಂಡ್ಯದ ಅಭಿಮಾನಿಗಳು ಪ್ರೀತಿ, ಒತ್ತಾಸೆ ಹಾಗೂ ವಿಶ್ವಾಸಕ್ಕಾಗಿ ರಾಜಕಾರಣಕ್ಕೆ ಇಳಿಯುತ್ತಿದ್ದು, ಮಾರ್ಚ್ 20ರಂದು ಮಂಡ್ಯ ಲೋಕಸಭಾ ಕ್ಷೇತ್ರ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಲಿದ್ದೇನೆ ಎಂದು ದಿ.ಅಂಬರೀಶ್ ಅವರ ಪತ್ನಿ ಸುಮಲತಾ ಹೇಳಿದ್ದಾರೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸ್ಯಾಂಡಲ್ ವುಡ್ ನ ಸಂಪೂರ್ಣ ಬೆಂಬಲ ಮತ್ತು ಮಂಡ್ಯದ ಮತದಾರರ ಹಾಗೂ ಅಂಬರೀಶ್ ಅವರ ಅಭಿಮಾನಿಗಳ ಒತ್ತಾಸೆಗೆ ಕಟ್ಟುಬಿದ್ದು ನಾನು ಈ ನಿರ್ಧಾರಕ್ಕೆ ಬಂದಿರುವುದಾಗಿ ಸುಮಲತಾ ಹೇಳಿದರು.
ಮಾರ್ಚ್ 20ರ ಬುಧವಾರದಂದು ಬೆಳಿಗ್ಗೆ 10 ಗಂಟೆಗೆ ತಾನು ನಾಮಪತ್ರವನ್ನು ಸಲ್ಲಿಸಲಿದ್ದೇನೆ. ಮಂಡ್ಯ ಜಿಲ್ಲೆಯ ಜನರು ತೋರಿದ ಪ್ರೀತಿ ಅಭಿಮಾನಕ್ಕಾಗಿ ತಾವು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಮಂಡ್ಯದ ಜನರ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಪ್ರಯಾಣವನ್ನು ಆರಂಭಿಸುತ್ತಿದ್ದೇನೆ. ನನಗೆ ಧೈರ್ಯ ತುಂಬಲು ನನ್ನ ಕುಟುಂಬದ ಸದಸ್ಯರಂತೆಯೇ ಬೆಂಬಲಕ್ಕಿರುವ ಯಶ್, ದರ್ಶನ್, ರಾಕ್ ಲೈನ್ ವೆಂಕಟೇಶ್, ಮತ್ತಿತರ ಕನ್ನಡ ಚಿತ್ರರಂಗವರು ಜೊತೆಯಲ್ಲಿರುವುದಾಗಿ ಹೇಳಿದರು.
ಅಂಬರೀಶ್ ತೀರಿಕೊಂಡಾಗ ಕತ್ತಲೆಯ ಮನಸ್ಥಿತಿಯಲ್ಲಿದೆ. ಜೀವನದಲ್ಲೇನಿದೆ ಎಂಬ ಭಾವನೆ ಕಾಡತೊಡಗಿತ್ತು. ಅಂತಹ ಸಂದರ್ಭದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಂಬರೀಶ್ ಅಭಿಮಾನಿಗಳು ನನ್ನಲ್ಲಿ ಧೈರ್ಯ ತುಂಬಿದ್ದರು. ಅವರ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಜಕಾರಣ ಪ್ರಾರಂಭಿಸುತ್ತಿದ್ದೇನೆ. ಚುನಾಾವಣೆ ಎದುರಿಸಲು ಸಾಕಷ್ಟು ಧೈರ್ಯ ಬೇಕು. ಈಗ ನಾನು ಆಯ್ಧುಕೊಳ್ಳುವ ದಾರಿ ಸುಲಭವಾಗಿಲ್ಲ. ನಾನು ರಾಜಕಾರಣಿ ಅಲ್ಲ, ನಾನು ಆಯ್ದುಕೊಳ್ಳುವ ದಾರಿಯಲ್ಲಿ ಅವಮಾನವಿದೆ. ಆದರೂ, ಮಂಡ್ಯದ ಜನರ ಪ್ರೀತಿ, ವಿಶ್ವಾಸ ಕಳೆದುಕೊಳ್ಳಲು ಇಷ್ಟವಿಲ್ಲ. ಕೆಲವರಿಗೆ ಇದರಿಂದ ಅನೂಕೂಲವಾಗದಿರಬಹುದು ಅಂಬಿ ಮೇಲಿನ ಜನರ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಾವೂ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದರು.
ಅಂಬರೀಶ್ ಬಿಟ್ಟುಹೋದ ಕನಸುಗಳನ್ನು ನೀವು ಈಡೇರಿಸಬೇಕು ಎನ್ನುವುದು ಅಭಿಮಾನಿಗಳ ಒತ್ತಾಸೆಯಾಗಿದೆ. ಅಂಬರೀಶ್ ಅವರು ಯಾವತ್ತೂ ನಾನು, ನನ್ನ ಕುಟುಂಬ ಎನ್ನಲಿಲ್ಲ. ಅವರ ಸುತ್ತ ಯಾವಾಗಲೂ ಸ್ನೇಹಿತರ ಬಳಗವಿರುತ್ತಿತ್ತು. ನೆಮ್ಮದಿಯ ಜೀವನ ಸಾಗಿಸಲು ನಮಗೆ ಯಾವ ಕೊರತೆಯೂ ಇಲ್ಲ. ಚುನಾವಣೆ ಎದುರಿಸಲು ಸಾಕಷ್ಟು ಧೈರ್ಯ ಬೇಕು. ಜನರ ಒತ್ತಾಸೆಗೆ ನಾನು ಬೆಂಬಲ ನೀಡಲಿಲ್ಲ ಎಂದಾದರೆ ನಾನು ಅಂಬರೀಶ್ ಅವರ ಪತ್ನಿಯಾಗಿದ್ದು ಏನು ಪ್ರಯೋಜನ ಎಂದರು.
ಸುಮಲತಾ ಅವರಿಗೆ ನಟರಾದ ದೊಡ್ಡಣ್ಣ, ನಟರಾದ ದರ್ಶನ್ ತೂಗುದೀಪ, ಯಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಜೈ ಜಗದೀಶ್ ದಂಪತಿ ಸಹಿತ ಹಲವರು ಸಾಥ್ ನೀಡಿದ್ದರು.
Discussion about this post