ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಳಸುವಂತಹ ಹಗುರವಾದ ಪದಗಳನ್ನಾಗಲೀ ಅವರು ಹೇಳಿರುವಂತೆ ತೆವಲು ಭಾಷೆಯನ್ನಾಗಲೀ ತಾವು ಬಳಸುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆವಲಿನ ಬಗ್ಗೆ ಕುಮಾರಸ್ವಾಮಿ ಅವರಿಗೆ ಬಹಳ ಚೆನ್ನಾಗಿಯೇ ಗೊತ್ತಿದೆ ಅನಿಸುತ್ತದೆ. ಕ್ಷೇತ್ರದ ಜನರು ತಮ್ಮನ್ನು ಸುಮ್ಮನೆ ಆರಿಸಿ ಕಳಿಸಿಲ್ಲ. 2006-07 ರಲ್ಲಿ ತಾವು ಅಷ್ಟು ಕೆಲಸ ಮಾಡಿಕೊಂಡು ಹೋಗಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಅದು ನನ್ನ ಮನೆಗೆ ಕೊಟ್ಟ ದುಡ್ಡಲ್ಲ. ಶಾಸಕನಾಗಿ ಗೆದ್ದು ಬಂದಿದ್ದಾಗ ಕ್ಷೇತ್ರದ ಅಭಿವೃದ್ಧಿಗೆ ಕೊಡಬೇಕಾದ ಹಣ ಅದು. ಸುಮ್ಮನೆ ದಾರಿಲೀ ಹೋಗುವವನಿಗೆ ಕೊಟ್ಟ ದುಡ್ಡಲ್ಲ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ನಾವು. ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿರುವುದು ಅವರ ಕರ್ತವ್ಯ. ಕ್ಷೇತ್ರಕ್ಕೆ ಕೊಟ್ಟ ಹಣವನ್ನು ಹೀಗೆ ಹೇಳುವುದು ಸರಿಯಲ್ಲ ಎಂದು ಕುಟುಕಿದರು.
ತಮ್ಮ ಬಗ್ಗೆ ಕುಮಾರಸ್ವಾಮಿ ಏಕವಚನದಲ್ಲಿ ಪದ ಪ್ರಯೋಗ ಮಾಡಿದ್ದಾರೆ. ಅವರು ಪದ ಬಳಕೆ ಮಾಡಿದಂತೆ ತಾವು ಮಾಡುವುದಿಲ್ಲ ಎಂದು ಸೂಕ್ಷ್ಮವಾಗಿ ಕುಟುಕಿದರು.
ಹಿರೇಕೆರೂರಿನಲ್ಲಿ ಮೀಸಲಿಟ್ಟ ಹಣದಿಂದ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿರುವುದು ಸತ್ಯಕ್ಕೆ ದೂರವಾದ ಮಾತು. ಅವರು ತಮ್ಮ ಬಜೆಟ್’ನಲ್ಲಿ ನಮ್ಮ ಕ್ಷೇತ್ರಕ್ಕೆ ಒಂದು ರೂಪಾಯಿಯನ್ನೂ ನೀಡಿಲ್ಲ. ಕಾಂಗ್ರೆಸ್’ಗೆ ರಾಜೀನಾಮೆ ಕೊಟ್ಟ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜತೆ ಚರ್ಚೆ ಮಾಡಿ, ಡಿಪಿಎಆರ್’ನಲ್ಲಿ ಆದೇಶ ಮಾಡಿಸಿ ಕ್ಯಾಬಿನೆಟ್’ನಲ್ಲಿ ಅನುಮೋದನೆ ಪಡೆದು ಬಳಿಕ 185 ಕೋಟಿ ರೂ ಬಿಡುಗಡೆ ಮಾಡಿಸಿ ನಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಅದು ಕುಮಾರಸ್ವಾಮಿ ಕೊಟ್ಟ ಅನುದಾನ ಅಲ್ಲ ಎಂದು ಸ್ಪಷ್ಟಪಡಿಸಿದರು.
(ವರದಿ: ಶ್ರೀಮತಿ ಸಂಧ್ಯಾ, ಕೃಷಿ ಸಚಿವರ ಮಾಧ್ಯಮ ಕಾರ್ಯದರ್ಶಿ)
Get in Touch With Us info@kalpa.news Whatsapp: 9481252093
Discussion about this post