ಬೆಂಗಳೂರು: ಪುಲ್ವಾಮಾದಲ್ಲಿನ ಉಗ್ರರ ದಾಳಿಯಿಂದ ಆಕ್ರೋಶಗೊಂಡಿರುವ ದೇಶದ ಜನತೆಯ ಒತ್ತಾಯದಂತೆ ಪ್ರತೀಕಾರ ಪಡೆಯುವುದು ನಿಶ್ಚಿತ. ಆದರೆ, ಯಾವ ರೀತಿ ಎಂಬುದನ್ನು ಮಾತ್ರ ಈಗ ಹೇಳಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿರುವ ಅವರು, ಪ್ರತೀಕಾರ ಪಡೆಯುವುದು ನಿಶ್ಚಿತ. ದೇಶದ ಭದ್ರತಾ ಪಡೆಗಳಿಗೆ ಈಗಾಗಲೇ ಪ್ರಧಾನಿಯವರು ಸ್ವತಂತ್ರ ಘೋಷಿಸಿದ್ದು, ಮುಂದಿನ ಕಾರ್ಯಾಚರಣೆಗಳ ಬಗ್ಗೆ ಸೇನೆ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ. ಯಾವ ರೀತಿಯ ಉತ್ತರ ನೀಡಬೇಕು ಎಂಬುದನ್ನು ಸೇನೆಯೇ ನಿರ್ಧರಿಸಲಿದೆ ಎಂದಿದ್ದಾರೆ.
ಅದೇ ರೀತಿ ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪುಲ್ವಾಮಾ ಘಟನೆ ಬಗ್ಗೆ ಬೇರು ಮಟ್ಟದಿಂದ ಸಂಪೂರ್ಣ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪುಲ್ವಾಮಾ ಘಟನೆಯಿಂದ ಭಾರತೀಯ ಸೇನೆಯ ನೈತಿಕ ಸ್ಥೈರ್ಯ ಕುಸಿದಿಲ್ಲ. ಬದಲಾಗಿ, ದೇಶದ ಜನರು ಸೇನೆಯ ಮೇಲೆ ತೋರಿಸಿರುವ ಪ್ರೀತಿ ಪ್ರೇರಣೆಯಾಗಿ, ಇನ್ನೂ ಹೆಚ್ಚಿನ ಬಲ ತಂದಿದೆ ಎಂದಿದ್ದಾರೆ.
ಮುಂಬೈ ಉಗ್ರರ ದಾಳಿ ಕುರಿತಂತೆ ನಮ್ಮ ಸರ್ಕಾರ ಮಾತ್ರವಲ್ಲ ಹಿಂದಿನ ಸರ್ಕಾರವೂ ಸಹ ಹಲವು ಕಡತ ಹಾಗೂ ಸಾಕ್ಷಿಗಳನ್ನು ಪಾಕಿಸ್ಥಾನಕ್ಕೆ ನೀಡಿತ್ತು. ಆದರೆ, ಈವರೆಗೂ ಪಾಕಿಸ್ಥಾನ ಮಾಡಿರುವುದೇನು ಎಂದು ಪ್ರಶ್ನಿಸಿದರು.

















