ರಾಜೇಂದ್ರ ಚಂದ್ರಿಕಾ, ದಿನೇಶ್ ರಾಮ್ ದಿನ್, ಸುನಿಲ್ ನಾರಾಯಣ್ (ನರೇನ್), ವೀರಸಾಮಿ ಪೆರುಮಾಳ್, ರವಿ ರಾಮ್‌ಪಾಲ್ ಮತ್ತು ದೇವೇಂದ್ರ ಬಿಷೂ ಇವರೆಲ್ಲಾ ಸದ್ಯ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡದ ಸದಸ್ಯರು.
ಈ ಹಿಂದೆ ಶಿವನಾರಾಯಣ್ ಚಂದ್ರಪಾಲ್, ರಾಮ್ ನರೇಶ್ ಸರವಣ್, ನಾಗಮುತ್ತು, ಕಾಳಿಚರಣ್, ರಘುನಾಥ್ ಹೀಗೆ ಹಲವು ಆಟಗಾರರು ವೆಸ್ಟ್ ಇಂಡೀಸ್ ಪರವಾಗಿ ಆಡಿದ್ದಾರೆ.
‘ಅರೆರೆ, ಇವರ ಹೆಸರುಗಳೆಲ್ಲಾ ಇಂಡಿಯನ್ಸ್ ಹೆಸರು ಇದ್ದಹಾಗಿದೆಯಲ್ಲಾ? ಇವರೆಲ್ಲಾ ಭಾರತೀಯರಾ? ಭಾರತದಲ್ಲಿ ಹುಟ್ಟಿ ವೆಸ್ಟ್ ಇಂಡೀಸ್ ಪರವಾಗಿ ಆಡ್ತಿದ್ದಾರಾ?’ ಅಂತ ಸಾಕಷ್ಟು ಬಾರಿ ಅನುಮಾನ ಮೂಡುವುದು ಸಹಜ.
‘ವೆಸ್ಟ್ ಇಂಡೀಸ್ ಒಂದು ದೇಶವಾ? ಆ ದೇಶಕ್ಕೆ ಒಬ್ಬ ಅಧ್ಯಕ್ಷ ಅಥವಾ ಒಬ್ಬ ಪ್ರಧಾನಮಂತ್ರಿ ಇದ್ದಾರಾ?’. ವೆಸ್ಟ್ ಇಂಡೀಸ್ ಒಂದು ದೇಶ ಅಲ್ಲ. ಹಲವು ದ್ವೀಪರಾಷ್ಟ್ರಗಳು ಮತ್ತು ಬ್ರಿಟಿಷ್, ಫ್ರೆಂಚ್ ಇನ್ನಿತರೆ ರಾಷ್ಟ್ರಗಳ ವಸಾಹತು ದ್ವೀಪಗಳ ಸಮೂಹ. ಬಾರ್ಬ್‌ಡೋಸ್, ಗಯಾನಾ, ಟ್ರಿನಿಡಾಡ್ ಮತ್ತು ಟೊಬ್ಯಾಗೋ, ಗ್ರೆನೆಡಾ, ಡಾಮಿನಿಕಾ, ಆ್ಯಂಟಿಗುವಾ ಮತ್ತು ಬಾರ್ಬುಡಾ ಹೀಗೆ ಇನ್ನೂ ಹಲವಾರು ರಾಷ್ಟ್ರಗಳ ಸಮೂಹವೇ ವೆಸ್ಟ್ ಇಂಡೀಸ್.
ಇದು ಇರುವುದಾದರೂ ಎಲ್ಲಿ ಅಂತ ನೋಡಿದರೆ ಉತ್ತರ ಅಮೆರಿಕಾ ಮತ್ತು ದಕ್ಷಿಣ ಅಮೆರಿಕಾ ನಡುವೆ ಬರುವ ದ್ವೀಪಗಳ ಸಮೂಹದಲ್ಲಿ. ಎಲ್ಲಿಯ ಭಾರತ? ಎಲ್ಲಿಯ ವೆಸ್ಟ್ ಇಂಡೀಸ್? ಅಲ್ಲೆಲ್ಲೋ ಇರುವ ವೆಸ್ಟ್ ಇಂಡೀಸ್‌ನಲ್ಲಿ ಇಷ್ಟೊಂದು ಭಾರತೀಯರು ಇರಲು ಹೇಗೆ ಸಾಧ್ಯ ಅಂತ ನೋಡೋದಾದರೆ, ಅವರೆಲ್ಲಾ ಭಾರತೀಯ ಮೂಲದವರೇ. ಭಾರತೀಯರಲ್ಲ. ಇದೆಲ್ಲಾ 2 ಶತಮಾನಗಳ ಕಾಲ ಭಾರತವನ್ನು ಆಳಿದ ಬ್ರಿಟಿಷರ ಕೊಡುಗೆ. ನಮ್ಮ ಉತ್ತರ ಕನ್ನಡ ಜಿಲ್ಲೆಯ ಸಿದ್ಧಿ ಜನಾಂಗ ಹೇಗೋ, ಹಾಗೆ ವೆಸ್ಟ್ ಇಂಡೀಸ್‌ನ ಭಾರತೀಯರು.
ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದ ಬ್ರಿಟಿಷರು, ಫ್ರೆಂಚರು ಮತ್ತು ಡಚ್ಚರು ಭಾರತೀಯರನ್ನು ವೆಸ್ಟ್ ಇಂಡೀಸ್‌ನ ತೋಟ, ಗದ್ದೆಗಳಲ್ಲಿ ಕೆಲಸ ಮಾಡಲು ಕರೆದುಕೊಂಡು ಹೋಗಿದ್ದರು. ಬಹುಪಾಲು ಭಾರತೀಯರ ಮೂಲದ ಜನ ವೆಸ್ಟ್ ಇಂಡೀಸ್‌ನ ಟ್ರಿನಿಡಾಡ್ ಮತ್ತು ಟೊಬ್ಯಾಗೋ, ಗಯಾನಾ, ಸುರಿನಾಮ್, ಜುಮೈಕಾ, ಗುಚೇಲೋಪ್ ಇಂಗ್ಲಿಷ್ ಮಾತನಾಡುವ ದ್ವೀಪಗಳಲ್ಲಿ ಹೆಚ್ಚಾಗಿ ವಾಸಿಸುತ್ತಾರೆ.
(ಮುಂದುವರೆಯುವುದು…)
Discussion about this post