ಕಬ್ಬು ಮತ್ತು ಸಕ್ಕರೆ ಉದ್ಯಮದಿಂದಾಗಿ ಕೆರಿಬಿಯನ್ ದ್ವೀಪಗಳನ್ನು ಸೇರಿದ ಭಾರತೀಯ ಗುತ್ತಿಗೆ ನೌಕರರನ್ನು ಬ್ರಿಟಿಷ್ ಮಾಲಿಕರು ತುಂಬಾ ಅಮಾನ ವೀಯವಾಗಿ ನಡೆಸಿಕೊಂಡರು. ಈ ಹಿಂದೆ ಆಫ್ರಿಕನ್ ಗುಲಾಮರನ್ನು ನಡೆಸಿಕೊಂಡ ರೀತಿಯಂತೆ ಭಾರತೀಯರನ್ನು ನಡೆಸಿಕೊಂಡರು.
ಗುತ್ತಿಗೆಯ ಕರಾರುಗಳನ್ನು ಉಲ್ಲಂಘಿಸಿದವರನ್ನು ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗೆ ಅಟ್ಟುತ್ತಿದ್ದರು. ಸಾಕಷ್ಟು ಜನರನ್ನು ಕರೆತಂದದ್ದು ಯಾವುದೋ ಕೆಲಸಕ್ಕೆಂದು. ಆವರಿಗೆ ನೀಡಿದ್ದು ಮತ್ತ್ಯಾವುದೋ ಕೆಲಸ. ಸಮುದ್ರ ಪ್ರದೇಶಗಳಿಂದ ದೂರದ ಪ್ರದೇಶಗಳಲ್ಲಿ ದುಡಿಯಲು ಬ್ರಿಟಿಷ್ ಕಾಲೋನಿಯನ್ ಸೆಕ್ರೆಟರಿ ಚಾರ್ಲ್ಸ್ ಆಂಡರ್‌ಸನ್ ಹೇಳುವ ಪ್ರಕಾರ, ಈ ಗುತ್ತಿಗೆ ನೌಕರರನ್ನು ಪಶುಗಳಂತೆ ನಡೆಸಿಕೊಂಡರು. ಕಬ್ಬಿನ ಗದ್ದೆಗಳಲ್ಲಿ ಬಿಡುವಿಲ್ಲದಂತೆ ಪರಿಶ್ರಮ ಹಾಕಿ ದುಡಿಯುವಂತೆ ಬಲವಂತ ಮಾಡಲಾಯಿತು. ಕಬ್ಬಿನ ಗದ್ದೆಗಳನ್ನು ಪರಿಶೀಲಿಸುವಾಗ ಈ ನೌಕರರ ಕೊಳೆತ ಶವಗಳು ದೊರಕುತ್ತಿದ್ದವು. ಮಾಲಿಕರ ವಿರುದ್ಧ ದನಿಯೆತ್ತುವ ನೌಕರರಿಗೆ ಸಂಬಳವಾಗಲಿ, ಆಹಾರವಾಗಲಿ ನೀಡದೆ ಹಸಿವಿನಿಂದ ನರಳುವಂತೆ ನೋಡಿಕೊಳ್ಳಲಾಯಿತು.
ಕಬ್ಬು ಮತ್ತು ಸಕ್ಕರೆ ಉದ್ಯಮವು ಇಂದು ಕೆರಿಬಿಯನ್ ದ್ವೀಪಗಳಲ್ಲಿ ಭಾರತೀಯರು ಬಹುದೊಡ್ಡ ಸಂಖ್ಯೆಯಲ್ಲಿ ನೆಲೆಯೂರುವಂತೆ ದಿನೇ ದಿನೇ ಗಯಾನ, ಜುಮೈಕಾ, ಟ್ರಿನಿಡಾಡ್, ಮಾರ್ಟಿನಿಕ್, ಫ್ರೆಂಚ್ ಗಯಾನಾ, ಗುಡೆಲೋಪ್, ಗ್ರೆನೆಡಾ, ಸೇಂಟ್ ಲೂಸಿಯಾ, ಸೇಂಟ್ ವಿನ್ಸೆಂಟ್, ಸೇಂಟ್ ಕಿಟ್ಸ್, ಸೇಂಟ್ ಕ್ರಾಕ್ಸ್, ಸುರಿನಾಮ್ ಮತ್ತು ನೇವಿಸ್ ದೇಶಗಳಲ್ಲಿ ಹರಡಿಕೊಳ್ಳುತ್ತ ಗಟ್ಟಿಯಾಗಿ ನೆಲೆಯೂರಿದ್ದಾರೆ. ಒಂದು ಅಂದಾಜಿನ ಪ್ರಕಾರ ಕೆರಿಬಿಯನ್ ದ್ವೀಪಗಳಲ್ಲಿ ಸುಮಾರು 25 ಲಕ್ಷ ಭಾರತೀಯ ಮೂಲದ ನಾಗರಿಕರು ವಾಸವಾಗಿದ್ದಾರೆ. ಸಾಕಷ್ಟು ಭಾರತೀಯರು ಇತರೆ ದೇಶಗಳಿಂದ ವಲಸೆ ಬಂದ ಜನರೊಂದಿಗೆ ಬೆರೆತು ತಮ್ಮದೇ ಆದ ವಿಶಿಷ್ಟ ಸಂಪ್ರದಾಯಗಳ ಕಾರಣರಾಗಿದ್ದಾರೆ.
(ಮುಂದುವರೆಯುವುದು)
Discussion about this post