200 ವರ್ಷಗಳ ಹಿಂದೆ ನಡೆದ ವಲಸೆಯನ್ನು ಹೊರತುಪಡಿಸಿ, ಆಧುನಿಕ ಕಾಲದಲ್ಲೂ ಕೆರೆಬಿಯನ್‌ಗೆ ಭಾರತೀಯರ ವಲಸೆ ನಡೆದೇ ಇದೆ. ಇದು ಯಾರ ಬಲವಂತಕ್ಕೂ ಅಲ್ಲ. ಬದಲಾಗಿ ತಮ್ಮ ವ್ಯಾಪಾರ ವಹಿವಾಟಿನ ಸಲುವಾಗಿ. ಸೇಂಟ್ ಮಾರ್ಟಿನ್, ಸೇಂಟ್ ಥಾಮಸ್ ದ್ವೀಪಗಳಲ್ಲಿ ಈಚಿನ ವರ್ಷಗಳಲ್ಲಿ ದೇಶಾಂತರ ಮಾಡಿದ ಸಿಂಧಿ ಜನರನ್ನು ಕಾಣಬಹುದು. ಇವರಿಗೆ ಯಾವುದೇ ಸುಂಕ ವಿಧಿಸದೇ ವ್ಯಾಪಾರ ಮಾಡುವ ಅವಕಾಶ ಕಲ್ಪಿಸಿಕೊಡಲಾಗಿದೆ.
ಇನ್ನುಳಿದಂತೆ ಬೆರಳು ತೋರಿಸಿದರೆ ಹಸ್ತವನ್ನೇ ನುಂಗುವ ಗುಜರಾತಿನ ವ್ಯಾಪಾರಿಗಳು ಮತ್ತು ಹಲವು ಭಾರತೀಯ ವೈದ್ಯರು ಸಹ ಕೆರಿಬಿಯನ್ ದ್ವೀಪಗಳಲ್ಲಿ ವ್ಯಾಪಾರ ನಡೆಸಿದ್ದಾರೆ.
ಕೆರಿಬಿಯನ್ ದ್ವೀಪಗಳಿಂದ ಇತ್ತೀಚೆಗೆ ಹಲವಾರು ಭಾರತೀಯರು (Indo-Caribbean) ಅಮೆರಿಕಾ, ಕೆನಡಾ, ಬ್ರಿಟನ್, ಪನಾಮಾ ಮತ್ತು ವೆನೆಜುವೆಲಾ, ನೆದರ್‌ಲ್ಯಾಂಡ್ ಮತ್ತು ಫ್ರಾನ್‌ಸ್ ಹೋಗಿದ್ದಾರೆ. ಈ ವಿಚಾರದಲ್ಲಿ ಕೆನಡಾ ಭಾರತೀಯ ಕೆರೆಬಿ ಯನ್ನರಿಗೆ ಬೆನ್ನೆಲು ಬಾಗಿ ನಿಂತಿದೆ.
ಕೆನಡಾದ ಟೊರಾಂಟೋದಿಂದ Indo-Caribbean world, Caribbean Express ಎಂಬ ಎರಡು ಪತ್ರಿಕೆ ಪ್ರಕಟವಾಗುತ್ತದೆ. 2010ರಲ್ಲಿ Indo-Caribbean Times ಎಂಬ ಪತ್ರಿಕೆಯೂ ಕಾರಣಾಂತರದಿಂದ ಸ್ಥಗಿತಗೊಂಡಿತು.
ಸಂಪ್ರದಾಯ- ಆಚರಣೆಗಳು:
ಗುತ್ತಿಗೆ ನೌಕರರಾಗಿ ಕೆರಿಬಿಯನ್‌ಗೆ ಬಂದ ಭಾರತೀಯರು ಕಠಿಣ ಪರಿಸ್ಥಿತಿಯ ನಡುವೆಯೂ ತಮ್ಮತನವನ್ನು ಉಳಿಸಿಕೊಂಡು ಬಂದಿದ್ದಾರೆ. ಹಾಗಿದ್ದಾಗ್ಯೂ ಅಲ್ಲಿನ ಮಿಶ್ರ ಸಂಪ್ರದಾಯಿಕ ವಾತಾವರಣದಲ್ಲಿ ವಿಭಿನ್ನ ಬಗೆಯ ಜನರು ಆಚರಣೆಗಳಿಗೆ ಒಗ್ಗಿಕೊಂಡು ಹೊಸ ಸಂಪ್ರದಾಯದ ಹುಟ್ಟಿಗೆ ಕಾರಣರಾಗಿದ್ದಾರೆ.
ಇಂಡೊ- ಕೆರಿಬಿಯನ್ ಸಂಸ್ಕೃತಿಯು ಭಾರತೀಯ, ಕ್ರಿಯೋಲ್ (Creol), ಆಫ್ರೋ- ಕೆರಿಬಿಯನ್ ಮತ್ತು ಪಾಶ್ಚಾತ್ಯ ಯುರೋಪ್ ಸಂಸ್ಕೃತಿಯಿಂದ ಸಮ್ಮಿಳಿತಗೊಂಡಿದೆ. 1950ರ ನಂತರ ಅಮೆರಿಕನ್ ಸಂಪ್ರದಾಯ ಕೂಡ ಸಾಕಷ್ಟು ಪ್ರಭಾವ ಬೀರಿದೆ.
(ಮುಂದುವರೆಯುವುದು)
Discussion about this post