ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಭರ್ಜರಿ ಜಯ ದಾಖಲಿಸಿ, ಇಡಿಯ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದ್ದು, ಇದರ ನಡುವೆಯೇ ರಾಜ್ಯದಲ್ಲೂ ಸಹ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳು ಹಾಗೂ ಅದರ ಮೇಲಿನ ಗ್ರಹಗತಿಗಳ ಪರಿಣಾಮಗಳು ಕುರಿತಾಗಿ ಜ್ಯೋರ್ತಿವಿಜ್ಞಾನಂ ಖ್ಯಾತಿಯ ಪ್ರಕಾಶ್ ಅಮ್ಮಣ್ಣಾಯ ಅವರೊಂದಿಗೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚರ್ಚೆ ನಡೆಸಿತು. ಅದರ ಸಾರಾಂಶ ಹೀಗಿದೆ:
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ 25 ಸ್ಥಾನಗಳನ್ನು ಗೆದ್ದಿರುವ ಹುಮ್ಮಸ್ಸಿನಲ್ಲಿರುವ ಬಿಜೆಪಿ ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಮನೆಗೆ ಕಳುಹಿಸಿ, ಅಧಿಕಾರಕ್ಕೇರುವ ತವಕದಲ್ಲಿದ್ದು, ಇದಕ್ಕೆ ರಾಜಕೀಯ ತಂತ್ರಗಾರಿಕೆಯನ್ನು ಆರಂಭಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡ್ಯೂರಪ್ಪ ಮತ್ತೆ ಸಿಎಂ ಆಗುವ ಉಮೇದಿನಲ್ಲಿ ಬಿರುಸಿನ ಚಟುವಟಿಕೆ ನಡೆಸುತ್ತಿದ್ದು, ಇದರ ಕುರಿತಾಗಿ ರಾಜ್ಯದೆಲ್ಲೆಡೆ ಭಾರೀ ಚರ್ಚೆ ನಡೆಯುತ್ತಿದೆ.
ಆದರೆ ನಿಖರ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರ ಹೇಳುವಂತೆ, ಸುಯೋಗಕ್ಕೂ ದುರ್ಯೋಗಕ್ಕೂ ಭಂಗವಾಗುವ ಯೋಗವೂ ಇದೆ. ಆದರೆ ಸುಯೋಗ ಭಂಗವಾದರೆ ದುಃಖ. ದುರ್ಯೋಗ ಭಂಗವಾದರೆ ಸುಖ. ಕರ್ನಾಟಕದ ಮೈತ್ರಿ ಸರಕಾರದ ದುರ್ಯೋಗವು ಅನೇಕ ಸಲ ಭಂಗವಾಗಿದೆ ಎನ್ನುತ್ತಾರೆ.
ಯಡ್ಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಮಾಡಿದ್ದು, ಮೈತ್ರಿಗಳ ದುರ್ಯೋಗಕ್ಕೆ ಭಂಗ ತಂದೀತು. ನಂತರ ದುರ್ಯೋಗ ವೃದ್ಧಿಯಾಗುತ್ತಾ, ರೆಸಾರ್ಟ್ ಸೇರಿದಾಗ ಮಡಿಕೇರಿ ಪ್ರಳಯವು ಭಂಗ ತಂದಿತು. ಮತ್ತೊಮ್ಮೆ ಚುನಾವಣೆಯ ನೆಪದಲ್ಲಿ ಒಂದಷ್ಟು ಕಾಲ ಭದ್ರವಾಯ್ತು. ಅಂತೂ ಮೈತ್ರಿ ಸರಕಾರದ ಹಣೆಯಲ್ಲಿ ದುರ್ಯೋಗ ಕುಣಿದಾಡುತ್ತಲೇ ಇದೆ. ಈ ಹಂತದಲ್ಲಿ ಯಡ್ಯೂರಪ್ಪ ಭಂಗ ತರಲು ಹೊರಟರೆ ಮತ್ತೆ ಮೈತ್ರಿ ಘಟ್ಟಿಯಾಗುತ್ತದೆ ಎಂದು ಮಾರ್ಮಿಕವಾಗಿ ನುಡಿಯುತ್ತಾರೆ.
ರಾಜ್ಯದ ಮೈತ್ರಿ ಸರ್ಕಾರ ಜನಾದೇಶಕ್ಕೆ ವಿರುದ್ಧವಾದುದು. ಇದು ಕರುನಾಡಿಗರ ನಿರ್ಧಾರಕ್ಕೆ ವಿರೋಧವಾಗಿದೆ ಎಂಬುದನ್ನು ಮತದಾರರ ಮೈತ್ರಿ ಪಕ್ಷವನ್ನು ಹೀನಾಯವಾಗಿ ಸೋಲಿಸುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಉತ್ತರ ನೀಡಿದ್ದಾರೆ. ಹೀಗಾಗಿ, ಮೈತ್ರಿ ಸರ್ಕಾರದ ಆಯಸ್ಸು ತಾನೇ ತಾನಾಗಿ ಕಡಿಮೆಯಾಗುತ್ತಿದ್ದು, ಇಂತಹ ಹಲವು ಬೆಳವಣಿಗೆಗಳಿಗೆ ರಾಜ್ಯ ರಾಜಕೀಯ ಈಗಾಗಲೇ ಸಾಕ್ಷಿಯಾಗಿದೆ.
ಇದರ ನಡುವೆಯೇ ಲೋಕಸಭಾ ಚುನಾವಣೆಯ ಜಯಭೇರಿಯ ಉಮೇದಿನಲ್ಲಿ ಮೈತ್ರಿ ಸರ್ಕಾರವನ್ನು ಮನೆಗೆ ಕಳುಹಿಸಿ, ಅಧಿಕಾರಕ್ಕೇರುವ ರಾಜಕೀಯ ತಂತ್ರಗಳನ್ನು ಹೂಡುತ್ತಿರುವ ಬಿ.ಎಸ್. ಯಡ್ಯೂರಪ್ಪ ಹಾಗೂ ಬಿಜೆಪಿ ಇಂತಹ ನಡೆಯಿಂದ ತೊಂದರೆಯನ್ನೇ ಅನುಭವಿಸುತ್ತದೆ ಎಂದು ರಾಜಕೀಯ ವಿಶ್ಲೇಷಕರೂ ಸಹ ಹೇಳಿದ್ದಾರೆ.
ಈ ವಿಚಾರಕ್ಕೆ ಜ್ಯೋತಿಷ್ಯದ ಆಯಾಮದಲ್ಲಿ ಅಮ್ಮಣ್ಣಾಯ ಈ ರೀತಿ ಪ್ರತಿಕ್ರಿಯೆ ನೀಡುತ್ತಾರೆ. ‘ನೋಡಿ, ಯಡ್ಯೂರಪ್ಪನವರು ಈ ಹಂತದಲ್ಲಿ ಎಲ್ಲಿಯಾದರೂ ಅವರ ಮಹತ್ವಾಕಾಂಕ್ಷೆಗೆ ಒತ್ತುಕೊಟ್ಟು ಮುಂದುವರೆದರೋ, ಸಮಸ್ಯೆಗಳನ್ನು ಎಳೆದು ಹಾಕಿಕೊಂಡ ಹಾಗಾದೀತು. ಈ ಸಮಯದಲ್ಲಿ ಮತ್ತೊಬ್ಬ ಯೋಗ ಇರುವ ಯೋಗ್ಯ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಹೊರಟರೆ ಯಡ್ಯೂರಪ್ಪನವರ ಸಾಧನೆ, ಆಕಾಂಕ್ಷೆಗಳು ಖಂಡಿತವಾಗಿಯೂ ಫಲಿಸಬಹುದು. ಸರಕಾರ ಬೀಳಿಸಲು ಹೋಗಬೇಡಿ. ಅದಾಗಿಯೇ ಬೀಳುವಂತೆ ಮಾಡಿ’.
ಒಟ್ಟಾರೆಯಾಗಿ ನೋಡುವುದಾದರೆ, ರಾಜಕೀಯ ವಿಶ್ಲೇಷಕರು ಹಾಗೂ ಸಾರ್ವಜನಿಕವಾಗಿ ಸಾಮಾನ್ಯ ಜನರ ಅಭಿಪ್ರಾಯವನ್ನು ನೋಡುವುದಾರೆ, ಮೈತ್ರಿ ಸರ್ಕಾರದಲ್ಲಿ ಅವರ ನಡುವೆಯೇ ಬಿರುಕು ಮೂಡಿ, ಬಿದ್ದು ಹೋಗುತ್ತದೆ. ಇದರ ನಡುವೆ ಅಧಿಕಾರದ ಆಸೆಯಿಂದ ಬಿಜೆಪಿ ಹಾಗೂ ಯಡ್ಯೂರಪ್ಪ ಸರ್ಕಾರವನ್ನು ಬೀಳಿಸದೇ ಮೌನವಾಗಿದ್ದರೆ ಒಳ್ಳೆಯದು ಎನ್ನುವುದಾಗಿದೆ. ಇದಕ್ಕೆ ಪೂರಕವಾಗಿ ಜ್ಯೋತಿಷ್ಯದ ಆಯಾಮದಲ್ಲೂ ಸಹ ಅಮ್ಮಣ್ಣಾಯ ಅವರ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಬಿಎಸ್’ವೈ ಹಾಗೂ ಬಿಜೆಪಿ ಯಾವ ನಡೆಯಿಡಲಿದೆ ಎಂಬುದನ್ನು ಮಾತ್ರ ಕಾದು ನೋಡಬೇಕಿದೆ.
Discussion about this post