ಭಾರತೀಯ ಚಿತ್ರರಂಗ ಕಂಡ ಮೇರು ನಟ, ರಾಜಕಾರಣಿ ಅಂಬರೀಶ್ ನಮ್ಮನ್ನೆಲ್ಲಾ ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ. ಅನಾರೋಗ್ಯಕ್ಕೆ ಒಳಗಾಗಿದ್ದ ಅಂಬರೀಶ್ ಅವರು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಇಹಲೋಕ ತ್ಯಜಿಸಿದ್ದು, ಇಡಿಯ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
ಆದರೆ, ಎಲ್ಲೋ ಒಂದು ಕಡೆಯಲ್ಲಿ ಅಂಬಿ ಜಾತಕದಲ್ಲಿ ತೊಂದರೆಯಿದ್ದು, ಇದನ್ನು ಪರಿಹಾರ ಮಾಡಿಕೊಂಡಿದ್ದರೆ ಉಳಿಯುತ್ತಿದ್ದರೇ ಎಂಬ ಪ್ರಶ್ನೆ ಮೂಡಿದೆ.
ಈ ಕುರಿತಂತೆ ಅಂಬರೀಶ್ ಅವರೊಂದಿಗೆ ಚರ್ಚಿಸಿದ್ದ ಜ್ಯೋರ್ತಿವಿಜ್ಞಾನಂ ಖ್ಯಾತಿಯ ಪ್ರಕಾಶ್ ಅಮ್ಮಣ್ಣಾಯ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರ ಮಾತುಗಳಲ್ಲೇ ಓದಿ…
ಇದಕ್ಕೇ ಹೇಳುವುದು ನಾವು ನಿಮಿತ್ತ ಮಾತ್ರ ಎಂದು. ಅಕ್ಟೋಬರ್ ಹತ್ತನೆಯ ತಾರೀಕು ಅಂಬರೀಶ್ ಅವರೊಡನೆ ಪ್ರಥಮ ಬಾರಿ ಫೋನಿನಲ್ಲಿ ಸಂಭಾಷಣೆ ಮಾಡಿದ್ದೆ. ದೊಡ್ಡಣ್ಣರವರ ಮೂಲಕ ಪರಿಚಯವಾಯ್ತು.
ಜಾತಕ ನೋಡಿ, ಲಗ್ನಾಷ್ಟಮದಲ್ಲಿ ಶನಿಸಂಚಾರ ಕಾಲ, ದಶಾಧಿಪತಿ ಬುಧನಿಗೆ ಚತುರ್ಥದಲ್ಲಿ ಕೇತು ಇರುವುದು ಅಪಾಯ ಎಂದು ತಿಳಿದು ಅವರಿಗೆ ಮೃತ್ಯುಂಜಯ ಹೋಮ ಮತ್ತು ಆಶ್ಲೇಷಾ ಬಲಿ ಮಾಡಲು ಸೂಚಿಸಿದ್ದೆ.
ಆ ಪ್ರಕಾರ ಹನ್ನೆರಡನೆಯ ತಾರೀಕು ನನ್ನ ಮೂಲಕವೇ ಮಾಡುವುದೆಂದೂ ದಿನ ನಿಗದಿಯೂ ಆಯ್ತು. ಆದರೆ ಆದಿನ ಬೆಂಗಳೂರಲ್ಲಿ ನನಗೆ ಜ್ವರ ಬಂದು ಆರೋಗ್ಯವೂ ಕೈ ಕೊಟ್ಟಿತು. ಆದರೂ ಮಾಡೇ ಬಿಡೋಣ ಅಂತ ನನ್ನ ಜತೆ ಬಂದಿದ್ದ ಪುರೋಹಿತರು ಹೇಳಿಯೂ ಇದ್ದರು.
ಆದರೆ ಮಾನ್ಯ ಅನಂತಕುಮಾರ್ ಅವರ ಅಂತ್ಯಕ್ರಿಯೆಯ ಕಾರಣ ಮುಂದಿನ ಸಲ ಮಾಡೋಣ ಎಂದು ಅಂಬರೀಶ್ ಹೇಳಿದರು. ನಾನೂ ಇದೂ ಹೌದು ಎಂದು ಸುಮ್ಮನಾದೆ. ಈ ನಂತರ ಯಾವಾಗ ಮಾಡೋಣ ಎಂದು ಮತ್ತೆ ಕೇಳಿದ್ದರು. ನಾನು ಇನ್ನೂ ದಿನಾಂಕ ಕೊಡದೆ ಮುಂದೆ ಹಾಕಿದ್ದೆ.
ಆದರೆ, ಈಗ ನಮ್ಮ ನೆಚ್ಚಿನ ಅಂಬರೀಶ್ ಇನ್ನಿಲ್ಲ. ಇದನ್ನೇ ದೈವ ಚಿತ್ತ ಎನ್ನುವುದು. ನಾನೇನೂ ಜೀವ ಉಳಿಸುವವನಲ್ಲ. ಆದರೆ ಭಕ್ತಿಶ್ರದ್ಧೆಯಿಂದ ಮಾಡುವ ಆ ಹೋಮ ಪೂಜೆಗಳಿಗೆ ಆ ಶಕ್ತಿ ಇತ್ತು. ಹಾಗಾಗಿ ಆಯುಷ್ಯ ಮುಗಿದಿದ್ದಾಗ ಪೂಜೆ ಮಾಡುವ ಯೋಗ ಬರಲಿಲ್ಲ. ಅಂತೂ ಸಜ್ಜನರೊಬ್ಬರನ್ನು ಕಳೆದುಕೊಂಡ ದುಃಖವು ನನಗಿದೆ.
ಹಾಗಾಗಿ ಇದನ್ನು ಬರೆಯಬೇಕೆಂದೆನಿಸಿತು. ಸಜ್ಜನರನ್ನು ಉಳಿಸಿಕೊಳ್ಳುವ ಯೋಗಭಾಗ್ಯವು ನಮಗೂ ಬೇಕು. ಅದು ಇಲ್ಲದಂತಾಯ್ತು. ಅವರ ದಿವ್ಯಾತ್ಮಕ್ಕೆ ಅಕ್ಷಯ ಪುಣ್ಯಲೋಕ ಸಿಗಲಿ ಎಂದು ದೇವರಲ್ಲಿ ನನ್ನ ಪ್ರಾರ್ಥನೆ.
-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post