ಭದ್ರಾವತಿ: ತಮಿಳು ಸಮಾಜಕ್ಕೆ ರಾಜಕೀಯವಾಗಿ ಸ್ಥಾನಮಾನ ಸಿಕ್ಕಿಲ್ಲ ಎಂಬ ಅರಿವು ತಮಗಿದೆ, ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಸಮಾಜದ ಮುಖಂಡರೊಂದಿಗೆ ಮಾತುಕತೆ ನಡೆಸಿ ನಿಗಮ ಮಂಡಳಿಗಳಿಗೆ ಸ್ಥಾನ-ಮಾನ ಕಲ್ಪಿಸುವ ಪ್ರಯತ್ನ ಮಾಡುತ್ತೇನೆ ಎಂದು ಪಕ್ಷದ ರಾಜ್ಯಾದ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಭಾನುವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ತಿರುವಳ್ಳುವರ್ ಸೇವಾ ಸಂಘದಿಂದ ಏರ್ಪಡಿಸಿದ್ದ “ಸ್ನೇಹಮಿಲನ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಮಂತ್ರಿಗಳು ಸುಮಾರು ಒಂದೂವರೆ ದಶಕಗಳ ಕಾಲ ಬಟ್ಟೆ ಹಾಕಿ ಮುಚ್ಚಿಟ್ಟಿದ್ದ ವಿಶ್ವಕವಿ ತಿರುವಳ್ಳುವರ್ ಪ್ರತಿಮೆಯನ್ನು ತಾವು ರಾಜ್ಯದ ಮುಖ್ಯಮಂತ್ರಿಯಾದಾಗ ಕನ್ನಡಿಗರ ಹಾಗು ತಮಿಳು ಭಾಷಿಗರ ಮನವೊಲಿಸಿ ರಾಜ್ಯದಲ್ಲಿ ಪ್ರತಿಮೆಯನ್ನು ಹಾಗೂ ತಮಿಳುನಾಡಿನ ಚೆನ್ನೈನಲ್ಲಿ ವಿಶ್ವಕವಿ ಸರ್ವಜ್ಞನ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಕೆಲಸವನ್ನು ಮಾಡುವ ಮೂಲಕ ಎರಡೂ ಭಾಷಿಕರ ಭಾವನೆಗೆ ಧಕ್ಕೆಯಾಗದ ರೀತಿ ಸೌಹಾರ್ಧವಾಗಿ ಸಮಸ್ಯೆ ಬಗೆಹರಿಸಿ ಗೊಂದಲವಿಲ್ಲದೆ ಉದ್ಘಾಟಿಸಿದ ಕೀರ್ತಿ ತಮ್ಮ ಅಧಿಕಾರಾವಧಿಯಲ್ಲಿ ನಡೆಯಿತು.
ತಮಿಳು ಸಮಾಜ ನಂಬಿಕೆ ವಿಶ್ವಾಸಕ್ಕೆ ಅರ್ಹವಾದ ಸಮಾಜವಾಗಿದ್ದು ಎಲ್ಲಾರೀತಿಯ ಪರಿಶ್ರಮದ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುವ ಸಮಾಜವಾಗಿದೆ. ಚುನಾವಣೆಯ ಪ್ರಚಾರದ ವೇಳೆ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿದಾಗ ನಿವಾಸಿಸುವ ಬಡವರಿಗೆ ಮನೆ, ನಿವೇಶನ ಇಲ್ಲ, ಬ್ಯಾಂಕ್ ಸಾಲ ಸಿಗುತ್ತಿಲ್ಲ ಎಂಬ ವಿಚಾರ ಕಂಡಲ್ಲಿ ಅದನ್ನು ಪಟ್ಟಿ ಮಾಡಿಕೊಂಡು ತನ್ನಿ, ಚುನಾವಣೆ ಮುಗಿದ ನಂತರ ಆ ಕೆಲಸ ಮಾಡಿಸಿಕೊಡಲು ತಾವು ಬದ್ಧನಿದ್ದೇನೆ. ಇದು ಕೇವಲ ಚುನಾವಣೆಯ ವೇಳೆ ಭರವಸೆಗೆ ಹೇಳುತ್ತಿರುವ ಮಾತಲ್ಲ. ನಾನು ನುಡಿದಂತೆ ನಡೆಯುವವನು ಆದ್ದರಿಂದ ಇದರಲ್ಲಿ ಯಾವುದೇ ಅನುಮಾನಬೇಡ ಎಂದು ಭರವಸೆ ನೀಡಿದರು.
ಪ್ರಧಾನಿ ಮೋದಿ ಜನಸಾಮಾನ್ಯರ ಪಾಲಿಗೆ ಅಗತ್ಯ ಇರುವ ಶೌಚಾಲಯ, ಅಡುಗೆ ಅನಿಲ, ಮುದ್ರಾ ಯೋಜನೆ ಹಾಗೂ ಮನೆ ಕಟ್ಟಿಕೊಡುವ ಕೆಲಸ, ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ವಿತರಣೆ ಮಾಡುವ ಮೂಲಕ ಭಾರತ ದೇಶ ಒಂದೇ ತಾಯಿ ಮಕ್ಕಳು ಎಂಬುದನ್ನು ವಿಶ್ವಕ್ಕೆ ಸಾರಿದ್ದಾರೆ. ಎಲ್ಲೆಡೆ ಮೋದಿ ರವರ ಹವಾ ಜೋರಾಗಿದ್ದು, ವಿಶೇಷವಾಗಿ ಯುವಕರ ದನಿ ನಮ್ಮ ಪರ ಹೆಚ್ಚಾಗಿದ್ದು, ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಸುಮಾರು 22 ಸ್ಥಾನವನ್ನು ಗೆಲ್ಲುವುದು ಖಚಿತ, ಮಂಡ್ಯದಲ್ಲಿ ಈಗಾಗಲೇ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ.
ರಾಹುಲ್ ಗಾಂಧಿಯಿಂದ ಸುಳ್ಳಿನ ಭರವಸೆ ಜನರಲ್ಲಿ ಬಿಂಬಿಸುತ್ತಿದ್ದಾರೆ. ನರೇಂದ್ರ ಮೋದಿ ಅವರ ಆಡಳಿತದಲ್ಲಿ ಸ್ವಚ್ಛ ಭಾರತ ಅಡಿ 300 ಕೋಟಿ ಮನೆಗಳಿಗೆ ಶೌಚಾಲಯ ನಿರ್ಮಾಣವಾಗಿದೆ. ಉಜ್ವಲ ಯೋಜನೆಯಡಿ 8 ಕೋಟಿ ಗ್ಯಾಸ್ ಸಂಪರ್ಕವಾಗಿದೆ ಕಲ್ಪಿಸಲಾಗಿದೆ ಇದು ಮೋದಿ ಅವರ ಸಾಧನೆ ಎಂದರು.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಏನು ಕೆಲಸ ಮಾಡಿದೆ ಎಂಬುದನ್ನು ನೋಡಿ ನೀವೆ ನಿರ್ಧರಿಸಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ ಏ: 23 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಸಿಲು ಏರುವುದರೊಳಗೆ ಮತಗಟ್ಟೆಗೆ ತೆರಳಿ ಮತಹಾಕಿ ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ರುದ್ರೇಗೌಡ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಯುವ ಮೋರ್ಚ ರಾಜ್ಯ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ, ತಮಿಳು ಸಮಾಜದ ಮುಖಂಡರಾದ ವಿ.ಶ್ರೀನಿವಾಸನ್, ಸುರೇಶ್ ಕುಮಾರ್, ಅಮುದ, ಕಣ್ಣಪ್ಪ,ನೀಲಕಂಠ ಪಕ್ಷದ ಮುಖಂಡರಾದ ದತ್ತಾತ್ರಿ, ಜಿ.ಆನಂದ ಕುಮಾರ್, ಗ್ರಾಮಾಂತರ ಅಧ್ಯಕ್ಷ ಮಂಗೋಟೆ ರುದ್ರೇಶ್, ಪ್ರವೀಣ್ ಮಟೇಲ್, ಅಗಮುಡಿ ಮೊದಲಿಯರ್, ವೆಣ್ಣಿ ಗೌಂಡರ್, ತಮಿಳು ಸಂಘ ಸೇರಿದಂತೆ ಮತ್ತಿತರೆ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
Discussion about this post