ದೇಶ ಕೊಳ್ಳೆ ಹೋದ್ರು ನಮ್ಗೆ TRP ನೇ ಮುಖ್ಯ…
ಯಾವುದಾದ್ರು ಮಸೀದಿಯ ಹಿಂಬದಿಯ ಗಾಜು ಒಡೆದಿದ್ದರೆ…
ಯಾವುದಾದರೂ ಚರ್ಚಿನ ಬಿದ್ದುಹೋಗಲಿದ್ದ ಕಂಪೌಂಡಿನ ಪ್ರತಿಮೆ ಮುರಿದು ಬಿದ್ದಿದ್ದರೆ…
ಯಾರೋ ನಟನೋ ಕ್ರಿಕೆಟ್ ಪಟುವೋ ಮದುವೆ ಆಗುತ್ತಿದ್ದಿದ್ದರೆ…
ಯಾವುದೋ ನಟಿ ತಾಯಾಗಲಿರುವುದರ ಊದುಹೊಟ್ಟೆಯನ್ನು ಫೋಟೋಶೂಟ್ ಮಾಡುವುದರಲ್ಲಿದ್ದಿದ್ದರೆ….
ಹೊಲಸು, ಕೊಚ್ಚೆ, ಕಚ್ಚೆಹರುಕ ಮಸಾಲೆ ಸುದ್ದಿಯಾಗಿದ್ದಿದ್ದರೆ…
ಈ ಮಾಧ್ಯಮಗಳು ರಸವಿಲ್ಲದ ಚೂಯಿಂಗ್ ಗಮ್ ಜಗಿಯುವಂತೆ, ನಾಯಿ ಮೂಳೆಯನ್ನೆ ಪಂಚಭಕ್ಷ್ಯ ಪರಮಾನ್ನವೆಂದು ತಿಳಿದು ಮೆಲ್ಲುವಂತೆ ಕಚ್ಚುತ್ತಿರುತ್ತದ್ದವು..
ಇವತ್ತಂತು ಹೆಚ್ಚಿನ ಎಲ್ಲ ಕನ್ನಡ ಮಾಧ್ಯಮಗಳು ತಿಂಗಳಿನಿಂದ ತನ್ನ ವಾಂತಿಯನ್ನೆ ತಾನೆ ತಿನ್ನುತ್ತಿರುವ ರಾಜಕೀಯ ದೊಂಬರಾಟ ಮೇಲಾಟಗಳ ಮೇಳವನ್ನೆ ತೋರುತ್ತಿದ್ದವು ನಮ್ಮಲ್ಲಿ ಮಾತ್ರ ಎಂಬ ತಲೆಬರಹದೊಂದಿಗೆ.
ಹಿಮಾದಾಸ್ ಎಂಬ ಮಿಂಚುಳ್ಳಿ ಹದಿನೈದು ದಿನಗಳ ಅಂತರದಲ್ಲಿ ನಾಲ್ಕು ಚಿನ್ನ ಗೆದ್ದ ಸಂಗತಿ ಯಾರಿಗು ಬೇಡವಾಗಿದೆ.
ಕರ್ನಾಟಕದ ಹೆಮ್ಮೆಯ ವಿಜಯನಗರದ ಅರಸೊತ್ತಿಗೆಯ ರಾಜಗುರುಗಳಾಗಿದ್ದ, ಮತೀಯ ವೈರುಧ್ಯಗಳ ನಡುವೆಯೂ ಸಾಮರಸ್ಯದ ಮಳೆಗರೆದು ರಾಜ್ಯದ ಸುಭಿಕ್ಷೆಗೆ ಕಾರಣರಾಗಿದ್ದ ವ್ಯಾಸರಾಜ ಗುರುಗಳ ವೃಂದಾವನವನ್ನು ಬಗೆದು ಹಾಳುಗೈದ ಹೀನಕೃತ್ಯದ ಬಗ್ಗೆ ಯಾವೊಬ್ಬ ಮಂತ್ರಿನಾಯಕರೂ, ಯಾವೊಂದು ಮಾಧ್ಯಮವೂ ಮಾತಾಡದಿರುವುದು ಖಂಡಿಸದಿರುವುದು ತೀವ್ರ ಆಕ್ಷೇಪಣೀಯವೆನಿಸಿದೆ.
ಈ ವಿಷಯವನ್ನು ಚಿಲ್ರೆ ವ್ಯಾಪಾರಕ್ಕೆ ಬಳಸಿಕೊಂಡ #ಬೊಗಳೆ ಠೀವಿಗಳು ಅಲ್ಲು ಹುಳುಕು ಹುಡುಕಿ ಹುಳಬಿಡುವ #ಮಂಗಣ್ಣಗಳ ಕೆಲಸ ಮಾಡಿ ಛೆ… ಛೀ… ಎನ್ನಿಸುವ ಸಿಟ್ಟು ತರಿಸಿದೆ.
ರಾಷ್ಟ್ರಿಯ ಚಾನೆಲ್ಲಗಳು ತೆಗೆದುಕೊಂಡಷ್ಟು ಕಾಳಜಿ ನಮ್ಮವರಿಗೆ ಇಲ್ಲವಾಯಿತಲ್ಲ ಅಂತ ಖೇದವೆನಿಸಿತು.
ಶ್ರೀಶಂಕರರ ಅನುಯಾಯಿ ಸೋಮನಾಥ ಕವಿಯ #ವ್ಯಾಸಯೋಗಿಚರಿತಂ ವ್ಯಾಸಗುರುಗಳ ಬಯಾಗ್ರಫಿ. ಇದು ಸಾಮರಸ್ಯದ ಕನ್ನಡಿ.
ಅವರಿಂದ ದಾಸಪಂಥ ಉಪಕೃತಗೊಂಡಿದೆ. ಶಾಸ್ತ್ರ ಸಾಹಿತ್ಯ ಮೇರುವಿನ ತುದಿ ಕಂಡಿದೆ. ಭಕ್ತರ ಮನೋಭಿಷ್ಟಗಳ ಈಡೇರಿಸುತ್ತದ್ದಾರೆ. ನೂರಾರು ಹನುಮನ ಸನ್ನಿಧಿಗಳ ಸ್ಥಾಪಿಸಿ ಆ ಕಾಲದ ಹಿಂದುತ್ವದ ಜಾಗೃತಿಗೆ ಬುನಾದಿ ಹಾಕಿದ್ದಾರೆ. ವಿಜಯನಗರ ರಾಜ್ಯದ ಪಾಲಿಗೊದಗಿದ್ದ ರಾಜನನ್ನು ಕಳಕೊಳ್ಳುವ ಯೋಗವನ್ನು ತಪ್ಪಿಸಿ ರಾಜಗುರುವಿನ ಮಹತ್ವವನ್ನು ಸಾರಿದ್ದಾರೆ.
ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣರು ವಿದ್ಯಾರಣ್ಯರಾದರೆ ಅದರ ಸಂಪೂರ್ಣ ಅಭಿವೃದ್ಧಿ ಗೆ ಬೆಂಗಾವಲಾಗಿ ನಿಂತವರು ವ್ಯಾಸರಾಜರು.
ಹಿಂದೊಮ್ಮೆ ಕೃಷ್ಣದೇವರಾಯನಿಗೆ ಕುಹೂಯೋಗ ಬಂದಿತ್ತು. ಪ್ರಾಣಕ್ಕೆ ಕುತ್ತನ್ನೆ ತರಬಲ್ಲ ಒಂದು ಕಂಟಕ ಕರ್ನಾಟಕ ರತ್ನಸಿಂಹಾಸನಕ್ಕೆ ಬಂದಿತ್ತು. ತಮ್ಮ ತಪಃಶಕ್ತಿಯಿಂದ ತಾವೇ ಸಿಂಹಾಸನ ಅಲಂಕರಿಸಿ ಅದನ್ನು ಕೇವಲ ದೇವರ ಅನುಗ್ರಹದಿಂದ ನಿವಾರಿಸಿದರು. ಇದಾದ ನಂತರ ಕೃಷ್ಣದೇವರಾಯ ತಾವೇ ಸಿಂಹಾಸನದಲ್ಲಿ ಮುಂದುವರೆಯಿರಿ ಎಂದರೂ ಅದು ನನ್ನ ಕೆಲಸ ಅಲ್ಲ ಕ್ಷಾತ್ರವೇ ರಾಜ್ಯವಾಳಬೇಕೆಂದು ಅನುಗ್ರಹಿಸಿದ ನಿಸ್ವಾರ್ಥ ಶಿರೋಮಣಿಗಳು ವ್ಯಾಸರಾಜರು.
ಕರ್ನಾಟಕದ ಹೆಮ್ಮೆ ಆಚಾರ್ಯಮಧ್ವರಿಂದ ಚಿಗುರೊಡೆದ ಕರ್ನಾಟಕಸಂಗೀತದ ಪಿತಾಮಹ ಪುರಂದರ ದಾಸರನ್ನು ಪ್ರೊತ್ಸಾಹಿಸಿದರು. ಭಕ್ತಾಗ್ರೇಸರ ಕನಕ ದಾಸರಂತಹ ಮಹಾನುಭಾವರಿಗೆ ದೀಕ್ಷೆ ಕೊಟ್ಟವರು.
ಲೌಕಿಕ-ಅಲೌಕಿಕ ಭಾವನೆಗಳಿಗೆ ಸಮಾನ ನೀರೆರೆದವರು ಇದೆ ವ್ಯಾಸಗುರುಗಳು.
ನಿಸ್ಪೃಹತೆಯ ಪರಮಾವಧಿ ಎಂದರೆ ಇದು. ತಿರುಪತಿಯ ಅರ್ಚಕರ ಸಂತತಿ ರಾಜನ ಅಚಾತುರ್ಯದಿಂದ ನಡೆದು ಹೋಗಿ ಪೂಜೆ ನಿಂತಿತು. ಆ ಹೊತ್ತು ತಾವೇ ಹನ್ನೆರಡು ವರ್ಷ ವೆಂಕಟರಮಣನನ್ನು ಅರ್ಚಿಸಿದರು. ಅದೆ ಮನೆತನದ ಹುಡುಗನಿಗೆ ಉಪನಯನ ಸಂಸ್ಕಾರವಾದೊಡನೆ ಪೂಜೆಯ ವಿಧಿವಿಧಾನಗಳ ಅರಿವು ಮೂಡಿಸಿ ಅವನಿಗೆ ಪೂಜಾಧಿಕಾರವನ್ನು ಮರಳಿ ಒಪ್ಪಿಸಿದರು. ಹೀಗೆ ಮತ್ತೊಮ್ಮೆ ನಿಸ್ವಾರ್ಥತೆಯ ಸಾಕಾರರೆನಿಸಿದವರು ಈ ಮಹಾನುಭಾವರು. ಇವತ್ತು ಭಾರತೀಯರಪವಿತ್ರ ಕ್ಷೇತ್ರ ತಿರುಪತಿಯ ತಿಮ್ಮಪ್ಪನ ದರ್ಶನ ನಮಗಾಗುತ್ತಿರುವುದರ ಹಿಂದಿನ ಹಿರಿಮೆ ವ್ಯಾಸರಾಜರದ್ದು.
ಇಡೀ ದೇಶ ಮೊಘಲರ ಕ್ರೂರ ಆಡಳಿತಕ್ಕೊಳಗಾಗಿ ಮತಾಂತರಕ್ಕೊಳಗಾಗುವ ಸಂದರ್ಭ. ಯುವ ಜನತೆಯ ಧರ್ಮಪ್ರಜ್ಞೆಯನ್ನು ಎಚ್ಚರಗೊಳಿಸಲು ಇಡೀ ದೇಶದಲ್ಲಿ ೭೦೦ ಕ್ಕೂ ಹೆಚ್ಚು ಮಾರುತಿ ಮೂರ್ತಿ ಪ್ರತಿಷ್ಠಾಪಿಸಿದರು. ಹಿಂದೂಗಳೆಲ್ಲ ಒಂದು ಎಂಬ ಭಾವನೆಯನ್ನು ಜಾಗೃತಿಗೊಳಿಸಿದ ಕ್ರಾಂತಿಕಾರಿ ವೀರ ಸಂನ್ಯಾಸಿ ವ್ಯಾಸರಾಜರು.
ಇಡೀ ಹಿಂದೂ ಸಮಾಜದ ಶ್ರೇಯಸ್ಸಿಗೆ ಶ್ರಮಿಸಿದ ಮುನಿಯೊಬ್ಬರ ಸನ್ನಿಧಿ ಇವತ್ತು ಸಂಪತ್ತಿನ ನೆಪದಲ್ಲಿ ದಾಳಿಗೊಳಗಾಗಿದೆ.
ವ್ಯಾಸತ್ರಯವೆಂದೆ ಪ್ರಸಿದ್ಧವಾದ ಕಬ್ಬಿಣದ ಕಡಲೆಯಂತಿರುವ ಶಾಸ್ತ್ರಗ್ರಂಥಗಳ ರಚಿಸಿದ ವ್ಯಾಸರಾಜರು ಬರೀ ಮಧ್ವಾನುಯಾಯಿಗಳ ಆಸ್ತಿಯಲ್ಲ. ವಿಪ್ರರ ಸೊತ್ತಲ್ಲ. ಕನ್ನಡದ ಸರಳ ಮಾತಿನಲ್ಲಿ ಪ್ರಮೇಯಗಳನ್ನೊದಗಿಸಿದ ಆಸ್ತಿಕರ ಉಸಿರು. ಶಾಸ್ತ್ರಜ್ಞರ ಕೊರಳು.
ಇಂದು ವಿಜಯನಗರದ ಸಿರಿತನದ ಬಗ್ಗೆ ಹೆಮ್ಮೆ ಪಡುವ ಭಾರತೀಯರು ನಾವಾಗಿದ್ದರೆ ಅದನ್ನು ಉಳಿಸಿದ ರಾಜಗುರು ವ್ಯಾಸರಾಜರ ಋಣ ನಮ್ಮ ಮೇಲಿದೆ.
ದೇಶದ ಕಿವಿಯನ್ನು ನೆಟ್ಟಗಾಗಿಸುವ ಕರ್ನಾಟಕ ಸಂಗೀತವನ್ನು ಕಲಿಯುತ್ತೇವೆ ಅಥವಾ ಮೆಚ್ಚುವವರಾದರೆ ಅಸಂಖ್ಯ ಕೃತಿಗಳಿಂದ ಕನ್ನಡವನ್ನು ಶ್ರೀಮಂತಗೊಳಿಸಿದ ಪುರಂದರ ದಾಸರ ಗುರುಗಳಾದ ವ್ಯಾಸತೀರ್ಥರ ಋಣ ನಮ್ಮ ಮೇಲಿದೆ.
ದಿಕ್ಕು ದಿಕ್ಕಿನಲ್ಲಿ ವ್ಯಾಸರಾಜರು ಸ್ಥಾಪಿಸಿದ ಗಂಟೆ ಹನುಮನ ಭಕ್ತರು ನಾವು ಹೌದಾದರೆ ವ್ಯಾಸರಾಜರಿಗೆ ಕೃತಜ್ಞತೆ ಒದಗಿಸುವ ಕಾಲ ಬಂದಿದೆ.
ಕನಕ ಜಯಂತಿ ಮಾಡಿ ಜಾತಿರಾಜಕಾರಣ ಮಾಡುವ ಮಹಾನುಭಾವರೇ…. ಕನಕದಾಸರ ಗುರುಗಳ ಋಣ ನಿಮ್ಮ ಮೇಲಿದೆ.
ತಿರುಪತಿ ವೇಂಕಟೇಶನನ್ನು ಭಕ್ತಿಯಿಂದ ನೆನೆಯುವ ಕೋಟ್ಯಂತರ ಭಕ್ತರೇ… ವ್ಯಾಸರಾಜರ ಋಣ ನಮ್ಮ ಮೇಲಿದೆ.
ಬಗೆಯ ಬೇಗೆ ಕೇಳಬೇಕಾದ ಸರ್ಕಾರ ಮೂರ್ಛೆಹೋಗಿದೆ . ಊರು ಕೊಳ್ಳೆ ಹೋದರೂ ಕುರ್ಚಿ ಬಿಡೆವು ಎನ್ನುವವರ ನಿಂತ-ಕೂತ-ಎದ್ದ ವಿಷಯಗಳನ್ನೆ ವಾರ್ತೆಗಳಾಗಿಸುವ ಸುದ್ದಿವಾಹಿನಿಗಳು ಸದನದ ನೇರಪ್ರಸಾರದಲ್ಲಿ ವ್ಯಸ್ತವಾಗಿವೆ. ನೋವು ಕೇಳಲು ಯಾರೂ ಇಲ್ಲದ ಅನಾಥಪ್ರಜ್ಞೆ ಕಾಡುತ್ತಿದೆ.
ಅಸಹಾಯಕರ ಎತ್ತಿಹಿಡಿವ ವ್ಯಾಸರಾಜರೇ .. ನಮ್ಮನ್ನು ಮನ್ನಿಸಿ..
ಸಮಾಜಕ್ಕಾಗಿ ಭೋಗ ತೊರೆದು ತ್ಯಾಗಜೀವನ ನಡೆಸಿದ ತಮ್ಮ ನೆನಪಾದ ವೃಂದಾವನ ಉಳಿಸಿಕೊಳ್ಳಲು ದನಿಯಾಗದ ಮಾಧ್ಯಮ ನಾಯಕರ ಸಮಾಜ ನಮ್ಮದಾಗಿದೆ.
ಆದರೂ ದೂರದಲ್ಲಿ ಕಾಣುವ ದೀಪದ ಬೆಳಕು ನಮಗೆ ದಾರಿ ತೋರೀತು ಎಂಬ ಆಶಾಭಾವ ಜೊತೆಗಿದೆ. ಲೋಕಸಭೆಯಲ್ಲಿ ನಮ್ಮ ಬೆಂಗಳುರು ದಕ್ಷಿಣ ಭಾಗದ ಎಂಪಿ ಶ್ರೀ #ತೇಜಸ್ವಿಸೂರ್ಯ ಅವರು ಇಂದು ಈ ವಿಚಾರವನ್ನು ಸದನದ ಗಮನಕ್ಕೆ ತಂದಿದ್ದಾರೆ.
ಎಲ್ಲ ಯತಿವರೇಣ್ಯರೂ ಸೇರಲು ಕಾರಣವಾದ ಈ ಘಟನೆ ಒಳಕುದಿಗಳ ಪಕ್ಕಕ್ಕಿಟ್ಟು ಮನಸ್ಸುಗಳ ಶ್ರೀಮಂತಗೊಳಿಸಲಿ.
ಪಕ್ಕವಾದ್ಯಗಳ ನಾದಕ್ಕೆ ಹಿತ್ತಾಳೆ ಕಿವಿಯಾಗದೆ ಹಿಂದು ಸಮಾಜವನ್ನು ಹೆಗಲು ಕೊಟ್ಟು ಮುನ್ನಡೆಸುವ ಕೈಂಕರ್ಯಕ್ಕೆ ನಾಂದಿಯಾಗಲಿ..
ಇದು ಸಮಸ್ತ ಆಸ್ತಿಕ ಬಂಧುಗಳ ಒಕ್ಕೊರಲ ಪ್ರಾರ್ಥನೆ….
✍ ಕೃಷ್ಣರಾಜ ಕುತ್ಪಾಡಿ
Discussion about this post