ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
2020ರ ಮಾರ್ಚ್ ನಾಲ್ಕನೆಯ ವಾರದಿಂದ ಭಾರತದಲ್ಲಿ ಲಾಕ್ ಡೌನ್ ಎಂಬ ಮೂರು ವಾರಗಳ ಮನೆವಾಸ ಆರಂಭವಾಯಿತು. ಪ್ರಧಾನ ಮಂತ್ರಿ ರಾಷ್ಟ್ರವನ್ನು ಉದ್ದೇಶಿಸಿ ದಿನಾಂಕ ಎಪ್ರಿಲ್ 14ರ ಪರ್ಯಂತ ಲಾಕ್ ಡೌನ್ ಎಂದು ಘೋಷಿಸಿದರು. ಇಪ್ಪತ್ತೊಂದು ದಿನಗಳ ಅವಧಿಯಲ್ಲಿ ನೀವು ಮನೆಯಲ್ಲೇ ಇರಿ, ಹೊರಗೆ ಹೋಗಬೇಡಿ. ಕಚೇರಿ ಕೆಲಸಗಳನ್ನು ಮನೆಯಿಂದಲೇ ಸಾಧ್ಯವಾದಷ್ಟು ಮಾಡಿರಿ. ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗುತ್ತದೆ ಎಂದರು.
ಕೇವಲ ಇಪ್ಪತ್ತೊಂದು ದಿನಗಳು ತಾನೇ ಎಂದು ಯಾರೂ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಈಗ ಲಾಕ್ ಡೌನ್ ಮುಂದುವರೆದು ಐದನೆಯ ಹಂತ ತಲುಪಿದೆ. ಹಳ್ಳಿಗಳಲ್ಲಿ ಅಷ್ಟೊಂದು ಅಗಾಧ ಪ್ರಮಾಣದಲ್ಲಿ ಪರಿಣಾಮ ಬೀರದ ಲಾಕ್ ಡೌನ್ ಮುಂಬಯಿಂತಹ ಮಹಾನಗರಗಳಲ್ಲಿ ಎಣಿಕೆಗೆ ನಿಲುಕದಷ್ಟು ಪರಿಣಾಮ ಬೀರಿದೆ. ಸಿರಿವಂತರ ವಿಚಾರವನ್ನು ಹೊರತು ಪಡಿಸಿದರೆ ಮಧ್ಯಮ ವರ್ಗ, ಕೆಳ ಮಧ್ಯಮವರ್ಗ, ಮತ್ತು ಬಡವರ ಜೀವನ ಯೋಚನೀಯವೂ, ಶೋಚನೀಯವೂ ಆಗುತ್ತಿದೆ. ವಿದ್ಯಾಸಂಸ್ಥೆಗಳು ಬಾಗಿಲು ತೆಗೆಯದಿದ್ದರೂ ಶುಲ್ಕಕ್ಕಾಗಿ ಕಾಡತೊಡಗಿವೆ. ಟ್ಯುಟೋರಿಯಲ್ ಗಳೂ ವಾರ್ಷಿಕ ಶುಲ್ಕಕ್ಕಾಗಿ ಬೇಡಿಕೆ ಸಲ್ಲಿಸುತ್ತಿವೆ. ಗಳಿಕೆ ಶೂನ್ಯವಾಗಿ ಮೂರು ತಿಂಗಳಾಗುತ್ತ ಬಂತು. ಏನು ಮಾಡಲಿ? ಎತ್ತ ಹೋಗಲಿ? ಎಂಬುದೇ ಸಮಸ್ಯೆಯಾಗಿದೆ.
ಖಾಸಗಿ ಉದ್ಯೋಗಸ್ಥರಿಗೆ ಮಾರ್ಚ್ ತಿಂಗಳ ಸಂಬಳ ಬಂದಿದ್ದರೂ, ನಂತರ ಯಾವ ಬೆಂಬಲವು ಕಾಣುತ್ತಿಲ್ಲ. ಮನೆ ಬಾಡಿಗೆ, ದಿನವಾಹಿ ಖರ್ಚು ವೆಚ್ಚಗಳು, ವಿದ್ಯುತ್, ದೂರವಾಣಿ, ದೂರದರ್ಶನ, ಅಡುಗೆ ಅನಿಲ ಇತ್ಯಾದಿಗಳನ್ನು ನಿಭಾಯಿಸುವುದು ಕಷ್ಟ ಸಾಧ್ಯವಾಗಿದೆ. ಮುಂಬಯಿಂತಹ ಮಹಾನಗರಗಳ ಜನರಲ್ಲಿ ಮೂರು ತಿಂಗಳು ಆದಾಯವಿಲ್ಲದೆ ಬದುಕುವಷ್ಟು ಉಳಿತಾಯ ಖಂಡಿತಾ ಇರುವುದಿಲ್ಲ. ಆದ್ದರಿಂದ ಬದುಕು ದಿನೇ ದಿನ ದುಸ್ತರವಾಗುತ್ತಿದೆ.
ಕೋವಿಡ್ 19ರ ಭಯಕ್ಕಿಂತಲೂ ಬದುಕು 20 ಭಯಾನಕವಾಗುತ್ತಿದೆ. ಎಲ್ಲರ ಅನುಭವ ಹೆಚ್ಚು ಕಡಿಮೆ ಒಂದೇ ಆಗುತ್ತಿದೆ. ಏಕವ್ಯಕ್ತಿ ಸಂಪಾದನೆಯಲ್ಲಿ ಜೀವನ ಕಾಲಿಗೆಳೆದರೆ ತಲೆಗಿರದೆ ಇರುತ್ತಿತ್ತು. ಈಗ ಶೂನ್ಯ ಸಂಪಾದನೆಯಲ್ಲಿ ಭಗವಾನ್ ಭರವಸೆ ಎಂಬಂತಾಗಿದೆ. ವಾಟ್ಸಪ್ ನಲ್ಲಿ ಬಂದಿರುವ ವ್ಯಂಗ್ಯ ಚಿತ್ರವೊಂದರ ವ್ಯಂಗ್ಯ ಮತ್ತೆ ಮತ್ತೆ ಮನ ತಟ್ಟುವಂತಿದೆ. ’ಕಹಿ ಸತ್ಯ’ ಎಂಬ ಶೀರ್ಷಿಕೆಯ ಈ ವ್ಯಂಗ್ಯ ಚಿತ್ರದಲ್ಲಿ ಹೀಗೆ ಬರೆಯಲಾಗಿದೆ. ಕೇವಲ ಹೇಳುವುದಕ್ಕಾಗಿ ಲಾಕ್ ಡೌನ್’ನಲ್ಲಿ ಯಾರೂ ಬೀದಿಗೆ ಬರಲಿಲ್ಲ. ಆದರೆ ವಾಸ್ತವವಾಗಿ ಮನೆಯಲ್ಲಿರುತ್ತಲೇ ಬಹಳಷ್ಟು ಮಂದಿ ಬೀದಿಗೆ ಬಂದಿದ್ದಾರೆ. ಭವಿಷ್ಯದ ಬಾಳಿಗೆ ಭರವಸೆಯ ಬೆಳಕು ಮೃಗಜಲವಾಗುತ್ತಿದೆ.
ಮುಂಬಯಿ, ಪುಣೆ ಮುಂತಾದ ಮಹಾನಗರಗಳಲ್ಲಿ ಹೆಚ್ಚಿನ ಹೊಟೇಲುಗಳು ತುಳು ಕನ್ನಡಿಗರದ್ದು. ಹೋಟೆಲ್ ಉದ್ಯಮ ಸ್ಥಗಿತಗೊಂಡು ತಿಂಗಳು ಮೂರಾಗುತ್ತ ಬಂದಿದೆ. ಕಾರ್ಮಿಕರು ಒಂದೆರಡು ತಿಂಗಳು ಇದ್ದು ಈಗ ಹೊರಟು ಹೋಗಿದ್ದಾರೆ. ಸದ್ಯದಲ್ಲಿ ಹೊಟೇಲ್ ಬಾಗಿಲು ತೆಗೆಯುವ ಲಕ್ಷಣಗಳು ಕಾಣುತ್ತಿಲ್ಲ. ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಹೋಟೆಲು ಉದ್ಯಮಗಳ ಭವಿಷ್ಯ ಡೋಲಾಯಮಾನವಾಗಿದೆ. ಬಾಡಿಗೆ ನಿಂತಿಲ್ಲ. ಇನ್ನಿತರ ವೆಚ್ಚಗಳಾದ ವಿದ್ಯುತ್, ನೀರು, ರಹದಾರಿ ಶುಲ್ಕಗಳು ಜಾರಿಯಲ್ಲಿವೆ. ಸರಕಾರ ಯಾವಾಗ ಅನುಮತಿ ನೀಡುತ್ತದೋ ತಿಳಿಯುತ್ತಿಲ್ಲ. ಅನುಮತಿ ದೊರೆತ ಅನಂತರದಲ್ಲಿ ಹೇಗೆ ಪ್ರಾರಂಭಿಸುವುದು? ಯಾವ ರೀತಿ ಕಾರ್ಯಗತ ಗೊಳಿಸುವುದು? ಗಿರಾಕಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವುದಂತೂ ಶತಸಿದ್ಧ. ಜನರಲ್ಲಿ ಹಣ ಚಲಾವಣೆಯಾದರೆ ತಾನೇ ವ್ಯಾಪಾರವಾಗುವುದು.
ಒಟ್ಟಿನಲ್ಲಿ ಎಲ್ಲೋ ಹುಟ್ಟಿದ ಕೊರೋನಾ ಮಾನವ ಜಗತ್ತಿಗೆ ಮಾರಕವಾಗಿ ಪರಿಣಮಿಸಿದೆ. ಆ ಸಾಂಕ್ರಾಮಿಕ ವಿಷಾಣು ಹರಡುವ ರುಜಿನಕ್ಕೆ ತುತ್ತಾದರೂ ಬದುಕು ಕಷ್ಟ. ತುತ್ತಾಗದಿದ್ದರೂ ಒಪ್ಪತ್ತಿನ ತುತ್ತೂ ಇನ್ನೂ ಕಷ್ಟ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ದೂರದರ್ಶನ ಮಾಧ್ಯಮಗಳಂತೂ ಒಂದೇ ಸುದ್ದಿಗೆ ಉಪ್ಪು, ಕಾರ, ಮಸಾಲೆ ಹಾಕಿ ಕೆಡದಂತೆ ಸಂರಕ್ಷಿಸುತ್ತ ಬಿತ್ತರಿಸುವುದನ್ನು ಕಂಡು ಜನರು ರೋಸಿ ಹೋಗಿದ್ದಾರೆ. ಹಸಿವು ಹಿಂಗಿಸುವ ವಸ್ತುಗಳು ದುಬಾರಿಯಾಗಿವೆ. ಈ ವಸ್ತುಗಳನ್ನು ಕೊಳ್ಳುವ ಆರ್ಥಿಕತೆ ಕುಸಿದಿದೆ. ಸಾಮಾನ್ಯ ಜನತೆ ಮಾನಸಿಕ ನೆಮ್ಮದಿಯನ್ನೂ, ಸ್ಥೈರ್ಯವನ್ನು ಕಳೆದುಕೊಂಡಿದ್ದಾರೆ. ಸರಕಾರ ಘೋಷಿಸಿದ ಪ್ಯಾಕೇಜುಗಳು ಯಾರಿಗೆ, ಎಂದು ತಲುಪುದೋ ಬಲ್ಲವರಾರು? ಜೀವಾತ್ಮನಲ್ಲಿ ಆತ್ಮ ಉಳಿದರೆ ತಾನೇ ಆತ್ಮನಿರ್ಭರತೆ? ಕೋವಿಡ್19 ಎಂಬ ಮಹಾಮಾರಿ ತಂದೊಡ್ಡಿದ ಕಷ್ಟವೆಂಬ ಕಾರ್ಗಲ್ಲು ಕರಗುವುದೆಂತು?
Get In Touch With Us info@kalpa.news Whatsapp: 9481252093
Discussion about this post