ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಈಗಷ್ಟೇ ಮುನವ್ವರ್ ಸಾರಾ ಮೇಡಂ ಬರೆದ ಅಮೆರಿಕಾದ ಪ್ರವಾಸ ಕಥನ ಓದಿ ನಾನೂ ಯಾಕೆ ಅಮೆರಿಕಾ ಕಥೆ ಬರಿಬಾರದು ಅಂತ ಅನ್ನಿಸ್ತು.
ಅಮೆರಿಕಾದಲ್ಲಿ ನಯಾಗರಾ ನೋಡಿದೆ, ವೇಗಸ್ ನೋಡಿದೆ, ಸ್ವಾತಂತ್ರ್ಯ ದೇವಿ ಪ್ರತಿಮೆ ಸುಡುಗಾಡು ಮಣ್ಣು ಮಸಿ ನೋಡಿದೆ ಅಂತ ಬರೆಯೋಣ ಅಂದರೆ ಅದನ್ನು ನೋಡಿದವರು ಹಳ್ಳಿ ಹಳ್ಳಿಲೂ ಸಿಗ್ತಾರೆ. ಅದು ಬಿಟ್ಟು ಗೂಗಲ್ ನೋಡಿದರೆ ಅವೆಲ್ಲದರ ಸಂಪೂರ್ಣ ಇತಿಹಾಸ, ಅದ್ಭುತ ಚಿತ್ರಗಳ ಮೂಲಕ ಪ್ರಕಟವಾಗಿರುತ್ತದೆ. ಅಮೆರಿಕಾದ ಅನೇಕ ಪ್ರವಾಸಿತಾಣಗಳಿಗೆ ಭೇಟಿ ಕೊಟ್ಟು ಆನಂದಿಸಿದ್ದರೂ ಅವುಗಳಲ್ಲಿ ದೊಡ್ಡ ವಿಶೇಷವೇನೂ ಅನ್ನಿಸಲಿಲ್ಲ.
ಈಗ ಪ್ರವಾಸಿತಾಣಗಳ ಸಕಲ ವಿವರಗಳೂ ಕೈಯಲ್ಲೇ ಲಭ್ಯವಿರುವುದರಿಂದ ಅವುಗಳ ಬಗ್ಗೆ ಈಗ ಬರೆಯುವುದು ಔಟ್ ಡೇಟೆಡ್ ಅನ್ನಿಸ್ತದೆ. ಹಾಗಾದರೆ ಕಳೆದ ಮೂರು ವರುಷಗಳಲ್ಲಿ ಕಡೆದುಕಟ್ಟೆ ಹಾಕಿದ್ದು ಏನೂ ಇಲ್ವಾ? ಅಂತ ಯೋಚಿಸ ಹೊರಟರೆ ಸಿಗುವುದು ನನ್ನ ಉಬರ್ ಪ್ರಯಾಣಗಳು. ಅಮೆರಿಕಾ ಹೋದ ಮೊದಲ ಒಂದುವರೆ ವರ್ಷ ನನ್ನಲ್ಲಿ ಕಾರಿರದ ಕಾರಣ ಎಲ್ಲದಕ್ಕೂ ಊಬರನ್ನೇ ನೆಚ್ಚಿಕೊಳ್ಳಬೇಕಾಗಿತ್ತು. ಮೊದಲೇ ನನಗೆ ಮಾತು ಜಾಸ್ತಿ, ಹಾಗೇ ಅಲ್ಲಿಗೆ ಹೋದ ಹೊಸದರಲ್ಲಿ ಅಮೆರಿಕನ್ accent ಅರ್ಥವಾಗದೇ ಆಫೀಸಿನಲ್ಲಿ ಒದ್ದಾಡುತ್ತಿದ್ದ ನನಗೆ ಸರಿಯಾಗಿ ಅರ್ಥ ಮಾಡಿಕೊಂಡು ಕಲಿಯಲೇಬೇಕೆಂಬ ಹಟತೊಟ್ಟ ನಾನು ಉಬರ್ ಡ್ರೈವರ್ ಜೊತೆ ಮನಸೋಇಚ್ಛೆ ಹರಟುತ್ತಿದ್ದೆ. ಗಾಡಿ ಹತ್ತಿದಾಗ ನೀನು ನನ್ನೊಂದಿಗೆ ಮಾತನಾಡದೇ ಬರೀ ಡ್ರೈವರ್ ಹತ್ತಿರ ಮಾತನಾಡುತ್ತೀಯಾ ಅಂತ ಆಗಾಗ ದೀಪ್ತಿ ಹತ್ರ ಬೈಗುಳ ತಿನ್ನಬೇಕಾಗಿ ಬಂದರೂ ಕೂಡ ನನಗೆ ಈ ಉಬರ್ ಪ್ರಯಾಣಗಳು ಅದ್ಭುತವಾದ ಅನುಭವಗಳನ್ನೇ ಕೊಟ್ಟಿವೆ.
ಅಮೆರಿಕಾ ಮೆಲ್ಟೆಡ್ ಪಾಟ್ ಆಗಿದ್ದರಿಂದ ಅಲ್ಲಿ ನಿಮಗೆ ನೂರಾರು ದೇಶ ಸಂಸ್ಕೃತಿಯ ಜನರು ಸಿಗುತ್ತಾರೆ. ಬೇರೆ ಬೇರೆ ಉದ್ಯೋಗದಲ್ಲಿರುವವರು, ಬೇರೆಬೇರೆ ಜನಾಂಗದವರು, ಬಡವರು, ಶ್ರೀಮಂತರು, ಒಳ್ಳೆಯವರು, ಮೌನಿಗಳು, ಅಹಂಕಾರಿಗಳು, ಫಟಿಂಗರು ಹೀಗೆ ಒಂದು ಪುಟ್ಟ ವಿಶ್ವವೇ ನಿಮ್ಮ ಕಣ್ಮುಂದೆ ತೆರೆದುಕೊಳ್ಳುತ್ತದೆ. ಮುಂದೆ ಸಾಧ್ಯವಾದಷ್ಟು ದಿನ ಸಾಧ್ಯವಾದಷ್ಟು ನನ್ನ ಅನುಭವಗಳನ್ನು ಬರೆಯಬೇಕೆಂದುಕೊಳ್ಳುತ್ತೇನೆ.
1.ನಾನು ಪ್ಲೇನೋದಲ್ಲಿದ್ದಾಗ ಒಂದಿನ ವಾಲ್ಮಾರ್ಟ್’ನಲ್ಲಿ ಮನೆ ಸಾಮಾನುಗಳನ್ನು ತಗೊಂಡು ಉಬರ್ ಬುಕ್ ಮಾಡಿ ಕಾಯ್ತಾ ಇದ್ದೆ. 3 ನಿಮಿಷ ಅಂತ ನಕಾಶೆಯಲ್ಲಿ ತೋರಿಸ್ತಾ ಇದ್ರೂ ಪುಣ್ಯಾತ್ಮ ಕಾಲು ಗಂಟೆ ಆದರೂ ಬರಲಿಲ್ಲ. ಹತ್ತಿರ ಬಂದರೂ ಒಳಬರಲು ಆಗದೇ ಪರದಾಡ್ತಾ ಇದ್ದ. ಅವನಿಗೆ ಕರೆ ಮಾಡಿ ಏನಪ್ಪಾ ಗುರುವೇ ಬರ್ತೀಯೋ ಇಲ್ಲಾ ಕ್ಯಾನ್ಸಲ್ ಮಾಡ್ಲೋ ಅಂತ ಕೇಳಿದೆ. ದಯವಿಟ್ಟು ಮಾಡ್ಬೇಡ ಇದು ನನ್ನ ಮೊದಲನೇ ಉಬರ್ ಟ್ರಿಪ್ ಆ್ಯಪನ್ನು ಸರಿಯಾಗಿ ಬಳಸೋಕೆ ಗೊತ್ತಾಗ್ತಾ ಇಲ್ಲ, ಎರಡೇ ನಿಮಿಷ ಕೊಡು ಬಂದೆ ಅಂದ. ಅವನು ಹೇಳಿದಂತೆ ಹೊಚ್ಚ ಹೊಸ ಎಸ್’ಯುವಿಯಲ್ಲಿ ಆಫ್ರೋ ಅಮೆರಿಕನ್ ನಿಂತಿದ್ದ.
ಅವನ accent ಕೇಳಿದಾಗಲೇ ಅನ್ಸಿತ್ತು, ಇವನು ಈ ದೇಶಕ್ಕೆ ಹೊಸಬ ಅಂತ. ಸಾಮಾನನ್ನು ಟ್ರಂಕಿನೊಳಗಿಟ್ಟು ಹರಟೆ ಹೊಡೆಯಲು ಅನುಕೂಲವಾಗುವಂತೆ ಮುಂದಿನ ಸೀಟಿನಲ್ಲಿ ಕೂತು ಬೆಲ್ಟನ್ನು ಹಾಕುತ್ತಾ ಏನ್ ಗುರು ಹೊಸಬ ಅಂತ ಕಾಣತ್ತೆ ಯಾವ ಊರು ಅಂದೆ. ನಾನು ಗಿನಿಯಾ ದೇಶದವನು ಇಲ್ಲಿ ಬಂದು 2 ವರ್ಷ ಆಯ್ತು ಅಂದ. ಓಗ್ ಗೊತ್ತು ಬಿಡು ಪಶ್ಚಿಮ ಆಫ್ರಿಕಾದಲ್ಲಿ ಬರತ್ತಲ್ಲಾ ಅಂದೆ (ಚಿಕ್ಕಂದಿನಿಂದ ಬಂದ ಅಟ್ಲಾಸ್ ನೋಡೋ ಚಟ ಇಂತಹ ಸಂದರ್ಭದಲ್ಲಿ ಉಪಯೋಗಕ್ಕೆ ಬರತ್ತೆ. ನೀನು ಮೊದಲನೆಯವನು ಮಾರಾಯ ನನ್ನ ದೇಶ ಎಲ್ಲಿದೆ ಅಂತ ಸರ್ಯಾಗಿ ಹೇಳ್ಬಿಟ್ಟೆ, ಭಾರಿ ಖುಷಿ ಆಯ್ತು ನೋಡು ಅಂದ. ನನ್ನ ಬಂಡವಾಳ ನನಗೆ ಗೊತ್ತಿದ್ದರಿಂದ ಹಾಗೇನಿಲ್ಲ ಅಂದಾಗ ನೀನು ಸಾಫ್ಟ್‌ವೇರ್ ಇಂಜಿನೀಯರಾ ಅಂದ.
ಸಿಗೋ 15 ನಿಮಿಷದಲ್ಲಿ ಅವನಿಗೆ ನಾನು ಸಾಫ್ಟ್’ವೇರ್ ಇಂಜಿನೀಯರ್ ಅಲ್ಲ, ಬಿಸಿನೆಸ್ ಅನಾಲಿಸ್ಟ್ ನನ್ನ ಕೆಲಸ ಬೇರೆ ಇರತ್ತೆ ಅಂತೆಲ್ಲಾ ವಿವರಿಸಿ ಸಮಯ ಹಾಳುಮಾಡಲು ಇಷ್ಟವಿರದೇ ಹೌದು ನಾನೊಬ್ಬ ಸಾಫ್ಟ್’ವೇರ್ ಇಂಜಿನೀಯರು ಅಂದೆ. ನೀವು ಇಂಡಿಯನ್ಸ್ ಬಿಡಿ ಬಹಳ ಬುದ್ಧಿವಂತರು ಅದ್ಕೆ ಎಲ್ಲರೂ ದೊಡ್ಡ ದೊಡ್ಡ ಹುದ್ದೆಯಲ್ಲಿರ್ತೀರಾ. ನನ್ನನ್ನ ನೋಡು ರೆಸ್ಟೋರೆಂಟಲ್ಲಿ ಕೆಲಸ ಮಾಡಿ ಬರೋ ಸಂಬಳ ಸಾಕಾಗಲ್ಲ. ಅದ್ಕೆ ಉಬರ್ ಓಡ್ಸೋಣಾ ಅಂತ ಸಾಲ ಮಾಡಿ ಈ ಗಾಡಿ ತಗೊಂಡೆ. ನೀನೆ ನನ್ನ ಮೊದಲ ಗಿರಾಕಿ ಅಂದ. ನಮ್ಮ ದೇಶದಲ್ಲಿ ನಮಗೆ ಹೇಳ್ಕೋಳೋಕೆ ಆಗದೇ ಇರುವಷ್ಟು ಸಾವಿರ ಸಮಸ್ಯೆಗಳಿವೆ. ಅದೂ ಅಲ್ದೇ ನಾನು ಕೂಡ ಇಲ್ಲಿ ಹೊಟ್ಟೆಪಾಡಿಗೇ ಬಂದವನಪ್ಪಾ, ನಿಮ್ಮ ದೇಶಕ್ಕಿಂತ ಸ್ವಲ್ಪ ಒಳ್ಳೆ ಸ್ಥಿತಿಲಿದೀವಿ ಅನ್ನೋದನ್ನು ಬಿಟ್ರೆ ನಾವೂ ನಿಮ್ಮಂಗೆ ಅಂದೆ.
ಅದೆಲ್ಲಾ ಬಿಡು, ನಂಗೆ ಈ ಆ್ಯಪ್ ಅರ್ಥ ಆಗ್ತಿಲ್ಲ ಸ್ವಲ್ಪ ಹೇಳ್ಕೊಡು ದೇವರು ಒಳ್ಳೇದ್ಮಾಡ್ತಾನೆ ಅಂದ. ಅಯ್ಯೋ ಶಿವನೆ ಜೀವಮಾನದಲ್ಲಿ ನಾನು ಕೂಡ ಮೊದಲ ಬಾರಿ ಉಬರ್ ಡ್ರೈವರ್ ಆ್ಯಪ್ ನೋಡ್ತಿರೋದು ನಂಗೊತ್ತಿಲ್ಲಾ ಗುರು ಹೆಂಡ್ತಿ ಕಾಯ್ತಿರ್ತಾಳೆ ಬಿಟ್ಬಿಡು ಮಾರಾಯಾ ಅಂದೆ. ನಂಗೇನೂ ಅರ್ಥ ಆಗ್ತಿಲ್ಲ, ಇಲ್ನೋಡು ನಿನ್ನ ಟ್ರಿಪ್ ಕ್ಲೋಸ್ ಮಾಡೋಕು ಗೊತ್ತಾಗ್ತಿಲ್ಲ ನೋಡು ಅಂದ. ಸರಿ ಅಂತ ಅವನ ಕೈಯಿಂದ ಮೊಬೈಲ್ ತೆಗೆದು ಗೊತ್ತಿದ್ದಾದಷ್ಟನ್ನು ಹೇಳ್ಕೊಟ್ಟೆ. ನೋಡು ನಾನು ಸುಮ್ನೆ ಅಲ್ಲ ಹೇಳಿದ್ದು ನೀವು ಭಾರತೀಯರು ಮಹಾ ಮೇಧಾವಿಗಳು, ನಾನು ಆಗಿಂದ ಗುದ್ದಾಡ್ತಾ ಇದ್ದೆ, ನೀನು ಎಷ್ಟು ಬೇಗ ಹೇಳ್ಕೊಟ್ಟೆ ಅಂತ ಬೀಳ್ಕೊಟ್ಟ.
ನಾನು ಅವನಿಗೆ ಧನ್ಯವಾದ ಹೇಳ್ತಾ ಈ ದೇಶ ಇನ್ನೆಷ್ಟು ದಿನ ನನ್ನನ್ನು ಇಟ್ಕೋಬಹುದು, ವೀಸಾದ ಅವಧಿ ಪೂರ್ಣ ಆಗೋವರೆಗೆ ಇದ್ರೆ ಸಾಕಾಗಿತ್ತು ಅನ್ಕೋತಾ ಮನೆ ಮೆಟ್ಟಿಲನ್ನು ಹತ್ತಿದೆ.
(ಇನ್ನೂ ಇದೆ)
Get in Touch With Us info@kalpa.news Whatsapp: 9481252093
Discussion about this post