ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರವನ್ನು ಒಳಗೊಂಡಂತೆ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನಗಳ ಪೌರಾಣಿಕ ಹಿನ್ನೆಲೆ.
ನಾಗಲೋಕವನ್ನು ಶಂಖಚೂಡ ರಾಜನು ಆಳುತ್ತಿದ್ದನು. ಶಂಕಚೂಡನಿಗೆ ಮದುವೆಯಾಗಿ ಅನೇಕ ವರ್ಷಗಳು ಕಳೆದರು ಸಂತಾನಭಾಗ್ಯ ಲಭಿಸಲಿಲ್ಲ.
ಒಂದುದಿನ ಮಹಾದೇವನನ್ನು ಕುರಿತು ಅಪರಿಮಿತವಾದ ಭಕ್ತಿಯಿಂದ ಬೇಡಿಕೊಂಡಾಗ ಪ್ರತ್ಯಕ್ಷನಾದ ಶಿವನು ಐವರು ಪುತ್ರಿಯಾರನ್ನು ವರಪ್ರಸಾದ ರೂಪದಲ್ಲಿ ದಯಪಾಲಿಸಿದನು. ಶಿವ ಕೃಪೆಯಿಂದ ಜನಿಸಿದ ಐವರು ಪುತ್ರಿಯರಿಗೆ ಕ್ರಮವಾಗಿ ದೇವರತಿ, ನಾಗರತಿ, ಚಾರುರತಿ, ಮಂದರತಿ, ನೀಲರತಿ ಎಂದು ಹೆಸರಿಟ್ಟು ಅಕ್ಕರೆಯಿಂದ ಬೆಳೆಸುತ್ತಾನೆ.
ಬಹುಕಾಲದ ನಂತರ ಪಡೆದ ಪುತ್ರಿಯರ ಜೊತೆಗೆ ಬಹುದಿನಗಳ ಕಾಲ ಬದುಕುವ ಸುಯೋಗ ಶಂಕಚೂಡನಿಗೆ ದೊರಕಲಿಲ್ಲ. ಶಿವಪುತ್ರ ಕುಮಾರಸ್ವಾಮಿಗೆ ತನ್ನ ಐವರು ಪುತ್ರಿಯರನ್ನು ಕನ್ಯಾಧಾನ ಮಾಡಬೇಕು. ಎನ್ನುವ ಬಯಕೆಯನ್ನು ಹೊಂದಿದ್ದನು. ಆದರೆ ವಿಧಿಯಾಟದಿಂದ ಮಕ್ಕಳ ಮದುವೆಯನ್ನು ಕಣ್ಣಾರೆ ಕಾಣುವುದಕ್ಕೂ ಮೊದಲೇ ಶಂಖಚೂಡನು ಹೃದಯಾಘಾತದಿಂದ ಮರಣವನ್ನು ಹೊಂದುತ್ತಾನೆ.
ಹಿರಿಯರ ಸೂಚನೆಯಂತೆ ಅರಸನಿಲ್ಲದ ರಾಜ್ಯಕ್ಕೆ ಹಿರಿಯ ಮಗಳಾದ ದೇವರತಿಯನ್ನು ಅರಸಿಯಾಗಿ ಮಾಡಿದರು. ಹೀಗೆ ದೇವರತಿಯು ನ್ಯಾಯ ನೀತಿ ನಿಷ್ಠೆಯಿಂದ ರಾಜ್ಯಭಾರವನ್ನು ಮಾಡುತ್ತಾಳೆ. ಹೆಣ್ಣುಮಕ್ಕಳು ಗಂಡುಮಕ್ಕಳಿಗೆ ಕಡಿಮೆಯಿಲ್ಲ ಎನ್ನುವ ಮಟ್ಟಿಗೆ ಇವರ ಅಧಿಕಾರ ಅವಧಿಯಲ್ಲಿ ಪ್ರಸಿದ್ದಿಯನ್ನು ಗಳಿಸಿದ್ದರು. ಐದುಮಂದಿ ಅಕ್ಕ-ತಂಗಿಯರ ದೇಹ ಬೇರೆ-ಬೇರೆಯಾದರು ಒಂದೇ ಹೂವಿನ ಐದು ದಳದಂತೆ ಇದ್ದರು. ಒಬ್ಬರನೊಬ್ಬರು ಒಂದು ಕ್ಷಣವೂ ಆಗಲಿರಲಾರದಷ್ಟು ಹಚ್ಚಿಕೊಂಡಿದ್ದರು. ಸೂಕ್ತ ಪ್ರಾಯಕ್ಕೆ ಬಂದಾಗ ತಂದೆಯ ಆಸೆಯಂತೆ ಶಿವಸುತ ಸುಬ್ರಹ್ಮಣ್ಯ ಸ್ವಾಮಿಯನ್ನು ಮದುವೆಯಾಗಬೇಕು ಪಂಚ ಸತಿಯರಿಗೆ ಒಬ್ಬನೇ ಪತಿ ಇರಬೇಕು, ನಾವೆಲ್ಲರೂ ಒಂದೇ ಮನೆಯಲ್ಲಿ ಜೊತೆಯಾಗಿ ಇರಬೇಕು ಎಂದು ನಿರ್ಧರಿಸಿದರು. ತಮ್ಮ ಮನದ ಅಂಬೋಣವನ್ನು ತಿಳಿಸುವುದಕ್ಕಾಗಿ ಕೈಲಾಸವಾಸಿ ಶಿವನಿದ್ದಲ್ಲಿಗೆ ನಾಗಕನ್ನಿಕೆಯರು ಹೊರಡುತ್ತಾರೆ.
ಕೈಲಾಸದ ಮಹಾದ್ವಾರದಲ್ಲಿ ಶಿವನ ದ್ವಾರಪಾಲಕ ನಂದಿಕೇಶ ಎದುರಾಗುತ್ತಾನೆ. ನಾಗಕನ್ನೆಯರಿಗೂ ಶಿವಬಂಟ ನಂದಿಯ ನಡುವೆ ವಾಕ್ಸಮರ ಅತಿರೇಕಕ್ಕೆ ಹೋಗಿ ಕುಪಿತನಾದ ನಂದಿ ಕೋಪದ ಭರದಲ್ಲಿ ನಾಗಕನ್ನೆಯರಿಗೆ ನಿಮ್ಮ ಮನದ ಅಭಿಷ್ಟ ಈಡೇರದೆ ಹೋಗಲಿ, ಕುಮಾರ ಸ್ವಾಮಿಯನ್ನು ವರಿಸುವ ಭಾಗ್ಯ ನಿಮಗೆ ಲಭಿಸದೆ ಹೋಗಲಿ, ನೀವು ಐದುಜನ ಭೂಲೋಕದಲ್ಲಿ ಬೇರೆ-ಬೇರೆಯಾಗಿ ಬಿದ್ದಿರಿ ಎಂದು ಘನ-ಘೋರವಾದ ಶಾಪವನ್ನು ನೀಡುತ್ತಾನೆ. ನಂದಿಯ ಕೋಪಕ್ಕೆ ತುತ್ತಾಗಿ ಶಾಪಗ್ರಸ್ತರಾದ ಕನ್ನೆಯರಿಗೆ ಶಿವ ಪ್ರತ್ಯಕ್ಷನಾಗಿ ಚಿಂತಿಸದಿರಿ ಭೂಲೋಕದಲ್ಲಿ ಯಾವ-ಯಾವ ಸ್ಥಳದಲ್ಲಿ ನೀವು ನೆಲೆಸುತ್ತಿರೋ ಅದೇ ಸ್ಥಳದಲ್ಲಿ ನಿಮ್ಮ ಜೊತೆಗೆ ಸುಬ್ರಹ್ಮಣ್ಯ ಸ್ವಾಮಿಯೂ ನೆಲೆಸುತ್ತಾನೆ ಎಂದು ಅಭಯ ನೀಡುತ್ತಾನೆ.
ನಂದಿಯ ಶಾಪದಿಂದ ಸಹ್ಯಾದ್ರಿಯ ಮಡಿಲಿನಲ್ಲಿ ಐದು ಸರ್ಪಗಳು ಹಸುವೆ ಬಾಯಾರಿಕಿಯಿಂದ ಬಾಳಲಿ ಹೋಗುತ್ತವೆ. ನೋವಿನ ಮೇಲೆ ನಂಜಿನ ಬರೇ ಎನ್ನುವಂತೆ ಸಹ್ಯಾದ್ರಿಯಲ್ಲಿ ತಪೋನಿರತನಾದ ಮುನಿಯಿಂದ ಮತ್ತೆ ನಾಗಕನ್ನೆಯರು ಶಾಪಕ್ಕೆ ಗುರಿಯಾಗುತ್ತಾರೆ. ಆದರೆ ದೇವವರ್ಮ ಎನ್ನುವ ರಾಜನ ಕರಸ್ಪರ್ಶದಿಂದ ನಿಮ್ಮ ಶಾಪ ವಿಮೋಚನೆ ಆಗುತ್ತದೆ ಎನ್ನುವ ಪರಿಹಾರವನ್ನು ಮುನಿಯಿಂದಲೇ ಕಂಡುಕೊಳ್ಳುತ್ತಾರೆ.
ವೈರಿರಾಜರ ದಾಳಿಗೆ ತುತ್ತಾಗಿ ರಾಜ್ಯ, ಕೋಶ, ಅಧಿಕಾರವನ್ನು ಕಳೆದುಕೊಂಡ ದೇವವರ್ಮನು ಸಹ್ಯಾದ್ರಿಯ ಕಾಡಿನಲ್ಲಿ ಸಂಚರಿಸುತ್ತಿರುತ್ತಾನೆ. ದಟ್ಟ ಅರಣ್ಯದಲ್ಲಿ ಕಾಡ್ಗಿಚ್ಚು ಆವರಿಸಿತ್ತು. ಅರಣ್ಯದ ಮಧ್ಯದಲ್ಲಿ ಬೆಂಕಿಯ ಕೆನ್ನಾಲಿಗೆ ಸಿಕ್ಕಿ ನರಳುತ್ತಿರುವ ನಾಗಕನ್ನೆಯರ ಅರಣ್ಯ ರೋದನ ದೇವವರ್ಮನಿಗೆ ಕೇಳಿಸುತ್ತದೆ. ಹತ್ತಿರ ಬಂದು ನೋಡಿದಾಗ ನಾಗಕನ್ನಿಕೆಯರು ಬೆಂಕಿಯ ಬೇಗುದಿಗೆ ಸಿಕ್ಕಿ ಬಳಲಿ ಹೋಗಿದ್ದರು. ಕಾಪಾಡು ನಮ್ಮನ್ನು ಎಂದು ಎಷ್ಟೇ ಬೇಡಿಕೊಂಡರು ದೇವವರ್ಮ ನಾಗಗಳ ಭಯದಿಂದ ಅಸಹಾಯಕನಾಗಿ ನಿಂತುಬಿಡುತ್ತಾನೆ. ನಾಗಕನ್ನಿಕೆಯರು ದೇವವರ್ಮನಲ್ಲಿ ಈ ಸಂಕಷ್ಟದಿಂದ ನಮ್ಮನ್ನು ಕಾಪಾಡಿದರೆ ಮುಂದೆ ಸಹಾಯ ಮಾಡುದಾಗಿ ವಚನವನ್ನು ಕೊಡುತ್ತಾರೆ. ತನ್ನ ಸೆರಗು ಚಾಚಿ ಪಂಚ ನಾಗಕನ್ನಿಕೆಯರನ್ನು ಅಗ್ನಿಯಿಂದ ಕಾಪಾಡಿ ಮುಂದೆ ಸಾಗುತ್ತಾನೆ. ದೇವವರ್ಮನ ಸೆರಗಲ್ಲಿದ್ದ ನಾಗಕನ್ನೆಯರು ಅವರವರಿಗೆ ಮೆಚ್ಚುಗೆಯಾದ ಸ್ಥಳವನ್ನು ಆಯ್ದುಕೊಂಡು ಹುತ್ತವನ್ನು ಸೇರುತ್ತಾರೆ.
ದೇವವರ್ಮನ ಸೆರಗಲ್ಲಿದ್ದ ದೇವರತಿಯು ಮೊದಲನೆಯಾಗಿ ಹೊರ ಬರುತ್ತಾಳೆ. ಶೇಡಿಮನೆ ಗ್ರಾಮದಲ್ಲಿ ಇರುವ ಹುತ್ತವನ್ನು ಸೇರುತ್ತಾಳೆ. ಶಂಖಚೂಡನ ನಂತರ ಅರಸಿಯಾಗಿ ರಾಜ್ಯಭಾರವನ್ನು ಮಾಡಿದ್ದರಿಂದ ಎಲ್ಲರೂ ದೇವರತಿಯನ್ನು ಪ್ರೀತಿಯಿಂದ ಅರಸಮ್ಮನೆಂದು ಕರೆಯುತ್ತಿದ್ದರು. ಅರಸಮ್ಮ ನೆಲೆಸಿದ ಪುಣ್ಯಕ್ಷೇತ್ರ ಅರಸಮ್ಮನಖಾನು ಎಂದು ಪ್ರಸಿದ್ದಿಯನ್ನು ಗಳಿಸಿತು. ಈ ಕ್ಷೇತ್ರದಲ್ಲಿ ದೇವರತಿ ನೆಲೆನಿಂತು ಭಕ್ತರ ಇಷ್ಟಾರ್ಥ ಸಿದ್ಧಿಯನ್ನು ಇಡೇರಿಸುತ್ತ ಕಲಿಯುಗದಲ್ಲಿ ಪ್ರಸಿದ್ಧಿಯನ್ನು ಗಳಿಸುತ್ತಾಳೆ.
ಹಿಲಿಯಾಣ ಗ್ರಾಮದ ದಟ್ಟಾರಣ್ಯದಲ್ಲಿ ದೇವವರ್ಮನು ಸಾಗುತ್ತಿರುವಾಗ ಸೆರಗಿನಲ್ಲಿದ್ದ ನಾಗರತಿಯುವು ಹೊರಗೆ ಬಂದು ಸಮೀಪವೆ ಇರುವ ಹುತ್ತವನ್ನು ಸೇರುತ್ತಾಳೆ. ನಾಗರತಿ ತಾಯಿಯೂ ನೆಲೆನಿಂತ ಪುಣ್ಯ ಕ್ಷೇತ್ರ ನಾಗೇರ್ತಿಖಾನು ಎಂದು ಹೆಸರಾಗುತ್ತದೆ. ನಾಗತೀರ್ಥ ತಟದಲ್ಲಿ ನಾಗರತಿ ತಾಯಿಯು ಉದ್ಭವ ಸುವರ್ಣ ರೇಖಾಂಕಿತ ಲಿಂಗದ ರೂಪದಲ್ಲಿ ನೆಲೆನಿಲ್ಲುತಾಳೆ. ನಾಗೇರ್ತಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರನ್ನು ಇಷ್ಟಾರ್ಥ ಸಿದ್ದಿ ಇಡೇರಿಕೆಗಾಗಿ ಅಪಾರ ಜನರು ಭಕ್ತಿಯಿಂದ ಭಜಿಸಲು ಆರಂಭಿಸುತ್ತಾರೆ. ಪ್ರತಿವರ್ಷ ಜನವರಿ ತಿಂಗಳ ಮಕರ ಸಂಕ್ರಮಣದ ದಿನದಂದು ಶ್ರೀ ಸನ್ನಿಧಿಯಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ.
ಆವರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಚೋರಾಡಿ ಎಂಬಲ್ಲಿ ದೇವವರ್ಮನ ಸೆರಗಿನಿಂದ ಹೊರಬಂದ ಚಾರುರತಿ ಸಮೀಪವೆ ಇರುವ ಹುತ್ತವನ್ನು ಸೇರುತ್ತಾಳೆ. ಚಾರುರತಿ ನೆಲೆನಿಂತ ಈ ಪುಣ್ಯ ಕ್ಷೇತ್ರ ಮುಂದೆ ಚೋರಾಡಿ ಎಂದು ಪ್ರಸಿದ್ದಿಯನ್ನು ಗಳಿಸುತ್ತದೆ. ಚಾರುರತಿ ತಾಯಿಗೆ ಚಿಕ್ಕದೊಂದು ಗುಡಿಯನ್ನು ನಿರ್ಮಿಸಿ ಪೂಜಿಸಲಾಗುತ್ತಿದೆ.
ಉಡುಪಿ ತಾಲೂಕಿನ ಹೇಗುಂಜೆ ಗ್ರಾಮದಲ್ಲಿ ದೇವವರ್ಮನ ಸೆರಗಿಂದ ಹೊರಬಂದ ಮಂದರತಿ ಮಂದವಾಗಿ ಚಲಿಸುತ್ತ ಸಮೀಪದ ಹುತ್ತವನ್ನು ಸೇರುತ್ತಾಳೆ. ಮಂದರತಿ ನೆಲೆನಿಂತ ಪುಣ್ಯ ಕ್ಷೇತ್ರ ಮಂದಾರ್ತಿ ಎಂದು ಪ್ರಸಿದ್ದಿಯನ್ನು ಗಳಿಸುತ್ತದೆ. ಮಂದಾರ್ತಿ ದುರ್ಗಾಪರಮೇಶ್ವರಿ ಅಮ್ಮನವರು ಅಪಾರವಾದ ದಿವ್ಯ ಶಕ್ತಿಯಿಂದ ಅನೇಕ ಭಕ್ತರು ಆಕರ್ಷಿತರಾಗುತ್ತಾರೆ. ದುರ್ಗೆಯ ಸನ್ನಿಧಾನಕ್ಕೆ ವರ್ಷಪೂರ್ತಿ ಲಕ್ಷ ಲಕ್ಷ ಭಕ್ತಭಿಮಾನಿಗಳು ಆಗಮಿಸುತ್ತಾರೆ. ಮಂದಾರ್ತಿ ಶ್ರೀ ದುರ್ಗೆಯ ಕ್ಷೇತ್ರ ಕಲಿಯುಗದ ಕಾರಣಿಕ ಕ್ಷೇತ್ರವಾಗಿ ಬದಲಾಯಿತು. ಪ್ರತಿವರ್ಷ ಫೆಬ್ರವರಿ ತಿಂಗಳ ಸಂಕ್ರಮಣದಂದು ತಾಯಿಯ ಸನ್ನಿಧಾನದಲ್ಲಿ ಜಾತ್ರೆ ನಡೆಯುತ್ತಿದ್ದು ಲಕ್ಷಾಂತರ ಮಂದಿ ಆಗಮಿಸುತ್ತಾರೆ.
ದೇವವರ್ಮನು ಮುಂದೆ ಸಾಗುತ್ತಿರುವಾಗ ನೀಲರತಿ ಸೆರಗಿನಿಂದ ಹೊರಬಂದು ಹುತ್ತವನ್ನು ಸೇರುತ್ತಾಳೆ. ನೀಲರತಿ ನೆಲೆನಿಂತ ಪುಣ್ಯ ಕ್ಷೇತ್ರ ನಿಲವಾರವೆಂದು ಪ್ರಸಿದ್ದಿ ಗಳಿಸಿತು. ಸುಂದರ ದೇವಾಲಯವನ್ನು ನಿರ್ಮಿಸಿ ಶ್ರೀ ನೀಲರತಿ ಅಮ್ಮನವರನ್ನು ಅನುದಿನವೂ ಆರಾಧಿಸುವುದಕ್ಕೆ ಅವಕಾಶ ಮಾಡಿಕೊಡಲಾಯಿತು.
ಈ ಐದುಜನ ನಾಗಕನ್ನೆಯರು ನೆಲೆನಿಂತ ಐದು ಕ್ಷೇತ್ರಗಳು ಅಪರೂಪದ, ಅಪರಿಮಿತ ಕಾರಣಿಕ ಕ್ಷೇತ್ರಗಳು ಎಂದು ಗುರುತಿಸಲ್ಪಟ್ಟಿವೆ. ಉಡುಪಿ ಜಿಲ್ಲೆಯಲ್ಲಿ ಪಂಚ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಾನಗಳಿವೆ. ಯಾವುದೇ ರೀತಿಯ ನಾಗದೋಷವಿದ್ದರೆ ಈ ಕ್ಷೇತ್ರಗಳನ್ನು ಸಂದರ್ಶಿಸುವುದರಿಂದ ದೋಷ ನಿವಾರಣೆ ಆಗುತ್ತದೆ ಎನ್ನುವ ನಂಬಿಕೆ ಇದೆ. ದುರ್ಗೆಯರು ನೆಲೆಸಿರುವ ಸ್ಥಳಗಳು ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿವೆ. ಒಮ್ಮೆ ಬಿಡುವು ಮಾಡಿಕೊಂಡು ಈ ಐದು ಪುಣ್ಯ ಕ್ಷೇತ್ರಗಳ ದರ್ಶನ ಮಾಡಬನ್ನಿ.
ಲೇಖನ: ಗೌರೀಶ್ ಆವರ್ಸೆ
Discussion about this post