ಆರೋಗ್ಯ ಲೇಖನ: ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಡೆಂಗ್ಯೂಜ್ವರ ಎಂಬುದು ಸೊಳ್ಳೆಗಳ ಕಡಿತದಿಂದ ಹರಡುವ ವೈರಾಣು ಜ್ವರ. ತೀವ್ರ ಸ್ವರೂಪದ ಡೆಂಗ್ಯೂ ಜ್ವರದಿಂದ ಬಳಲುವ ಐದು ರೋಗಿಗಳಲ್ಲಿ ಒಬ್ಬ ವ್ಯಕ್ತಿ ಮರಣ ಹೊಂದಬಹುದು. ಪ್ರಾಥಮಿಕ ಹಂತದಲ್ಲಿ ಡೆಂಗ್ಯೂ ಜ್ವರ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಿದರೆ ಮರಣದ ಪ್ರಮಾಣವನ್ನು ಇಪ್ಪತ್ತು ಪಟ್ಟು ಕಡಿಮೆಗೊಳಿಸಬಹುದು.
ಡೆಂಗ್ಯೂ ಜ್ವರ ಎಂದರೇನು?
ಡೆಂಗ್ಯೂ ಜ್ವರ ಎಂಬುದು ಸೊಳ್ಳೆಗಳ ಕಡಿತದಿಂದ ಹರಡುವ ವೈರಾಣು ಜ್ವರ. ತೀವ್ರ ಸ್ವರೂಪದ ಡೆಂಗ್ಯೂ ಜ್ವರದಿಂದ ಬಳಲುವ ಮೂವರು ರೋಗಿಗಳಲ್ಲಿ ಇಬ್ಬರು ವ್ಯಕ್ತಿ ಮರಣ ಹೊಂದಬಹುದು. ಪ್ರಾಥಮಿಕ ಹಂತದಲ್ಲಿ ಡೆಂಗ್ಯೂ ಜ್ವರ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಿದರೆ ಮರಣದ ಪ್ರಮಾಣವನ್ನು ಇಪ್ಪತ್ತು ಪಟ್ಟು ಕಡಿಮೆಗೊಳಿಸಬಹುದು.
ಡೆಂಗ್ಯೂ ಜ್ವರದ ಬಗ್ಗೆ ತಿಳಿಯುವ ಅಗತ್ಯವೇನು?
ಜಾಗತಿಕ ಮಟ್ಟದಲ್ಲಿ ಡೆಂಗ್ಯೂ ಸೋಂಕಿನ ಪ್ರಮಾಣ ಅಧಿಕವಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದಾಗಿ ನೀರು ಅಲ್ಲಲ್ಲಿ ನಿಂತು ಸೊಳ್ಳೆಗಳ ವಂಶಾಭಿವೃದ್ಧಿ ಗಣನೀಯ ಮಟ್ಟದಲ್ಲಿ ಹೆಚ್ಚಲು ಪೂರಕವಾಗಿದೆ. ದುರಾದೃಷ್ಠವಶಾತ್ ಸೋಂಕಿತ ವ್ಯಕ್ತಿಗಳು ರೋಗದ ಕೊನೆಯ ಹಂತಗದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಈ ಹಂತದಲ್ಲಿ ರೋಗ ಗುಣಪಡಿಸುವುದು ಕಷ್ಟಕರ.
ಯಾವಾಗ ಯಾರಲ್ಲಿ ಈ ಸೋಂಕು ಕಂಡು ಬರುತ್ತದೆ?
ಮುಖ್ಯವಾಗಿ ಏಪ್ರಿಲ್’ನಿಂದ ಅಕ್ಟೋಬರ್ ತಿಂಗಳವರೆಗೆ ಎಲ್ಲಾ ವಯೋಮಿತಿಯ ವ್ಯಕ್ತಿಗಳಲ್ಲಿ ಈ ಸೋಂಕು ಕಂಡು ಬರುವ ಸಾಧ್ಯತೆ ಹೆಚ್ಚಿದೆ. ಆದರೆ, ಮಕ್ಕಳಲ್ಲಿ ಇದರ ತೀವ್ರತೆ ಹೆಚ್ಚು.
ಒಮ್ಮೆ ಸೋಂಕಿತ ವ್ಯಕ್ತಿಯು ಮತ್ತೊಮ್ಮೆ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆಯೇ?
ಹೌದು. ಒಮ್ಮೆ ಸೋಂಕಿತ ವ್ಯಕ್ತಿಯು ಮತ್ತೊಮ್ಮೆ ಸೋಂಕಿಗೆ ಒಳಗಾಗಬಹುದು. ಆದರೆ ಪದೇಪದೇ ಡೆಂಗ್ಯೂ ಜ್ವರ ಬರುವುದು ಅಪಾಯಕಾರಿ ಎಂಬುದನ್ನು ಮಾತ್ರ ಮರೆಯುವಂತಿಲ್ಲ.
ಡೆಂಗ್ಯೂ ಜ್ವರದ ಲಕ್ಷಣಗಳೇನು?
ಮಕ್ಕಳಲ್ಲಿ ಪ್ರಮುಖವಾಗಿ ಜ್ವರ, ಚರ್ಮದ ಮೇಲೆ ಕೆಂಪು ಮಚ್ಚೆಗಳು, ಸಣ್ಣ ಕೆಂಪು ಗುಳ್ಳೆಗಳು, ಮುಖ ಕೆಂಪೇರುವಿಕೆ, ವಯಸ್ಕರಲ್ಲಿ ಜ್ವರ, ತೀವ್ರ ತಲೆನೋವು, ಕಣ್ಣುಗಳ ಹಿಂಬದಿಯಲ್ಲಿ ನೋವು, ಮೈ-ಕೈ ನೋವು, ಚರ್ಮದ ಮೇಲೆ ಕೆಂಪು ಮಚ್ಚೆಗಳು, ಸಣ್ಣ ಕೆಂಪು ಗುಳ್ಳೆಗಳು ಇದರಲ್ಲಿ ಪ್ರಮುಖ ಲಕ್ಷಣಗಳು. ಸಾಮಾನ್ಯವಾಗಿ ಜ್ವರದ ಅವಧಿ 2 ರಿಂದ 7 ದಿನಗಳು ಇರುತ್ತವೆ.
ತೀವ್ರ ಸ್ವರೂಪದ ಡೆಂಗ್ಯೂ ಜ್ವರ ಎಂದರೇನು? ಅದು ಹೇಗೆ ಪ್ರಾಣಾಪಾಯಕ್ಕೆ ಕಾರಣವಾಗಬಹುದು?
ತೀವ್ರ ಸ್ವರೂಪದ ಡೆಂಗ್ಯೂ ಜ್ವರದಲ್ಲಿ ವಿಪರೀತ ಜ್ವರ, ದೇಹದ ಪ್ರಮುಖ ಅಂಗಗಳ ಕಾರ್ಯನಿರ್ವಹಣೆಯಲ್ಲಿ ತೊಡಕುಂಟಾಗುತ್ತದೆ. ರಕ್ತನಾಳಗಳಿಂದ ಸೋರುವಿಕೆ, ಮೈ-ಕೈ ಕಾಲು ಊತ, ಕಡಿಮೆ ರಕ್ತದ ಒತ್ತಡ ಕಾಣುತ್ತದೆ. ಪ್ಲೇಟ್’ಲೆಟ್ ರಕ್ತಕಣಗಳು ಕಡಿಮೆಯಾಗುವುದರಿಂದ ಶರೀರದ ಯಾವುದೇ ಭಾಗದಲ್ಲಾದರೂ ಅಪಾಯಕಾರಿ ರಕ್ತಸ್ರಾವವಾಗುವ ಸಂಭವವಿರುತ್ತದೆ.
ವ್ಯಕ್ತಿಯಿಂದ ವ್ಯಕ್ತಿಗೆ ಡೆಂಗ್ಯೂ ಜ್ವರ ಹರಡಬಹುದೇ?
ಸೊಳ್ಳೆ ಕಡಿತದ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಡೆಂಗ್ಯೂ ಹರಡಬಹುದು.
ನಿಮ್ಮ ವೈದ್ಯರನ್ನು ಯಾವಾಗ ಕಾಣುವುದು ಸೂಕ್ತ?
ಆರಂಭಿಕ ಹಂತದಲ್ಲೇ ಖಾಯಿಲೆಯ ಒತ್ತೆ ಹಚ್ಚುವಿಕೆ ಅತ್ಯಂತ ಮುಖ್ಯವಾದ ಅಂಶ. ಡೆಂಗ್ಯೂ ಜ್ವರವನ್ನು ಇತರೆ ಸಾಧಾರಣ ಜ್ವರಗಳಿಂದ ಪ್ರತ್ಯೇಕಿಸುವುದು ಸುಲಭವಲ್ಲ. ಇದಕ್ಕೆ ವೈದ್ಯರ ಸಹಾಯ ಮತ್ತು ಸಹಕಾರ ಬೇಕು. ಪೋಷಕರು ಮತ್ತು ರೋಗಿಗಳು ಈ ಕೆಳಕಂಡ ಅಪಾಯಕಾರಿ ಲಕ್ಷಣಗಳು ಕಂಡುಬಂದಲ್ಲಿ ಅವಶ್ಯವಾಗಿ ವೈದ್ಯರನ್ನು ಕಾಣಬೇಕು. ತೀವ್ರ ಜ್ವರ, ಮೂರರಿಂದ ಐದು ದಿನಗಳಲ್ಲಿ ನಿಯಂತ್ರಣಕ್ಕೆ ಬಾರದ ಜ್ವರ, ರಕ್ತ ಸ್ರಾವ, ಮುಖದ ಊತ, ಕಣ್ಣುಗಳ ಸುತ್ತಳತೆಯಲ್ಲಿ ಊತ, ಕೈಕಾಲು ತಣ್ಣಗಿರುವುದು, ವಿಪರೀತ ಹೊಟ್ಟೆ ನೋವು, ಒಂದೇ ಸಮನೆ ವಾಂತಿ ಆಗುವಿಕೆ, ಆಲಸ್ಯ ಜಡತ್ವ, ಮಂಪರು, ಆಹಾರ ನಿರಾಕರಣೆ. ಈ ಮೇಲಿನ ಸೂಚನೆಗಳು ಇಲ್ಲದಿದ್ದರೂ ಡೆಂಗ್ಯೂ ಪಿಡುಗು ಸಮಯದಲ್ಲಿ ಎಲ್ಲಾ ಜ್ವರ ಪೀಡಿತ ಮಕ್ಕಳಲ್ಲಿ ಡೆಂಗ್ಯೂ ಸೋಂಕನ್ನು ಪರಿಶೀಲಿಸುವುದು ಉತ್ತಮ.
ಡೆಂಗ್ಯೂ ಜ್ವರವನ್ನು ಯಾವ ಪರೀಕ್ಷೆಗಳಿಂದ ಕಂಡು ಹಿಡಿಯಬಹುದು?
ಪ್ರಮುಖವಾಗಿ ರಕ್ತಪರೀಕ್ಷೆಗಳಿಂದ ಸೋಂಕನ್ನು ಕಂಡು ಹಿಡಿಯಬಹುದಾಗಿದೆ. ಕಾಯಿಲೆಯ ತೀವ್ರತೆಯನ್ನು ನಿಗಾ ಇಡಲು ರಕ್ತದ ಪರೀಕ್ಷೆಗಳು ಸಹಕಾರಿ, ಅವಶ್ಯವಿದ್ದಲ್ಲಿ ಎಕ್ಸ್’ರೇ ಸ್ಕ್ಯಾನಿಂಗ್ ಕೂಡಾ ಮಾಡಬಹುದು.
ಡೆಂಗ್ಯೂ ಜ್ವರ ತಡೆಗಟ್ಟಲು ಲಸಿಕೆಗಳು ಇವೆಯೇ?
ಡೆಂಗ್ಯೂ ಜ್ವರ ತಡೆಯಲು ಪ್ರಸ್ತುತ ಯಾವುದೇ ಲಸಿಕೆಗಳಿಲ್ಲ. ಕೇವಲ ಸೊಳ್ಳೆ ನಿಯಂತ್ರಣದಿಂದ ಮಾತ್ರ ಡೆಂಗ್ಯೂ ಸೋಂಕನ್ನು ತಡೆಗಟ್ಟಬಹುದು.
ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆಯೇನು?
ಇದಕ್ಕೆ ನಿರ್ದಿಷ್ಠ ಔಷಧವಿಲ್ಲ. ಆರಂಭಿಕ ಹಂತದಲ್ಲೇ ಕಾಯಿಲೆಯ ಗುರುತಿಸುವಿಕೆ ಮತ್ತು ಅನುಭವಿ ಮತ್ತು ನುರಿತ ವೈದ್ಯರಿಂದ ಸುಸಜ್ಜಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಬಹಳ ಮುಖ್ಯ. ಸಾಧಾರಣ ಡೆಂಗ್ಯೂ ಜ್ವರಕ್ಕೆ ಸಾಕಷ್ಟು ದ್ರವಾಹಾರ ಮತ್ತು ಜ್ವರ ನಿಯಂತ್ರಣ ಹಾಗೂ ರಕ್ತಕಣಗಳ ಮಾಪನ ಸಾಕಾಗುತ್ತದೆ. ಆದರೆ ತೀವ್ರ ಜ್ವರಕ್ಕೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಬೇಕಾಗುತ್ತದೆ.
ಹೀಗಿರಲಿ ಮುಂಜಾಗ್ರತಾ ಕ್ರಮಗಳು
- ಕಾಯಿಲೆಯ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯ
- ನಿಮ್ಮ ಸುತ್ತಮುತ್ತಲು ಗಲೀಜು ನೀರು ನಿಲ್ಲದಂತೆ ನೋಡಿಕೊಳ್ಳಿ
- ಮುಚ್ಚಳವಿಲ್ಲದ ನೀರು ಶೇಖರಣೆ ತೊಟ್ಟಿಗಳನ್ನು ಬಳಸಬೇಡಿ
- ನಿಮ್ಮ ಮನೆಯ ಕಸವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಿ
- ರಾತ್ರಿ ಮಲಗುವಾಗ ಸೊಳ್ಳೆ ಪರದೆ, ಸೊಳ್ಳೆ ಬತ್ತಿಗಳನ್ನು ಬಳಸಿ
- ಚಿಕ್ಕ ಮಕ್ಕಳಿಗೆ ಪೂರ್ಣ ತೋಳುಗಳ ಉಡುಪು ತೊಡಿಸಿ
- ಜ್ವರ ಬಂದ ಕೂಡಲೇ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಿ
Get In Touch With Us info@kalpa.news Whatsapp: 9481252093, 94487 22200
Discussion about this post