ತಿರುಪತಿ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಿರುಮಲ ತಿರುಪತಿ ವೆಂಕಟೇಶ್ವರ ದೇವಾಲಯ ಅರು ದಿನಗಳ ಕಾಲ ಬಂದ್ ಆಗಲಿದೆ!
ಹೌದು… ಆಗಸ್ಟ್ 11ರಿಂದ 16ರವರೆಗೂ ಒಟ್ಟು ಆರು ದಿನಗಳ ಕಾಲ ಮಹತ್ವದ ಸ್ವಚ್ಚತಾ ಕಾರ್ಯಕ್ಕಾಗಿ ದೇವಾಲಯಕ್ಕೆ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ವರದಿಯಾಗಿದ್ದು, ಈ ಕುರಿತಂತೆ ನಡೆದ ಟಿಟಿಡಿಯ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ವರದಿಯಂತೆ ಒಟ್ಟು ಆರು ದಿನಗಳ ಕಾಲ ಸಂಪೂರ್ಣ ದೇವಾಲಯಕ್ಕೆ ಸಂಬಂಧಿಸಿದ ಆವರಣ ಅಂದರೆ, ದೇವರ ದರ್ಶನ, ದೇವಾಲಯ ಸಂಕೀರ್ಣ ಸೇರಿದಂತೆ ಬೆಟ್ಟ ಹತ್ತುವುದಕ್ಕೂ ಸಹ ನಿಷೇಧ ಹೇರಲಾಗಿದೆ.
ದೇವಾಲಯದ ಸ್ವಚ್ಛತಾ ಕಾರ್ಯಕ್ಕೆ ಸಂಬಂಧಿಸಿದ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪ್ರಮುಖವಾದ ಅಷ್ಟ ಬಂಧನ ಬಲಲಾಯ ಮಹಾ ಸಂಪ್ರೋಕ್ಷಣಂ ಎಂಬ ಕಾರ್ಯ ಈ ವೇಳೆ ನಡೆಯಲಿದ್ದು, ಇದು ಪ್ರತಿ 12 ವರ್ಷಕ್ಕೊಮ್ಮೆ ತಿರುಪತಿಯಲ್ಲಿ ನಡೆಯಲಿದೆ.
ತಿರುಮಲ ತಿರುಪತಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆರು ದಿನಗಳ ಕಾಲ ದೇವಾಲಯವನ್ನು ಬಂದ್ ಮಾಡಿ, ಭಕ್ತರಿಗೆ ಪ್ರವೇಶ ನಿಷೇಧ ಹೇರಿರುವುದು. 12 ವರ್ಷಗಳ ಹಿಂದೆ ಇದೇ ರೀತಿಯ ಸ್ವಚ್ಛತಾ ವಿಧಿ ವಿಧಾನ ನಡೆದಾಗ ಕೇವಲ ಕೆಲವೇ ಗಂಟೆಗಳ ಕಾಲ ಮಾತ್ರ ಬಂದ್ ಮಾಡಲಾಗಿತ್ತು.
ಆದರೆ ಈ ಬಾರಿ ಆಗಸ್ಟ್ ನಲ್ಲಿ ನಿಗದಿಯಾಗಿರುವ ಸಮಯದಲ್ಲಿ ಶನಿವಾರ, ಭಾನುವಾರ ಹಾಗೂ ಸ್ವತಂತ್ರ ದಿನಾಚರಣೆಯೂ ಇರುವುದರಿಂದ ಭಕ್ತರ ಸಂಖ್ಯೆ ಅತಿ ಹೆಚ್ಚಿರುತ್ತದೆ. ಹೀಗಾಗಿ, ಒತ್ತಡವಾದರೆ, ಕಾರ್ಯಕ್ಕೆ ತೊಂದರೆಯಾಗುತ್ತದೆ ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ.
Discussion about this post