ನವದೆಹಲಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಪ್ರತಿಭಟನೆ ನಡೆಯುತ್ತಿರುವಂತೆಯೇ ಈ ಕುರಿತಂತೆ ಮಾತನಾಡಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ತಮ್ಮ ಜೀವಿತಾವಧಿಯಲ್ಲಿ ಪ್ರತ್ಯೇಕ ರಾಜ್ಯ ಮಾಡಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿರುವ ಅವರು, ಉತ್ತರ ಕರ್ನಾಟಕದ ಜನರು ಬಿಜೆಪಿಯ ಪ್ರಚೋದನೆಗೆ ಬೀಳಬಾರದು. ಈ ಬೇಡಿಕೆ ತಮ್ಮ ಅಥವಾ ಕುಮಾರಸ್ವಾಮಿ ಕಾಲಾವಧಿಯಲ್ಲಿ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅನೇಕ ಮಹನೀಯರು ಹೋರಾಟ ನಡೆಸಿ ಕರ್ನಾಟಕ ಏಕೀಕರಣ ಮಾಡಿದ್ದಾರೆ. ಏಕೀಕರಣಕ್ಕಾಗಿ ಅವರು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದರು. ಹೀಗಾಗಿ ಪ್ರತ್ಯೇಕತೆ ಕೂಗನ್ನು ನಿಲ್ಲಿಸಿ ಮತ್ತು ಪ್ರಸ್ತುತ ಸರ್ಕಾರದ ಮೇಲೆ ಭರವಸೆ ಇಡಿ ಎಂದು ಮನವಿ ಮಾಡಿದರು.
ಇನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕಿಡಿಕಾರಿದ ದೇವೇಗೌಡ, ಉತ್ತರ ಕರ್ನಾಟಕ ಬಜೆಟ್ ಹಂಚಿಕೆಯಲ್ಲಿ ಯಾವುದೇ ರೀತಿಯ ಅನ್ಯಾಯ ಮಾಡಿಲ್ಲ. ಆದರೆ ಯಡಿಯೂರಪ್ಪನವರು ದುರುದ್ದೇಶದಿಂದ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಅತಿ ಹೆಚ್ಚು ಸ್ಥಾನ ಗಳಿಸಿಯೂ ಸರ್ಕಾರ ರಚನೆ ಮಾಡಲಾಗದೆ ಹೋದದ್ದಕ್ಕೆ ಬಿಜೆಪಿ ನಾಯಕ ಯಡಿಯೂರಪ್ಪ ಅವರಿಗೆ ನಿರಾಶೆಯಾಗಿದ್ದು ಅದು ಅವರ ಕೋಪಕ್ಕೆ ಕಾರಣವಾಗಿದೆ. ಇದೇ ಕೋಪದಿಂದ ಅವರು ಉತ್ತರ ಕರ್ನಾಟಕದ ಜನರಿಗೆ ಪ್ರತ್ಯೇಕ ಕರ್ನಾಟಕಕ್ಕಾಗಿ ಪ್ರಚೋದನೆ ಕೊಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
Discussion about this post