ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-21 |
ಭಾರತವು ಸಾವಿರಾರು ವರ್ಷಗಳಿಂದ ಅದೆಷ್ಟೋ ಋಷಿಗಳು, ರಾಜರು ಮತ್ತು ಮಹಾತ್ಮರನ್ನು ಕಂಡಂತಹ ಪುಣ್ಯಭೂಮಿ. ಇಡೀ ವಿಶ್ವಕ್ಕೆ ಗುರುವಾದಂತಹ ಉಜ್ವಲ ರಾಷ್ಟ್ರ. ಸಂಸ್ಕೃತದಲ್ಲಿ #Sanskrit ‘ಭಾ’ಎಂದರೆ ಬೆಳಕು ಅಂದರೆ ಜ್ಞಾನ. ‘ರತ’ ಎಂದರೆ ತೊಡಗಿರುವುದು. ಭಾರತೀಯರೆಂದರೆ ಜ್ಞಾನದ ಸಂಪಾದನೆಯಲ್ಲಿ ನಿರತರಾಗಿರುವವರು. ಮಾನವನಿಂದ ಸೃಷ್ಟಿಯಾಗದಂತಹ ವೇದಗಳನ್ನು ಸಾಕ್ಷಾತ್ಕರಿಸಿಕೊಂಡ ನಮ್ಮ ಋಷಿಗಳು ಆ ದಿವ್ಯ ಅನುಭೂತಿಯನ್ನು ಮುಂದಿನ ಪೀಳಿಗೆಗೆ ನೀಡಬೇಕೆಂದಾಗ ಸೃಷ್ಟಿಯಾಗಿದ್ದೇ ಈ ಶಿಕ್ಷಣ. ಇದರೊಂದಿಗೆ ಈ ವ್ಯವಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳಾಗುವುದುರಿಂದ ಶಿಕ್ಷಣ ಎಂಬುದು ಸಮರ್ಥವಾದ ರಾಷ್ಟ್ರದ ಬೆನ್ನೆಲುಬು. ಶ್ರೀರಾಮಚಂದ್ರ, ಕೃಷ್ಣ, ಆರ್ಯಭಟ, ಪಾಣಿನಿ, ಚಾಣಕ್ಯರಂತಹ ಸಾಧಕರು ಹೊರಹೊಮ್ಮಿದ್ದು ನಮ್ಮ ಶಿಕ್ಷಣ ಪದ್ಧತಿಯಿಂದಲೇ. ಈ ಒಂದು ವ್ಯವಸ್ಥೆಯಿಂದಲೇ ನಮ್ಮ ಭಾರತ ವೈಭವಯುತವಾಗಿ ಸರ್ವತೋಮುಖ ಬೆಳವಣಿಗೆಯನ್ನು ಕಂಡದ್ದು.
ನಮಗೆ ಪ್ರಾಚೀನ ಭಾರತೀಯ ಶಿಕ್ಷಣ #IndianEducation ಎಂದಾಕ್ಷಣ ನೆನಪಾಗುವುದೇ ಗುರುಕುಲಗಳು. ನಮ್ಮ ಭಾರತೀಯ ಪರಂಪರೆಯಲ್ಲಿ #IndianHeritage ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಗುರುಕುಲ ಶಿಕ್ಷಣದ ವಾತಾವರಣದಲ್ಲಿ ಕಲಿತವನೇ ಆಗಿರುತ್ತಿದ್ದ. ಆದರೆ ಶಿಕ್ಷಣದ ಕೇಂದ್ರ ಅದೊಂದೇ ಆಗಿರಲಿಲ್ಲ. “ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು” ಎಂದು ಹೇಳುವಂತೆ ಮನೆಯೇ ಮಗುವಿಗೆ ಮೊದಲ ಶಿಕ್ಷಣ ಸ್ಥಾನವಾಗಿತ್ತು. ಮನೆಯಲ್ಲಿ ತಾಯಿ ಮಗುವಿಗೆ ಅತ್ಯಂತ ವಾತ್ಸಲ್ಯದಿಂದ ಆಟದ ಜೊತೆಯಲ್ಲಿಯೇ ಅದಕ್ಕೆ ಬೇಕಾದಂತಹ ಸಂಸ್ಕಾರಗಳನ್ನು ತುಂಬುತ್ತಾ, ಜೀವನದ ಮೌಲ್ಯಗಳನ್ನು ತಾನೂ ಆಚರಿಸುತ್ತಾ, ಮಗುವಿಗೆ ಹೇಳಿಕೊಡುತ್ತಿದ್ದಳು. ಸಮಾಜದ ಜೊತೆ ಹೇಗೆ ವ್ಯವಹರಿಸುವುದು ಇತ್ಯಾದಿ ಸಾಮಾನ್ಯವಾದ ಜ್ಞಾನವನ್ನು ನೀಡುತ್ತಿದ್ದಳು. ಇದೇ ಗೃಹಗುರುಕುಲ.
ಹೀಗೆ ಸಂಸ್ಕಾರಗಳಿಂದ ರೂಪುಗೊಂಡ ಮಗುವಿಗೆ ಮುಂದೆ ದೊರೆಯುತ್ತಿದ್ದ ಶಿಕ್ಷಣವೇ ಗುರುಕುಲ ಶಿಕ್ಷಣ. ಗುರುವಿನ ಮನೆಯಲ್ಲಿದ್ದು ಅತ್ಯಂತ ಶ್ರದ್ಧಾ ಭಕ್ತಿಗಳಿಂದ, ನೈಷ್ಠಿಕ ಬ್ರಹ್ಮಚರ್ಯದಲ್ಲಿ ತನ್ನ ಎಲ್ಲಾ ಆಸೆ ಆಕಾಂಕ್ಷೆಗಳನ್ನು ತೊರೆದು ಹನ್ನೆರಡು ವರ್ಷಗಳ ಕಾಲ ಕೇವಲ ಜ್ಞಾನಾರ್ಜನೆ ಮಾಡುವ ಒಂದು ದೊಡ್ಡ ತಪಸ್ಸೇ ಗುರುಕುಲ ಶಿಕ್ಷಣ. ಪೂರ್ವಭಾವಿಯಾಗಿ ತಂದೆ ಉಪನಯನ ಸಂಸ್ಕಾರವನ್ನು ಮಾಡುತ್ತಿದ್ದರು. ಅಲ್ಲಿ ಮಗುವು ಸತ್ಯವ್ರತವನ್ನು ಎಂದರೆ ವಸ್ತು ನಿಷ್ಠಸ್ವಭಾವದಿಂದ ಎಂತಹ ಸಮಯದಲ್ಲೂ, ಯಾರೇ ಸತ್ಯವನ್ನು ಹೇಳಿದರೆ ಸ್ವೀಕರಿಸುವ ಗುಣ. ಇದನ್ನು ತಾನು ಸ್ವೀಕರಿಸುತ್ತಿದ್ದ . ಹೀಗೆ ತ್ರಿಕರಣ ಶುದ್ಧಿಯೊಂದಿಗೆ ಆಚಾರ್ಯರ ಮಾರ್ಗದರ್ಶನದಲ್ಲಿ ಏಕಚಿತ್ತನಾಗಿ ವಿದ್ಯಾರ್ಜನೆಯೊಂದಿಗೆ ನೈತಿಕವಾಗಿಯೂ ಕೂಡ ಬೆಳೆಯುತ್ತಿದ್ದ.
ಗುರುಕುಲದಲ್ಲಿ #Gurukula ಆಚಾರ್ಯನು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಮಾನಸಿಕವಾಗಿ, ಬೌದ್ಧಿಕವಾಗಿ, ಶಾರೀರಿಕವಾಗಿ, ಆಧ್ಯಾತ್ಮಿಕವಾಗಿ ಹೀಗೆ ಎಲ್ಲಾ ಆಯಾಮಗಳಿಂದಲೂ ಬೆಳೆಸುತ್ತಿದ್ದರು. ವಿದ್ಯಾರ್ಥಿಗಳು ಯಾವುದೇ ದೇಶ ಕಾಲ ವಿಷಯಗಳ ಪರಿಮಿತಿ ಇಲ್ಲದೆ ಮುಕ್ತವಾಗಿ ಕಲಿಯುತ್ತಿದ್ದರು. ಗುಂಪು ಚರ್ಚೆಗಳಿಗೆ ಸದಾ ಅವಕಾಶ ಇರುತ್ತಿತ್ತು. ತಾವು ಗುಂಪಿನಲ್ಲಿದ್ದು ಕಂಠಪಾಠ ಮಾಡಿದ್ದನ್ನು ಬರೆಯುವುದು (ಮರಳಿನಲ್ಲಿ), ಅದನ್ನು ತಾವೇ ತಿದ್ದುವುದು, ಇತ್ಯಾದಿಗಳು ನಡೆಯುತ್ತಿದ್ದವು. ಬ್ರಿಟಿಷರ ಒಂದು ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಏಳು ಲಕ್ಷ ಗ್ರಾಮಗಳಲ್ಲಿ 7 ಲಕ್ಷಕ್ಕಿಂತ ಅಧಿಕ ಗುರುಕುಲಗಳು ಇದ್ದವು ಮತ್ತು ಅಲ್ಲಿಯ ಪಠ್ಯಕ್ರಮದಲ್ಲಿ ಗಣಿತ, ವಿಜ್ಞಾನ ನೀತಿಗಳು ಕಡ್ಡಾಯ ಆಗಿತ್ತು ಎಂಬುದು ತಿಳಿದುಬರುತ್ತದೆ. ಇಲ್ಲಿ ಕೇವಲ ಪ್ರಾಚೀನ ವಿದ್ಯೆಯನ್ನಷ್ಟೇ ಅಲ್ಲದೆ ಸಮಯೋಚಿತವಾದ ಆಧುನಿಕ ವಿಷಯಗಳನ್ನೂ ಕಲಿಸಲಾಗುತ್ತಿತ್ತು. ಕಲಿತು ಕಲಿಸುವ ಪರಿಪಾಠ ಇತ್ತು. ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು. ಶಾರೀರಿಕ ಮತ್ತು ಮಾನಸಿಕ ವಿಕಾಸಕ್ಕಾಗಿ ಲಲಿತ ಕಲೆಗಳು, ಯೋಗ, ಆಟ, ಯುದ್ಧ ಪ್ರಕಾರಗಳನ್ನು ಹೇಳಿಕೊಡುತ್ತಾ, ಜೀವನೋಪಯೋಗೀ ಕಲೆಗಳಾದ ಕರಕುಶಲ ವಿದ್ಯೆಗಳು, ಕೃಷಿ ಇತ್ಯಾದಿಗಳ ಅಭ್ಯಾಸಗಳು ಕೂಡಾ ನಡೆಯುತ್ತಿದ್ದವು.
ಇಷ್ಟಲ್ಲದೇ ವ್ಯಕ್ತಿಗತವಾದ ಶಿಕ್ಷಣ ಮುಖ್ಯವಾಗಿತ್ತು. ಇಡೀ ಜಗತ್ತಿಗೆ ಮಾರ್ಗದರ್ಶನ ಮಾಡುತ್ತಿರುವಂತಹ ಪಂಚತಂತ್ರ ಕಥೆಗಳು ಕೂಡ ಗುರುಕುಲದಿಂದಲೇ ಬಂದದ್ದು. ಹೀಗೆ ಪಾಠಗಳ ಮೂಲಕ ಅಷ್ಟೇ ಅಲ್ಲದೆ ಕಥೆ, ನಾಟಕ ಇತ್ಯಾದಿಗಳಿಂದ ಶಿಕ್ಷಣವು ಆಗುತ್ತಿತ್ತು. ಜಗತ್ತಲ್ಲಿ ಅತ್ಯಂತ ಖ್ಯಾತಿ ಪಡೆದಿರುವಂತಹ ನಲಂದಾ ವಿಶ್ವವಿದ್ಯಾಲಯವು ಕೂಡಾ ಭಾರತ ಶಿಕ್ಷಣ ಪದ್ಧತಿಯ ಒಂದು ವ್ಯಕ್ತರೂಪವೇ ಆಗಿವೆ.
ಈ ರೀತಿಯಾಗಿ ಜಗದ್ಗುರುವಾಗಿದ್ದಂತಹ ನಮ್ಮ ಭಾರತದಲ್ಲಿ ವೈಜ್ಞಾನಿಕ, ಸಕಲ ಆಯಾಮಗಳಿಂದಲೂ ಮಾನವನನ್ನು ಅಭಿವೃದ್ಧಿಗೊಳಿಸುವಂತಹ ಜ್ಞಾನ-ವಿದ್ಯೆಗಳಿಂದ, ಉತ್ಕೃಷ್ಟ ಸಂಸ್ಕಾರಗಳಿಂದ ಕೂಡಿರುವಂತಹ, ಸುವ್ಯವಸ್ಥಿತವಾದಂತ ಶಿಕ್ಷಣ ಪದ್ಧತಿ ಇತ್ತು.
ಭಾರತೀಯ ಶಿಕ್ಷಣವು ಎಂದಿಗೂ ಸನಾತನ, ಎಂದರೆ ಪ್ರಾಚೀನವೂ ಹೌದು, ಅರ್ವಾಚೀನವೂ ಅಹುದು. ಇಂತಹ ಶ್ರೇಷ್ಠ ಶಿಕ್ಷಣ ಪದ್ಧತಿಯನ್ನು ನಿರ್ಮೂಲನ ಮಾಡಿದ್ದೇ ‘East India’ ಕಂಪನಿಗೆ ಕಾನೂನು ಸಲಹೆಗಾರನಾಗಿ ಬಂದಂತಹ ಥಾಮಸ್ ಮೆಕಾಲೆ. #ThomasMacaulay ಭಾರತೀಯ ಶಿಕ್ಷಣ ಕೇಂದ್ರಗಳನ್ನು ನಿಷೇಧಿಸುವ ಮುನ್ನ ಬ್ರಿಟಿಷ್ ಅಧಿಕಾರಿಗಳು ದೇಶಾದ್ಯಂತ ವಿದ್ಯಾಸಂಸ್ಥೆಗಳ ವಿಸ್ತೃತವಾದ, ವಿವರವಾದ ಸಮೀಕ್ಷೆಯನ್ನು ಮಾಡಿದ್ದರು. ಈ ವರದಿಗಳೇ ನಮಗೆ ಆಗಿನ ಕಾಲದ ಶಿಕ್ಷಣದ ಬಗ್ಗೆ ಇರುವ ಆಧಾರಗಳು. ನಂತರ, ವಿದ್ಯಾ ಕೇಂದ್ರಗಳಿಗೆ ದೊರಕುತ್ತಿದ್ದ ಆರ್ಥಿಕ ಬೆಂಬಲವನ್ನು ಮತ್ತು ಅವುಗಳ ಜಾಗವನ್ನು ಕಬಳಿಸಿ ತಮ್ಮ ಬ್ರಿಟಿಷ್ ಸಾಮ್ರಾಜ್ಯಕ್ಕೆ ಗುಲಾಮರನ್ನು ಗುಮಾಸ್ತರನ್ನು ತಯಾರು ಮಾಡುವ ಕಾರ್ಖಾನೆ ‘School’ ಅನ್ನು ತುರುಕಿದರು.
ಇಂತಹ ವ್ಯವಸ್ಥೆಯಲ್ ಇರುವ ನಾವು, ಮತ್ತೊಮ್ಮೆ ನಮ್ಮ ಪ್ರಾಚೀನ ಶಿಕ್ಷಣ ಪದ್ಧತಿಯ ಮೂಲಕ ಜ್ಞಾನಾರ್ಜನೆ ಮಾಡಲಾಗುವುದಿಲ್ಲವೇ? ಭಾರತೀಯ ವಿದ್ಯಾ ಸಂಸ್ಥೆಗಳನ್ನು ಮತ್ತೆ ಸ್ಥಾಪಿಸಲಾರದೆ? ಖಂಡಿತ ಆಗುವುದು. ಮೊದಲು ನಮ್ಮಲ್ಲಿ ಬೇಕಾಗಿರುವುದು ದೃಢವಾದ ಮನಸ್ಸು, ಸರಿಯಾದ ಜ್ಞಾನ ಮತ್ತು ಸೇವಾ ಮನೋಭಾವ.
ನಮ್ಮಲ್ಲಿದ್ದ ವಿದ್ಯಾ ಸಂಸ್ಥೆಗಳು ಎಂದಿಗೂ ಸರಕಾರದ ಅಥವಾ ರಾಜನ ಹಿಡಿತದಲ್ಲಿ ಇರದೆ, ಸಮಾಜದಿಂದಲೇ ಸ್ವತಂತ್ರವಾಗಿ ರೂಪುಗೊಳ್ಳುತ್ತಿದ್ದವು. ಆದ್ದರಿಂದ ಈ ಕನಸು ಸಾಕಾರವಾಗುವಲ್ಲಿ ನಮ್ಮ ನಿಮ್ಮೆಲ್ಲರ, ಪ್ರತಿಯೊಬ್ಬರ ಪಾತ್ರ ಅತಿ ಮುಖ್ಯ.
ಬದಲಾವಣೆ ನಮ್ಮಿಂದಲೇ ಪ್ರಾರಂಭಗೊಳ್ಳುವುದರಿಂದ, ನಾವು ನಮ್ಮ ಮನಸ್ಸು, ಆತ್ಮವನ್ನು ಭಾರತೀಯವನ್ನಾಗಿ ಮಾಡಬೇಕು. ಅರ್ಥಾತ್ ಶ್ರದ್ಧಾ, ಭಕ್ತಿ, ವಿನಯಗಳಿಂದ ಜಿಜ್ಞಾಸುಗಳಾಗಬೇಕು. ಪೂರ್ವಭಾವಿಯಾಗಿ, ನಮ್ಮ ಸಂಸ್ಕೃತಿಯ ಪ್ರಕಾರ, ಅವಶ್ಯಕವಾದ ಸಂಸ್ಕಾರಗಳನ್ನು ಮಾಡಬೇಕು ಗರ್ಭಾಧಾನ, ಸೀಮಂತೋನ್ನಯನ, ಪುಂಸವನ ಇತ್ಯಾದಿ. ಆಗ ಮಕ್ಕಳು ಸದ್ಗುಣಗಳಿಂದ ಭರಿತರಾಗುವರು, ಸಂಸ್ಕೃತರ ಮತ್ತು ವಿದ್ಯಾರ್ಜನೆಗೆ ಅರ್ಹರಾಗುವರು.
ನಂತರದ ಗುರುಕುಲ ಶಿಕ್ಷಣಕ್ಕಾಗಿ ನಾವು ಕಾಡಿಗೆ ತರಡಬೇಕೆಂದೇನಿಲ್ಲ , ಗುರುಕುಲ ಎಂಬುದು ಒಂದು ಸಂಕಲ್ಪನೆ ಅದರ ತತ್ವಗಳನ್ನು ಮುಖ್ಯವಾಗಿ ಅಳವಡಿಸಿಕೊಳ್ಳಬೇಕು.
ಗುರುಕುಲದಲ್ಲಿ ನಿವಾಸ – ಇಲ್ಲಿನ ಜೀವನಕ್ರಮ ಗುರುಶಿಷ್ಯರ ಸಂಬಂಧ ಬೆಳೆಯಲು ಮತ್ತು ವಿದ್ಯಾರ್ಥಿಯು ಎಲ್ಲಾ ಆಯಾಮಗಳಿಂದಲೂ ವಿಕಸಿತನಾಗಲು ಮುಖ್ಯ. ಗುರುಕುಲದ ಅಧ್ಯಯನ ಪದ್ಧತಿ. ಗುರುಕುಲದ ಪಾಠ್ಯಕ್ರಮ. ಗುರುವಿನಿಂದಲೇ ನಡೆಯುವ ಗುರುಕುಲ. (ಮುಖ್ಯವಾಗಿ) ಶುಲ್ಕವನ್ನು ಬಯಸದ ಶಿಕ್ಷಣ. ಗುರು ಮತ್ತು ಶಿಷ್ಯನು ತನ್ನ ಕರ್ತವ್ಯಪ್ರಜ್ಞೆಯನ್ನು ಅರಿತು, ಕಠಿಣ ಪರಿಶ್ರಮದಿಂದ ಅಧ್ಯಯನ ಅಧ್ಯಾಪನವನ್ನು ನಡೆಸಬೇಕು. ಗುರುಕುಲವು ಯಾವತ್ತಿದ್ದರೂ ವಿಷಯಜ್ಞಾನದೊಂದಿಗೆ ಪ್ರಾಯೋಗಿಕಜ್ಞಾನವನ್ನು ಪಡೆಯುವ ಮತ್ತು ಕಲಿಯುವ ತಾಣ ಹೊರತು ಪಾಠ ಮಾಡುವ ಅಲ್ಲ.
ಒಟ್ಟಿನಲ್ಲಿ ಭಾರತೀಯ ಶಿಕ್ಷಣದ ಉದ್ದೇಶವೇ ಒಬ್ಬ ಸ್ವಾವಲಂಬಿ, ಸರ್ವಸಮರ್ಥ, ಶ್ರದ್ಧೆ, ಏಕಾಗ್ರತೆ, ಪ್ರಾಮಾಣಿಕತೆ, ಜಿಜ್ಞಾಸೆ, ಸ್ವಾಧ್ಯಾಯ ಇತ್ಯಾದಿ ಗುಣಗಳಿಂದ ಕೂಡಿದ, ದೇಶವನ್ನು ನಿರ್ಮಿಸುವ, ತನ್ನ ಧರ್ಮ ಸಂಸ್ಕೃತಿಗಳ ಪ್ರತೀಕನಾದಂತಹ ಸುಪ್ರಜೆಯ ನಿರ್ಮಾಣ.
ನಮ್ಮ ಭಾರತೀಯ ಶಿಕ್ಷಣ ಪದ್ಧತಿಯನ್ನು ಪುನರುಜ್ಜೀವಗೊಳಿಸುವುದು ಒಂದು ಸುದೀರ್ಘವಾದಂತ ತಪಸ್ಸು. ನಾವೆಲ್ಲರೂ ಇದರತ್ತ ವಿಶೇಷ ಗಮನವನ್ನು ಹರಿಸಿ ಒಗ್ಗಟ್ಟಿನಿಂದ ಪ್ರಸ್ತುತ ಕಾಲಕ್ಕೆ ಅನ್ವಯವಾಗುವಂತೆ ನಮ್ಮ ಶಿಕ್ಷಣಕ್ರಮವನ್ನು ಅಳವಡಿಸುವಲ್ಲಿ ಪ್ರಯತ್ನಿಸಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post