ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಹೊಸ ವರುಷಕೆ ಹೊಸ ಹರುಷವ, ಹೊಸತು ಹೊಸತು ತರುತಿದೆ. ಬೇಂದ್ರೆ ಅಜ್ಜನ ಈ ಸಾಲು ಕೇಳದವರು ಬಹುಷಃ ಯಾರೂ ಇಲ್ಲ ಎಂದು ಹೇಳಬಹುದು.
ವ್ಯಕ್ತಿ ತಾನು ಹುಟ್ಟಿದ ದಿನದ ಸಂಭ್ರಮದಲ್ಲಿ ಮಿಂದು ಹೋಗುವಂತೆಯೇ ಪ್ರಕೃತಿಯು ಮರ-ಗಿಡಗಳ ಎಲೆ ಉದುರಿಸಿ ನವ ಚಿಗುರಿನೊಂದಿಗೆ ಚೈತ್ರ ಮಾಸಕ್ಕೆ ಪದಾರ್ಪಣೆ ಮಾಡುತ್ತದೆ. ಹಳೇ ಬೇರಿನಿಂದ ಹೊಸ ಚಿಗುರು ನಳನಳಿಸುವಂತೆ ಪ್ರಕೃತಿಯು ಮಡಿಲು ಕುಡಿ ಚಿಗುರಿನಿಂದ ಹಸಿರು ಹಾಸಿಗೆಯಂತೆ ಕಂಗೊಳಿಸುವ ಕಾಲಮಾನವೇ ಯುಗಾದಿ.
ವಿಕಾರಿನಾಮ ಸಂವತ್ಸರದ ವಿದಾಯದೊಂದಿಗೆ ಶ್ರೀಶಾರ್ವರಿ ಸಂವತ್ಸರದ ಆಗಮನ ಹಲವು ಭರವಸೆಯೊಂದಿಗೆ ಸ್ವಾಗತಿಸಲು ಮನ ಕಾತುರದಲ್ಲಿ ಕಾಯುತಿದೆ. ಮನುಷ್ಯ ಹುಟ್ಟಿನಿಂದಲೂ ವರುಷ ಕಳೆದಂತೆ ಮನುಷ್ಯನ ಅನುಭವ ಮೂಟೆ ತುಂಬುತ್ತಲೇ ಹೋಗುತ್ತದೆ. ಕಳೆದ ದಿನದ ಸಿಂಹಾವಲೋಕನಕ್ಕೆ ಒಂದು ಯುಗಾದಿಯ ಅವಶ್ಯಕತೆ ಇದೆ. ಏನೆಲ್ಲಾ ಹೊಸ ಯೋಜನೆಗಳನ್ನು ರೂಪಿಸಿದ್ದೇವೆ. ಅಂದುಕೊಂಡಿದ್ದರಲ್ಲಿ ಎಷ್ಟು ಪ್ರಮಾಣದ ಕೆಲಸ ಕಾರ್ಯರೂಪಕ್ಕೆ ಬಂದಿದೆ, ಸರ್ಕಾರ ಸಮಾಜ, ಜಾಗತಿಕ ಮಾರುಕಟ್ಟೆ, ರಾಜ್ಯ, ಜಿಲ್ಲೆ, ಊರು, ವ್ಯಕ್ತಿಗತ ಸ್ಥಿತಿ ಎಲ್ಲಾ ಕಡೆಯಲ್ಲಿ ಆಗಿರುವ ವರ್ಷದ ಹಿನ್ನೋಟ ಜೊತೆಗೆ ಮುನ್ನೋಟದಲ್ಲಿ ಯಾವೆಲ್ಲಾ ಸಾಧ್ಯ ಎನ್ನುವ ಕಾರ್ಯಕಲ್ಪಗಳ ಅಗತ್ಯವಿದೆ.
90ರ ದಶಕದಿಂದ ಈಚೆಗಿನ ಭಾರತೀಯರ ಬದುಕಿನ ಶೈಲಿ ಹಲವಾರು ವೈವಿಧ್ಯಮಯಗಳನ್ನು ನಾಶಿಸಿವೆ. ಯುಗಾದಿಯ ಸಂಭ್ರಮದಲ್ಲಿದ್ದ ನಮಗೆ ಟಿ.ವಿ. ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಅವರು (ಎಲ್‌ಪಿಜಿ) ಜಾಗತಿಕರಣದ ಮುಕ್ತವೆನ್ನುವ ವ್ಯಾಪಾರ ವಹಿವಾಟಿಗೆ ರಹದಾರಿ ಕೊಟ್ಟರು. ಕೂಡಲೇ ಬೇಕಾದ ಅನಿವಾರ್ಯತೆ ದೇಶಕ್ಕೆ ಒಂದೊದಗಿದ್ದು ಸುಳ್ಳಲ್ಲ.
ಅಲ್ಲಿಯವರೆಗೂ ಯುಗಾದಿ ಹಬ್ಬ ಎಂದರೆ ತಿಂಗಳ ಮುಂಚಿನಿಂದಲೇ ತಯಾರಿ ಶುರುವಾಗುತ್ತಿತ್ತು. ಬಹುತೇಕರ ಮನೆಗಳು ಮಣ್ಣಿನ ಗೋಡೆಗಳಿಂದಲೇ ಕೂಡಿರುತ್ತಿದ್ದವು. ಸುಣ್ಣ ಮಾರುವವನ ಹತ್ತಿರ ಸೇರು ಸುಣ್ಣಕ್ಕೆ 50 ಪೈಸೆ ಕೊಟ್ಟು ಮನೆಯ ಮುಂದಿನ ಭಾಗಕ್ಕೆ ಗೃಹಿಣಿಯರೇ ಹಚ್ಚಿ ಅಟ್ಟದ ಮೇಲಿನ ಗೋಡೆಗೆ ಊರು ಮಂಜು ಅಥವಾ ಕೆರೆಯಲ್ಲಿ ಸಿಗುವ ಗೋಡನ್ನು ತಂದು ಬಟ್ಟೆಯಲ್ಲಿ ಬ್ರೆಷ್ ಆಗಿ ಮನೆ ರೂಪುಗೊಳ್ಳುತ್ತಿತ್ತು. ಇಷ್ಟರ ನಡುವೆ ಕರಿ ಹಂಚಿನ ಮನೆಯವರು ಹೋಳು ಹುಣ್ಣಿಮೆಯೊಳಗೆ ಒಂದು ಸುತ್ತು ಮನೆಯ ಹಂಚುಗಳನ್ನು ತಿರುವಿ ಹಾಸುತ್ತಿದ್ದರು.
ಜಮೀನಿನಲ್ಲಿ ಬೆಳೆದ ಬೆಳೆಯನ್ನೆಲ್ಲಾ ಒಕ್ಕಲು ಮಾಡಿ ದಾಸ್ತಾನು ಮಾಡೋರು ಹಗೆವುಗಳಲ್ಲಿರುತ್ತಿದ್ದರು. ಮಾರಾಟ ಮಾಡುವವರು ಮಾರಿ ಬಂದ ಹಣದಲ್ಲಿ ಏನನ್ನು ಮಾಡದಿದ್ದರೂ ಮನೆಯವರಿಗೆಲ್ಲಾ ಬಟ್ಟೆ ತರುವುದನ್ನು ಮರೆಯುವಂತಿರಲಿಲ್ಲ. ಆರ್ಥಿಕತೆಯಲ್ಲಿ ಅಶಕ್ತರಾಗಿದ್ದ ಮಹಿಳೆಯರು ಮಕ್ಕಳ ಯುಗಾದಿ ಹಬ್ಬದ ಬಟ್ಟೆಗಾಗಿ ಮೂರು ನಾಲ್ಕು ತಿಂಗಳಿನಿಂದ ಕನಸು ಕಟ್ಟಿಕೊಂಡಿರುತ್ತಿದ್ದ ಕಾಲವಿತ್ತು. ತೀರಾ ಬಡತನದಲ್ಲಿರುವ ಮನೆತನದವರು ದೀಪಾವಳಿಗೆ ಒಂದಿಷ್ಟು ಸದಸ್ಯರಿಗೆ ಯುಗಾದಿಗೊಂದಿಷ್ಟು ಜನರಿಗೆ ವಸ್ತ್ರ ಖರೀದಿ ಸಂಪ್ರದಾಯವನ್ನು ರೂಢಿಯಲ್ಲಿರಿಸಿದ್ದರು.
ಭಾರತದ ಬಹುಪಾಲು ಭೂಮಿ ಕೃಷಿ ಜಮೀನುಗಳಾಗಿದ್ದರಿಂದ ಮಳೆಯಾಶ್ರಿತ ಬೆಳೆಗಳು ಮಾತ್ರ ಸಾಧ್ಯವಾಗುತ್ತಿತ್ತು. ಯುಗಾದಿ ಎಡ-ಬಲದಲ್ಲಿ ದಪ್ಪನೇ ಮಳೆ ಬರುತ್ತಿತ್ತು. ಯುಗಾದಿಯ ಶುಕ್ಲ ಪಕ್ಷದ ಪಾಡ್ಯತಿಥಿಯ ಬ್ರಾಹ್ಮಿ ಮಹೂರ್ತದಲ್ಲಿ ರೈತಾಪಿ ವರ್ಗ ಮೊದಲ ಬೇಸಾಯವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದರು. ನೇಗಿಲನ್ನು ಉಳುವಾಗ ಎತ್ತುಗಳಿಗೆ ಅಲಂಕಾರ ಮಾಡಿ ಭೂಮಿಗೆ ನೇಗಿಲಿಡುವ ಸಂಪ್ರದಾಯದಲ್ಲಿ ಸಾಂಸ್ಕೃತಿಕ ಸೊಗಡು ತುಂಬಿರುತ್ತದೆ.
ಮೊದಲು ಬೇಸಾಯ ಮುಗಿಸಿ ಬಂದವರಿಗೆ ಬೇವು ಬೆಲ್ಲ ಕೊಟ್ಟು ಬರ ಮಾಡಿಕೊಳ್ಳುತ್ತಾರೆ. ಬೇವಿನಲ್ಲಿರುವ ರೋಗ ನಿರೋಧಕ ಶಕ್ತಿ, ತ್ವಚೆಯ ಕಾಂತಿಯನ್ನು ಕಾಪಾಡಿ ಚರ್ಮ ರೋಗಗಳಿಂದ ದೂರವಿರುವಂತೆ ಮಾಡುತ್ತದೆ. ಬೆಲ್ಲದಲ್ಲಿರುವ ಖನಿಜಾಂಶ ಹಾಗೂ ಉತ್ತಮ ಪ್ರೋಟೀನ್ ದೇಹಕ್ಕೆ ಅವಶ್ಯಕವಾಗಿರುವ ಪೋಷಕಾಂಶವನ್ನು ಒದಗಿಸುತ್ತದೆ. ಬೇವು ಬೆಲ್ಲದಿಂದ ಅನೇಕ ಅನಾರೋಗ್ಯ ಸಮಸ್ಯೆಗಳಿಂದ ಮುಕ್ತ ಹೊಂದಬಹುದು.
ಪ್ರತಿ ಹಬ್ಬಕ್ಕೂ ವೈಜ್ಞಾನಿಕ ಆಹಾರ ಪದ್ದತಿ, ಆಚರಣೆಗಳನ್ನು ಹೊಂದಿರುವ ಭಾರತೀಯ ಸಂಪ್ರದಾಯದಲ್ಲಿ ಅಂತರ್ಜಾಲ, ಸಾಮಾಜಿಕ ಜಾಲಗಳಿಲ್ಲದೇ ಆಚರಿಸಲಾಗುತ್ತಿತ್ತು. ಶರ ವೇಗದ ಸಂವಹನ ಸಂಪರ್ಕ ಸೌಲಭ್ಯ ಬಂದಿದೆ. ಆರೋಗ್ಯ, ಆಹಾರ ಕುರಿತು ಮಾಹಿತಿಗಳಿಗೆ ಅಂತರ್ಜಾಲ ತಾಣಗಳ ಲಭ್ಯತೆ ಇದೆ. ಇನ್ನೂ ಅನೇಕ ಸೌಕರ್ಯಗಳು ಆದ್ಯತೆಗಿಂತ ಹೆಚ್ಚಾಗಿ ದೊರೆಯುತ್ತಿವೆ. ಆದರೆ, ಸಾಮಾಜಿಕ ಸಂಬಂಧಗಳು ಸಡಿಲವಾಗಿದೆ. ಎಲ್ಲಾದನ್ನೂ ಪ್ರಶ್ನಿಸುವ ಹಕ್ಕಿದೆ ಎನ್ನುವ ಸ್ವೇಚ್ಛಾಚಾರ ಸರಿ ತಪ್ಪುಗಳ ಆಲೋಚನೆಗಳಿಲ್ಲದೇ ಕ್ರಾಂತಿಕಾರಿ ಮನೋಭಾವದ ಅಂಧಕಾರ ಬಹುತೇಕರಿಗೆ ಆವರಿಸಿದೆ.
ನಮ್ಮ ಪೂರ್ವಜರು ದಡ್ಡರಲ್ಲ. ಎಂಬುದಕ್ಕೆ ಹಬ್ಬ ಹರಿದಿನಗಳೇ ಸಾಕ್ಷಿ. ಗೆಟ್ ಟುಗೆದರ್ ಪಾರ್ಟಿಯ ಕಾನ್ಸೆಪ್ಟ್ ನಮ್ಮವರ ಹಬ್ಬಗಳೇ ಆಗಿದೆ. ಭಾರತೀಯರೆಲ್ಲರೂ ನಾಮಕರಣ, ತಿಥಿ, ಮದುವೆ, ಹಬ್ಬಗಳಲ್ಲಿ ನೀಡುವ ಅನ್ನದಾಣ, ಗೋದಾನ, ಫಲದಾನ, ವಸ್ತ್ರದಾನ ಹೀಗೆ ವಿಭಿನ್ನ ರೀತಿಯಲ್ಲಿ ಸಮಾರಂಭಗಳನ್ನೂ ಆಯೋಜಿಸಿ ದುಡಿಮೆ ಪಾಲಿನಲ್ಲಿ ಒಂದಿಷ್ಟನ್ನು ದಾನ ಮಾಡುವುದು ಭಾರತೀಯರಲ್ಲಿ ಪಾರಂಪರಿಕವಾಗಿ ಅಂಟಿಕೊಂಡಿದೆ.
ಊರುಗಳಲ್ಲಿ ಜಗ್ಗಳಿ ಹಿಂಡುಗಳನ್ನು ಅಂದರೆ ಧನ, ಎಮ್ಮೆ, ಕುರಿ, ಮೇಕೆಗಳನ್ನು ಕಾಯುವ ಗಾಹಿಗಳಿಗೆ ಯುಗಾದಿಯಿಂದ ಸಂಬಳ ನಿಗದಿಯಾಗುತ್ತಿತ್ತು. ಊರು ಕಾಯುವ ಪಾಳೆಗಾರರಿಗೆ, ಚೌರ ಮಾಡುವವರಿಗೆ, ದೇವಸ್ಥಾನದಲ್ಲಿ ಪೂಜೆ ಮಾಡುವವರಿಗೆ, ಕರಕುಶಲ ಕರ್ಮಿಗಳಿಗೆ ಊರಿನವರು ಆಯಾ ಕೊಡವುದೆಂದು ಬೆಳೆ ಬಂದಾಗ ಕೊಟ್ಟರು ವರ್ಷದಿಂದ ವರ್ಷಕ್ಕೆ ಬಾಕಿ ಉಳಿಸದೇ ಯುಗಾದಿಯಿಂದ ಯುಗಾದಿಗೆ ಕೊಡು-ಕೊಳ್ಳುವಿಕೆ ಮಾಡಲಾಗುತ್ತಿತ್ತು.
ಬಹುಷಃ ಈಗ ಚಾಲ್ತಿಯಲ್ಲಿರುವ ಸಿಟಿಸಿ, ಪ್ಯಾಕೇಜ್ ಸ್ಯಾಲರಿ ಈ ಪದಗಳೇ ಆಗ ವಿಭಿನ್ನ ರೀತಿಯಲ್ಲಿತ್ತು. ಅಂದರೆ ಯುವ ಪೀಳಿಗೆ ನಾವೇನೂ ಹೊಸ ತಲೆ ಮಾರಿನವರು ಅದ್ಭುತ ಜ್ಞಾನ ಸಂಪಾದಿಸಿ ತಂತ್ರಜ್ಞಾನ ಭಂಡಾರವನ್ನು ಅನ್ವೇಷಿಸಿ ಮನುಕುಲದ ಆದಿಯಿಂದ ಇಲ್ಲಿಯವರೆಗೆ ನಾವೇ ಅಗ್ರಕುಲದವರೆಂದು ಭ್ರಮೆಯಲ್ಲಿರುವುದು ಬೇಡ. ಪೂರ್ವಜನರಲ್ಲಿ ಇದ್ದ ಜ್ಞಾನ, ಜೀವನ ಶೈಲಿ, ಸಾಮಾಜಿಕ, ಧಾರ್ಮಿಕ ಸಹಿಷ್ಣುತೆ ಸದ್ಯದ ಅವಶ್ಯ ಮಾದರಿಯಾಗಿದೆ. ದಯಮಾಡಿ ಇತಿಹಾಸವನ್ನು ಮರೆಯುವುದು ಬೇಡ. ಇತಿಹಾಸ, ಭವಿಷ್ಯದ ಬದುಕಿನ ನಕ್ಷೆಯಾಗಿದೆ. ಇತಿಹಾಸವಿಲ್ಲದ ದೇಶಕ್ಕೆ ಭವಿಷ್ಯವಿಲ್ಲ ಎನ್ನುವ ಮಾತಿನಂತೆ, ಹಿರಿಯರ ಮಾರ್ಗದರ್ಶನವಿಲ್ಲದೇ ಹಳೆ ಬೇರುಗಳಿಲ್ಲದ ಹೊಸ ಚಿಗುರು ಬರಲು ಅಸಾಧ್ಯ.
ವೈರಲ್ ಆಗುತ್ತಿರುವ ಕೊರೋನಾ ಕೋವಿಡ್ -19 ಸಹ ಭೂತಕಾಲದ ನಡೆ-ನುಡಿಗಳ ಅಡಿಗಲ್ಲನ್ನು ತಾತ್ಸಾರ ಮಾಡಿದ್ದರ ಫಲವೇ ಆಗಿದೆ. ನಿದ್ದೆಗೊಮ್ಮೆ ನಿತ್ಯ ಮರಣ ಎಂದ್ದ ಸಲ ನಬೀನ ಜನರ ನಮಗೆ ಏಕೆ ಬಾರದೋ? ಎಲೆ ಸನತು ಮಾರದೇವ! ಸಲೆ ಸಾಹಸಿ ಚಿರಂಜೀವ ನಿನಗೆ ಲೀಲೆ ಸೇರದೋ? ಎಂಬುದನ್ನು ಇನ್ನಾದರೂ ಮನದಟ್ಟು ಮಾಡಿಕೊಂಡು ಸಂತೃಪ್ತಿಯಿಂದ ಸಹಬಾಳ್ವೆಯೊಂದಿಗೆ ಆರೋಗ್ಯಕರ ಜೀವನ ನಡೆಸೋಣ.
Get in Touch With Us info@kalpa.news Whatsapp: 9481252093
Discussion about this post