ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಭಾರತೀಯ ರೈಲ್ವೆ ತನ್ನ ವಂದೇ ಭಾರತ್ ಸ್ಲೀಪರ್ ರೈಲಿನ ವೇಗದ ಪರೀಕ್ಷೆಯಲ್ಲಿ ದಾಖಲೆ ಬರೆದಿದ್ದು, ಗಂಟೆಗೆ 180 ಕಿಮೀ ವೇಗದಲ್ಲಿ ಚಲಿಸುವ ಜೊತೆಯಲ್ಲಿ ವಾಟರ್ ಟೆಸ್ಟ್’ನಲ್ಲೂ ಸಹ ಯಶಸ್ವಿಯಾಗಿದೆ.
ಈ ಕುರಿತಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಂಚಿಕೊಂಡಿದ್ದು, ರಾಜಸ್ಥಾನದ ಕೋಟಾ ಹಾಗೂ ಮಧ್ಯಪ್ರದೇಶದ ಉಜ್ಜೈನ್ ಜಿಲ್ಲೆಯ ನಾಗ್ಡಾ ವಿಭಾಗದ ನಡುವೆ ಗಂಟೆಗೆ 180 ಕಿ.ಮೀ ವೇಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಯಶಸ್ವಿಯಾಗಿ ಚಲಿಸಿದೆ.
ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಇದು ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಸಾಧನೆಯಾಗಿದ್ದು, ವಾಟರ್ ಟೆಸ್ಟ್’ನಲ್ಲೂ ಸಹ ಯಶಸ್ವಿಯಾಗುವ ಮೂಲಕ ದಾಖಲೆ ಬರೆದಿದೆ.
ಈ ಮೂಲಕ ಭಾರತೀಯ ರೈಲ್ವೆ ತಂತ್ರಜ್ಞಾನದತ್ತ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದೆ.
ಏನಿದು ವಾಟರ್ ಟೆಸ್ಟ್?
ವೇಗವಾಗಿ ಚಲಿಸುವ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ನೀರು ತುಂಬಿಸಿದ ಮೂರು ಗಾಜಿನ ಲೋಟಗಳ ಮೇಲೆ ಒಂದು ನೀರು ತುಂಬಿದ ಲೋಟ ಇರಿಸಿ ಪರೀಕ್ಷಿಸಲಾಗುತ್ತದೆ.
ಈ ರೀತಿಯ ವಂದೇ ಭಾರತ್ ಸ್ಲೀಪರ್ ರೈಲು 180ಕ್ಕೂ ಅಧಿಕ ಕಿಮೀ ವೇಗದಲ್ಲಿ ಚಲಿಸುವಾಗ ಅಲ್ಲಿಡಲಾದ ನೀರು ಹಾಗೂ ಕೈನಲ್ಲಿ ಇರಿಸಿಕೊಳ್ಳಲಾಗಿದ್ದ ನೀರು ಸಹ ಅಲುಗಾಡದಂತೆ ರೈಲು ಚಲಿಸಿದೆ. ಈ ಮೂಲಕ ಭಾರತೀಯ ರೈಲ್ವೆ ಹೊಸ ದಾಖಲೆ ಬರೆದಿದೆ.
ರೈಲು ಗಂಟೆಗೆ 180 ಕಿಮೀ ವೇಗವನ್ನು ದಾಟುತ್ತಿದ್ದರೂ, ಒಳಗಿದ್ದ ನೀರಿನ ಗ್ಲಾಸ್’ನಲ್ಲಿ ಯಾವುದೇ ಕಂಪನವಿರಲಿಲ್ಲ. ಒಂದು ಹನಿ ನೀರೂ ಕೆಳಗೆ ಬೀಳದೆ, ರೈಲಿನ ಅಸಾಧಾರಣ ಸ್ಥಿರತೆ ಮತ್ತು ಸಮತೋಲನವನ್ನು ಈ ಪರೀಕ್ಷೆ ಸಾಬೀತುಪಡಿಸಿದೆ.
ವಂದೇ ಭಾರತ್ ಸ್ಲೀಪರ್ ರೈಲುಗಳು ಶೀಘ್ರದಲ್ಲೇ ಎಸಿ ದರ್ಜೆಯ ಪ್ರಯಾಣಿಕರಿಗಾಗಿ ಕಾರ್ಯಾಚರಣೆಗೆ ಸಿದ್ಧವಾಗಲಿವೆ. ಇದು ದೀರ್ಘ ಪ್ರಯಾಣದ ಸಮಯವನ್ನು ಇನ್ನಷ್ಟು ಅನುಕೂಲಕರವಾಗಿಸುತ್ತದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















