ಕೆಲವು ದಿನಗಳಿಂದ ಭಾರತದಲ್ಲಿ ಕೇಳು ಬರುತ್ತಿರುವ ಬಹುದೊಡ್ಡ ಶಬ್ಧ ಅಂದರೆ ಅದು ಭಾರತ ಆರ್ಥಿಕವಾಗಿ ಕುಸಿದಿದೆ ಭಾರತ ದಿವಾಳಿಯಾಗಿದೆ, ಆರ್’ಬಿಐ ಭಾರತ ಸರ್ಕಾರಕ್ಕೆ ಸಾಲ ತೀರಿಸಲು ಹಣ ಕೊಟ್ಟಿದೆ, ಉತ್ಪಾದನೆ ಕುಸಿದಿದೆ ಜೀವನ ಕಸಿದಿದೆ, ಜಿಡಿಪಿ ನೆಗೆದು ಬಿದ್ದಿದೆ, ಆರ್ಥಿಕ ಚೇತರಿಕೆಗೆ ಸರ್ಕಾರದ ಪ್ರಯತ್ನ ವಿಫಲವಾಗಿದೆ. ಇಷ್ಟೆಲ್ಲಾ ಸಮಸ್ಯೆಗಳ ಪಿತಾಮಹ ಜಿಎಸ್’ಟಿ ತೆರಿಗೆ ಮತ್ತು ನೋಟಿನ ಅಮಾನ್ಯೀಕರಣ! ಅಬ್ಬಾ ಒಂದಾ ಎರಡಾ ಸುದ್ದಿ ಎಲ್ಲಾ ಇಂತಹ ಸುದ್ದಿಗಳನ್ನೇ ಕೊಟ್ಟಿದ್ದು ಕನ್ನಡ ಮಾಧ್ಯಮಗಳಲ್ಲಿ ಉದ್ಯಮಿ ಸಿದ್ಧಾರ್ಥರ ಸಾವಿನ ನಂತರ ಈ ವಿಷಯವು ಮತ್ತಷ್ಟು ಪುಷ್ಠೀಕರಣಗೊಂಡಿತು.
ಮಾಧ್ಯಮಗಳು ಹೇಳುವಂತೆ ಇಂದು ಕಾರ್ಖಾನೆಗಳು ನಷ್ಟದಲ್ಲಿರುವುದು ಸತ್ಯ, ಅದನ್ನು ತಳ್ಳಿಹಾಕೋಹಾಗಿಲ್ಲ. ಹಾಗೆಂದ ಮಾತ್ರಕ್ಕೆ ಎಲ್ಲಾ ಕಾರ್ಖಾನೆಗಳು ಮುಚ್ಚುವ ಪರಿಸ್ಥಿತಿಯಲ್ಲಿಲ್ಲ. ದೇಶ ಬದಲಾಗುತ್ತಿದೆ, ಕಾಲ ಬದಲಾಗುತ್ತಿದೆ, ಜನರ ಬೇಡಿಕೆಗಳು ಆಸೆಗಳು ನಿರೀಕ್ಷೆಗಳು ಬದಲಾಗುತ್ತಿವೆ. ಹಾಗಿರಬೇಕಾದರೆ ಉದ್ಯಮ ಬದಲಾಗದಿದ್ದರೆ ಹೇಗೆ? ಉದ್ಯಮ ಬದಲಾಗಬೇಕಾದರೆ ಅದರೊಳಗಿನ ತಂತ್ರಜ್ಞಾನ ಮತ್ತು ತಂತ್ರಾಂಶಗಳು, ಉಪಕರಣಗಳು ಬದಲಾಗಬೇಕು. ಅದಕ್ಕೆಲ್ಲಾ ಮತ್ತೊಮ್ಮೆ ದೊಡ್ಡ ಮೊತ್ತದ ಬಂಡವಾಳ ಬೇಕು. ಆ ಬಂಡವಾಳ ಹಾಕಲು ಸಾಮರ್ಥ್ಯ ಬೇಕು. ಅದು ಅಷ್ಟು ಸುಲಭದ ವಿಷಯವಲ್ಲ. ಈಗ ಕೆಲವು ದೊಡ್ಡ ದೊಡ್ಡ ಉದ್ಯಮಗಳ ಏಳು ಬೀಳು ಚರ್ಚಿಸೋಣ.
ಬಿಎಸ್’ಎನ್’ಎಲ್ ಪರಿಸ್ಥಿತಿಯೇನು?
ಬಿಎಸ್’ಎನ್’ಎಲ್ ಅನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಒಂದು ಕಾಲದಲ್ಲಿ ಲಂಚ ನೀಡಿ ಒಂದು ಸಾವಿರ ರೂಪಾಯಿ ಕೊಟ್ಟು ಅದರ ಸಿಮ್ ಕಾರ್ಡನ್ನು ಪಡೆಯುತ್ತಿದ್ದರು. ಆದರೆ ಈಗ ಬಿಎಸ್’ಎನ್’ಎಲ್ ಅವರೇ ಒಂದು ಸಾವಿರ ಕೊಟ್ಟು ಸಿಮ್ ಕೊಟ್ಟರು ಜನ ಅದನ್ನು ತೆಗೆದು ಕೊಳ್ಳುವುದು ಅನುಮಾನವೇ. ಬಿಎಸ್’ಎನ್’ಎಲ್ ಇಂದೂ ಸಹ ಮಾರುಕಟ್ಟೆಯಲ್ಲಿ ಜಿಯೋ ಮತ್ತು ಏರ್ ಟೆಲ್ ಸಂಸ್ಥೆಗಳ ಜೊತೆ ಸ್ಪರ್ಧಿಸಲು ಆಗುತ್ತಿಲ್ಲ. ಹಾಗೇ ನೋಡಿದರೆ ಈ ಮೊಬೈಲ್ ಯುಗದಲ್ಲಿ ಬಿಎಸ್’ಎನ್’ಎಲ್ ಹಿರಿಯ. ಬಿಎಸ್’ಎನ್’ಎಲ್‌ನ ಮೇಲಿನ ಅಭಿಮಾನದಿಂದ ನಾವು ಅದೆಷ್ಟು ದಿನ ನೆಟ್’ವರ್ಕ್ ಸಿಗದಿದ್ದರೂ ಹೆಚ್ಚು ಹಣದಿಂದ ರಿಚಾರ್ಜ್ ಮಾಡಿಸಿ ಉಪಯೋಗಿಸಬೇಕು?
ನೂರು ರೂಪಾಯಿ ರೀಚಾರ್ಜ್ ಮಾಡಿಸಿದರೆ ಇಂಟರ್’ನೆಟ್ ಮತ್ತು ಕರೆ ಎರಡನ್ನೂ ಅನಿಯಮಿತವಾಗಿ ಉಪಯೋಗಿಸಲು ಇತರೆ ಕಂಪನಿಗಳು ನೀಡಬೇಕಾದರೆ ಬೇರೆ ಬೇರೆ ಹಣಗಳಿಂದ ವ್ಯಾಲಿಡಿಗೆ, ಮಾತನಾಡಲು ಮತ್ತು ಇಂಟರ್’ನೆಟ್’ಗೆ ಎಂದು ಜನ ರಿಚಾರ್ಜ್ ಮಾಡಿಸುತ್ತಾರೆ. ಇನ್ನು 1947ರ ಕಾನೂನುಗಳನ್ನೇ ಇಟ್ಟುಕೊಂಡು ಬಿಎಸ್’ಎನ್’ಎಲ್ ಉದ್ಯಮ ನಡೆಸಿದರೆ ನಡೆಯುತ್ತದೆಯೆ? ಸಹಜವಾಗಿ ಬಿಎಸ್’ಎನ್’ಎಲ್ ಸಾರ್ವಜನಿಕರಿಂದ ದೂರವಾಯಿತು, ಬೇರೆ ಸಂಸ್ಥೆಗಳು ಬೆಳೆದವು. ಒಮ್ಮೆ ಜಿಯೋ ಬಂದ ಮೇಲೆ ಉಚಿತ ಕರೆ ಮತ್ತು ಅಂತರ್ಜಾಲ ಕೊಟ್ಟ ಮೇಲಂತೂ ಉಳಿದ ಎಲ್ಲಾ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ. ಸಂಸ್ಥೆಗಳು ಆರ್ಥಿಕ ಸಂಕಷ್ಟದಲ್ಲಿವೇ ಅಂತ ನಾವುಗಳು ಈ ಸಂಸ್ಥೆಗಳೊಂದಿಗೆ ಖಡ್ಢಾಯವಾಗಿ ವ್ಯವಹರಿಸಬೇಕೆ? ನಮಗೆ ಯಾವುದು ಉಪಯೋಗಕರವಾಗಿದೆಯೋ ಅದನ್ನು ಆಯ್ಕೆ ಮಾಡಿಕೊಳ್ಳುವುದು ಗ್ರಾಹಕನ ಹಕ್ಕು, ಗ್ರಾಹಕನ ಬೇಡಿಕೆಗೆ ತಕ್ಕಂತೆ ಉದ್ಯಮ ಬದಲಾಗಬೇಕಿರುವುದು ಅನಿವಾರ್ಯ.
ಖಾಸಗಿ ಮುಂದೆ ಒದ್ದಾಡಿದೆ
ಮೊಬೈಲ್’ನ ದಿಗ್ಗಜ ಎಂದೇ ಬೀಗಿದ ನೋಕಿಯ ಕಂಪನಿ ಸ್ಯಾಮ್’ಸಾಂಗ್ ಕಂಪನಿ ಟಚ್’ಸ್ಕ್ರೀನ್ ಮೊಬೈಲ್ ಬಿಟ್ಟಾಗ ಮಾರುಕಟ್ಟೆಯಲ್ಲಿ ಒದ್ದಾಡಿತು, ಕ್ಯಪಾಸಿಟಿವ್ ಟಚ್’ಸ್ಕ್ರೀನ್ ಬದಲು ಇತರೆ ಕಂಪನಿಗಳು ರೆಸಿಸ್ಟಿವ್ ಟಚ್’ಸ್ಕ್ರೀನ್ ಬಿಟ್ಟಾಗ ಸ್ಯಾಮ್’ಸಂಗ್ ಸಹ ನಲುಗಿತು. ಆದರೆ ಸ್ಯಾಮ್’ಸಂಗ್ ಕಂಪನಿ ತನ್ನ ಉತ್ಪಾದನೆಯನ್ನು ಪರಿಷ್ಕರಿಸಿ, ಉನ್ನತೀಕರಿಸಿ ಇತರೊರಿಂದಿಗೆ ಮಾರುಕಟ್ಟೆಯಲ್ಲಿ ಸ್ಪರ್ಧಿಸಿತು ಹಾಗೂ ಇನ್ನು ಉಳಿದಿದೆ. ಆದರೆ ನೋಕಿಯ ಮುಳುಗಿತು. ಅದನ್ನು ತಂತ್ರಜ್ಞಾನ ದಿಗ್ಗಜ ಮೈಕ್ರೋಸಾಫ್ಟ್ ಸಂಸ್ಥೆ ಖರೀದಿಸಿ ಮರು ಬಿಡುಗಡೆ ಮಾಡಿದರೂ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ಮಾರುಕಟ್ಟೆಯಲ್ಲಿ ಯಾವಾಗ ಬೇಡಿಕೆ ಇಲ್ಲವೋ ಆಗ ಸಂಸ್ಥೆಯು ನಷ್ಟ ಅನುಭವಿಸುವುದು ಸ್ವಾಭಾವಿಕ ಹಾಗೂ ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಉದ್ಯೋಗಿಗಳನ್ನು ತೆಗೆಯವುದು ಮತ್ತು ಇನ್ನಿತರ ಹೂಡಿಕೆಗಳನ್ನು ತಡೆಯುವುದು ಸಹಜ ಪ್ರಕ್ರಿಯೆ. ಇದು ಸಂಸ್ಥೆಯ ವೈಫಲ್ಯವೋ? ಸರ್ಕಾರದ ವೈಫಲ್ಯವೋ? ಹೀಗೆ ಮೇಲಿನವು ನಮ್ಮ ಕಣ್ಣ ಮುಂದಿನ ಉದಾಹರಣೆ ಅಷ್ಟೆ.
ಪಾರ್ಲೆ ಜಿ ಕಂಪೆನಿಯ ನಷ್ಟವೇಕೆ?
ಇದೇ ಇಂದಿನ ಸಣ್ಣ ಉದ್ಯಮ, ಪೀಣ್ಯ ಉದ್ಯಮ ವಲಯದ ಕಾರ್ಖಾನೆ ಸಣ್ಣ ಕೈಗಾರಿಕೋದ್ಯಮದ ಪರಿಸ್ಥಿತಿ ಹಾಗೂ ಮಾದ್ಯಮ ತೋರಿಸುವ ಪಾರ್ಲೆ ಜಿ ಬಿಸ್ಕೆಟ್‌ನ ಕಥೆ.
ಪಾರ್ಲೆ ಜಿ ಬಿಸ್ಕಟ್ ರುಚಿಯಾಗಿದೆ ಮತ್ತು ಕಮ್ಮಿ ಬೆಲೆ, ಆದರೆ ಇಂದಿನ ಗುಡ್ ಡೇ, ಓರಿಯೋ, ಬಾರ್ನ್‌ಬೌನ್ ಬಿಸ್ಕಟ್ ಗ್ರಾಹಕರಿಗೆ ರುಚಿಸಿವೆ. ಅದನ್ನು ಖರೀದಿಸುತ್ತಾರೆ, ಅದು ಗ್ರಾಹಕರ ಒಲವು, ಪಾರ್ಲೆ ಜಿಯೂ ಬೇರೆ ಬಿಸ್ಕಟ್ ತರಹದ ಪ್ರಾಡಕ್ಟ್ ಹೊರತಂದರೆ ಜನ ಅದನ್ನು ತೆಗೆದು ಕೊಳ್ಳುತ್ತಾರೆ. ಅದು ಬಿಟ್ಟು ಭಾರತ ಸರ್ಕಾರದ ನಿರ್ಧಾರಗಳು ಪಾರ್ಲೆ ಜಿ ಸಂಸ್ಥೆ ಮುಚ್ಚಲು ಕಾರಣ, ಆರ್ಥಿಕ ನೀತಿಯೇ ಕಾರ್ಖಾನೆಗಳನ್ನು ಮುಚ್ಚಲು ಕಾರಣ ಎಂದು ಬಿಂಬಿಸುವುದು ಮೂರ್ಖತನ. ಹೀಗೆ ಸರ್ಕಾರದ ಮೇಲೆ ಮಿತ್ಯಾರೋಪ ಮಾಡಿ ರಾಜಕಾರಣ ಮಾಡುವುದೇ ಈಗ ದೊಡ್ಡ ಕಸುಬಾಗಿದೆ.
ಜಿಎಸ್’ಟಿಯಿಂದ ನಿಜಕ್ಕೂ ತೊಂದರೆಯಾಗುತ್ತಿದೆಯೇ?
ಇನ್ನು ಜಿಎಸ್’ಟಿ ಮತ್ತೊಂದು ಹೊಡೆತ ಎಂದು ಬಿಂಬಿಸಲಾಗಿದೆ. ಹಾಗಾದರೆ ಉದ್ಯಮಿಗಳನ್ನು ಹಾಗೂ ವ್ಯಾಪಾರಿಗಳನ್ನು ತೆರಿಗೆ ಕಟ್ಟಿ ಎನ್ನುವುದೇ ತಪ್ಪೇ? ಜಿಎಸ್’ಟಿ ಬರುವ ಮೊದಲು ಹತ್ತು ಹಲವು ಬಗೆಯ ತೆರಿಗೆ ಇದ್ದವು ಅದನ್ನು ಕಟ್ಟುತ್ತಿರಲಿಲ್ಲವೇ? ಇದ್ದ ಅನೇಕ ಕಳ್ಳದಾರಿಗಳನ್ನು ಮುಚ್ಚಿ ತೆರಿಗೆ ವಸೂಲಿ ಮಾಡುವುದೇ ಅಪರಾಧವೇ? ಜಿಎಸ್’ಟಿಯಿಂದ ಸಮಸ್ಯೆಯಾಗಿದೆಯೇ ಹೌದು ಆಗಿದೆ. ಜಿಎಸ್’ಟಿಯ ಶೇಕಡಾವಾರು ತೆರಿಗೆಯಲ್ಲಿ ಬದಲಾವಣೆಬೇಕಿದೆ.
ಗ್ರಾಹಕನು ಇಪ್ಪತ್ತು ಸಾವಿರ ರೂಪಾಯಿನ ಒಂದು ಟಿವಿ ಖರೀದಿಸಿದರೆ ಶೇ.ಇಪ್ಪತ್ತನಾಲ್ಕು ತೆರಿಗೆ ಪಾವತಿಸಬೇಕು. ಅಂದರೆ ಐದು ಸಾವಿರ ರೂಪಾಯಿ ಹೆಚ್ಚು, ಇದು ಗ್ರಾಹಕನಿಗೆ ಹೊರೆಯಾಗುತ್ತಿದೆ. ಆದ್ದರಿಂದ ಆತ ಖರೀದಿಸದೆಯೂ ಸಹ ಇರಬಹುದು ಅಥವಾ ಕಡಿಮೆ ಬೆಲೆಯ ಟಿವಿಯನ್ನು ಖರೀದಿಸಬಹುದು. ಈ ರೀತಿಯ ಪ್ರಕರಣಗಳಿಂದ ಮಲ್ಟಿಬ್ರಾಂಡ್’ನ ಅತಿ ಹೆಚ್ಚು ಮುಖಬೆಲೆಯ ಟಿವಿಗಳು ಇಂದು ಮಾರಾಟವಾಗದೆ ಉಳಿದಿವೆ. ಅಂಗಡಿಯವರು ಹಾಕಿದ್ದ ಬಂಡವಾಳ ಹಿಂತೆಗೆಯಲು ಅರ್ಧ ಜಿಎಸ್’ಟಿಗೆ ಬಿಲ್ ಕೊಟ್ಟು ವ್ಯಾಪಾರ ಮಾಡುತ್ತಿರುವುದು ಸಹ ಇದೆ. ಯಾಕೆಂದರೆ ಅಂಗಡಿಯ ಬಾಡಿಗೆ ಹುಡುಗರ ಸಂಬಳ ಎಲ್ಲವನ್ನು ಮಾಲಿಕ ಭರಿಸಬೇಕಲ್ಲ ಅದಕ್ಕೆ. ಕಡಿಮೆ ಲಾಭ ಬಂದರೂ ಪರವಾಗಿಲ್ಲ, ವ್ಯಾಪಾರವಾಗಲಿ ಎಂದು ಅರ್ಧ ಬೆಲೆಯ ಜಿಎಸ್’ಟಿ ಎಂದು ಅಕ್ರಮವಾಗಿಯಾದರೂ ಮಾರಾಟ ಮಾಡುತ್ತಾನೆ. ಹಾಗಾದರೆ ಈ ಹಿಂದೆ ಪರಿಸ್ಥಿತಿ ಹೇಗಿತ್ತು?
ಹಲವಾರು ಅಂಗಡಿಯವರು ಬಿಲ್ ಹಾಕುತ್ತಿರಲಿಲ್ಲ, ಬಿಲ್ ಇಲ್ಲದಿದ್ದರೆ ತೆರಿಗೆ ಇರುತ್ತಿರಲಿಲ್ಲ, ವ್ಯಾಪಾರ ಒಂದಷ್ಟು ರಾಮನ ಲೆಕ್ಕ, ಮತ್ತಷ್ಟು ಕೃಷ್ಣನ ಲೆಕ್ಕದಲ್ಲಿ ನಡೆಯುತ್ತಿತ್ತು. ಆದರೆ ಈಗ ಎಲ್ಲವೂ ಬಿಲ್ಲಬಲ್ ರಶೀದಿ ಕೊಡುವುದು ಕಡ್ಡಾಯವಾಗಿದೆ. ಎಲ್ಲಾ ವ್ಯವಹಾರವು ರಾಮನ ಲೆಕ್ಕ. ಲಾಭಗಳಿಕೆ ಸಹಜವಾಗಿ ಇಳಿದಿದೆ. ಯಾರೂ ಎಲ್ಲ ವ್ಯವಹಾರವನ್ನು ಪಾರದರ್ಶಕವಾಗಿ ಬಿಳಿಹಣದಿಂದ ಮಾಡುತ್ತಿದ್ದರೋ ಅವರಿಗೆ ಇಂದು ಒಂದಿಂಚೂ ತೊಂದರೆಯಾಗಿಲ್ಲ. ಯಾರೂ ಬಿಳಿ ಮತ್ತು ಕಪ್ಪು ಒಟ್ಟಿಗೆ ಮಾಡುತ್ತಿದ್ದರೋ ಅವರಿಗೆ ಬೆಟ್ಟದಷ್ಟು ತೊಂದರೆಯಾಗುತ್ತಿದೆ.
ಇಷ್ಟೊಂದು ಆರ್ಥಿಕ ಹಿಂಜರಿತಕ್ಕೆ ಕಾರಣ ಕಳೆದ ಸರ್ಕಾರಗಳ ಅವಧಿಯಲ್ಲಿ ಬ್ಯಾಂಕ್’ಗಳು ಹಲವು ಉದ್ಯಮಿಗಳಿಗೆ ಮನಸೋ ಇಚ್ಛೆ ಸಾಲ ನೀಡಿ ಅದನ್ನು ಮರುಪಾವತಿಸುವಲ್ಲಿ ಅವರು ವಿಫಲವಾಗಿ ಬ್ಯಾಂಕ್’ಗಳನ್ನು ದಿವಾಳಿ ಹಂತಕ್ಕೆ ತಂದಿದ್ದು. ಇದನ್ನು ಅರಿತೇ ಭಾರತ ಸರ್ಕಾರವು ಬ್ಯಾಂಕ್’ಗಳ ವಿಲೀನ ಮಾಡಿ ಅವುಗಳ ಆರ್ಥಿಕ ಸಾಮರ್ಥ್ಯವನ್ನು ಬಲಪಡಿಸಲು ಪ್ರಯತ್ನಿಸಿದ್ದು, ಅದು ಭಾಗಶಃ ಯಶಸ್ವಿಯಾಗಿದೆ. ರಿಯಲ್ ಎಸ್ಟೇಟ್ ಉದ್ಯಮ ಭಾರತದ ಆರ್ಥಿಕತೆಯ ಮೇಲೆ ಬಹುಮಟ್ಟದ ಪರಿಣಾಮ ಬೀರಲಿದೆ.
ಯುಪಿಎ ಎರಡರ ಅವಧಿಯಲ್ಲಿನ ಅನೇಕ ಇನ್ಫ್ರಾಸ್ಟ್ರಕ್ಚರ್ ಮತ್ತು ಕೈಗಾರಿಕಾ ಪ್ರಾಜೆಕ್ಟ್’ಗಳು ಪಾಲಿಸಿ ಪ್ಯಾರಾಲಿಸಿಸ್’ನಿಂದ ನಿಂತು ಹೋಗಿದ್ದು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಬಹುಹೊಡೆತ ಉಂಟಾಯಿತು. ಅದು ಭೂಮಿ ವಶೀಕರಣದಿಂದ ಹಿಡಿದು ಕಟ್ಟಡ ನಿರ್ಮಾಣದವರಗಿನ ಎಲ್ಲಾ ಹಂತದಲ್ಲೂ ವಿಳಂಬವಾಗಿದ್ದು, ಮೂಲಸೌಕರ್ಯದ ಅಭಿವೃದ್ಧಿ ಹಾಗೂ ಹೂಡಿಕೆಯಲ್ಲಿ ಹಿಂದುಳಿಯುವಂತಾಯಿತು. ಯಾವಾಗ ರಿಯಲ್ ಎಸ್ಟೇಟ್ ಬಿದ್ದಿತೋ ಅದರ ಉಪ ಕಸುಬುಗಳು ಬೀಳುವುದು ಸಹಜ. ಇದನ್ನು ಪರಿಹರಿಸಲೇ ಎನ್’ಡಿಎ ಮೊದಲ ಅವಧಿಯಲ್ಲಿ ಭಾರತ ಸರ್ಕಾರವು ಭೂಸುಧಾರಣೆಯ ಕಾನೂನನ್ನು ಪರಿಶೀಲಿಸಿ ಜಾರಿಗೆ ತಂದಿತು. ರೇರಾ ಇನ್ನಿತರ ಕಾನೂನನ್ನು ತಂದಿತು. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸುಧಾರಣೆ ತರಲು ಪ್ರಯತ್ನಿಸಿತು. ಈ ರೇರಾ ಖಾಯಿದೆಯು ಗ್ರಾಹಕನಿಗೆ ವರವಾಗಿದೆ ಆದರೆ ಕಪ್ಪು ಬಿಳುಪಿನ ವ್ಯವಹಾರದಲ್ಲಿದ್ದ ಉದ್ಯಮಿಗಳಿಗೆ ಉದ್ಯಮ ನಡೆಸಲು ಹಿನ್ನಡೆಯಾಗಿದೆ. ಭೂ ದಂಧೆ ತಡೆಯುವುದು ತಪ್ಪೇ ಹಾಗಾದರೆ? ಪಾರದರ್ಶಕತೆಯನ್ನು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ನಿರೀಕ್ಷಿಸುವುದು ಅಪರಾಧವೇ? ಪಾರದರ್ಶಕ ವ್ಯವಹಾರ ಮಾಡಲು ಆಗದವರು ಮೋದಿ ಸರ್ಕಾರದ ನೀತಿಗಳನ್ನು ಉಲ್ಲೇಖಿಸಿ ಉದ್ಯಮ ಬಿದ್ದು ಹೋಗಿದೆ, ಆರ್ಥಿಕ ಹೊಡೆತವೆಂದೆಲ್ಲಾ ಬಿಂಬಿಸಿ ಕಾಲಹರಣ ಮಾಡುತ್ತಿದ್ದಾರೆ. ಆದರೆ ಬ್ಯಾಂಕ್ ಲೋನ್ ತೆಗೆದು ಮನೆ ಮತ್ತು ಅಂಗಡಿ ಕಟ್ಟುವವರು ಯಾವುದೇ ಕೊರತೆ ಇಲ್ಲದೆ ಕಟ್ಟುತ್ತಿದ್ದಾರೆ. ಕಪ್ಪುಹಣದಲ್ಲಿ ವ್ಯವಹಾರ ನಡೆಸುವವರು ಮಾತ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಬಹು ಲಕ್ಷಗಳಲ್ಲಿ ಹಾಗೂ ಕೋಟಿಗಳಲ್ಲಿ ವ್ಯವಹಾರ ಮಾಡುವವರನ್ನು ತೆರಿಗೆ ಕಟ್ಟಿ ಅನ್ನುವುದು ತಪ್ಪೇ? ಕೆಲಸದಲ್ಲಿರುವ ಸಾಮಾನ್ಯ ನೌಕರನು ಪ್ರತಿ ವರ್ಷವು ಆದಾಯ ತೆರಿಗೆ ಪಾವತಿಸಬೇಕಾದರೆ ಲಕ್ಷಾಂತರ ರೂಪಾಯಿಗಳ ವ್ಯವಹಾರ ಮಾಡುವವನು ಯಾಕೆ ತೆರಿಗೆ ಪಾವತಿಸಬಾರದು? ತೆರಿಗೆ ಕಟ್ಟಿ ಎಂದರೆ ಸರ್ಕಾರದ ಆರ್ಥಿಕ ನೀತಿ ಸರಿ ಇಲ್ಲ ಎಂದು ಹೇಳುತ್ತಾ ಇವರುಗಳೇ ಭಾರತದ ಆರ್ಥಿಕ ತಜ್ಞರಾಗಿಬಿಡುತ್ತಾರೆ. ಕಳೆದ ಹತ್ತು ವರ್ಷಗಳಲ್ಲಿ ರಿಯಲ್ ಎಸ್ಟೇಟ್ ಶೇಖಡಾ ನೂರಕ್ಕೂ ಹೆಚ್ಚು ದುಬಾರಿಯಾಯಿತು. ಆದರೆ ಮಾನವನ ಸಂಪಾದನೆ ಶೇಖಡಾ ಇಪ್ಪತ್ತುರಷ್ಟು ಮಾತ್ರ ಏರಿತು. ಸಂಪಾದನೆ ಮತ್ತು ಭೂಮಿಯ ಬೆಲೆಯ ಏರಿಕೆಗಳು ಸಮತೋಲನದಲ್ಲಿಲ್ಲ ಆದ್ದರಿಂದಲೇ ಇಂದಿಗೂ ಒಂದು ನಿವೇಶನ ಮತ್ತು ಮನೆ ಕೊಳ್ಳುವುದು ಅಥವಾ ಕಟ್ಟುವುದು ಅತ್ಯಂತ ದುಬಾರಿಯಾಗಿರುವುದು.
ಆಟೋಮೊಬೈಲ್ ಕ್ಷೇತ್ರದ ಕತೆಯೇನು?
ಇನ್ನು ಆಟೋಮೊಬೈಲ್ ಕ್ಷೇತ್ರವನ್ನು ನೋಡಿದರೆ ಅದು ಈಗ ಸ್ವಲ್ಪ ವ್ಯಾಪಾರ ಇಳಿದಿರುವುದು ಸತ್ಯ, ಕಾರಣ ಹಣದುಬ್ಬರ. ಇಂದು ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಮನುಷ್ಯ ಒಂದು ಸ್ಕೂಟರ್ ತೆಗೆದು ಕೊಳ್ಳಬೇಕಾದರೆ ಇವತ್ತು ಕನಿಷ್ಠ ಎಂಬತ್ತು ಸಾವಿರ ರೂಪಾಯಿ ಪಾವತಿಸಬೇಕು, ಒಂದು ಕಾರು ತೆಗೆದುಕೊಳ್ಳಬೇಕೆಂದರೆ ಕನಿಷ್ಠ ಐದರಿಂದ ಆರು ಲಕ್ಷಬೇಕು. ಅದೇ ವಾಹನಗಳ ಬೆಲೆ ಈಗ ಐದು ವರ್ಷದ ಹಿಂದೆ ಅದರ ಅರ್ಧಬೆಲೆ ಇತ್ತು, ಇಷ್ಟು ಹಣವನ್ನು ಮಧ್ಯಮವರ್ಗದ ಜನ ಹೊಂದಿಸಲು ಬಹಳ ಕಷ್ಟಪಡಬೇಕು. ಅವುಗಳ ಮೇಲಿನ ತೆರಿಗೆ ಬೆಲೆಯು ಜಾಸ್ತಿ ಇದೆ ಅದನ್ನು ಸರಿದೂಗಿಸಲೇಬೇಕು.
ಇತ್ತೀಚೆಗೆ ಭಾರತ ಸರ್ಕಾರವು ಬಿಎಸ್4ಇಂಜಿನ್ ಖಡ್ಡಾಯ ಮಾಡಿದ್ದರ ಪರಿಣಾಮ ತಯಾರಕರಿಲ್ಲಿದ್ದ ಹಳೇ ದಾಸ್ತಾನು ಖಾಲಿ ಮಾಡುವುದು ಕಷ್ಟ, ಹಾಗಂತ ಇಂಜಿನ್ ಬದಲಾವಣೆ ರಾತ್ರೋ ರಾತ್ರಿಯ ಬದಲಾವಣೆಯಲ್ಲ. ಉತ್ಪಾದಕರಿಗೆ ಇದರ ಬಗ್ಗೆ ತಿಳಿಸಲಾಗಿತ್ತು. ಇನ್ಸುರೆನ್ಸ್ ಕ್ಷೇತ್ರದಲ್ಲಿ ಸರ್ಕಾರ ಮಾಡಿದ ಬದಲಾವಣೆ ಹಾಗೂ ಇನ್ನಿತರ ಬದಲಾವಣೆಗಳು ಉದ್ಯಮದಲ್ಲಿ ಏರು ಪೇರು ಮಾಡಿದೆ. ಆದರೆ ಈ ಎಲ್ಲಾ ಬದಲಾವಣೆಗಳು ಅತ್ಯವಶ್ಯಕವಾಗಿದ್ದವು. ಉತ್ಪಾದನೆ ಮತ್ತು ಮಾರಾಟ ಸಮತೋಲನದಲ್ಲಿರಬೇಕು. ಉತ್ಪಾದನೆ ಅಧಿಕವಾಯಿತು, ಕಂಪನಿಗಳ ಅನವಶ್ಯಕ ಸ್ಪರ್ಧೆಗಳು, ಕೊಡುಗೆಗಳು ಉತ್ಪಾದಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಲಕ್ಷಾಂತರ ವಾಹನಗಳು ಬಿಕಾರಿಯಾಗದೆ ನಿಂತಿವೆ. ಅನವಶ್ಯಕ ಉತ್ಪಾದನೆ ಮಾಡಿ ನಿಲ್ಲಿಸಿರುವುದಕ್ಕೆ ಸರ್ಕಾರ ಏನು ಮಾಡಲು ಸಾಧ್ಯ? ಲಾಭಾಂಶವನ್ನು ಕಡಿಮೆ ಮಾಡಿ ವಾಹನಗಳ ಹಣವನ್ನು ಕಡಿಮೆ ಮಾಡಿದರೆ ಈಗಲೂ ವ್ಯಾಪರ ಹೆಚ್ಚುತ್ತದೆ. ದುಬಾರಿ ವಾಹನಗಳು ಶ್ರೀಮಂತಿಕೆಯ ಪ್ರತೀಕವೆಂದು ಬಿಂಬಿಸಿ ವಾಹನಗಳ ಮೌಲ್ಯವನ್ನು ಹೆಚ್ಚಿಸಿ ಇಂದು ಸಂಕಷ್ಟಕ್ಕೆ ಸಿಲುಕಿವೆ ತಯಾರಕರು.
ವಾಹನ ಕ್ಷೇತ್ರದ ಕುಸಿತಕ್ಕೆ ಮತ್ತೊಂದು ಕಾರಣ ವಾಹನ ಖರೀದಿಸಲು ಸಾಲಗಳನ್ನು ನೀಡುತ್ತಿದ್ದರಲ್ಲಿ ಹೆಚ್ಚು ಬ್ಯಾಂಕೇತರ ಆರ್ಥಿಕ ಸಂಸ್ಥೆಗಳು, ಅದರಲ್ಲಿ ಹೆಚ್ಚಿನ ಆರ್ಥಿಕ ಸಂಸ್ಥೆಗಳು ಕಾನೂನು ಬಾಹಿರವಾಗಿ ವ್ಯವಹಾರ ನಡೆಸುತ್ತಿದ್ದವು, ಅವುಗಳನ್ನು ಕೇಂದ್ರ ಸರ್ಕಾರವು ನಿಯಂತ್ರಿಸಿತು. ಇದು ವಾಹನಗಳ ಮೇಲಿನ ಹೂಡಿಕೆಯನ್ನು ಕುಗ್ಗಿಸಿತು. ಐಟಿ-ಬಿಟಿ ಕ್ಷೇತ್ರವೆಂದರೆ ಮೊದಲು ಅತಿ ಹೆಚ್ಚು ಸಂಬಳ ಬರುವ ಕ್ಷೇತ್ರವೆಂದು ಪರಿಗಣಿಸಲಾಗಿತ್ತು. ಐಟಿ-ಬಿಟಿಯವರೇ ಅತಿ ಹೆಚ್ಚು ವಾಹನ, ರಿಯಲ್ ಎಸ್ಟೇಟ್ ಉದ್ಯಮಗಳಿಗೆ ಜೀವಾಳವಾಗಿದ್ದರು. ಆದರೆ ಇಂದು ಐಟಿ ಉದ್ಯಮದಲ್ಲಿ ಮೊದಲಿನಷ್ಟು ಸಂಬಳ, ಭತ್ಯೆ ಇಲ್ಲದಾಗಿದೆ, ಸ್ವತಂತ್ರ ಜ್ಞಾನಗಳಿಂದ ಚಾಲನೆಯಾಗುವ ಹಲವಾರು ಅಪ್ಲಿಕೇಷನ್‌ಗಳು ಕೆಲಸ ಮಾಡತೊಡಗಿವೆ, ಉದ್ಯಮದಲ್ಲಿ ಬೇಡಿಕೆ ಇರುವ ಹೊಚ್ಚ ಹೊಸ ತಂತ್ರಜ್ಞಾನದ ಭಾಷೆಗಳು ಸಂಪ್ರದಾಯಿಕ ತಂತ್ರಜ್ಞಾನವನ್ನು ನುಂಗಿ ಹಾಕಿವೆ. ಯಾರು ಅವರ ಜ್ಞಾನವನ್ನು ಉನ್ನತಿಕರಣಿಗೊಳಿಸಿಕೊಳ್ಳುವುದಿಲ್ಲವೋ ಅವರಿಗೆ ಐಟಿ ಕ್ಷೇತ್ರದಲ್ಲೂ ಉಳಿಗಾಲವಿಲ್ಲದಾಗಿದೆ. ನಾವು ಕಾಲಕ್ಕೆ ತಕ್ಕಂತೆ ಉನ್ನತೀಕರಣಗೊಳ್ಳಬೇಕು ಇಲ್ಲದಿದ್ದರೆ ಉಳಿಗಾಲವಿಲ್ಲ.
ಡಿಜಿಟಲ್ ಉದ್ಯಮ
ಡಿಜಿಟಲ್ ಮಾರ್ಕೆಟ್ ಮತ್ತು ಟ್ರೇಡಿಷನಲ್ ಉದ್ಯಮದ ನಡುವಿನ ಸ್ಪರ್ಧೆ ಮತ್ತೊಂದು ಮಜಲಿನ ವ್ಯವಹಾರಿಕ ಸಂಕಷ್ಟ ಎದುರಿಸಬೇಕಿದೆ. ಡಿಜಿಟಲ್ ಇಂಡಿಯಾಕ್ಕೆ ಪೂರಕವಾಗಿ ಅಂತರ್ಜಾಲ ಮುಖೇನ ನಡೆಯುವ ವ್ಯವಹಾರಗಳು ಬಹುಸುಲಭವಾಗಿದೆ. ಒಂದು ಮೊಬೈಲ್, ಊಟ, ಮನೆಯ ಪದಾರ್ಥಗಳು, ನಿತ್ಯೋಪಯೋಗಿ ವಸ್ತುಗಳು ಎಲ್ಲವೂ ಈಗ ಅಂತರ್ಜಾಲದ ಮಳಿಗೆಗಳಲ್ಲಿ ಸುಲಭವಾಗಿ ಸಿಗುತ್ತಿದೆ ಹಾಗೂ ಅಂತರ್ಜಾಲದ ಮಳಿಗೆಗಳು ಈಗ ಹಳ್ಳಿಗಳನ್ನು ಸಹ ತಲುಪಿವೆ.
ಹಳ್ಳಿಯಲ್ಲಿ ಕೂತು ಫ್ಲಿಪ್ಕಾರ್ಟ್‌ನಲ್ಲಿ ಬುಕ್ ಮಾಡಿದರೆ ನಮಗೆ ವಸ್ತುವು ತಲುಪುತ್ತದೆ. ಒಂದು ವಸ್ತುವನ್ನು ಕೊಳ್ಳಲು ಸಮೀಪದ ನಗರ ಪ್ರದೇಶಕ್ಕೆ ಖರ್ಚು ಮಾಡಿಕೊಂಡು ಹೋಗುವ ಅವಶ್ಯಕತೆ ಇಲ್ಲ. ಮಳಿಗೆ ಬಾಡಿಗೆ ಕಟ್ಟಿ, ಹುಡುಗರಿಗೆ ಸಂಬಳಕೊಟ್ಟು ಅಂಗಡಿ ನಡೆಸುವ ಮಾಲಿಕ ಇದರಿಂದ ತೊಂದರೆ ಅನುಭವಿಸುವುದು ಸಹಜ. ಆದರೆ ಇಲ್ಲಿ ಗ್ರಾಹಕನಿಗೆ ತೊಂದರೆ ಇಲ್ಲ. ಹತ್ತು ಹಲವು ಆಯ್ಕೆಗಳು ಗ್ರಾಹಕನ ಮುಂದಿದೆ. ಆದರೆ ವ್ಯಾಪಾರಿಗೆ ಮಾರ್ಗೋಪಾಯವು ನೇರ ವ್ಯಾಪಾರವಷ್ಟೆ. ಮನೆ ಬಾಗಿಲಿಗೆ ಊಟ ಬರುವಾಗ ಅರ್ಧ ಘಂಟೆಗೂ ಹೆಚ್ಚು ಪ್ರಯಾಣ ಮಾಡಿ ಹೊಟೆಲ್’ಗೆ ಹೋಗಿ ಅಲ್ಲಿ ಘಂಟೆಗಟ್ಟಲೆ ಕಾದು, ಊಟ ಮಾಡಿ ಮತ್ತೆ ಅರ್ಧ ಘಂಟೆ ಪ್ರಯಾಣ ಮಾಡಿ ಮನೆ ಸೇರುವ ಬದಲು, ಮನೆಯಲ್ಲೇ ಕೂತು ನಮಗೆ ಬೇಕಾದ ಆಹಾರವನ್ನು ತರಿಸಿಕೊಂಡು ತಿನ್ನುವುದು ಈಗ ನಗರ ಪ್ರದೇಶದ ಹಲವು ಜನರ ಆಯ್ಕೆ.
ಆದರೆ ಇದರಿಂದ ಹೊಟೇಲ್’ಗಳು ತಮ್ಮ ದಿನನಿತ್ಯದ ಗ್ರಾಹಕರನ್ನು ಕಳೆದು ಕೊಂಡಿವೆ, ವ್ಯಾಪಾರವು ಇಳಿದಿದೆ. ಇದೇ ಪರಿಸ್ಥಿತಿ ಚಿತ್ರಮಂದಿರದ್ದು ಟಿಕೆಟ್ ಬೆಲೆ ದುಬಾರಿ ಸಿನಿಮಾ ಸುಮಾರು ಇದು ಇಂದಿನ ಪರಿಸ್ಥಿತಿ ಅಮೇಜಾನ್ ಪ್ರೆûಮ್, ನೆಟ್ ಫ್ಲಿಕ್ಸ್’ಗಳು ನೂರು ರೂ.ಗೆ ಮನೆಮಂದಿಯೆಲ್ಲಾ ಕೂತು ನಮ್ಮ ಟಿವಿ ಮೊಬೈಲ್’ಗಳಲ್ಲಿ ನೋಡಲು ಅವಕಾಶ ಮಾಡಿಕೊಟ್ಟಿವೆ. ಹಾಗಂತ ಡಿಜಿಟಲ್ ವಾಹಿನಿಗಳು ಚಿತ್ರಮಂದಿರವನ್ನು ಮುಳುಗಿಸಿವೆ ಅಂದಲ್ಲ. ಚಲನಚಿತ್ರಗಳಲ್ಲಿ ಹೊಸತಿಲ್ಲ, ಸ್ವಾರಸ್ಯವಿಲ್ಲ, ನಟನೆ ಇಲ್ಲ ಮತ್ತು ಅಭಿರುಚಿ ಇಲ್ಲ. ಸರ್ಕಾರದ ಸಬ್ಸಿಡಿಗೋ ಸೆಟಲೈಟ್ ರೈಟ್ಸ್’ಗೋ ಮಾಡಿರುವ ಸಿನಿಮಾದಂತಿರುತ್ತವೆ. ಆದರೆ ಉತ್ತಮ ಅಭಿರುಚಿ ಇರುವ ಸಿನಿಮಾಗಳು ಯಾವುದೇ ಮಾರ್ಕೆಟಿಂಗ್ ಇಲ್ಲದಿದ್ದರು ಓಡುತ್ತವೆ.
ಇದೇ ಪರಿಸ್ಥಿತಿ ಮುದ್ರಣ ಮಾದ್ಯಮ ಹಾಗೂ ದೃಶ್ಯ ಮಾದ್ಯಮದ್ದು. ಸರ್ಕಾರದ ಜಾಹೀರಾತುಗಳೇ ಅನೇಕ ಮಾದ್ಯಮಗಳಿಗೆ ಜೀವಾಳ. ಆದರೆ ಅವು ಈಗ ಮುದ್ರಣ, ವಿತರಣೆ, ಕಾಗದದ ಖರೀದಿ ಎಲ್ಲದರ ಲೆಕ್ಕ ನೀಡಬೇಕು. ಇಂತಿಷ್ಟು ಮುದ್ರಣವಿಲ್ಲವೆಂದರೆ ವಾರ್ತಾ ಇಲಾಖೆಯಿಂದ ಜಾಹೀರಾತು ದೊರೆಯುವುದಿಲ್ಲ, ಇಷ್ಟು ದಿನ ಹೇಗೋ ಲೆಕ್ಕ ತೋರಿಸಿ ಜಾಹೀರಾತು ಪಡೆಯುತ್ತಿದ್ದರು. ಆದರೆ ಈಗ ಒಳಹರಿವು ಮತ್ತು ಹೊರಹರಿವು ಎರಡು ತಾಳೆ ಆಗಲೇಬೇಕು. ಇದು ಅನೇಕ ಸಣ್ಣಮಟ್ಟದ ಪತ್ರಿಕೋದ್ಯಮಿಗಳನ್ನು ಮುಳುಗಡೆಯ ಹಂತಕ್ಕೆ ತಂದು ನಿಲ್ಲಿಸಿವೆ.
ಆರ್ಥಿಕ ಬಿಕ್ಕಟ್ಟು ಸೈಕ್ಲಿಕಲ್ ಅಥವಾ ಸ್ಟ್ರಕ್ಚರಲ್ ಎಂದು ತಿಳಿಯುವುದು ಅವಶ್ಯ, ಈಗ ಬಂದಿರುವುದು ಸೈಕ್ಲಿಕಲ್ ಆರ್ಥಿಕ ಬಿಕ್ಕಟ್ಟು ಅಂದರೆ ಒಂದು ಇಕನಾಮಿಕಲ್ ಸೈಕಲ್’ನಲ್ಲಿ ಬರುವ ಸಹಜ ಕುಸಿತ, ಸ್ಟ್ರಕ್ಚರಲ್ ಕುಸಿತವಾದರೆ ಅದನ್ನು ಸರಿಪಡಿಸಲು ಹಲವು ವರ್ಷಗಳುಬೇಕು. ಅದು ಎಲ್ಲಾ ಉದ್ಯಮವನ್ನು ಕುಸಿತ ಮಾಡುತ್ತದೆ. ಆದರೆ ಈಗ ಕುಸಿತ ಕಂಡಿರುವುದು ಐದಾರು ಕ್ಷೇತ್ರಗಳು ಮಾತ್ರ ಅದು ಆಟೋಮೊಬೈಲ್, ರಿಯಲ್ ಎಸ್ಟೇಟ್, ಟ್ರಾನ್ಸಪೋರ್ಟೇಶನ್ ಹಾಗೂ ಕೆಲ ಉತ್ಪನ್ನದ ಕಾರ್ಖಾನೆಗಳು. ಆದರೆ ಚಿನ್ನ, ಗೃಹಬಳಕೆ ವಸ್ತುಗಳು, ಮೊಬೈಲ್, ಫ್ರಿಡ್ಜ್, ಟಿವಿ ಮತ್ತು ಸ್ಟೀಲ್ ಉತ್ಪನ್ನಗಳು ಹಾಗೂ ಈ ರೀತಿಯ ವಸ್ತುಗಳ ವ್ಯಾಪಾರ ಅತಿ ಹೆಚ್ಚು ಪ್ರಮಾಣದಲ್ಲಿ ಆಗಿವೆ. ಸಾರ್ವಜನಿಕರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದಾರೆ.
ಈಗ ಆಗುತ್ತಿರುವ ಆರ್ಥಿಕ ಕುಸಿತ ಸೈಕ್ಲಿಕಲ್ ಇದೇ ಪರಿಸ್ಥಿತಿ 2008ನೇ ಇಸವಿಯಲ್ಲೂ ಇತ್ತು ಆಗ ಅದನ್ನು ರಿಸೆಷನ್ ಪಿರಿಯಡ್ ಎಂದು ಕರೆಯಲಾಯಿತು.
ರಿಸೆಷನ್ ಕೇವಲ ಒಂದು ದೇಶದಲ್ಲಿ ಮಾತ್ರ ಉದ್ಭವಿಸುವುದಿಲ್ಲ. ಹಲವಾರು ದೇಶಗಳ ವ್ಯವಹಾರ, ವ್ಯಾಪಾರಗಳು ಬೇರೆ ಬೇರೆ ದೇಶಗಳಲ್ಲಿ ನಡೆಯುತ್ತದೆ. ಅದರಲ್ಲಿ ಕೆಲವು ದೇಶಗಳ ವ್ಯವಹಾರಗಳು ಕುಸಿತಗೊಂಡರೆ ಇನ್ನಿತರ ದೇಶಗಳಲ್ಲಿ ರಿಸೆಷನ್ ಉದ್ಯೋಗ ಕಡಿತವಾಗುತ್ತವೆ. ಭಾರತ ಸರ್ಕಾರದ ಮೇಕ ಇನ್ ಇಂಡಿಯಾ ಯೋಜನೆ. ಈಗಿನ ಚೀನಾ ಮತ್ತು ಅಮೆರಿಕಾ ದೇಶಗಳ ವ್ಯಾಪಾರ ಯುದ್ಧದ ಲಾಭ ಪಡೆದು ಚೀನಾದಿಂದ ಹೊರಬರುತ್ತಿರುವ ಕಂಪನಿಗಳಿಗೆ ವಿದೇಶ ಬಂಡವಾಳ ಹೂಡಿಕೆಯಲ್ಲಿ ಹೆಚ್ಚು ಅನುವು ಮಾಡಿಕೊಟ್ಟು ಭಾರತದಲ್ಲಿ ಕಾರ್ಖಾನೆ ಸ್ಥಾಪಿಸುವಂತೆ ಮಾಡಿ ಉದ್ಯೋಗವನ್ನು ಭಾರತದಲ್ಲಿ ಹೆಚ್ಚಿಸಬೇಕು.
ಕೇಂದ್ರ ಸರ್ಕಾರ ಏನು ಮಾಡಬೇಕು?
ಕೇಂದ್ರ ಸರ್ಕಾರವು ಜಿಎಸ್’ಟಿಯಲ್ಲಿನ ಗೊಂದಲಗಳನ್ನು ಸರಿಪಡಿಸಿ, ತೆರಿಗೆಯನ್ನು ಶೇಖಡಾವಾರು ಇಳಿಸಬೇಕು. ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡಪ್ ಇಂಡಿಯಾ, ಆ ಇಂಡಿಯಾ, ಈ ಇಂಡಿಯಾ ಇತ್ಯಾದಿ ಇಂಡಿಯಾಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಆರಂಭ ಶೂರತ್ವದಂತೆ ಬಂದ ಯೋಜನೆಗಳು ನಂತರ ನೇಪಥ್ಯ ಸೇರಿದಂತಿವೆ. ಅಧಿಕಾರಿಗಳಾಗಲಿ, ಸಂಸದರಾಗಲಿ ಅಥವಾ ರಾಜ್ಯ ಸರ್ಕಾರಗಳಾಗಲಿ ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಯಶಸ್ವಿಗೊಳಿಸಲು ಪ್ರಯತ್ನಿಸಲಿಲ್ಲ ಎಂಬುದು ಸತ್ಯ. ಆದರೆ ಕೇವಲ ಕೆಲವು ಪ್ರಭಾವಿ ಕ್ಷೇತ್ರದಲ್ಲಿನ ಆರ್ಥಿಕ ಕುಸಿತವನ್ನು ಹಿಡಿದು ಎಲ್ಲಾ ಕ್ಷೇತ್ರಗಳು ಮುಳುಗಿವೆ ಎಂದು ಬಿಂಬಿಸಿ ಭಾರತವು ಆರ್ಥಿಕವಾಗಿ ಮುಳುಗಿದೆ ಎಂದು ತೋರಿಸುವುದು ಮತ್ತು ಕೇಂದ್ರ ಸರ್ಕಾರದ ಆರ್ಥಿಕ ನಿಯಮಗಳೇ ಸರಿ ಇಲ್ಲಾ ಎಂದು ಹೇಳುವುದು ತಪ್ಪು.
ಆರ್ಥಿಕತೆ ತನ್ನ ಹಳಿಯನ್ನು ಬದಲಿಸಿದೆ, ಅದು ಸರಿ ಹೋಗುತ್ತದೆ. ಅದಕ್ಕೆ ಸ್ವಲ್ಪ ಸಮಯ ಬೇಕಷ್ಟೆ. ಕೇಂದ್ರ ಸರ್ಕಾರವು ಅದನ್ನು ಅರಿತು ಅದನ್ನು ಸರಿಪಡಿಸುತ್ತದೆ ಎಂಬ ಭರವಸೆ ಇದೆ. ಸ್ಥಾವರಕ್ಕಳಿವುಂಟು ಜಂಗಮಕ್ಕೆ ಅಳಿವಿಲ್ಲ ಎನ್ನುವ ಬಸವಣ್ಣನವರ ಮಾತು ಸಾರ್ವಕಾಲಿಕ ಸತ್ಯ. ಯಾವುದು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ನಡೆಯುತ್ತದೆಯೋ ಅದು ಉಳಿಯುತ್ತದೆ, ಯಾವುದು ಅದೇ ವ್ಯವಸ್ಥೆಯಲ್ಲಿ ಇರುತ್ತದೆಯೋ ಅದು ಅಳಿಯುತ್ತದೆ ಇದು ಉದ್ಯಮಕ್ಕೂ ಅನ್ವಯಿಸುತ್ತದೆ.
Discussion about this post