ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನಮ್ಮ ಮನಸ್ಸಿನಲ್ಲಿ ಎಲ್ಲವೂ ಇದೆ. ರೊಯ್ಯನೆ ಆಕಾಶದೆತ್ತರ ಜಿಗಿವ ಭಕ್ತಿ. ಸರ್ರನೆ ಪಾತಾಳಕ್ಕಿಳಿವ ಶಕ್ತಿ. ಹೀಗೆ ಎರಡೂ ಇದೆ. ಇದಕ್ಕೆ ಪುಟಕೊಡುವ ಅನ್ಯ ವಿಭಾಗಗಳೂ ಬಹಳ ಇವೆ.
ನಮಗೆ ಗೊತ್ತಿದ್ದರೂ ನಾವು ನಮ್ಮನ್ನೇ ಮರೆತಾಗ ಏನಾಗುತ್ತದೋ ಗೊತ್ತಿಲ್ಲ. ನಾವು ಎಷ್ಟು ಸುಖವಾಗಿದ್ದೇವೆ? ಎಂಬ ಮಾನದಂಡ ಎಲ್ಲಿದೆ? ತಕ್ಷಣ ನಾವು ನಮ್ಮ ಅಕ್ಕಪಕ್ಕದವರೊಡನೆ ಹೋಲಿಸಿಕೊಳ್ಳುವುದು ಬಹಳ ಸುಲಭದ ಕೆಲಸ. ಹಾಗೆ ಮಾಡಿದಾಗಲೂ ನಾವು ನಮ್ಮ ಸುಖದ ಸ್ಥಿತಿಯ ಬಗ್ಗೆ ಸಮಾಧಾನ ತಾಳುತ್ತೇವೆಯೆ? ಅದಕ್ಕೆ ಉತ್ತರ, ಇಲ್ಲ!
ಆದರೆ ನಾವು ಉತ್ತರ ಕಂಡುಕೊಳ್ಳುವ ಪ್ರಯತ್ನದಲ್ಲಿ ದಿಢೀರನೆ ದುಡುಕಿ ಬಿಡುತ್ತೇವೆ. ಅಯ್ಯೋ ಅವರಿಗಿರುವ ಸವಲತ್ತು, ಸಂಪತ್ತು ನನಗಿಲ್ಲವಲ್ಲ!ಅವನಿಗ್ಯಾಕೆ ಇಷ್ಟು ಹಣ? ಅವನಿಗ್ಯಾಕೆ ಅಷ್ಟು ಸೌಕರ್ಯ? ಹೇಗಾದರೂ ಅವನಿಗೆ ನಮಗಿಂತ ಕಡಿಮೆಯಿರುವಂತೆ ಆಗಲಿ ಎಂದು ಕರುಬುತ್ತೇವೆ. ಆ ಕರುಬುವಿಕೆಯಲ್ಲೇ ನಮ್ಮ ಉಳಿದ ಅಮೂಲ್ಯ ಸಮಯವನ್ನು ವ್ಯಯಿಸುತ್ತಾ ಹೋಗುತ್ತೇವೆ.
ನಮಗಿರುವ ಸದ್ಯದ ಗಳಿಕೆ, ಉಳಿಕೆಯನ್ನು ಸಾರ್ಥಕವಾಗಿಸಿಕೊಳ್ಳುವುದನ್ನೇ ಮರೆತು ಬಿಡುತ್ತೇವೆ. ಅಂದರೆ ನಮ್ಮ ಏಳಿಗೆಯ ಬಗ್ಗೆ ಮರೆತು ಮಿಕ್ಕವರ ಬಗ್ಗೆ ಅತೃಪ್ತಿಕಾರುವ ಕೆಟ್ಟ ಗುಣ ನಮ್ಮದಾಗಿರುತ್ತದೆ. ಇದನ್ನೇ ಬಲ್ಲವರು ಅಸೂಯೆ ಎನ್ನುತ್ತಾರೆ.
ಬದುಕು ನಮಗೆ ಏನೆಲ್ಲ ಕೊಟ್ಟಿದೆ! ಅದರ ಪ್ರತಿಯೊಂದು ಕ್ಷಣಗಳನ್ನು ಸಂತೋಷದಿಂದ ಕಳೆಯಬೇಕು. ನಕ್ಕು ನಲಿದರೇ ಅದೇ ಸ್ವರ್ಗ. ಇದ್ದದ್ದನ್ನು ಬಿಟ್ಟು ಬೇರೆ ನನಗೆ ಜಾಸ್ತಿಯಿಲ್ಲ! ಎನ್ನುತ್ತಾ ಗೋಳಿಡುವುದೇ ಮಾಡಿದರೆ ಏನೂ ಲಾಭವಿಲ್ಲ. ಅದಕ್ಕೇ ಕವಿ ಹೇಳಿದ್ದು ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ತುಡಿಯುವುದೇ ಜೀವನ!
ಹಣ್ಣು ಕೊಡುವ ಮರ, ಹಾಲು ಕರೆಯುವ ಗೋಮಾತೆ, ಹರಿಯುವ ನದಿ. ಎಲ್ಲವೂ ಪರೋಪಕಾರಾರ್ಥಕ್ಕೇ. ಹಾಗೆಯೇ ನಮ್ಮ ಶರೀರವೂ ಪರೋಪಕಾರಾರ್ಥಕ್ಕೆ ಮೀಸಲು ಎಂಬ ಹಿರಿಯರ ಮಾತೂ ಇದೆ. ನಾವು ಅದೆಲ್ಲ ಮರೆತು ಇನ್ನೊಬ್ಬರ ಏಳಿಗೆಯನ್ನು ಸಹಿಸದೇ ಒಳಗೊಳಗೇ ಸಾವಿಗೆ ಹತ್ತಿರವಾಗುತ್ತಿರುತ್ತೇವೆ.
ಹೋಗಲಿ.. ಸಹಜೀವಿಗಳನ್ನು ಒಟ್ಟಿಗೇ ಬಾಳಲು ಬಿಡುತ್ತೇವೆಯೆ?
ಅದೂ ಇಲ್ಲ. ನಾನೊಬ್ಬನೇ ಬದುಕ ಬೇಕು. ನನಗೇ ಎಲ್ಲ ಬೇಕು.ನನ್ನ ಹೆಂಡತಿಗೆ ಬೇಕು. ನನ್ನ ಮಕ್ಕಳಿಗೆ ಬೇಕು. ಮೊಮ್ಮಕ್ಕಳಿಗೆ ಬೇಕು. ಆಮೇಲೆ ನನ್ನ ಇಡೀ ವಂಶಕ್ಕೇ ಬೇಕು! ಹೀಗೆ ಪರಮ ಸ್ವಾರ್ಥದಲ್ಲಿ ಮುಳುಗಿ ಹೋಗುತ್ತೇವೆ. ಈ ಬಗೆಯ ಸ್ವಾರ್ಥಪರ ಆಲೋಚನೆಗಳಿಂದಲೇ ನಮ್ಮ ವ್ಯಕ್ತಿತ್ವ ಪಥನವಾಗುತ್ತಿದೆ.
ಸಾಮಾಜಿಕ ಕ್ಷೇತ್ರಗಳಲ್ಲಿ ವಿವಿಧ ವೃತ್ತಿಗಳಲ್ಲಿರುವ ನಮ್ಮವರೇ ಸೇವೆ, ಉಪಕಾರ ಮನೋಭಾವಗಳಿಂದ ತಮ್ಮನ್ನು ತಾವು ತೆತ್ತುಕೊಂಡಿದ್ದಾರೆ. ಆದರೆ ಈ ಮೌಲ್ಯಗಳು ಎಷ್ಟು ಮಂದಿಯಲ್ಲಿವೆ? ನಾವು ವಿವೇಚಿಸಬೇಕಿದೆ. ಒಂದೆಡೆ ದೇಶಪ್ರೇಮ ಮತ್ತೊಂದೆಡೆ ದೇಶಹಿತ ಮರೆತ ಸ್ವಾರ್ಥ! ಈ ಎರಡೂ ದೃಶ್ಯಗಳು ನಮ್ಮ ಕಣ್ಣೆದುರಿವೆ. ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬ ದಾರ್ಶನಿಕರ ಮಾತಿಗೆ ವಿರುದ್ಧವಾಗೇ ಇದೆ ನಮ್ಮ ಜೀವನದ ಗತಿ. ಒಬ್ಬರ ಏಳಿಗೆ ಕಂಡರೆ ನಮಗೆ ಸಹನೆಯಿಲ್ಲ. ನೆರೆಯವರ ಸುಖ ಸಂಪತ್ತು ಕಂಡು ನಮ್ಮ ನಿತ್ಯದ ನಿದ್ದೆ ಕಳೆದುಕೊಳ್ಳುತ್ತಿದ್ದೇವೆ. ಎಂತಹ ವಿಪರ್ಯಾಸ!
ಸಂತೃಪ್ತಿ, ಭೌತಿಕ ರೂಪದಲ್ಲೇ ಆದರೆ ಅದು ಕ್ಷಣಿಕ ಎಂಬ ಹಿರಿಯರ ಮಾತಿದೆ. ಯಾವುದು ಬಳಸಿದರೆ ಕಡಿಮೆಯಾಗುತ್ತಾ ಹೋಗುವುದೋ ಅದು ತೃಪ್ತಿ ಕೊಡುವುದಲ್ಲ. ವಾಂಛೆಯ ಈಡೇರಿಕೆ ಅಷ್ಟೆ! ಮತ್ತೂ ಬೇಕೆನಿಸುತ್ತದೆ. ಆದರೆ ಆ ಮೂಲ ಸೋತಿರುತ್ತದೆ. ಅದೇ ಕ್ಷಣಿಕತೆ. ಆಸೆ, ಮತ್ತಷ್ಟು ಬೇಕೆಂಬಾಸೆ. ಮತ್ತಷ್ಟು ಸಿಕ್ಕರೂ ಇನ್ನಷ್ಟರಾಸೆ.
ಬಾಲದಂತೆ ಬೆಳೆಯುತ್ತಾ ಹೋಗುತ್ತದೆ. ಆದ್ದರಿಂದ ಕ್ಷಣಿಕ ಸುಖಕ್ಕೆ ಕೊನೆಯೇ ಇಲ್ಲ. ಆದರೆ ನಾವೆಲ್ಲ ಆಸೆ ಪಡುವುದು ಅದಕ್ಕೇ. ಒಬ್ಬ ಕಡುಬಡವ, ಸೋಗೆಯ ಗುಡಿಸಲಲ್ಲಿ ಸಂತೋಷದಿಂದ ನಿದ್ದೆ ಮಾಡುತ್ತಾನೆ. ಆದರೆ ಒಂದು ಕ್ಷಣ, ಆತನಿಗೆ ಅರಮನೆಯ ಸುಪ್ಪತ್ತಿಗೆಯಲ್ಲಿ ಮಲಗಲು ಹೇಳಿ ಆಗ ಅವನಿಗೆ ಸುಖ ನಿದ್ರೆಯೇ ಬರುವುದಿಲ್ಲ. ನಮ್ಮ ಹಾಗೆಯೇ ಮನುಷ್ಯ. ಆದರೆ ಆತನ ಸುಖದ ಅನುಭವವೇ ಭಿನ್ನ. ನಮ್ಮದು ಅರಮನೆಯ ಸುಖವೇ ಪರಮ ಸುಖ ಎನ್ನುವ ಮನೋಧರ್ಮ.
ಅದೇ ಆತ ಅರಮನೆಯವರನ್ನು ಕಂಡು ಅವರ ಸುಖ ನನಗಿಲ್ಲವಲ್ಲ! ಎಂದು ಅಸೂಯೆ ಪಟ್ಟರೆ, ಸೋಗೆಯ ನಿದ್ರೆ ಮರೀಚಿಕೆಯಾಗಿಬಿಡುತ್ತದೆ.
ಆದ್ದರಿಂದಲೇ ತೃಪ್ತಿ ಎನ್ನುವುದು ಮನಸ್ಸಿನ ಸ್ಥಿತಿ. ಅದು ಕಾಸಿಗೆ ಪೇಟೆಯಲ್ಲಿ ದೊರಕುವುದಲ್ಲ ಆಥವಾ ಯಾರಿಂದಲೂ ಕಡ ಸಿಗುವುದಲ್ಲ.
ಜನಪದರು ಹಾಡಿದ್ದಾರೆ, ಸುಖ ಎಲ್ಲಾರಿಗೆಲೈತವ್ವ.. ದುಃಖ ತುಂಬೈತೆ ಕೊನಿತನಕ. ಸಹ ಜೀವಿಗಳೊಟ್ಟಿಗೆ ನಗುತ್ತಾ ಬಾಳಿದರೆ ಅದೇ ಸುಖ. ಪಕ್ಕದ ಮನೆಯವನು ಉಪವಾಸವಿದ್ದಲ್ಲಿ ತಾನು ಸುಖದಿಂದಿರುವುದು ತರವಲ್ಲ ಎನ್ನುತ್ತಾರೆ ದಾರ್ಶನಿಕರು. ಹಂಚಿಕೊಂಡು ತಿನ್ನು. ಹೊಂದಿಕೊಂಡು ಬಾಳು.
ಇದು ನಮ್ಮ ಹಿರಿಯರ ಮಾರ್ಗದರ್ಶಿ ನುಡಿ.
ಚಿತ್ರಗೀತೆಯ ನುಡಿ ಹೀಗಿದೆ
ಜನರೆಲ್ಲ ಒಂದೇ ಶಿವಾ..
ಹಳ್ಳಿಯಲ್ಲಿದ್ದರೇನು, ದಿಳ್ಳಿಯಲ್ಲಿದ್ದರೇನು. ಹಸಿವಿಗೆ ಅನ್ನವಿಲ್ಲದೇ ಚಿನ್ನವನು ತಿನ್ನಲು ಸಾಧ್ಯವೇನು?
ನೋಡಲಿಕ್ಕೆ ಸಾಮಾನ್ಯ ಸಾಲುಗಳು. ಆದರೆ ಹಿರಿದಾದ ಅರ್ಥ ಗೌರವ ಹೊಂದಿವೆ. ನಮ್ಮ ಪಾಡು ನಮಗೆ. ನಮ್ಮ ಸಂಪತ್ತು ನಮಗೆ. ಬೇರೆಯವರು ಹೇಗಾದರೂ ಇರಲಿ. ನಮಗೇನು? ಎಂಬ ಸ್ವಾರ್ಥಮನಸ್ಸುಗಳಿಗೆ ಇನ್ನಾದರೂ ಅನ್ಯರಿಗೆ ಉಪಕರಿಸುವ ಬುದ್ಧಿ ಹೊಂದಿರಿ ಎಂಬ ಸಂದೇಶವಿದೆ.
ಒಬ್ಬ ಮನುಷ್ಯ ಸುಖದಿಂದ ಬಾಳ ಬೇಕು ಎಂದು ನಿರ್ಧರಿಸಿದ. ಅದರಂತೆ ಕೋಟಿ ರೂಪಾಯಿ ಇದ್ದಲ್ಲಿ ಸುಖ ಸೂರೆ ಮಾಡಬಹುದು ಅಂತ ಹಣ ಶೇಖರಣೆ ಮಾಡುತ್ತಾ ಹೋದ. ಹೊಟ್ಟ ಬಟ್ಟೆ ಕಟ್ಟಿದ. ಎಲ್ಲವನ್ನೂ ಕೊನೆಗೆ ತಿಂದರಾಯಿತು, ಉಟ್ಟರಾಯಿತು ಅಂತ ಏನನ್ನೂ ಲೆಕ್ಕಿಸಲಿಲ್ಲ.
ಧನ ಸಂಪಾದನೆ ಮಾಡಿದ.. ಮಾಡಿದ. ಕೊನೆಗೆ ಕೋಟಿ ರೂಪಾಯಿ ಸಂಗ್ರಹಿಸಿದ. ಇನ್ನೇನು ಸುಖ ನನ್ನ ಪಾಲಿಗೆ ಎಂದುಕೊಂಡ. ಆಗ ಅವನ ಮೇಲೆ ವಯಸ್ಸು ಧಾಳಿ ಮಾಡಿತ್ತು. ಕಣ್ಣುಗಳು ಪೊರೆ ಬಂದಿದ್ದವು. ಕೈಕಾಲು ಶಕ್ತಿಗುಂದಿದ್ದವು. ಹಲ್ಲುಗಳು ಬೀಳಲಾರಂಭಿಸಿದ್ದವು. ಕೂತರೆ ಏಳಲಾಗದು. ನಿಂತರೆ ನಡೆಯಲಾಗದು. ಆಗ ಅವನಿಗೆ ಅರಿವಾಯಿತು. ಸುಖದ ಮೂಲ ಹಣವಲ್ಲ, ಮನಸ್ಸು. ಅದೊಂದು ಆಯಾ ಕಾಲ, ಆಯಾ ಹೊತ್ತಿಗೆ ದಕ್ಕ ಬೇಕಾದ ಅನುಭವ. ಬರೀ.. ಅನುಭವ!
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post