ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಜಗತ್ತನ್ನು ಆವರಿಸಿಕೊಂಡ ಜಾಡ್ಯದಿಂದಾಗಿ ಮಾರ್ಚ್ ಮೂರನೆಯ ವಾರದಿಂದ ದೇಶವೇ ಸ್ತಬ್ಧಗೊಂಡಿದೆ. ದುಡಿಯುವ ಕೈಗಳು ಕೆಲಸವಿಲ್ಲದೆ ಜೋತು ಬಿದ್ದಿವೆ. ಮನೆಮಂದಿಯೆಲ್ಲ ಅಕ್ಷರಶಃ ಗೃಹ ಬಂಧನದಲ್ಲಿದ್ದಾರೆ. ದಿನಗೂಲಿ ಕಾರ್ಮಿಕರು ದುಡಿಯುವ ನಿರ್ಮಾಣ ಕ್ಷೇತ್ರ ನೆಲ ಕಚ್ಚಿದೆ. ಕಡಿಮೆ ಮಾಸಿಕ ಸಂಬಳಕ್ಕೆ ದುಡಿಯುತ್ತಿದ್ದವರ ಸ್ಥಿತಿ ಶೋಚನೀಯವಾಗಿದೆ. ಆಹಾರ ಪೂರೈಕೆ/ಆದರಾಥಿತ್ಯದ ಕ್ಷೇತ್ರಗಳಾದ ಹೋಟೆಲ್, ವಸತಿಗೃಹಗಳ ಪರಿಸ್ಥಿತಿ ದುಸ್ಥಿತಿಗೆ ತಲುಪಿವೆ. ಸರಕಾರಿ ಉದ್ಯೋಗದಲ್ಲಿದ್ದವರನ್ನು ಹೊರತು ಪಡಿಸಿದರೆ ಪ್ರಜೆಗಳು ಪ್ರಜ್ಞೆ ತಪ್ಪುವ ಹಂತಕ್ಕೆ ಬಂದಿದ್ದಾರೆ. ಮೂರೊತ್ತಿನ ತುತ್ತು ಈಗ ಒಪ್ಪೊತ್ತಿಗೆ ಬಂದಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ನಿತ್ಯ ಏಕಾದಶಿ ಆಚರಣೆ ಮಾಡಬೇಕಾದೀತು. ಮದುವೆಗೆ/ಮರಣಕ್ಕೆ ನಿಗದಿ ಪಡಿಸಿದಷ್ಟೇ ಜನರಿರಬೇಕು. ಆದರೂ ಕೊರೋನದ ಯಾವುದೇ ಭಯವಿಲ್ಲದೆ ಆರ್ಥಿಕ ಸಂಸ್ಥೆಗಳಾದ ಬ್ಯಾಂಕುಗಳು, ಕಂದಾಯ ಪಾವತಿ/ತೆರಿಗೆ ಪಾವತಿ/ವಿದ್ಯುತ್ ಶುಲ್ಕ ಪಾವತಿ ಮುಂತಾದ ಸರಕಾರಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಶಾಲೆ, ಕಾಲೇಜುಗಳು ಆರಂಭವಾಗಿಲ್ಲ. ಶುಲ್ಕ ವಸೂಲಾತಿ ಭರದಿಂದ ಸಾಗುತ್ತಿವೆ.
“ಜಾತಸ್ಯ ಮರಣಂ ಧ್ರುವಂ” ಜನಿಸೆದೆಲ್ಲವೂ ಮರಣಿಸಲು. ಕೊರೋನ ಕಾಯಿಲೆಯಿಂದ ಬದುಕಿ ಬಂದವರೂ ಇದ್ದಾರೆ. ಮಾರ್ಚ್ ತಿಂಗಳಿಂದ ಅಗಸ್ಟ್ ಮೊದಲ ವಾರದ ಈವರೆಗೆ ಬೇರೆ ಬೇರೆ ಕಾಯಿಲೆಗಳಿಂದ ಸತ್ತವರ ಸಂಖ್ಯೆ ಕಡಿಮೆಯೇನಲ್ಲ. ಸರಕಾರ ಕೊರೋನದಿಂದ ಸತ್ತವರ ಮನೆಯವರಿಗೆ ತಲಾ ಐದು ಲಕ್ಷ ರೂಪಾಯಿ ಕೊಡುತ್ತದೆ ಎಂದು ಘೋಷಿಸಿಲ್ಲ. ಆದ್ದರಿಂದ ಸತ್ತವರ ಮನೆಯವರೂ ವೈದ್ಯರಲ್ಲಿ/ಪ್ರಯೋಗಾಲಯದವರಲ್ಲಿ “ಕೊರೋನ ಸಾವು” ಎಂದು ಘೋಷಿಸಿ ಎಂದು ದುಂಬಾಲು ಬೀಳುವ ಪ್ರಮೇಯವೇ ಇಲ್ಲ. ಹಾಗಿರುವಾಗ ವೃದ್ಧಾಪ್ಯ/ಹೃದಯಾಘಾತ/ಮೂತ್ರಪಿಂಡ ವೈಪಲ್ಯ/ಡೆಂಗ್ಯು ಜ್ವರ ಅಥವಾ ಇನ್ನಾವುದೇ ಕಾಯಿಲೆಯಿಂದ ಸತ್ತರೂ ಶವ ಪರೀಕ್ಷೆ ಮಾಡುವ ಕ್ರಮವಿತ್ತು. ಈಗ ಕೊರೋನ ಪರೀಕ್ಷೆ ಮಾಡುವ ನಿಯಮ ಜಾರಿಗೆ ಬಂದಿದೆಯಂತೆ. ಇದು ಎಷ್ಟು ಸರಿ ತಪ್ಪು ಎನ್ನುವುದಕ್ಕಿಂತ ಮಾಡಿದ ಪರೀಕ್ಷೆಗಳ ಫಲಿತಾಂಶ ನೂರು ಪ್ರತಿಶತ “ಕೊರೋನ ಪಾಸಿಟಿವ್” ಆಗಿ ಹೊರ ಬರಲು ಕಾರಣ ಏನು? ಸರಕಾರಿ ಆಸ್ಪತ್ರೆಯವರಿಗೆ ಕೊರೋನ ರೋಗಿಗಳ ಮಂಡೆ ಲೆಕ್ಕದಲ್ಲಿ ಹಣ ನೀಡುತ್ತಿರುವುದು ಕಾರಣ ಎಂದು ಪೆದ್ದು ಮಂಡೆಯ ಪ್ರಜೆಗಳಿಗೂ ತಿಳಿಯದೇ ಇರುತ್ತದೆಯೇ?
ಮುನಿರ್ ಕಾಟಿಪಳ್ಯ ಎಂಬವರು ಸಾಮಾಜಿಕ ಕಳಕಳಿಯೊಂದಿಗೆ “ಮಂಗಳೂರಿನ ಕೊರೋನ ಕತೆಗಳು” ಎಂಬ ತಲೆಬರಹದಡಿಯಲ್ಲಿ ಉದಾಹರಣೆಯೊಂದಿಗೆ ಕೆಲವು ಮಾಹಿತಿಗಳನ್ನು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಬಡವರಾಗಿದ್ದು, ಕುಟುಂಬದ ಏಕೈಕ ಆಧಾರವಾಗಿದ್ದ ಕೇವಲ ಐವತ್ತು ವರ್ಷದ ಪ್ರಾಯದ ಸಾಲಿಯಾನ್ ಅವರ ಮರಣ ಮನೆ ಮಂದಿಗೆ ಸಿಡಿಲು ಬಡಿದ ಅನುಭವ ತಂದಿದೆ. ಬದುಕಿ ಬರಬಹುದೆಂಬ ಒಂದೇ ಕಾರಣಕ್ಕಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು ನಂತರ ಒಂದು ಆಸ್ಪತ್ರೆಯಲ್ಲಿ ಸೇರಿಸುವ ಮೊದಲೇ ಮೃತಪಟ್ಟಿದ್ದಾರೆ. ಆದರೂ ಆಸ್ಪತ್ರೆ ಹೆಣವನ್ನು ಅದರ ವಾರಸುದಾರರಿಗೆ ಹಸ್ತಾಂತರಿಸಲಿಲ್ಲ. ಅವರ ಕ್ರಮದಂತೆ ಶವ ಸಂಸ್ಕಾರ ಮಾಡುವಂತಿಲ್ಲ. ಕೊರೋನ ಪರೀಕ್ಷೆ ಮಾಡಬೇಕು. ಅದಕ್ಕೆ ಹಣಕಟ್ಟಿ ಕಾಯಬೇಕು. ಫಲಿತಾಂಶ ಮೊದಲೇ ಗೊತ್ತಿರುವಂತೆ ಕೊರೋನ ಪಾಸಿಟಿವ್ ಬರುತ್ತದೆ.
ನಂತರ ಹೆಣ ಇಟ್ಟುಕೊಂಡು ಹಣ ಮಾಡುವ ವ್ಯವಹಾರ ಆರಂಭ. ಒಂದು /ಎರಡು/ಮೂರು ದಿನ ಕಾಯಬೇಕು. ಏನನ್ನು ಕಾಯುವುದು? ಶವ ನಮ್ಮ ವಶಕ್ಕೆ ಕೊಡುವುದಿಲ್ಲ. (ಆಸ್ಪತ್ರೆಯವರು ನಾಲ್ಕಾರು ಶವಗಳು ಒಟ್ಟಾಗಲಿ ಎಂದು ಕಾಯುತ್ತರೋ ಏನೋ ಯಾರಿಗೆ ಗೊತ್ತು) ನಂತರ ಶವ ಸಾಗಿಸುವ ವಾಹನದ ಬಾಡಿಗೆ, ಚಾಲಕನ ಶುಲ್ಕ (ಯಾವ ರೂಪದಲ್ಲಿ ಯಾರಿಗೆ ಗೊತ್ತು) ಮೆಡಿಕಲ್ ಕಿಟ್ ಗಳಿಗಾಗಿ ಹಣ, ಅದಕ್ಕೆ ಹಣ, ಇದಕ್ಕೆ ಹಣ, (ಒಳಗೆ ಮಲಗಿರುವ ಹೆಣವೊಂದನ್ನು ಬಿಟ್ಟು) ಎಲ್ಲದಕ್ಕೂ ಹಣ ಕಟ್ಟಿದರೂ ಹೆಣ ನಮಗೆ ಕೊಡುವುದಿಲ್ಲ. ಅವರೇ ಸಂಸ್ಕಾರ ಮಾಡುತ್ತಾರೆ. (ಹೇಗೆ ಸಂಸ್ಕಾರ ಮಾಡುತ್ತಾರೆಂಬುದು ಅವರ ಸಂಸ್ಕಾರಕ್ಕೆ ಬಿಟ್ಟದ್ದು) ಸುತ್ತಿ, ಮುಚ್ಚಿರುವ ಶವವನ್ನು ಮನೆಯವರು ಬಿಚ್ಚಿ ನೋಡಿ ಹೆಣ ನಮ್ಮವರದ್ದೇ ಎಂದು ಖಾತರಿ ಪಡಿಸುವಂತಿಲ್ಲ. ಹತ್ತಿರ ಹೋಗುವಂತಿಲ್ಲ. ಶವಕ್ಕೆ ಸ್ನಾನ ಮಾಡಿಸುವಂತಿಲ್ಲ. ಬಾಯಿಗೆ ನೀರು ಬಿಡುವಂತಿಲ್ಲ. ಹೆಗಲು ಕೊಡುವಂತಿಲ್ಲ. ಅವರವರ ಧರ್ಮಕ್ಕೆ ಅನುಗುಣವಾಗಿ ಸಂಸ್ಕಾರ ಮಾಡುವಂತಿಲ್ಲ. ಹತ್ತಿರ ನಿಲ್ಲುವಂತಿಲ್ಲ. ಆದರೆ ಭಾರತೀಯರಾದ ನಮ್ಮ ಭಾವನೆಗಳೊಂದಿಗೆ ಆಟ ಆಡುವ ಯಾವ ಕಿಂಚಿತ್ ಕಾರಣಗಳನ್ನು ಆಸ್ಪತ್ರೆಯವರು ಬಿಟ್ಟು ಕೊಡುತ್ತಿಲ್ಲ. ಸರಕಾರ/ಜಿಲ್ಲಾಡಳಿತ ಕೊರೋನ ರೋಗಿಗಳಿಗೆ ಎಲ್ಲವೂ ಉಚಿತ ಎಂದು ಘೋಷಿಸಿದ್ದರೂ ಹೆಣ ಇಟ್ಟುಕೊಂಡು ಹಣ ಮಾಡುವ ದಂಧೆ ಅವ್ಯಾಹತವಾಗಿ ನಡೆಯುತ್ತಿರುವುದು ಜ್ವರದ ಮೇಲೆ ಬರೆ ಎಳೆದಂತೆ ಅಲ್ಲವೇ? ಸಂಬಂಧಪಟ್ಟವರು ಉತ್ತರಿಸಬೇಕು.
ಯಾರದೇ ಸಾವು ಎಂಥವರನ್ನಾದರೂ ದುಃಖಕ್ಕೀಡಾಗಿಸುತ್ತದೆ. ಅದರಲ್ಲೂ ಮೃತಪಟ್ಟವರ ಬಂಧುಗಳ ದುಃಖವನ್ನು ಶಬ್ದಗಳಲ್ಲಿ ಹೇಳುವಂತಿಲ್ಲ. ಆದರೂ ಗಟ್ಟಿ ಮನಸ್ಸು ಮಾಡಿ, ಪ್ರಜ್ಞಾವಂತ ನಾಗರಿಕ ಸಮಾಜ ಎಚ್ಚೆತ್ತುಕೊಳ್ಳಬೇಕು. ನಾವು ನೋಡುವಂತಿಲ್ಲ. ಮುಟ್ಟುವಂತಿಲ್ಲ. ಭಾಗವಹಿಸುವಂತಿಲ್ಲ, ಗುಳಿ ತೊಡುವಂತಿಲ್ಲ. ಕಾಟ ಗೂರುವಂತಿಲ್ಲ. ನೀರು ಬಿಡುವಂತಿಲ್ಲ. ಶವ ಸಂಸ್ಕಾರ ಮಾಡುವಂತಿಲ್ಲ. ಈ ಎಲ್ಲ ‘ಇಲ್ಲ’ಗಳಿಗೆ ನಮ್ಮಲ್ಲಿ ‘ಇಲ್ಲದ’ ಹಣ ಏಕೆ ಖರ್ಚು ಮಾಡಬೇಕು? ಎರಡು ಮೂರು ದಿನ ಆಸ್ಪತ್ರೆಯಲ್ಲಿ ಅನ್ನ ನೀರುಬಿಟ್ಟು ಏಕೆ ಕಾಯಬೇಕು? ಕಂಡವರ ಕಾಲಿಡಿದು ಏಕೆ ಗೋಗರೆಯಬೇಕು? ಸತ್ತವರು ಬದುಕಿದ್ದಾಗ ತನ್ನ ಶವವನ್ನು ಪ್ರಯೋಗಗಳಿಗಾಗಿ ಆಸ್ಪತ್ರೆಗೆ ದಾನ ನೀಡಲು ಹೇಳಿದ್ದಾರೆಂದು ಭಾವಿಸಿ ಅಥವಾ ನಾವೇ ದಾನ ನೀಡುತ್ತಿದ್ದೇವೆ ಎಂದು ಮನೆಯವರೆಲ್ಲ ಕೂಡಿ ನಿರ್ಧಾರ ತೆಗೆದುಕೊಳ್ಳಬೇಕು. ಪಾಸಿಟಿವ್ ರಿಪೋರ್ಟ್ ಬಂದ ಕೂಡಲೇ ಆಸ್ಪತ್ರೆಯವರಲ್ಲಿ ಹೇಳಿ ಮನೆಗೆ ಬಂದು ಸತ್ತವರ ಪ್ರೀತ್ಯಾರ್ಥವಾಗಿ ನಡೆಸುವ ಮುಂದಿನ ಕ್ರಿಯೆಗಳಿಗೆ ಅಣಿಯಾಗಬೇಕು. ಹಿಂದೂಗಳಾದರೆ ಅಕ್ಕಿ ಹಿಟ್ಟಿನಿಂದ ಬೊಂಬೆ ತಯಾರಿಸಿ ಕ್ರಮಬದ್ದವಾಗಿ ಶವ ದಹನಾದಿ ಕಾರ್ಯಗಳನ್ನು ಮಾಡಬಹುದು. ಒಂದೆರಡು ಸಲ ಹೀಗೆ ಮಾಡಿದರೆ ಆಸ್ಪತ್ರೆಯವರು ಹೆಣ ಇಟ್ಟುಕೊಂಡು ಹಣಮಾಡುವ ವ್ಯಾಪಾರದಾಟ ನಿಲ್ಲಲೂ ಬಹುದು.
ಆರೋಗ್ಯ ಇಲಾಖೆಯವರು ಬಂದು ಆರೋಗ್ಯ ಪರೀಕ್ಷೆ ಮಾಡಿದಾಗಲೂ ಆರೋಗ್ಯವಂತ ಜನರ ಫಲಿತಾಂಶವೂ ಪಾಸಿಟಿವ್ ಬರುತ್ತದೆ. ಆಗ ಇಲಾಖೆಯವರು ಕರೆದುಕೊಂಡು ಹೋಗುವಾಗ ಅಂಬ್ಯುಲನ್ಸ್ ನೊಂದಿಗೆ ಅವರ ಭಾವಚಿತ್ರ ತೆಗೆದುಕೊಳ್ಳಬೇಕು. ಅವರ ಹೆಸರು, ಮೊಬೈಲ್ ಸಂಖ್ಯೆ ಪಡೆದುಕೊಳ್ಳಬೇಕು. ರೋಗಿಯು ಗುಣಮುಖನಾದರೆ ಅವರೇ ಮನೆ ತಲುಪಿಸಬೇಕು.
ಒಂದು ವೇಳೆ ರೋಗಿಯು ಸತ್ತರೆ ವಾರಸುದಾರರು ಹೇಗೂ ಅಂತಿಮ ದರ್ಶನ ಪಡೆಯುವಂತಿಲ್ಲ. ಅವರೇ ಏನಾದರೂ ಮಾಡಿಕೊಳ್ಳಲಿ. ಆಗ ರೋಗಿಯ ಕಡೆಯವರಿಂದ ಹಣ ದೋಚುವುದು ನಿಲ್ಲುತ್ತದೆ. ಹೀಗೆ ಮಾಡುವುದರಿಂದ ಪಾಸಿಟಿವ್ ಫಲಿತಾಂಶಗಳ ಪ್ರಮಾಣ ಕಡಿಮೆಯಾಗಬಹುದು. ಔಷಧದ ಅಂಗಡಿಗಳಲ್ಲಿ ಶೀತ, ಜ್ವರ, ನೆಗಡಿ, ಕೆಮ್ಮುಗಳಿಗೆ ಹಿಂದಿನಂತೆ ಔಷಧಿ ದೊರಕಬಹುದು.
ಕೊರೋನದ ವೈಚಿತ್ರ್ಯ ಎಷ್ಟೆಂದರೆ; ಸಮಾಜದ ಗಣ್ಯ, ಪ್ರತಿಷ್ಠಿತ ಹಾಗೂ ರಾಜಕಾರಣಿಗಳು ಸತ್ತರೆ ಅವರ ಹೆಣ ವಾರಸುದಾರರಿಗೆ ದೊರೆಯುತ್ತದೆ. ಅವರವರ ಧರ್ಮಕ್ಕನುಗುಣವಾಗಿ ಶವ ಸಂಸ್ಕಾರವೂ ನಡೆಯುತ್ತದೆ. ಸಾಮಾನ್ಯ ಜನರು ಸತ್ತರೆ ಸರಕಾರದಿಂದ ಹಣ ದೋಚುವ ಉದ್ದೇಶದಿಂದ ಎಲ್ಲವೂ ಅಯೋಮಯ. ಆದ್ದರಿಂದ ನಾವು ಕೂಡ ಭಾವನಾತ್ಮಕವಾಗಿ ವರ್ತಿಸದೇ ಅವರ ಎಣ್ಣೆಯನ್ನು ಅವರ ಕಣ್ಣಿಗೆ ಚೆಲ್ಲಬೇಕು.
Get In Touch With Us info@kalpa.news Whatsapp: 9481252093
Discussion about this post