ಕಲ್ಪ ಮೀಡಿಯಾ ಹೌಸ್ | ಕಾನೂನು ಕಲ್ಪ – ಪ್ರಶ್ನೋತ್ತರ ಅಂಕಣ |
ಪ್ರಶ್ನೆ: ನನ್ನ ಹೆಸರು ನಿರಂಜನ. ನಾನು ಶಿವಮೊಗ್ಗ ಮೂಲದವನಾಗಿದ್ದು, ಹಾಲಿ ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ಪಿತ್ರಾರ್ಜಿತವಾಗಿ ಬಂದಿದ್ದ ನಾಲ್ಕು ಎಕರೆ ಜಮೀನಿನಲ್ಲಿ ಅಡಿಕೆ ತೋಟ ಮಾಡಿದ್ದೇವೆ. ಇತ್ತೀಚಿಗೆ ಪಕ್ಕದ ತೋಟದವರು ನಮ್ಮಿಬ್ಬರ ಜಮೀನಿಗೆ ಹೋಗಲು ಇದ್ದ ಕಾಲುದಾರಿಯ ಬಳಕೆಗೆ ಸಂಬಂಧಿಸಿದಂತೆ ತಗಾದೆ ತೆಗೆದಿದ್ದಾರೆ. ಸಮಸ್ಯೆ ಬಗೆಹರಿಸಲು ನಡೆಸಿದ ಮಾತುಕತೆ ವಿಫಲವಾಗಿದ್ದು, ನಮ್ಮ ವಿರುದ್ಧ ಸ್ಥಳೀಯ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ. ನನಗೆ ರಜೆಗಳು ಕಡಿಮೆಯಿರುವುದರಿಂದ, ಈಗ ದಾವೆ ಹೂಡಲಿರುವ ನ್ಯಾಯಾಲಯದಲ್ಲಿ ಪ್ರಕರಣ ಎದುರಿಸಲು ನಾನು ಪ್ರತಿ ಹಿಯರಿಂಗ್ ಹಾಜರಿರಲು ಸಾದ್ಯವಿಲ್ಲ. ನಾನು ಬೇರೆ ರಾಜ್ಯದಲ್ಲಿ ಉದ್ಯೋಗದಲ್ಲಿ ಇರುವುದರಿಂದ ನಾನಿರುವ ಸ್ಥಳದ ನ್ಯಾಯಾಲಯಕ್ಕೆ ದಾಖಲಿಸಿರುವ ಪ್ರಕರಣವನ್ನು ವರ್ಗಾವಣೆ ಮಾಡಿಸಿಕೊಳ್ಳಲು ಸಾಧ್ಯವಿದೆಯೇ ?
ಉತ್ತರ: ಸಿವಿಲ್ ಪ್ರಕ್ರಿಯಾ ಸಂಹಿತೆ ಸೆಕ್ಷನ್ 16ರ ಪ್ರಕಾರ ಸ್ಥಿರಾಸ್ತಿ ಯಾವ ಜಾಗದಲ್ಲಿದೆಯೋ, ಅಲ್ಲಿಯ ಸ್ಥಳೀಯ ನ್ಯಾಯಾಲಯವೇ ಅದಕ್ಕೆ ಸಂಬಂಧಿಸಿದ ವ್ಯಾಜ್ಯಗಳನ್ನು ಬಗೆಹರಿಸಬೇಕು. ಹಾಗಾಗಿ ನೀವು ಶಿವಮೊಗ್ಗ ಜಿಲ್ಲೆಯ ಅಡಿಕೆ ತೋಟದ ಕಾಲುದಾರಿಗೆ ಸಂಬಂಧಿಸಿದ ವ್ಯಾಜ್ಯವನ್ನು ಪಶ್ಚಿಮ ಬಂಗಾಳದ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ. ಇನ್ನು ಪ್ರತಿ ಹಿಯರಿಂಗ್ ಹಾಜರಾಗಲು ನನ್ನಿಂದ ಸಾಧ್ಯವಿಲ್ಲ ಎಂದಿದ್ದೀರಿ. ಸಿವಿಲ್ ಪ್ರಕರಣದಲ್ಲಿ ನ್ಯಾಯಾಲಯ ಸೂಚಿಸಿದ ಪ್ರಮುಖ ಘಟ್ಟಗಳಲ್ಲಿ ಎಂದರೆ ಮುಖ್ಯ ಸಾಕ್ಷಿ ವಿಚಾರಣೆ, ಪಾಟಿ ಸವಾಲು ಮೊದಲಾದ ಹಂತಗಳಲ್ಲಿ ನಿಮ್ಮ ಉಪಸ್ಥಿತಿ ಅನಿವಾರ್ಯ. ಜಮೀನಿಗೆ ಸಂಬಂಧಿಸಿದ ದಾಖಲೆಗಳ ಸಮೇತ ವಕೀಲರನ್ನು ಸಂಪರ್ಕಿಸಿ ಈ ಸಮಸ್ಯೆಗೆ ನ್ಯಾಯಾಲಯದಲ್ಲಿ ಪರಿಹಾರ ದೊರಕಲು ಎಷ್ಟು ಸಮಯ ಬೇಕಾಗಬಹುದು ಹಾಗು ಯಾವ ಹಂತಗಳಲ್ಲಿ ನಿಮ್ಮ ವೈಯಕ್ತಿಕ ಹಾಜರಾತಿ ಬೇಕು ಎಂಬುದನ್ನು ತಿಳಿದುಕೊಳ್ಳಿ. ನಿಮಗೆ ನ್ಯಾಯಾಲಯಕ್ಕೆ ಹಾಜರಾಗಲು ತೀರಾ ಕಷ್ಟವಾದರೆ, ನಿಮ್ಮ ನಂಬಿಕೆಯ ವ್ಯಕ್ತಿಗೆ ನಿಮ್ಮನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಲು ಪವರ್ ಆಫ್ ಅಟಾರ್ನಿ ಕೊಡಬಹುದು. ಹೀಗೆ ಪವರ್ ಆಫ್ ಅಟಾರ್ನಿ ಪಡೆದುಕೊಳ್ಳುವ ವ್ಯಕ್ತಿಗೆ ಏಜೆಂಟ್ ಎನ್ನುತ್ತಾರೆ.
ಜನರಲ್ ಪವರ್ ಆಫ್ ಅಟಾರ್ನಿ ಮೂಲಕ ನಿಮ್ಮ ಏಜೆಂಟಿಗೆ ನ್ಯಾಯಾಲಯದಲ್ಲಿನ ವ್ಯಾಜ್ಯದಲ್ಲಿ ನಿಮ್ಮನ್ನು ಪ್ರತಿನಿಧಿಸುವುದಲ್ಲದೆ, ಆಸ್ತಿಗೆ ಸಂಬಂಧಿಸಿದ ಇತರೆ ಕೆಲಸಗಳನ್ನು ಎಂದರೆ ಕಂದಾಯ ಪಾವತಿ, ತೋಟದ ಮೇಲಿನ ಸಾಲ ಮರುಪಾವತಿ, ತೋಟದ ಮೇಲುಸ್ತುವಾರಿ ನಿರ್ವಹಿಸುವ ಜವಾಬ್ದಾರಿಯನ್ನು ನೀಡಬಹುದು. ಪವರ್ ಆಫ್ ಅಟಾರ್ನಿ ಪತ್ರದಲ್ಲಿ ನೀವು ವಹಿಸಿಕೊಡಲು ನಿರ್ಧರಿಸಿರುವ ಜವಾಬ್ದಾರಿಗಳ ಬಗ್ಗೆ ವಿವರವಾಗಿ ನಮೂದಿಸಿ, ಆ ಪತ್ರವನ್ನು ಉಪನೋಂದಣಾಧಿಕಾರಿಯವರಲ್ಲಿ ನೋಂದಣಿ ಮಾಡಿಸಿಕೊಳ್ಳಿ.
ಆತ್ಮೀಯ ಓದುಗರೇ,
ಕಲ್ಪ ಮೀಡಿಯಾ ಹೌಸ್(ರಿ.) ಅಡಿಯಲ್ಲಿ ಪ್ರಕಟವಾಗುತ್ತಿರುನ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದಲ್ಲಿ ನಮ್ಮ ಓದುಗರಿಗಾಗಿ `ಕಾನೂನು ಕಲ್ಪ’ ಎಂಬ ಹೊಸ ಅಂಕಣವನ್ನು ಆರಂಭಿಸಲಾಗಿದ್ದು, ಪ್ರತಿ ಶುಕ್ರವಾರ ಪ್ರಕಟವಾಗಲಿದೆ. ಶಿವಮೊಗ್ಗ-ಭದ್ರಾವತಿಯ ಖ್ಯಾತ ವಕೀಲರು ಹಾಗೂ ಹಿರಿಯ ಪತ್ರಕರ್ತರೂ ಆಗಿರುವ ಶ್ರೀ ವೀರೇಂದ್ರ ಪಿ.ಎಂ. ಅವರು ಯಾವುದೇ ರೀತಿಯ ಕಾನೂನು ಸಮಸ್ಯೆಗಳು, ಕಾನೂನಿನ ಕುರಿತಾಗಿನ ಮಾರ್ಗದರ್ಶನ ಮಾಡಲಿದ್ದಾರೆ. ಸಾರ್ವಜನಿಕರು ತಮಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದರೆ ನಮಗೆ ಕಳುಹಿಸಬಹುದು. ಆ ಪ್ರಶ್ನೆಗಳಿಗೆ ವಕೀಲರಾದ ಶ್ರೀ ವೀರೇಂದ್ರ ಪಿ.ಎಂ. ಅವರು ಉತ್ತರ ನೀಡಲಿದ್ದಾರೆ. ನಿಮ್ಮ ಪ್ರಶ್ನೆಗಳು ಸ್ಪಷ್ಟ, ಸ್ಪುಟ, ನೇರವಾಗಿರಲಿ.
ನಿಮ್ಮ ಪ್ರಶ್ನೆಗಳನ್ನು ಈ ಕೆಳಗಿನ ವಾಟ್ಸಪ್ ಸಂಖ್ಯೆ 9481252093 (ವಾಟ್ಸಪ್ ಮಾತ್ರ) ಅಥವಾ ಇ-ಮೇಲ್ info@kalpa.news ಗೆ ಕಳುಹಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post