ಅಮೃತಸರ: ವಿಜಯದಶಮಿ ಅಂಗವಾಗಿ ಆಯೋಜಿಸಿದ್ದ ರಾವಣ ದಹನ ಕಾರ್ಯಕ್ರಮದ ವೇಳೆ ರೈಲು ಹರಿದು 50ಕ್ಕೂ ಅಧಿಕ ಜನರನ್ನು ಬಲಿ ಪಡೆದ ದುರ್ಘಟನೆಗೆ ಪಂಜಾಬ್ ಕಾಂಗ್ರೆಸ್ ಕಾರಣ ಎಂದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಘಟನೆ ಕುರಿತಂತೆ ಪ್ರತ್ಯಕ್ಷದರ್ಶಿಗಳು ರಾಷ್ಟ್ರೀಯ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಅನುಮತಿಯಿಲ್ಲದೆಯೇ ಕಾಂಗ್ರೆಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ನವಜೋತ್ ಸಿಂಗ್ ಸಿಧು ಅವರ ಪತ್ನಿ ಅತಿಥಿಯಾಗಿ ಆಗಮಿಸಿದ್ದು, ರೈಲಿನಲಿಡಿ ಸಿಲುಕಿ ಜನರು ನರಳುತ್ತಿದ್ದರೂ, ಸಿಧು ಪತ್ನಿ ತಮ್ಮ ಭಾಷಣವನ್ನು ಮುಂದುವರೆಸಿದ್ದರು ಎಂದು ಕಿಡಿ ಕಾರಿದ್ದಾರೆ.
ಇನ್ನೊಬ್ಬ ಪ್ರತ್ಯಕ್ಷದರ್ಶಿ ಮಾತನಾಡಿದ್ದು, ಘಟನೆಗೆ ಆಡಳಿತ ಮಂಡಳಿ ಹಾಗೂ ಸಮಿತಿ ನೇರ ಹೊಣೆಯಾಗಿದೆ. ಆಯೋಜಕರು ಮುಂಜಾಗ್ರತಾ ಕ್ರಮ ಕೈಗೊಂಡು ರೈಲು ಬರುವ ವೇಳೆಯಲ್ಲಿ ಘೋಷಣೆ ಮಾಡಬೇಕಿತ್ತು. ಆದರೆ, ಇವೆಲ್ಲವನ್ನೂ ಆಯೋಜಕರು ನಿರ್ಲಕ್ಷಿಸಿದ್ದೇ ದುರ್ಘಟನೆಗೆ ಕಾರಣ ಎಂದು ದೂರಿದ್ದಾರೆ.
ಇನ್ನು ಕೆಲವು ಪ್ರತ್ಯಕ್ಷದರ್ಶಿಗಳು ಹೇಳುವಂತೆ ಪಟಾಕಿ ಸಪ್ಪಳದಿಂದ ಬರುತ್ತಿರುವ ರೈಲ್ವೆಯ ಶಬ್ದ ಮಸುಕಾಗಿದ್ದರಿಂದಾಗಿ ಈ ದುರ್ಘಟನೆ ನಡೆದಿದೆ. ಒಂದು ಅಂದಾಜಿನ ಪ್ರಕಾರ ಇಲ್ಲಿ ಸುಮಾರು 7 ಸಾವಿರದಷ್ಟು ಜನರು ದಸರಾ ಹಬ್ಬದ ಆಚರಣೆಯಲ್ಲಿ ಸೇರಿದ್ದರು ಎಂದು ಹೇಳಲಾಗಿದೆ. ಜನದಟ್ಟನೆ ಹೆಚ್ಚಾಗಿದ್ದರಿಂದಾಗಿ ಕೆಲವರು ರೈಲ್ವೆ ಟ್ರಾಕ್ ಮೇಲೆ ನಿಲ್ಲಬೇಕಾಯಿತು. ಅನೇಕರು ಸೆಲ್ಪಿ ಕ್ಲಿಕ್ಕಿಸುವುದರಲ್ಲಿ ಮತ್ತು ವೀಡಿಯೊ ಮಾಡುವುದರಲ್ಲಿ ನಿರತರಾಗಿದ್ದರು ಇದರಿಂದಾಗಿ ಬಹುತೇಕರಿಗೆ ರೈಲು ಬಂದಿದ್ದೇ ಗೊತ್ತಾಗಿಲ್ಲ ಎನ್ನಲಾಗಿದೆ.
ಇನ್ನು ಕೆಲವರು ರೈಲ್ವೆ ಇಲಾಖೆಯ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ ಎಂದು ಆರೋಪಿಸಲಾಗಿದ್ದು, ಘಟನೆ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ.
Discussion about this post