ಕುಕ್ಕೇ ಸುಬ್ರಹ್ಮಣ್ಯ vs ಸಂಪುಟ ನೃಸಿಂಹ ಸ್ವಾಮಿ ಮಠ
ಅದೆಷ್ಟೋ ಶತಮಾನಗಳ ಪೂರ್ವದಲ್ಲಿ ಶ್ರೀಶ್ರೀಶ್ರೀ ವಿಷ್ಣು ತೀರ್ಥರಿಂದ(ಮಧ್ವಾಚಾರ್ಯರ ಪೂರ್ವಾಶ್ರಮದ ಸಹೋದರ) ಸ್ಥಾಪಿತವಾದಂತಹ ಮಠ.
ಆಗ ಶ್ರೀಸುಬ್ರಹ್ಮಣ್ಯ ದೇವರ ಪೂಜಾ ಆಗಮ ವಿಧಾನಗಳು, ನಡಾವಳಿಗಳು ಅಷ್ಟೊಂದು ನಿಯಮದಲ್ಲಿ ಇರಲಿಲ್ಲ. ಆಗಿನ ಮೈಸೂರು ರಾಜರ ವಿನಂತಿಯ ಮೇರೆಗೆ ವಿಷ್ಣುತೀರ್ಥರು ದೇವಸ್ಥಾನವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು, ತನ್ನ ಉಪಾಸನೆಯಿಂದ ಸ್ಥಳದ ಮಹಿಮೆಯನ್ನು ಹೆಚ್ಚಿಸಿದರು. ಆಗಲೂ ಅಲ್ಲಿ ಭಿನ್ನಮತೀಯರಿದ್ದರು. ಆದಿ ಸುಬ್ರಹ್ಮಣ್ಯ ಎಂಬುದು ಆಗ ತಲೆ ಎತ್ತಿತು.
ನಂತರ ರಾಜಾಡಳಿತ ಸಮಾಪ್ತಿಗೊಂಡರೂ, ಬ್ರಿಟೀಷರ ಆಡಳಿತದಲ್ಲಿ ಮೈಸೂರು ಮಹಾರಾಜರಿಗೇ ದೇವಸ್ಥಾನದ ವಿಶೇಷ ಅಧಿಕಾರವಿತ್ತು. ಇದರಿಂದಲೇ ಈಗಲೂ ಅನುವಂಶಿಕವಾಗಿ ಮೈಸೂರು ಅರಮನೆಗೆ ಒಂದು ದಿವಾನ ಸದಸ್ಯತನ ಇದೆ. ಆ ಸಮಯದಲ್ಲಿ ನೃಸಿಂಹ ದೇವರ ಮಠಾಧಿಪತಿಗಳಿಗೆ ದೇವಸ್ಥಾನದ ಆಗಮಾದಿ, ಧರ್ಮಕಾರ್ಯಗಳ ವಿಚಾರದಲ್ಲಿ ಒಂದು ಅಧಿಕಾರ ನೀಡಿತ್ತು.
ನಿತ್ಯವೂ ದೇವರಿಗೆ ಆರತಿ ಬೆಳಗುವುದು, ಪಂಚ ಪರ್ವಾದಿಗಳಲ್ಲಿ ಸ್ವಾಮಿಗಳ ಉಪಸ್ಥಿತಿ, ಬ್ರಹ್ಮ ರಥೋತ್ಸವದಲ್ಲಿ ದೇವರೊಡನೆ ಸ್ವಾಮಿಗಳೂ ರಥವೇರುವಂತಹ ಸಂಪ್ರದಾಯಗಳಿತ್ತು. ನಂತರದ ದಿನಗಳಲ್ಲಿ, ಭೂ ಮಸೂದೆ ಜಾರಿಯಾದಾಗ ಮಠವು ಆರ್ಥಿಕವಾಗಿ ದುರ್ಬಲವಾಯಿತು. ಅಲ್ಲದೆ ದೇವಸ್ಥಾನವೂ ಮುಜರಾಯಿ ವ್ಯಾಪ್ತಿಗೆ ಬಂತು. ಆಗಿನಿಂದ ದೇವಸ್ಥಾನಕ್ಕೆ ಆಯ್ಕೆಯಾದ ಆಡಳಿತ ಸಮಿತಿಯು ಮಠಕ್ಕೆ ವಿರುದ್ಧವಾಗಿ ನಡೆಯಲಾರಂಭಿಸಿತು. ಹಲವಾರು ಧಾರ್ಮಿಕ ಕ್ರಿಯೆಗಳಲ್ಲಿ ಸ್ವಾಮಿಗಳನ್ನು ದೂರ ಇರಿಸಲು ಶುರುಮಾಡಿ, ಕೊನೆಗೆ ಮಠವನ್ನು ಹೊರಗಿಡಬೇಕು ಎಂದು ಕೋರ್ಟಿನಲ್ಲೂ ಧಾವೆ ಹೂಡುತ್ತದೆ.
ಆದರೆ ಮಠಕ್ಕೆ ಭೂಸಂಪತ್ತು ಬಹಳಷ್ಟಿತ್ತು. ಎಲ್ಲಿಯವರೆಗೆ ಇತ್ತು ಎಂದರೆ ದೇವಸ್ಥಾನದ ತೆಂಕು ಭಾಗದ ಅಂಗಣವೂ ಮಠದ್ದೇ ಪಟ್ಟೆಯಲ್ಲಿದೆ. ಈಗಿರುವ ಮಠವೂ ಮಠದ ಪಟ್ಟೆಯಲ್ಲೇ ಇದೆ. ಹಾಗಾಗಿ ಶ್ರೀಮಠವನ್ನು ಅಲ್ಲಿಂದ ಸ್ಥಳಾಂತರ ಮಾಡುವುದಕ್ಕೆ ಆಗಲಿಲ್ಲ. ಅದಕ್ಕಾಗಿ ಈಗೀಗ ಅನೇಕ ರೀತಿಯ ಹಿಂಸೆ ನೀಡುತ್ತಿದೆ.
ಅದರಲ್ಲಿ ಪ್ರಧಾನವಾದದ್ದೇ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗ ಪ್ರತಿಷ್ಟೆಗಳು. ಆದರೆ ಇದು ಮಠದಲ್ಲಿ ನಡೆಯಲು ಶುರುವಾದದ್ದು ಈಗೇನಲ್ಲ. ಬಹಳ ಪುರಾತನ ಕಾಲದಿಂದಲೇ ನಡೆಯುತ್ತಿತ್ತು. ಆಗ ದೇವಸ್ಥಾನದ ವತಿಯಿಂದ ನಡೆಯುತ್ತಿರಲಿಲ್ಲ. ನನ್ನ ತಂದೆಯವರೇ(ಸುಮಾರು ಎಪ್ಪತ್ತೈದು ವರ್ಷಗಳ ಹಿಂದಿನ ಕಥೆ) ಹೇಳುವಂತೆ, ಅವರ ಬಾಲ್ಯದಲ್ಲೇ ಕೆಲವು ಸರ್ಪಸಂಸ್ಕಾರಾದಿ ಕ್ರಿಯೆಗಳಿಗೆ ಅವರು ಅವರ ತಂದೆಯೊಡನೆ ಬಂದ ನೆನಪನ್ನು ಹೇಳುತ್ತಿದ್ದರು.
ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕಾಗಿ ಇತ್ತೀಚೆಗೆ ಈ ಕ್ರಿಯೆಗಳು ನಡೆಯಲು ಶುರುವಾಗಿತ್ತೇ ಹೊರತು, ಹಿಂದೆ ಇರಲಿಲ್ಲ. ಅದು ಏನೇ ಇರಲಿ. ಅದು ಅವರವರಿಗೆ ಬಿಟ್ಟ ವಿಚಾರ. ಆದರೆ ಈಗ ದೇವಸ್ಥಾನದವರು ಹೊಸ ತಕರಾರು ಶುರು ಮಾಡಿದ್ದಾರೆ. ದೇವಸ್ಥಾನ ಹೊರತು ಇತರೆಡೆ ಈ ಕ್ರಿಯೆ ಮಾಡಿದರೆ ದೇವರಿಗೆ ತಲುಪುವುದಿಲ್ಲ ಎಂಬ ಒಂದು ಮೂರ್ಖ ಚಿಂತನೆಯ press meet ಮಾಡಿದ್ದು ಇವತ್ತು ನೋಡಿದೆ. ಈ ಬಗ್ಗೆ ಸ್ವಲ್ಪ ಗಂಭೀರ ಲೇಖನ ಬರೆಯಬೇಕು ಎಂದು ಈ ಲೇಖನ ಬರೆಯುತ್ತಿದ್ದೇನೆ.
ದೇವರಿಗೆ ತಲುಪುವುದಿಲ್ಲ ಎಂದು ಹೇಳಬೇಕಾದರೆ ದೇವರ ಸಂಪರ್ಕ ಇವರಿಗೆ ಇದೆ ಎಂದಾಯ್ತು. ಇದನ್ನು ಇವರು ಮೊದಲಾಗಿ Prove ಮಾಡಬೇಕು. ನಾವಂತೂ ದೇವರಿಗೆ ತಲುಪುವುದು ಹೇಗೆ ಎಂದು ಚಿಂತನೆ ಮಾಡಿದ್ದೇವೆ. ಇವರು ಅದನ್ನು ಯಾವ ಲಾಜಿಕ್ ನಲ್ಲಿ ಹೇಳಿದ್ದಾರೆ?
1. ತಸ್ಮತ್ ಶಾಸ್ತ್ರ ಪ್ರಮಾಣೇಶು ಕಾರ್ಯಂ ಕೃತ್ವಾಃ
2. ಮುಗ್ದತೆ, ಭಕ್ತಿ, ಶ್ರದ್ಧೆ, ನಿಯಮಗಳಿದ್ದರೆ ದೇವರಿಗೆ ತಲುಪುತ್ತದೆ ಎಂಬುದು ನಮ್ಮ ಚಿಂತನೆ.
3. ಇನ್ನೊಬ್ಬರಿಗೆ ಹಿಂಸೆ ನೀಡದ ಪೂಜೆ ಪುರಸ್ಸರಾದಿಗಳು, ದೇಶ ಕಾಲ ಪಾತ್ರಾಧಾರಿತ ಪೂಜೆಗಳು ದೇವರಿಗೆ ತಲುಪುತ್ತದೆ ಎಂಬುದೂ ನಮ್ಮ ಹಿರಿಯರು ನಮಗೆ ತಿಳಿಸಿದ ಪಾಠ.
ವಿಶೇಷವಾಗಿ ಸರ್ಪಸಂಸ್ಕಾರ ಮಾಡುವವರು, ಮಾಡಿಸುವವರು ಗಮನಿಸಬೇಕಾದ ಪ್ರಮುಖ ಅಂಶಗಳು:
ಸ ತು ಸಿನಿವಾಲ್ಯಾಂ, ಪೌರ್ಣಮಾಸ್ಯಾಂ ಆಶ್ಲೇಷಯುಕ್ತನವವ್ಯಾಂ ವಾ ಕಾರ್ಯಃ
ಧನಿಷ್ಟಾ ಪಂಚಕೇ ತ್ರಿಪಾದ ನಕ್ಷತ್ರೇಷು ಚ ನ ಕಾರ್ಯಃ॥
ಎಂದು ಸರ್ಪಸಂಸ್ಕಾರ ವಿಧಿಯನ್ನು ಹೇಳಿದೆ.
ದೇಶ-ಕಾಲ-ಪಾತ್ರ
ದೇಶ:
ದೇವತಾ ಸಾನ್ನಿಧ್ಯದ ನದಿ ಪ್ರದೇಶ, ಗುರುಗಳಿರುವ ಮಠಗಳು ಇಂತಹ ಕಾರ್ಯಕ್ಕೆ ಸೂಕ್ತ ಪ್ರದೇಶ. ಇನ್ನೊಬ್ಬರ ಜಾಗದಲ್ಲಿ ಅವರ ಒಪ್ಪಿಗೆ ಇಲ್ಲದೆ ಮಾಡಬಾರದು.
ಕಾಲ:
ಧನಿಷ್ಟಾ ನಕ್ಷತ್ರದ ಉತ್ತರಾರ್ಧದಿಂದ, ರೇವತೀ ನಕ್ಷತ್ರದವರೆಗೆ ಧನಿಷ್ಟಾ ಪಂಚಕ ದೋಷವಿರುತ್ತದೆ. ಈ ಸಮಯದಲ್ಲಿ ಪ್ರಾರಂಭ (ಸರ್ಪ ಪ್ರತಿಕೃತಿ ದಹನ ಕಾರ್ಯ)ಮಾಡಬಾರದು. ಅಲ್ಲದೆ ತ್ರಿಪಾದ ನಕ್ಷತ್ರಗಳಾದ ಕೃತ್ತಿಕೆ, ಪುನರ್ವಸು, ಉತ್ತರ, ವಿಶಾಖ, ಉತ್ತರಾಷಾಢ, ಪೂರ್ವಾಭಾದ್ರ ಈ ಆರು ನಕ್ಷತ್ರಗಳು(ಈ ತ್ರಿಪಾದ ನಕ್ಷತ್ರದಲ್ಲಿ ಮಾಡಬಹುದು ಎಂದು ಇನ್ನೊಂದು ಕಡೆ ಹೇಳಿದೆ) ಇರುವ ದಿನ ಮಾಡಬಾರದು ಎಂದು ನಿಯಮವಿದೆ.
ದೋಷ ಇರುವ ದಿನ ಮಾಡಿದರೆ, ಮಾಡಿಸಿದವರಿಗೂ ಮಾಡಿದವರಿಗೂ ದೋಷವೇ ಆಗುತ್ತದೆ.(ಒಂದುವೇಳೆ ದೋಷಗಳ ದಿನಗಳಾಗಿ ಬಿಟ್ಟರೆ ಪಂಚಕ ಶಾಂತಿಯನ್ನೂ ಮಾಡಿಕೊಳ್ಳಬೇಕು)
ಪಾತ್ರ:
ಉತ್ತಮ ತಜ್ಞ ಪುರೋಹಿತರ ಪೌರೋಹಿತ್ಯದಲ್ಲಿ ಮಾತಾ ಪಿತೃಗಳು ಮೃತಿ ಹೊಂದಿದವರಿಗೆ ಅರ್ಹತೆಯನ್ನು ಹೇಳಿದೆ.(ಬ್ರಾಹ್ಮಣೇತರರು ಬೇರೆ ಬ್ರಾಹ್ಮಣ ಮೂಲಕ ಮಾಡಿಸಬಹುದು)
ಇಂತಹ ನಿಯಮ ಪಾಲನೆ ಮಾಡಿಕೊಂಡಂತಹ ಸತ್ಪಾತ್ರರು ಈ ದೇವಸ್ಥಾನದ ಹೇಳಿಕೆಯನ್ನು ಒಪ್ಪಬಹುದು. ಇಂತಹ ನಿಯತ್ತು ಅವರಲ್ಲಿ ಇದ್ದೀದ್ದೇ ಆದರೆ ಇಂತಹ ಬಾಲಿಷ ಮಾತು ಆಡುತ್ತಿರಲಿಲ್ಲ.
ಆದಾಗ್ಯೂ ಇನ್ನೊಂದು ತರ್ಕವೂ ಇದೆ. ಸರ್ಪಕಾರ್ಯಗಳನ್ನು ಅಲ್ಲಿ ಮಾಡಬಾರದು, ಇಲ್ಲಿ ಮಾಡಬಾರದು ಎಂದು ಹೇಳಬೇಕಾದರೆ, ಈ ದೇವತಾ ಕಾರ್ಯಗಳ ಹಕ್ಕು(patent) ಸ್ವಾಮ್ಯತೆ ಇವರಿಗೆ ಕೊಟ್ಟವರು ಯಾರು ಎಂಬುದನ್ನೂ ತಿಳಿಸಬೇಕು. ಇದನ್ನು ಯಾರೂ, ಎಲ್ಲಿಯೂ ನಿಯಮ ಬದ್ಧವಾಗಿ ಮಾಡುವುದಕ್ಕೆ ಅಡ್ಡಿಯೇನಿಲ್ಲ.
ಈಗ ಇದೊಂದು ವ್ಯಾಪಾರೀಕರಣದ ಕ್ರಿಯೆಯೇ ಆಗಿದೆ ಹೊರತು, ಭಕ್ತರ ಹಿತಕ್ಕಾಗಿ ಮಾಡುವಂತದ್ದಾಗಿ ಉಳಿದಿಲ್ಲ. ದೇವಸ್ಥಾನದಲ್ಲಿ ಹೆಚ್ಚು ಹೆಚ್ಚು ಕಾರ್ಯ ಒತ್ತಡಕ್ಕಾಗಿ ಮೂರು ದಿನದ ಕಾರ್ಯದ ಬದಲು ಎರಡೇ ದಿನದಲ್ಲಿ ಬೋದಾಯನ ಪದ್ಧತಿ ಎಂದು ಶುರು ಮಾಡಲಾಗಿದೆ. ಆದರೆ ಇಲ್ಲಿ ಅಶ್ವಲಾಯನ ಪದ್ಧತಿಯೇ ಇರುವುದರಿಂದ ಸರ್ಪಸಂಸ್ಕಾರ ನಾಲ್ಕು ದಿನದ್ದೇ ಆದರೆ ಮಾತ್ರ ಫಲ. ಎರಡು ದಿನದಲ್ಲಿ ಮುಗಿಸಿದರೆ ಅದು ವ್ಯಾಪಾರದ ಲಾಭ ಫಲವೇ ಹೊರತು ದೇವರ ಅನುಗ್ರಹ ಆಗದು.
ಮಠದಲ್ಲಿ ಗುರುಗಳೇ ಪ್ರಮುಖರು. ಅವರ ನಿರ್ದೇಶನದಂತೆ ಕಾರ್ಯ ನಡೆಯುತ್ತದೆ.
ದೇವಸ್ಥಾನದಲ್ಲಿ ಯಾರು ಗುರುಗಳು? ಆಡಳಿತ ಮುಕ್ತೇಸರರು ಲಾಭಿ ಮಾಡಿ ಬಂದವರೇ ಹೊರತು ಧರ್ಮಕಾರ್ಯ ವಿಧಿವಿಧಾನದ ಅರಿವಿಲ್ಲದವರು. ಇಂತವರು ದೇವರಿಗೆ ತಲುಪುವುದಿಲ್ಲ ಎಂದರೆ ಇದನ್ನು ನಂಬಬಹುದೇ?
ಈಗ ಮುಖ್ಯವಾಗಿ ಭಕ್ತರ ಹಿತದೃಷ್ಟಿಯಿಂದ ದೇವಸ್ಥಾನದ ಈ ಕಾರ್ಯದ ಮೇಲೆ string operation ಆಗಬೇಕಿದೆ. ಅಲ್ಲಿ ವ್ರತ ನಿಯಮಗಳು ಹೇಗೆ ನಡೆಯುತ್ತದೆ, ಎಷ್ಟು ವ್ಯಾಪಾರೀಕರಣ ನಡೆಯುತ್ತದೆ ಎಂದು ತಿಳಿಯಬಹುದು.
ಒಟ್ಟಿನಲ್ಲಿ ನಿಯಮಬದ್ಧವಾಗಿ ಭಕ್ತರ ಹಿತದೃಷ್ಟಿಯಲ್ಲಿ ದೇಶ- ಕಾಲ- ಪಾತ್ರಾನುಸಾರವಾಗಿ ನಡೆದರೆ ಅದು ಶಾಸ್ತ್ರ ಪ್ರಮಾಣವಾಗುತ್ತದೆ ಮತ್ತು ದೇವರಿಗೆ ಪ್ರಿಯವಾಗುತ್ತದೆ.
Discussion about this post