ಬೆಂಗಳೂರು: ತಮ್ಮ ನಿವಾಸದ ಮೇಲೆ ಐಟಿ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್, ಈಗಷ್ಟೇ ಬಂದಿದ್ದೇನೆ. ನನಗೆ ಹೆಚ್ಚಿನ ಮಾಹಿತಿ ಏನೂ ತಿಳಿದಿಲ್ಲ ಎಂದಿದ್ದಾರೆ.
ಮುಂಬೈನಿಂದ ತುರ್ತಾಗಿ ವಾಪಾಸಾದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ನನ್ನ ಕುಟುಂಬದವರನ್ನು ಸಂಪರ್ಕಿಸಲು ಮೊಬೈಲ್ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ನನಗೆ ಐಟಿ ದಾಳಿ ನಡೆದಿದೆ ಎಂದಷ್ಟೇ ತಿಳಿದಿದೆ. ಅದನ್ನು ಬಿಟ್ಟು ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿದರು.
ಕೆಜಿಎಫ್ ಚಿತ್ರದ ಯಶಸ್ಸಿನ ಕಾರಣಕ್ಕೆ ಐಟಿ ದಾಳಿ ನಡೆದಿದೆ ಎಂದು ಊಹಿಸುವುದು ತಪ್ಪು. ಈಗಿನ್ನೂ ಮನೆಗೆ ಹೋಗುತ್ತಿದ್ದೇನೆ. ನಂತರ ಏಕೆ ದಾಳಿ ನಡೆದಿದೆ ಎಂದು ತಿಳಿಯಲಿದೆ. ಏನೇ ಆಗಲಿ, ಪ್ರಜೆಗಳಾಗಿ ನಾವು ಕಾನೂನಿಗೆ ತಲೆ ಬಾಗಲೇಬೇಕು ಎಂದರು.

















