ಬೆಂಗಳೂರು: ಕನ್ನಡ ಚಿತ್ರರಂಗ ಕಂಡುಕೇಳರಿಯದ ಐಟಿ ದಾಳಿಗೆ ಸ್ಟಾರ್ ನಟರು ಹಾಗೂ ನಿರ್ಮಾಪಕರು ಒಳಗಾಗಿದ್ದು, ಅಧಿಕಾರಿಗಳು ನಟರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿಯಾಗಿದೆ.
ನಟ ಶಿವರಾಜ್ ಕುಮಾರ್ ಅವರ ನಿವಾಸದಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು, ಇದುವರೆಗೂ ತಮ್ಮ ಚಿತ್ರಗಳಿಗೆ ಪಡೆದ ಸಂಭಾವನೆಯ ಲೆಕ್ಕೆ ಕೇಳಿದ್ದು, ಮುಂದೆ ಒಪ್ಪಿಕೊಂಡಿರುವ ಚಿತ್ರಗಳು ಹಾಗೂ ಸಂಭವಾನೆಯ ಲೆಕ್ಕ ಕೊಡುವಂತೆ ಕೇಳಿದ್ದಾರೆ ಎನ್ನಲಾಗಿದೆ. ಅಲ್ಲದೇ, ವಿಲನ್ ಚಿತ್ರಕ್ಕೆ ಪಡೆದ ಸಂಭಾವನೆಯ ಲೆಕ್ಕವನ್ನು ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ಅಲ್ಲದೇ, ಶಿವರಾಜ್ ಕುಮಾರ್ ನಿವಾಸಕ್ಕೆ ಮಹಿಳಾ ಅಧಿಕಾರಿಗಳು ಆಗಮಿಸಿದ್ದು, ಗೀತಾ ಶಿವರಾಜ್ ಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಇನ್ನು, ಪುನಿತ್ ರಾಜ್ ಕುಮಾರ್ ಅವರ ನಿವಾಸದ ಮೇಲೂ ಸಹ ದಾಳಿ ನಡೆಸಿರುವ ಐಟಿ ಅಧಿಕಾರಿಗಳು, ಚಿನ್ನದ ಒಡವೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಇದಕ್ಕಾಗಿ ಚಿನ್ನ ಪರಿಶೋಧಕರ ತಂಡವನ್ನು ಅಧಿಕಾರಿಗಳು ಕರೆಸಿದ್ದು, ಪರಿಶೀಲನಾ ಯಂತ್ರಗಳನ್ನು ತಂದಿದ್ದಾರೆ ಎಂದು ವರದಿಯಾಗಿದೆ.
ಇನ್ನು, ಯಶ್ ಅವರ ಕತ್ರಿಗುಪ್ಪೆ ನಿವಾಸದ ಮೇಲೂ ಸಹ ದಾಳಿ ನಡೆದಿದ್ದು, ಸಂಭಾವನೆ ಹಾಗೂ ಯಶೋಮಾರ್ಗ ಸಂಸ್ಥೆಯ ಮೂಲಕ ನಡೆಸುತ್ತಿರುವ ಸಮಾಜ ಸೇವೆಗೆ ಬಳಸುತ್ತಿರುವ ಹಣದ ಮೂಲದ ದಾಖಲೆಗಳನ್ನು ಕೇಳಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತಂತೆ ಯಶ್ ಸಹೋದರಿ ಮನೆಯಿಂದ ಹೊರಕ್ಕೆ ತೆರಳಿದ್ದು ಮಾಧ್ಯಮಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರ ನಿವಾಸದ ಮೇಲೂ ದಾಳಿ ನಡೆಸಿರುವ ಐಟಿ ಅಧಿಕಾರಿಗಳು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ನಟಸಾರ್ವಭೌಮ ಚಿತ್ರಕ್ಕೆ ಸಂಬಂಧಿಸಿದಂತೆ ಖರ್ಚು ವೆಚ್ಚಗಳ ದಾಖಲೆ ಕೇಳಿದ್ದಾರೆ ಎಂದು ಹೇಳಲಾಗಿದ್ದು, ವೆಂಕಟೇಶ್ ಅವರ ವಿವಿಧ ಆದಾಯ ಮೂಲಗಳನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.
ವಿಚಾರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ವೆಂಕಟೇಶ್ ಅವರ ಕುಟುಂಬಸ್ಥರಿಗೆ ಅವರ ಮನೆಯಲ್ಲಿ ಹಾಲ್ ಮತ್ತು ಅಡುಗೆ ಮನೆಯಲ್ಲಿ ಮಾತ್ರ ಓಡಾಡುವ ಅವಕಾಶವನ್ನು ಅಧಿಕಾರಿಗಳು ಕಲ್ಪಿಸಿದ್ದಾರೆ ಎಂದು ವರದಿಯಾಗಿದೆ.
Discussion about this post