ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಹಿರಿಯ ಸಾಹಿತಿ ಪ್ರೊ. ನಿಸಾರ್ ಅಹ್ಮದ್ ಅವರೊಂದಿಗೆ ನಗರದಲ್ಲಿ ವಿನೂತನ ಕಾರ್ಯಕ್ರಮವೊಂದನ್ನು ಆಯೋಜಿಸುವ ಕುರಿತು ಚರ್ಚೆ ನಡೆದಿತ್ತು. ಆದರೆ, ಈಗ ಅವರಿಲ್ಲದೇ ಕಾರ್ಯಕ್ರಮ ರೂಪಿಸುವಂತಾಗಿರುವುದು ವಿಷಾದನೀಯ ಎಂದು ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ಡಾ. ಎಚ್. ಎಸ್. ನಾಗಭೂಷಣ ದುಃಖ ವ್ಯಕ್ತಪಡಿಸಿದರು.
ಇತ್ತೀಚೆಗೆ ನಿಧನರಾದ ಶ್ರೀನಿವಾಸ ಉಡುಪ ಹಾಗೂ ಪ್ರೊ. ನಿಸಾರ್ ಅಹ್ಮದ್ ಅವರಿಗೆ ಕರ್ನಾಟಕ ಸಂಘದ ವತಿಯಿಂದ ಸಂತಾಪ ಸೂಚಿಸಿ ಅವರು ಮಾತನಾಡಿದರು.
ಪ್ರೊ. ನಿಸಾರ್ ಅಹ್ಮದ್‌ರವರ ನಿತ್ಯೋತ್ಸವ ಕವನ ಸಂಕಲನ ಹಾಗೂ ಧ್ವನಿಸುರಳಿ ಹೊರಬಂದು ಐವತ್ತು ವರ್ಷ ಸಂದ ಸಂದರ್ಭದಲ್ಲಿ ಅವರ ನೇತೃತ್ವದಲ್ಲಿಯೇ ವಿನೂತನವಾದ ಕಾರ್ಯಕ್ರಮವನ್ನು ಸಂಘಟಿಸಲು ಚಿಂತನೆ ನಡೆಸಲಾಗಿತ್ತು. ಈ ಬಗ್ಗೆ ಅವರೊಂದಿಗೆ ಚರ್ಚೆಯೂ ನಡೆದಿತ್ತು. ಆದರೆ ಈಗ ಅವರಿಲ್ಲದೇ ಆ ಕಾರ್ಯಕ್ರಮವನ್ನು ರೂಪಿಸುವಂತಾಗಿದೆ ಎಂದು ವಿಷಾದಿಸಿದರಲ್ಲದೇ, ಕರ್ನಾಟಕ ಸಂಘದ ಬಗ್ಗೆ ನಿಸ್ಸಾರ್‌ರವರಿಗೆ ವಿಶೇಷವಾದ ಪ್ರೀತಿ ಅಭಿಮಾನ ಇತ್ತು ಎಂದು ಸ್ಮರಿಸಿದರು.
ನಮ್ಮ ಗುರುಗಳಾದ ಶ್ರೀನಿವಾಸ ಉಡುಪರನ್ನು ನೆನೆದು ಭಾವುಕರಾದರು. ಕಮಲಾ ನೆಹರೂ ಕಾಲೇಜು ಹಾಗೂ ಕರ್ನಾಟಕ ಸಂಘಕ್ಕೆ ಉಡುಪರು ನೀಡಿದ ಸೇವೆಯನ್ನು ಸ್ಮರಿಸಿದ ಅವರು, ಈ ರೀತಿಯ ಹಿರಿಯರು ಪ್ರಾಂಜಲ ಮನಸ್ಸಿನಿಂದ ಹಾಕಿಕೊಟ್ಟ ಭದ್ರವಾದ ಬುನಾದಿಯಿಂದಾಗಿಯೇ ಕರ್ನಾಟಕ ಸಂಘಕ್ಕೆ ರಾಜ್ಯ ಮಟ್ಟದಲ್ಲಿ ಮಾನ್ಯತೆ ದೊರೆತಿದೆ ಎಂದರು.
ಕರ್ನಾಟಕ ಸಂಘ ಪೂರ್ವಾಧ್ಯಕ್ಷೆ ವಿಜಯ ಶ್ರೀಧರ್‌ರವರು ಮಾತನಾಡಿ, 73ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ನಡೆದ ಮೆರವಣಿಗೆ ವೇಳೆ, ಕರ್ನಾಟಕ ಸಂಘದ ಎದುರು ಸಂಘದ ಪರವಾಗಿ ನಿಸಾರ್ ಅಹ್ಮದ್‌ರಿಗೆ ಮಾಲಾರ್ಪಣೆ ಮಾಡಿದ್ದನ್ನು ಸ್ಮರಿಸಿದರು.
ನಿಸಾರ್ ಅಹ್ಮದ್‌ರವರು ಆ ಮೆರವಣಿಗೆ ಸಂದರ್ಭದಲ್ಲಿಯೂ ಕರ್ನಾಟಕ ಸಂಘ ಹಾಗೂ ತಮ್ಮ ಬಾಂಧವ್ಯವನ್ನು ಸ್ಮರಿಸಿದ್ದರು. ಕರ್ನಾಟಕ ಸಂಘಕ್ಕೂ ನಿಸ್ಸಾರ್ ಅಹ್ಮದ್‌ರಿಗೂ ಅವಿನಾಭಾವ ಬಾಂಧವ್ಯವಿತ್ತು ಎಂದ ಅವರು, ಸರಳ ಸಜ್ಜನಿಕೆಯ ಶ್ರೀನಿವಾಸ ಉಡುಪರು, ಕರ್ನಾಟಕ ಸಂಘದ ಮಾಹಿತಿ ಕಿರುಹೊತ್ತಿಗೆ ಸಂಪಾದಕರಾಗಿ, ಅದಕ್ಕೊಂದು ಹೊಸ ಆಯಾಮವನ್ನೇ ನೀಡಿದ್ದರು ಎಂದು ಅಂದಿನ ದಿನಗಳನ್ನು ನೆನೆದು, ಅಗಲಿದ ಇಬ್ಬರ ಕೊಡುಗೆಯನ್ನು ಸ್ಮರಿಸಿದರು.
ಸಾಹಿತ್ಯ ಕ್ಷೇತ್ರಕ್ಕೆ ಶ್ರೀನಿವಾಸ ಉಡುಪ, ಹಾಗೂ ನಿಸಾರ್ ಆಹ್ಮದ್‌ರವರ ಕೊಡುಗೆಯನ್ನು ಕುರಿತು ಕರ್ನಾಟಕ ಸಂಘದ ನಿರ್ದೇಶಕರಾದ ಚಕ್ರಪಾಣಿ, ಪ್ರೊ. ನಂಜುಂಡಯ್ಯ, ಉದಯಶಂಕರ ಶಾಸ್ತ್ರಿ, ಡಾ. ಗುರುದತ್, ಪ್ರೊ. ಮಂಜುಳಾ ರಾಜು, ಶೀಲಾ ಸುರೇಶ್ ಮೊದಲಾದವರು ಮಾತನಾಡಿದರು. ಸಭೆಯಲ್ಲಿ ಪ್ರೊ. ಆಶಾಲತಾ, ವೈದ್ಯ, ಮೋಹನ ಶಾಸ್ತ್ರಿ ಮೊದಲಾದವರು ಉಪಸ್ಥಿತರಿದ್ದರು.
ಮೃತರ ಗೌರವಾರ್ಥ ಒಂದು ನಿಮಿಷ ಮೌನ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Get in Touch With Us info@kalpa.news Whatsapp: 9481252093
Discussion about this post