ಶಿಕಾರಿಪುರ: ಇತಿಹಾಸದಲ್ಲಿಯೇ ಹಿಂದೆದೂ ಕೇಳಿ ಕಂಡರಿಯದಂತೆ ವಿಧಾನಸಭೆಯಲ್ಲಿ ನೂರಾ ನಾಲ್ಕು ಸ್ಥಳಗಳಲ್ಲಿ ಜಯ ಸಾಧಿಸಿ ಪ್ರತಿಪಕ್ಷದ ಸ್ಥಾನದಲ್ಲಿ ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ, ವಿಧಾನಸಭಾ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದರು.
ಪತ್ರಿಕಾಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕೇವಲ ಮುವತ್ತೇಳು ಸದಸ್ಯರನ್ನು ಹೊಂದಿರುವವರು ಮುಖ್ಯಮಂತ್ರಿಯಾಗಿ, ಮಂತ್ರಿಯಾಗಿ ಅಧಿಕಾರ ನಡೆಸುತಿದ್ದಾರೆ ಇದು ಬೇಸರದ ಸಂಗತಿಯಾಗಿದೆ. ವಿಧಾನಸಭೆಯಲ್ಲಿ ನೂರಾ ನಾಲ್ಕು ಸದಸ್ಯರು ಏಕ ಕಾಲದಲ್ಲಿ ಹೋರಾಟ ನಡೆಸಿದರೆ ಆಡಳಿತ ಪಕ್ಷದವರು ಏನು ಮಾಡಲು ಸಾಧ್ಯವಿಲ್ಲ ಎಂದರು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದಂತೆ ಪತ್ರಿಕಾಂಗವೂ ಒಂದು ಅಂಗವಾಗಿದ್ದು ಸಮಾಜದ ಅಂಕು ಡೊಂಕು ಸರಿ ತಪ್ಪುಗಳನ್ನು ತಿದ್ದಿ ತೀಡುವ ಕೆಲಸ ಪತ್ರಿಕಾ ರಂಗವೂ ಒಂದಾಗಿದೆ ಎಂದರು.
ರಾಜ್ಯದಲ್ಲಿ ಕಳೆದೆರಡು ಮೂರು ವರ್ಷಗಳಿಂದ ಭೀಕರ ಬರಗಾಲದಿಂದ ರೈತರು ತತ್ತರಿಸಿ ಹೋಗಿದ್ದರು. ಈ ಬಾರಿ ಬಹುಬೇಗ ಉತ್ತಮ ಮಳೆಯಾಗುತಿದ್ದು ರಾಜ್ಯದ ಬಹುತೇಕ ಜಲಾಶಯಗಳು ತುಂಬಿ ಹರಿಯುತ್ತಿದೆ. ಅದೇರೀತಿ ಶಿಕಾರಿಪುರ ತಾಲೂಕಿನ ಅಂಜನಾಪುರ ಹಾಗೂ ಅಂಬ್ಲಿಗೊಳ್ಳದ ಜಲಾಶಯದಲ್ಲಿ ನೀರು ತುಂಬಿರುವುದರಿಂದ ರೈತರಲ್ಲಿ ಸಂತಸ ತಂದಿದೆ. ಅಂಜನಾಪುರ ಕೆರೆಯ ಕೋಡಿ ಒಡೆದು ಹೋದಾಗ ಅಲ್ಲಿ ಬಹಳಷ್ಟು ಶ್ರಮದಿಂದ ಮತ್ತೆ ಕೋಡಿ ನಿರ್ಮಾಣ ಮಾಡಲಾಗಿದೆ. ಅಂಜನಾಪುರ ಹಾಗೂ ಅಂಬ್ಲಿಗೊಳ್ಳದ ಜಲಾಶಯದಲ್ಲಿ ಕೋಡಿ ಏರಿಸಿ, ತಾಲೂಕಿನ ನೀರಾವರಿಗೆ ಆದ್ಯತೆ ನೀಡಲಾಗುತ್ತಿದೆ. ತಾಲೂಕಿನಲ್ಲಿ ಸಮಗ್ರ ನೀರಾವರಿಗಾಗಿ ಹೆಚ್ಚಿನ ಶ್ರಮ ವಹಿಸುತ್ತೇನೆ ಎಂದರು.
ಅನೇಕ ಶರಣ ಶರಣೆಯರು, ವಚನಕಾರರು ಜನ್ಮತಾಳಿದ ಈ ತಾಲೂಕನ್ನು ಈಗಾಗಲೇ ರಾಜ್ಯದಲ್ಲಿಯೇ ಮಾದರಿ ತಾಲೂಕನ್ನಾಗಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಶಿಕಾರಿಪುರ ತಾಲೂಕು ಪ್ರವಾಸಿ ತಾಣವಾಗಿಸಲು ಪ್ರಯತ್ನ ನಡೆದಿದೆ. ರೈಲ್ವೆ ಯೋಜನೆಗೆ ಕೇಂದ್ರದಿಂದ ಅನುಮೋದನೆ ದೊರಕಲಿದ್ದು ಕೂಡಲೇ ಅದಕ್ಕೆ ಕೇಂದ್ರ ಸರ್ಕಾರದಿಂದ ಚಾಲನೆ ನೀಡಲಾಗುವುದು.
2011-12, 2013-14 ರಲ್ಲಿ ತಾಲೂಕಿನ ಒಂಬತ್ತು ಕಡೆಯಲ್ಲಿ 35 ಕೋಟಿ ಅನುದಾನ ನೀಡಿ, 110 ಕೆವಿ ವಿದ್ಯುತ್ ಘಟಕ ನಿರ್ಮಾಣ ಕಾರ್ಯ ಮಾಡುವ ಮೂಲಕ ಸುಮಾರು ಇಪ್ಪತ್ತೈದು ಸಾವಿರ ಬೋರ್ವೆಲ್ ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಂಚಾಲಕ ಕೆ.ಎಸ್. ಹುಚ್ರಾಯಪ್ಪ ಮಾತನಾಡಿ, ಪತ್ರಿಕಾ ಭವನ ನಿರ್ಮಾಣ ಮಾಡಲು ಯಡಿಯೂರಪ್ಪರವರ ಕೊಡುಗೆ ಅಪಾರವಾಗಿದೆ. ಅದೇರೀತಿ ಶಿಕಾರಿಪುರ ತಾಲೂಕಿನಲ್ಲಿ ರೈಲ್ವೇ ಯೋಜನೆಯು ಅತಿ ಶೀಘ್ರದಲ್ಲಿ ನಡೆಯಬೇಕಿದೆ ಎಂದರು.
ಮಾಜಿ ಶಾಸಕ ಬಿ.ವೈ. ರಾಘವೇಂದ್ರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ವೈಭವ ಶಿವಣ್ಣ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಿಕಟ ಪೂರ್ವ ಅಧ್ಯಕ್ಷ ಅರುಣ್ ಕುಮಾರ್, ಮಾಜಿ ಅಧ್ಯಕ್ಷ ರಾಜು ಜೋಯ್ಸ್, ತಾಲೂಕು ಕಾರ್ಯನಿರತ ಪತ್ರಕರ್ತರ ಟ್ರಸ್ಟಿನ ಅಧ್ಯಕ್ಷ ಬಿ.ಎಲ್. ರಾಜು, ಸಂಘದ ಕಾರ್ಯದರ್ಶಿಯಾದ ಎಚ್.ಎಸ್. ರಘು, ಸೇರಿದಂತೆ ಸಂಘದ ಎಲ್ಲಾ ಸದಸ್ಯರು ಹಾಜರಿದ್ದರು.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)















