ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ಟಾರ್ ನಟರು ಹಾಗೂ ನಿರ್ಮಾಪಕರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೊಡ್ಡ ಮಟ್ಟದಲ್ಲಿ ದಾಳಿ ನಡೆಸಿದ್ದು, ಇಡಿಯ ಕನ್ನಡ ಚಿತ್ರರಂಗವನ್ನು ಬೆಚ್ಚಿ ಬೀಳಿಸಿದೆ.
ಸ್ಟಾರ್ ನಟರಾದ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಸುದೀಪ್, ಯಶ್ ಹಾಗೂ ಯಶಸ್ವಿ ನಿರ್ಮಾಪಕರಾದ ರಾಕ್‌ಲೈನ್ ವೆಂಕಟೇಶ್, ವಿಜಯ್ ಕಿರಗಂದೂರು ಸೇರಿದಂತೆ ಒಟ್ಟು 8 ಮಂದಿ ಚಿತ್ರರಂಗದ ಪ್ರಮುಖರ ಮೇಲೆ ಇಂದು ಬೆಳಗಿನ ಜಾವ ದಾಳಿ ನಡೆಸಿದ್ದು, ನಿರಂತರವಾಗಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಇದಕ್ಕಾಗಿ ಬಿಗಿ ಪೊಲೀಸ್ ಭದ್ರತೆಯನ್ನೂ ಸಹ ಪಡೆದುಕೊಳ್ಳಲಾಗಿದೆ.
ಚಿತ್ರರಂಗದ ದಿಗ್ಗಜರ ನಿವಾಸಗಳ ಮೇಲೆ ಈ ರೀತಿ ದಾಳಿ ನಡೆಸುವ ಮುನ್ನ ಸುಮಾರು ಒಂದರಿಂದ ಆರು ತಿಂಗಳ ಹಿಂದಿನಿಂದಲೂ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಈ ಎಂಟು ಮಂದಿಯ ಕುರಿತಾಗಿ ಸಂಪೂರ್ಣ ಮಾಹಿತಿ ಕಲೆ ಹಾಕಿದ ಆದಾಯ ತೆರಿಗೆ ಅಧಿಕಾರಿಗಳು, ದಾಳಿ ನಡೆಸಲು ದೊಡ್ಡ ಮಟ್ಟದಲ್ಲಿ ತಯಾರಿ ನಡೆಸಿದ್ದಾರೆ.
ಇದಕ್ಕಾಗಿ ಸುಮಾರು 200ಕ್ಕೂ ಅಧಿಕ ಐಟಿ ಅಧಿಕಾರಿಗಳನ್ನು ಇದಕ್ಕಾಗಿ ಬಳಸಿಕೊಂಡಿದ್ದು, ಇದಕ್ಕಾಗಿ ಕೇರಳ, ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಂದ ಅಧಿಕಾರಿಗಳನ್ನು ಕರೆಸಿಕೊಳ್ಳಲಾಗಿದ್ದು, ಬಹುತೇಕ ಸ್ಥಳೀಯ ಅಧಿಕಾರಿಗಳನ್ನು ಈ ಕಾರ್ಯಾಚರಣೆಯಿಂದ ಹೊರಕ್ಕೆ ಇಡಲಾಗಿದೆ. ಹಲವು ಸಭೆಗಳನ್ನು ನಡೆಸಿ, ಎಲ್ಲೂ ಮಾಹಿತಿ ಸೋರಿಕೆಯಾಗದಂತೆ ನೋಡಿಕೊಳ್ಳಲಾಗಿದೆ.
ಎಂಟೂ ಗಣ್ಯ ನಿವಾಸದ ಮೇಲೆ ಏಕಕಾಲಕ್ಕೆ ದಾಳಿ ನಡೆಸಬೇಕು ಎಂದು ತಯಾರಿ ನಡೆಸಿ, ಇದಕ್ಕಾಗಿ ಅಧಿಕಾರಿಗಳ ತಂಡವನ್ನು ರಚನೆ ಮಾಡಲಾಗಿದೆ. ಅಲ್ಲದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಪೊಲೀಸ್ ಇಲಾಖೆ ಸಹಕಾರ ಪಡೆದು, ಭದ್ರತೆಯೊಂದಿಗೆ ತೆರಳಲಾಗಿದೆ. ದಾಳಿ ನಡೆಸಿದ ಬಹುತೇಕ ಅಧಿಕಾರಿಗಳ ಖಾಸಗಿ ಬಾಡಿಕೆ ಕಾರಿನಲ್ಲಿ ನಟರ ನಿವಾಸಗಳಿಗೆ ತೆರಳಿದ್ದಾರೆ.
ಅತ್ಯಂತ ಪ್ರಮುಖವಾಗಿ, ದಾಳಿ ನಡೆಸಿ, ಪರಿಶೀಲನೆ ನಡೆಸಲು ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಅಗತ್ಯವಿರುತ್ತದೆ. ಹೀಗಾಗಿ, ಇಂದು ದಾಳಿ ನಡೆಸಲು ಸಕಲ ಸಿದ್ದತೆ ಮಾಡಿಕೊಂಡು, ನಿನ್ನೆ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದುಕೊಂಡು ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.
ಪ್ರಮುಖವಾಗಿ ನಾಲ್ಕು ಸ್ಟಾರ್ ನಟರ ಮೇಲೆ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ನಟರ ನಿವಾಸದ ಬಳಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

















