ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅ’ಮರ’
ಹ್ಮ್ ಆ ಮರದ ಬಳಿ ಹೋಗಿದ್ದೆ, ನನ್ನ ಅಪ್ಪನನ್ನು ನೋಡಿದಷ್ಟೇ ಸಂತಸವಾಯಿತು. ಅಪ್ಪ ನೆಟ್ಟ ಮರ ಅದು, ಬಹುಶಃ ಅದಕ್ಕೆ ಅಪ್ಪನಷ್ಟೇ ವಯಸ್ಸು. ಅವರು ತೀರಿ ಮೂರು ವರ್ಷ ಆಯಿತು. ಆ ಮರದ ಬದಿಯಲ್ಲಿಯೇ ಅವರ ಸಮಾಧಿ. ನೋವು ಸಂತಸ ಅಂದಾಗೆಲ್ಲ ಅಪ್ಪ ಓಡುತ್ತಿದ್ದುದು ಅಲ್ಲಿಗೆ. ನಾನು ಹುಟ್ಟಿದ್ದು ಆ ಮರದ ಕೆಳಗೆ ಅಮ್ಮನ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಅಂತೆ. ಅಪ್ಪ ಸತ್ತಿಲ್ಲ, ಸಾಯುವುದು ಇಲ್ಲ. ಮರದಿ ಮರವಾಗಿ, ಉಸಿರ ಉಸಿರಾಗಿ ಈಗಲೂ ಅಲ್ಲಿದ್ದಾರೆ. ಅಪ್ಪ ತೀರಿದಾಗ ಎಲೆಗಳ ಕಳೆದು ನಿಂತಿತ್ತು. ಅದು ಕೂಡ ನೊಂದಿತ್ತೇನೋ ಅನ್ನಿಸುತ್ತಿತ್ತು. ಒಂದಿಡೀ ವರ್ಷ ಚಿಕ್ಕ ಚಿಗುರು ಕಂಡಿರಲಿಲ್ಲ. ಊರಲ್ಲಿ ನಡೆಯುವ ಪ್ರತಿಯೊಬ್ಬರೂ ಅಪ್ಪನೊಡನೆ ಮರವು ತೀರಿತು ಎಂದವರೇ. ಅದೊಂದು ರಾತ್ರಿ ಅಪ್ಪ ಕನಸಿನಲ್ಲಿ ಬಂದು ಅದರ ಬುಡದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಹೇಳಿದಂತೆ ಭಾಸ. ವ್ಯವಸ್ಥೆ ಆಯಿತು ಮತ್ತೆ ಮರ ಮರಳಿತು. ಸಂದಿಗ್ಧತೆ ನೋಡಿ. ರೈಲು ಮಾರ್ಗಕ್ಕಾಗಿ ಆ ಮರವನ್ನು ಕಡಿದು ಹಾಕುತ್ತಾರಂತೆ.
ಬಿಳಲುಗಳ ಕಡಿದರೆ ಅಪ್ಪ ಆ ದಿನ ಊಟ ಮಾಡುತ್ತಿರಲಿಲ್ಲ. ಇನ್ನು ಮರವನ್ನು ಕಡಿದು ಬಿಟ್ಟರೆ ಅವರು ನಮ್ಮಿಂದ ಪೂರ್ತಿ ದೂರ ಆಗಿಬಿಡುತ್ತಾರೆ. ಏನಾದರೂ ಮಾಡಲೇಬೇಕು.
ಅಧಿಕಾರಿ, ಇಲಾಖೆ, ಮಂತ್ರಿ, ಕೋರ್ಟು, ಹೋರಾಟ ಎಲ್ಲವೂ ಆಯಿತು. ವೃಕ್ಷ ಕಡಿದೇ ಸಿದ್ಧ ಎಂಬುದವರ ನಿರ್ಣಯ. ಯಕಶ್ಚಿತ್ ಒಂದು ಮರಕ್ಕಾಗಿ ಊರಿಗೆ ಬರುವ ರೈಲು ತಡೆಯುತ್ತಿದ್ದಾನೆ ಅಂದುಕೊಂಡರು ಎಲ್ಲರೂ. ನನ್ನ ಪಾಲಿಗೆ ಅದು ಯಕಶ್ಚಿತ್ ಬಿಡಿ, ಮರವೂ ಅಲ್ಲ. ನನ್ನ ಅಪ್ಪ, ನನ್ನ ದೈವ. ಇನ್ನು ತಡ ಮಾಡಲು ಸಾಧ್ಯವೇ ಇಲ್ಲ. ಕಾಮಗಾರಿ ಅದಾಗಲೇ ಆರಂಭಿಸಿ ಆಗಿದೆ. ಬಂದಿರುವ ಹೊಸ ಅಧಿಕಾರಿ ತುಂಬಾ ಜೋರಂತೆ. ಯಾರ ಮಾತನ್ನೂ ಕಿವಿಗೆ ಹಾಕಿಕೊಳ್ಳಲ್ಲವಂತೆ. ಏನು ಮಾಡುವುದು? ಅವರನ್ನು ಕಂಡು ಬರುವುದು ಎಂದುಕೊಂಡು ಹೊರಟೆ.
ನನ್ನ ಕಂಡು ಮತ್ತೆ ಕಛೇರಿಯ ತುಂಬೆಲ್ಲಾ ಗುಸು ಗುಸು. ಮತ್ತೆ ಬಂದ ಮರವುಳಿಸಲು ಅಂತ. ಸರ್ ನಮಸ್ತೆ.. ಪತ್ರಿಕೆಯ ಬದಿಯಲ್ಲಿ ಕಂಡ ಮುಖಕ್ಕೆ ನಮಸ್ಕಾರ ಮಾಡಿದೆ. ಹೋ ನೀವು ಮರವುಳಿಸುವವರು, ಬನ್ನಿ ಕುಳಿತುಕೊಳ್ಳಿ. ಇಷ್ಟು ಮರ್ಯಾದೆ ಆ ಜಾಗದಲ್ಲಿ ಸಿಕ್ಕಿದ್ದು ಇದೇ ಮೊದಲು. ಮಾತನಾಡಲು ಒಂದು ಧೈರ್ಯ ಬಂದಿತು. ನೀವೇನು ಮಾಡುತ್ತಿದ್ದೀರಿ ಗೊತ್ತಾ? ಸರ್ಕಾರದ ಕೆಲಸವನ್ನು, ಜನಪಯೋಗಿ ಯೋಜನೆಯನ್ನು ತಡೆದಿದ್ದೀರಿ. ಸರ್ಕಾರಿ ಮತ್ತು ಕೋರ್ಟಿನ ಸಮಯವನ್ನು ಇಷ್ಟು ವ್ಯರ್ಥ ಮಾಡಿದ್ದೀರಿ. ತಪ್ಪಲ್ಲವೇ? ನನಗೆ ಮಾತನಾಡಲು ಏನೂ ಇರಲಿಲ್ಲ. ನನ್ನ ಕನಸುಗಳೆಲ್ಲಾ ಸತ್ತು ಹೋದ ಅನುಭವ. ಅವರೇ ಮತ್ತೆ ಮಾತನಾಡಿದರು. ಆದರೆ ನನಗೆ ನಿಮ್ಮ ಹೋರಾಟ ಹಿಡಿಸಿತು. ನಿಮ್ಮಂಥ ಜನರೂ ಇದ್ದಾರೆ ಎಂದು ನಿಮ್ಮ ನೋಡಿದ ಮೇಲೆ ತಿಳಿದಿದ್ದು. ಪರಿಸರ ದಿನಕ್ಕೆ ಪುಟಗಟ್ಟಲೆ ಪಾಠ ಮಾಡುವ ನಮ್ಮ ನಡುವೆಯೇ ಕೋರ್ಟಿನ ಸಮನ್ಸ್ ಮುಂದೆಯೂ ಪಟ್ಟು ಹಿಡಿದು ಕೂತಿದ್ದೀರಿ. ಆ ದೇವರು ನಿಮ್ಮ ಸಂತತಿ ಸಾವಿರ ಮಾಡಲಿ. ನಾನು ನಿಮಗೆ ಒಂದು ಪುಟ್ಟ ಸಹಾಯ ಮಾಡಬಲ್ಲೆ. ನೀವು ಆ ಮರಕ್ಕೆ ಬದಲಾಗಿ ಬದಿಯಲ್ಲಿ ಜಾಗ ನೀಡಿದರೆ ನಾನು ಮರ ಉಳಿಸಿ ಕೊಡಬಲ್ಲೆ. ಅಬ್ಬಾ ಉಸಿರು ಬಂದಂತೆ ಆಯಿತು. ಕಣ್ಣುಗಳಲ್ಲಿ ಕಂಬನಿ ಧಾರಾಕಾರವಾಗಿ ಇಳಿಯುತ್ತಿದ್ದವು. ಕಣ್ಣೋರಿಸಿಕೊಳ್ಳಲು ಹೇಳಿ ಕುಡಿಯಲು ನೀರು ಕೊಟ್ಟರು. ನಾನು ಮರವುಳಿಸಿಲ್ಲ, ನಿಜಕ್ಕೂ ನೀವು ಉಳಿಸಿದಿರಿ. ದೇವರು ನಿಮ್ಮಂಥವರಲ್ಲಿ ಇದ್ದು ನಮ್ಮನ್ನು ಕಾಯುತ್ತಾರೆ ಎಂದೆ. ತುಂಬಾ ದೊಡ್ಡ ಮಾತು. ನಾನು ದೇವರಲ್ಲ. ನಿಮ್ಮ ಅಭಿಮಾನಿ ಅಂದುಕೊಳ್ಳಿ. ಚಿಕ್ಕ ಸಮಸ್ಯೆ ಇದೆ. ಬದಲಿ ಜಾಗವನ್ನು ನಾಳೆಯೊಳಗೆ ನೀವು ತಿಳಿಸಲೇಬೇಕು. ನಾನು ನಾಳೆ ಸಂಜೆ ಮೇಲಿನ ಕಛೇರಿಗೆ ಹೋಗಿ ಅದಕ್ಕೆ ಅನುಮತಿ ತರಬೇಕು. ಸರಿ ಎಂದು ನಮಸ್ಕರಿಸಿ ಹೊರಟೆ.
ಇಡೀ ರಾತ್ರಿ ಒಂದಿನಿತೂ ಮಲಗಲಿಲ್ಲ. ಮನೆಯ ಹೊರಗೆ ಕಾಲಿಟ್ಟಾಗ ಮುಳ್ಳೊಂದು ಕಾಲಡಿಗೆ ಸಿಕ್ಕಿತು. ಚುರುಕ್ ಎಂದಿತು. ರಕ್ತ ಬಸಿಯುತ್ತಿದ್ದ ಸೀಳಿದ ಅಂಗಾಲಿಗೆ ಬಟ್ಟೆ ಕಟ್ಟಿಕೊಂಡು ಮರದಡಿ ಬಂದೆ. ಮರದಿಂದ ನಮ್ಮವರು ದೂರವಾದರು, ಊರ ಜನ ಮಾತನಾಡಿಸುವುದು ಬಿಟ್ಟರು, ಲಕ್ಷಾಂತರ ರೂಪಾಯಿ ಹಣ ವ್ಯರ್ಥ ಆಯಿತು, ಕೋರ್ಟು ಕಛೇರಿ ಅಂತ ಕಾಲವೂ ಕಳೆದು ಹೋಗಿದೆ, ಈಗ ಕಾಲ ಗಾಯ, ಮುಂದೊಂದು ದಿನ ಮರವುರುಳಿ ಮನೆಯ ಮೇಲೆ ಬಿದ್ದರೆ…. ಅಂಗೈಯಗಲ ಜಾಗದಲ್ಲಿ ಬದಲಿ ಜಾಗವನ್ನು ಎಲ್ಲಿಂದ ನೀಡಬೇಕು? ಮನದ ತುಂಬಾ ಹಿಂದೆಂದೂ ಕಾಣದ ಪ್ರಶ್ನೆಗಳು. ನಿರ್ಧಾರಕ್ಕೆ ಬಂದಿದ್ದೆ ಇವತ್ತಿಗೆ ಆರು ವರ್ಷಗಳ ಹಿಂದೆ. ಮನೆಯಂಗಳದ ತುದಿಯಲ್ಲಿ ರೈಲು ಓಡುತ್ತಲೇ ಇದೆ.. ಮರದ ಬದಿಗೆ, ಅಪ್ಪನ ಸಮಾಧಿಯ ಮೇಲೆ..
Get In Touch With Us info@kalpa.news Whatsapp: 9481252093
Discussion about this post