ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆ ಚಿತ್ರ ಜೇಮ್ಸ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಉಕ್ಕಿನ ನಗರಿಯಲ್ಲಿ ಅಪ್ಪು ಹಬ್ಬ ಜೋರಾಗಿದೆ.
ಪುನೀತ್ ರಾಜಕುಮಾರ್ ಜನ್ಮದಿನವಾದ ಮಾರ್ಚ್ 17ರ ನಾಳೆ ಜೇಮ್ಸ್ ಚಿತ್ರ ನಗರದ ಸತ್ಯ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದ್ದು, ಇಂದು ನಗರದ ಪ್ರಮುಖ ರಸ್ತೆಗಳಲ್ಲಿ ಅಪ್ಪು ಅಭಿಮಾನಿಗಳು ಬೃಹತ್ ಮೆರವಣಿಗೆ ನಡೆಸಿದರು.

ಹತ್ತಾರು ಆಟೋ ಹಾಗೂ ವಾಹನಗಳ ಮೇಲೆ ಪುನೀತ್ ಭಾವಚಿತ್ರದ ಮೆರವಣಿಗೆ ನಡೆಸಲಾಗಿದ್ದು, ಡಿಜೆ, ಲೈಟಿಂಗ್ಸ್ ಇದಕ್ಕೆ ಮೆರುಗು ನೀಡಿತ್ತು.
ಸಾವಿರಾರು ಸಂಖ್ಯೆಯನ್ನು ಅಪ್ಪು ಅಭಿಮಾನಿಗಳು ಪಾಲ್ಗೊಂಡು ಕುಣಿದು ಕುಪ್ಪಳಿಸಿದರು. ತಮ್ಮ ನೆಚ್ಚಿನ ನಟನನ್ನು ಕಳೆದುಕೊಂಡ ನೋವನ್ನು ಮರೆತು, ಪುನೀತ್ ತಮ್ಮೊಂದಿಗೇ ಇದ್ದಾರೆ, ಎಲ್ಲೂ ಹೋಗಿಲ್ಲ ಎಂದು ಸಂಭ್ರಮದಿಂದ ಅಪ್ಪು ಜನ್ಮದಿನ ಆಚರಣೆ ಜೊತೆಗೆ ಜೇಮ್ಸ್ ಚಿತ್ರವನ್ನೂ ಸ್ವಾಗತಿಸುತ್ತಿದ್ದರು.
ನಗರದ ಬಿ.ಎಚ್ ರಸ್ತೆ 3ನೇ ವಾರ್ಡ್ ವ್ಯಾಪ್ತಿಯ ಚಾಮೇಗೌಡ ಏರಿಯಾದ ಡಾ. ರಾಜ್‌ಕುಮಾರ್ ಅಭಿಮಾನಿಗಳು ಮತ್ತು ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಬುಧವಾರವಾರ ಸಂಜೆ ನಗರದ ಬಿ.ಎಚ್ ರಸ್ತೆ ಹುತ್ತಾ ಬಸ್‌ನಿಲ್ದಾಣದಿಂದ ಸತ್ಯ ಚಿತ್ರ ಮಂದಿರದವರೆಗೂ ಜೇಮ್ಸ್ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಚಿತ್ರಮಂದಿರದ ಆವರಣದಲ್ಲಿ ಪುನೀತ್‌ರಾಜ್‌ಕುಮಾರ್‌ರವರ ಭಾವಚಿತ್ರ ಅನಾವರಣಗೊಳಿಸಲಾಯಿತು. ಸಿಡಿಮದ್ದು ಸಿಡಿಸುವ ಮೂಲಕ ಸಂಭ್ರಮಾಚರಣೆ ನಡೆಸಿ ಸಿಹಿ ಹಂಚಲಾಯಿತು.
ಮೆರವಣಿಗೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹೆಚ್ಚಿನ ಭದ್ರತೆ ಒದಗಿಸಿ ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಕೈಗೊಂಡಿತ್ತು. ಭದ್ರಾವತಿ ಪೊಲೀಸರು ಮೆರವಣಿಗೆಯುದ್ದಕ್ಕೂ ಉಪಸ್ಥಿತರಿದ್ದು, ಭದ್ರತಾ ವ್ಯವಸ್ಥೆ ಮಾಡಿದ್ದು ಶ್ಲಾಘನೀಯ.ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















