ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಗರ #Sagara ತಾಲೂಕಿನ ಇರುವಕ್ಕಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವವು ಜ.22 ರಂದು ಮಧ್ಯಾಹ್ನ 2ಗಂಟೆಗೆ ಇರುವಕ್ಕಿ ವಿವಿ ಆವರಣದಲ್ಲಿಯೇ ಜರುಗಲಿದೆ ಎಂದು ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಒಂದು ದಶಕದಿಂದ ಶೈಕ್ಷಣಿಕ, ಸಂಶೋಧನೆ ಮತ್ತು ವಿಸ್ತರಣೆ ಉದ್ದೇಶವನ್ನಿಟ್ಟುಕೊಂಡು ಒಟ್ಟು 12 ಒಡಂಬಡಿಕೆಗಳಿಗೆ ಸಹಿ ಹಾಕಿ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ತಮ್ಮ ವಿವಿ ಈ ಬಾರಿ ಸಮಾಜವಾದಿ ನಾಯಕ, ಮುತ್ಸದ್ದಿ ರಾಜಕಾರಣಿ ಕಾಗೋಡು ತಿಮ್ಮಪ್ಪನವರಿಗೆ #KagoduTimmappa ಗೌರವ ಡಾಕ್ಟರೇಟ್ ನೀಡುತ್ತಿರುವುದು ಈ ಬಾರಿಯ ಘಟಿಕೋತ್ಸವದ ವಿಶೇಷವಾಗಿದೆ ಎಂದರು.
Also Read>> ದಿನದ 24 ಗಂಟೆಯೂ ತಾಲೂಕು ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ | ಸಚಿವ ದಿನೇಶ್ ಗುಂಡೂರಾವ್
ಕರ್ನಾಟಕ ಸರ್ಕಾರದ ಗೌರವಾನ್ವಿತ ರಾಜ್ಯಪಾಲರೂ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ಥಾವರ್‌ಚಂದ್ ಗೆಹ್ಲೋಟ್ ಅವರು ಈ ಘಟಿಕೋತ್ಸವವನ್ನು ಉದ್ಘಾಟಿಸಿ ಪದವಿ ಪ್ರದಾನ ಮಾಡಲಿದ್ದಾರೆ. ಕರ್ನಾಟಕ ಸರ್ಕಾರದ ಕೃಷಿ ಸಚಿವರು ಹಾಗೂ ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳಾಗಿರುವ ಎಸ್. ಚೆಲುವರಾಯಸ್ವಾಮಿ ಘಟಿಕೋತ್ಸವದಲ್ಲಿ ಭಾಗವಹಿಸುವರು. ಬೆಂಗಳೂರಿನ ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ ಮತ್ತು ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ. ಎಲ್ .ಎಸ್. ಶಶಿಧರ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.

ಈ ಘಟಿಕೋತ್ಸವ ಸಮಾರಂಭದಲ್ಲಿ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳು, ಶೈಕ್ಷಣಿಕ ಪರಿಷತ್ತಿನ ಸದಸ್ಯರುಗಳು, ವಿಶ್ರಾಂತ ಕುಲಪತಿಗಳು, ಡೀನ್‌ಗಳು ಮತ್ತು ನಿರ್ದೇಶಕರು, ವಿಶ್ರಾಂತ ಅಧಿಕಾರಿಗಳು ಹಾಗೂ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳು, ಆಹ್ವಾನಿತ ಗಣ್ಯರು, ಪದಕ ದಾನಿಗಳು, ವಿದ್ಯಾರ್ಥಿಗಳು ಅವರ ಪಾಲಕ- ಪೋಷಕರು ಭಾಗವಹಿಸಲಿದ್ದಾರೆ.
ಕಾಗೋಡು ತಿಮ್ಮಪ್ಪನವರು ಕೃಷಿಕರು, ಕೃಷಿ ವ್ಯವಸ್ಥೆಗೆ ಬೆಂಬಲವಾಗಿದ್ದು ಜನೋಪಯೋಗಿ ಕಾರ್ಯವನ್ನೇ ರಾಜಕಾರಣ ಎಂದೆಣಿಸಿದವರು ಹಾಗೂ ಸಮಾಜವಾಧಿ ಚಿಂತಕರು. ಗ್ರಾಮೀಣ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ಇವರ ಪರಿಶ್ರಮ ಇವರನ್ನು ಕರ್ನಾಟಕ ರಾಜಕಾರಣದಲ್ಲಿ ಅಪರೂಪದ ವ್ಯಕ್ತಿಯನ್ನಾಗಿಸಿದೆ. ಇವರು ಕೃಷಿ ವ್ಯವಸ್ಥೆ ಗ್ರಾಮೀಣ ಬದುಕನ್ನು ಹಸನು ಮಾಡಲು ಶ್ರಮಿಸಿದ ಸೇವೆ’ ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಅಭಿವೃದ್ಧಿಪಡಿಸುವಲ್ಲಿ ಮಾಡಿದ ಅವರ ಸೇವೆ ಸ್ಮರಿಸಿ ಗೌರವಿಸಲು ಅವರಿಗೆ ಈ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ವಿಶ್ವವಿದ್ಯಾಲಯದಿAದ ಈ ವರ್ಷ ಒಟ್ಟು ಐದು ತಳಿಗಳ ಬಿಡುಗಡೆಗೆ ಶಿಫಾರಸ್ಸು ಮಾಡಲಾಗಿದೆ ಎಂದರು.
ವಿಶ್ವವಿದ್ಯಾಲಯದಲ್ಲಿ ಕೃಷಿ ಅರ್ಥಶಾಸ್ತ್ರ, ಕೃಷಿ ಸಂಖ್ಯಾಶಾಸ್ತ್ರ ಮತ್ತು ಆಹಾರ ಹಾಗೂ ಪೋಷಣೆ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳನ್ನು ಹೊಸದಾಗಿ ಕಳೆದ ವರ್ಷದಿಂದ ಇರುವಕ್ಕಿಯಲ್ಲಿ ಹಾಗೂ ಶಿವಮೊಗ್ಗ ಆವರಣದಲ್ಲಿ ಸೂಕ್ಷ್ಮ ಜೀವಶಾಸ್ತ್ರ ವಿಭಾಗ ಮತ್ತು ಮೂಡಿಗೆರೆ ಆವರಣದಲ್ಲಿ ಕೊಲ್ಲೋತ್ತರ ನಿರ್ವಹಣೆ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಪ್ರಸಕ್ತ ವರ್ಷದಲ್ಲಿ ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಮ್ಮ ವಿಶ್ವವಿದ್ಯಾಲಯದ 5 ವಿದ್ಯಾರ್ಥಿಗಳು ಕೃಷಿ ವಿಜ್ಞಾನಿಗಳಾಗಿ, ಒಬ್ಬ ವಿದ್ಯಾರ್ಥಿ ಇಂದಿರಾಗಾAಧಿ ಮುಕ್ತ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಶಿಕ್ಷಣ ನಿರ್ದೇಶಕ ಡಾ.ಹೇಮ್ಲಾ ನಾಯ್ಕ್, ಕುಲಸಚಿವರ ಡಾ.ಕೆ.ಸಿ.ಶಶಿಧರ, ವಿಸ್ತರಣಾ ನಿರ್ದೇಶಕ ಕೆ.ಟಿ.ಗುರುಮೂರ್ತಿ, ಸಂಶೋಧನಾ ನಿರ್ದೇಶಕ ದುಶ್ಯಂತಕುಮಾರ್, ಡಾ.ನಾರಾಯಣ ಎಸ್.ಮಾವರ್ಕರ್, ಡಾ.ಬಿ.ಕೆ.ಶಿವಣ್ಣ ಮೊದಲಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post