ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಪ್ರವಾಸಿಗರನ್ನು ಸೆಳೆಯುವ ಜಪಾನೀಯರ ಚಹಾ ಉದ್ಯಾನವಿದೆ. (Japanese Tea Garden). ಸ್ಯಾನ್ ಫ್ರಾನ್ಸಿಸ್ಕೋ ನಗರದ ಗೋಲ್ಡನ್ ಗೇಟ್ ಪಾರ್ಕಿನ ಸರಹದ್ದಿನಲ್ಲಿ ಕಂಗೊಳಿಸುತ್ತಿದೆ ಆ ಚಹಾ ಉದ್ಯಾನ. ಅಲ್ಲಿ ಚಹಾ ಬೆಳೆಯುವುದಿಲ್ಲ. ಬದಲಾಗಿ ಬಗೆಬಗೆ ರುಚಿಭರಿತ ಚಹಾ ತಯಾರಿಸುತ್ತಾರೆ.
ಚಹಾ, ಜಪಾನೀಯರ ನೆಚ್ಚಿನ ಪೇಯ. ರಾತ್ರಿಯ ಧ್ಯಾನ ವೇಳೆಯಲ್ಲಿ ಬೌದ್ಧ ಸಂತರು ಎಚ್ಚರವಿರಬೇಕಿತ್ತು. ಅದಕ್ಕಾಗಿ ಬಿಸಿನೀರು ಸದಾ ಇರುತ್ತಿತ್ತು. ಆದರಲ್ಲಿ ಚಹಾ ತಯಾರಿಸುತ್ತಿದ್ದರು. ವಿವಿಧ ರುಚಿಯ ಚಹಾ ತಯಾರಿಕೆಯಲ್ಲೂ ಅವರು ನಿಪುಣರಾಗಿದ್ದರು.
ಇಲ್ಲಿಗೆ ತೆರಳಲು ಪ್ರವೇಶ ಶುಲ್ಕ ನೀಡಬೇಕು. ತಂಪುತಂಪಾಗಿರುವ ಈ ಉದ್ಯಾನದ ಒಳಹೊಕ್ಕರೆ ರೆಫ್ರಿಜಿರೇಟರ್ ಒಳಗೆ ಇರುವಂತೆ ಭಾಸವಾಗುತ್ತದೆ, ಅಷ್ಟು ಚಳಿ. ಅಲ್ಲಿ ಮಳೆಯಿಲ್ಲ, ಹಿಮಪಾತವಿಲ್ಲ. ಆದರೆ ಅಲ್ಲಿರುವ ಪುಟ್ಟ ಸರೋವರ, ಕುಬ್ಜ ಹಾಗೂ ಎತ್ತರ ನಿಂತ ವೃಕ್ಷಗಳು, ಹಕ್ಕಿಗಳು ಅಲ್ಲಿನ ವಾತಾವರಣವನ್ನು ತಣ್ಣಗಿಟ್ಟಿದೆ.
ಇದು ಕ್ರಿಶ 1894ರಲ್ಲಿ ನಿರ್ಮಾಣವಾಯಿತು. ಆಗ ವಿಶ್ವ ವ್ಯಾಪಾರ ಮೇಳದ ಸಂದರ್ಭದಲ್ಲಿ ಒಂದು ಪುಟ್ಟಗ್ರಾಮವಾಗಿತ್ತು. ನಂತರ ಮಕಾಟೋ ಹಗಿವಾರ ಎಂಬ ಭೂದೃಶ್ಯ ವಿನ್ಯಾಸ ತಜ್ಞ ಇದನ್ನ ನಾಲ್ಕೂವರೆ ಸಾವಿರ ಡಾಲರ್’ಗಳಿಗೆ ಖರೀದಿಸಿದ. ಅವನೇ ಈ ಉದ್ಯಾನವನ್ನು ನಿರ್ವಹಿಸಿ ಅಭಿವೃದ್ಧಿಪಡಿಸಿದ ಎಂಬ ಹಿನ್ನೆಲೆಯಿದೆ.
ಅಲ್ಲಿ ಆಕರ್ಷಕ ಪಗೋಡ, ಕೊಳ ಶಿಲಾದೀಪಸ್ಥಂಭ, ಕುಬ್ಜವೃಕ್ಷಗಳು ಮತ್ತು ಶಾಂತ ಮನಸ್ಥಿತಿಯ ಬುದ್ಧ ವಿಗ್ರಹಗಳು ನಮಗೆ ಕಾಣ ಸಿಗುತ್ತವೆ.
ಪಗೋಡ, ಬೌದ್ಧ ಸಂತರ ಸಮಾಧಿ. ಈ ವಿನ್ಯಾಸದಲ್ಲಿ ಬಹುಛಾವಣಿಗಳಿದ್ದು, ವರ್ಣಮಯವಾಗಿವೆ. ಭಾರತೀಯ ಸಾಧು ಸಂತರಿಗೆ ಕಟ್ಟಿದ ಸಮಾಧಿಗಳನ್ನು ನೋಡಿಯೇ ಈ ಮಾದರಿಗೆ ಪ್ರೇರಣೆ ಪಡೆಯಲಾಯಿತ್ನು ಅಲ್ಲಿನ ಉಬ್ಬು ಅಕ್ಷರಗಳ ಶಾಸನವೇ ಈ ಸಂಗತಿ ತಿಳಿಸುತ್ತದೆ.
ನಡೆಯುವ ಹಾದಿಯ ಅಕ್ಕಪಕ್ಕ ಒಂದೆರಡು ದೀಪಸ್ಥಂಭ ಕಾಣಸಿಗುತ್ತವೆ. ಶಿಲೆಯಿಂದ ನಿರ್ಮಿಸಿದ ಇವು ಆ ಹಸುರಿನ ಹಿನ್ನೆಲೆಯಲ್ಲಿ ಕಣ್ಣಿಗೆ ಮುದ ನೀಡುತ್ತವೆ. ಪುಟ್ಟ ಸರೋವರ, ಈಜುವ ಬಾತುಕೋಳಿಗಳು, ಚಿಲಪಿಲಿಗುಟ್ಟುವ ಹಕ್ಕಿಗಳು, ತಿಳಿಯಾಗಿ ನಿಂತ ನೀರಲ್ಲಿ ಕಾಣುವ ಕುಬ್ಜವೃಕ್ಷಗಳ ಪ್ರತಿಬಿಂಬ, ನೀಲಗಗನ ನಯನ ಮನೋಹರ. ಮೈಮರೆತು ಬಿಡುವ ಕ್ಷಣವದು. ಈ ನಿಸರ್ಗ ಸೌಂದರ್ಯದ ನಡುವೆ ವಧುವರರ ಫೋಟೋ ಸೆಷನ್ ನಡೆಯುತ್ತಿರುವ ಸಾಮಾನ್ಯ ದೃಶ್ಯ ನೋಡಬಹುದು. ಅಷ್ಟೇ ಅಲ್ಲ ಪ್ರವಾಸಿಗರೂ ಕೂಡ ಜಪಾನಿ ಕಟ್ಟಡ ವಿನ್ಯಾಸದ ಹಿನ್ನೆಲೆ ಬರುವಂತೆ ಫೋಟೋ ಕ್ಲಿಕ್ಕಿಸುತ್ತಾ.
ಸೌಂದರ್ಯ ಸವಿಯುತ್ತಾ ಹೆಜ್ಜೆ ಹಾಕಬೇಕು. ಥಟ್ಡನೆ ನಮ್ಮ ಬಲಬದಿಗೆ ಶಾಂತಮೂರ್ತಿ ಗೌತಮ ಬುದ್ಧ ಕಣ್ಸೆಳೆಯುತ್ತಾನೆ. ಅಲ್ಲಿ ಸದಾ ಭೇಟಿ ನೀಡುವ ಬೌದ್ಧರ ಸಮೂಹ ಬುದ್ಧಂ ಶರಣಂ ಗಚ್ಛಾಮಿ.. ಎಂದು ಮೆಲುದನಿಯಲ್ಲಿ ಉದ್ಗರಿಸುವುದನ್ನು ಒಂದು ಕ್ಷಣ ಕೇಳಬಹುದು.
ಕಣ್ಣು ನೋಡಿದತ್ತಲೆಲ್ಲ ಹಸಿರೋ ಹಸಿರು, ಮೈತುಂಬಾ ಮೊಗ್ಗು ಮುಡಿದ ಗಿಡಗಳು. ಚಿತ್ತಾಕರ್ಷಕ ಮಾದರಿಯಲ್ಲಿ ಉದ್ಯಾನದ ಬಳಸು ಹಾದಿ. ಹೆಜ್ಜೆ ಹಾಕಿ ನಡೆದರೆ ನೆಲವೂ ಕೂಡ ಮೃದು. ಇಷ್ಟೆಲ್ಲ ಆದ ಮೇಲೆ ಚಹಾಗೃಹದಲ್ಲಿ ವಿವಿಧ ಬಗೆಯ ಸ್ವಾದವುಳ್ಳ ಚಹಾಸೇವನೆ. ಅದರೊಂದಿಗೆ ಉದ್ಯಾನದ ಭೇಟಿಗೆ ಪೂರ್ಣ ವಿರಾಮ ಸಿಗುತ್ತದೆ.
ಸ್ಯಾನ್ ಫ್ರಾನ್ಸಿಸ್ಕೋಗೆ ಹೋದಾಗ ಈ ಉದ್ಯಾನದಲ್ಲಿ ಬಿಸಿಬಿಸಿ ಸ್ವಾದಭರಿತ ಚಹಾ ಹೀರುವುದನ್ನ ಮರೆಯಬೇಡಿ!
Get in Touch With Us info@kalpa.news Whatsapp: 9481252093
Discussion about this post