ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) 2025–26ನೇ ಸಾಲಿನ ಇಂಜಿನಿಯರಿಂಗ್ ಪರೀಕ್ಷಾ ರ‍್ಯಾಂಕ್‌ಗಳನ್ನು ಪ್ರಕಟಿಸಿದ್ದು, (Shivamogga) ಶಿವಮೊಗ್ಗದ ಜೆ’ಎನ್’ಎನ್ ಇಂಜಿನಿಯರಿಂಗ್ ಕಾಲೇಜಿನ (JNNCE) ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಒಟ್ಟು 8 ರ‍್ಯಾಂಕ್‌ಗಳನ್ನು ಪಡೆದು ಕಾಲೇಜಿಗೆ ಹೆಮ್ಮೆ ತಂದಿದ್ದಾರೆ.
ಜೆಎನ್’ಎನ್’ಸಿಇ ವಿದ್ಯಾರ್ಥಿಗಳ ಈ ಸಾಧನೆ ಕಾಲೇಜಿನ ಶೈಕ್ಷಣಿಕ ಗುಣಮಟ್ಟ, ಪರಿಣಾಮಕಾರಿ ಬೋಧನಾ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಸತತ ಪರಿಶ್ರಮಕ್ಕೆ ಮತ್ತೊಂದು ಸಾಕ್ಷಿಯಾಗಿದೆ.
ಎಲೆಕ್ಟ್ರಿಕಲ್ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್
ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಬಿ.ಎಂ. ಧನ್ಯಶ್ರೀ ಅವರು ಅತ್ಯುತ್ತಮ ಸಾಧನೆ ಮಾಡುವ ಮೂಲಕ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ವಿಶೇಷವೆಂದರೆ, ಅವರು ತಮ್ಮ ಶೈಕ್ಷಣಿಕ ಸಾಧನೆಗೆ 7 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಧನ್ಯಶ್ರೀ ಅವರ ಈ ಸಾಧನೆ ಕಾಲೇಜಿನ ಶೈಕ್ಷಣಿಕ ವಲಯದಲ್ಲಿ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದ್ದು, ವಿಭಾಗದ ವಿದ್ಯಾರ್ಥಿಗಳಿಗೆ ಹಾಗೂ ಮುಂದಿನ ಪೀಳಿಗೆಯ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.
ಎಐ ಮತ್ತು ಮೆಷಿನ್ ಲರ್ನಿಂಗ್ ವಿಭಾಗದಲ್ಲೂ ಸಾಧನೆ
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ (AI & ML) ವಿಭಾಗದ ಹರ್ಷಿಕ.ಎನ್. ಅವರು 4ನೇ ರ‍್ಯಾಂಕ್ ಪಡೆಯುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಕೃತಕ ಬುದ್ಧಿಮತ್ತೆ ಹಾಗೂ ಮೆಷಿನ್ ಲರ್ನಿಂಗ್‌ನಂತಹ ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚುತ್ತಿರುವ ಸಂದರ್ಭದಲ್ಲಿ, ಈ ವಿಭಾಗದಲ್ಲಿ ವಿಟಿಯು ರ‍್ಯಾಂಕ್ ಪಡೆಯುವ ಮೂಲಕ ಹರ್ಷಿಕ ಗಮನ ಸೆಳೆದಿದ್ದಾರೆ.
Also Read>> ವಿಜಯೇಂದ್ರರನ್ನು ಸೋಲಿಸುವುದೇ ನಮ್ಮ ಗುರಿ: ಮಧು ಬಂಗಾರಪ್ಪ
ಇಟಿಸಿ ವಿಭಾಗದಲ್ಲಿ ಆರು ರ‍್ಯಾಂಕ್
ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗ ಕೂಡ ಗಮನಾರ್ಹ ಸಾಧನೆ ಮಾಡಿದೆ. ಈ ವಿಭಾಗದ ಐವರು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಆರು ರ‍್ಯಾಂಕ್‌ಗಳು ಕಾಲೇಜಿನ ಪಾಲಾಗಿವೆ.
- ನಯ್ಯರ್ ಫಾತೀಮ ಅಫ್ರಿನ್ – 3ನೇ ರ‍್ಯಾಂಕ್
- ಯಶಸ್ಕರ.ಟಿ.ಜಿ. – 4ನೇ ರ‍್ಯಾಂಕ್
- ಭೂಮಿಕ.ಎಂ. – 5ನೇ ರ‍್ಯಾಂಕ್
- ಜಾರ್ಜ್.ಟಿ.ಪೌಲ್ – 6ನೇ ರ‍್ಯಾಂಕ್
- ನಿತ್ಯಶ್ರೀ ಹೆಗಡೆ.ಕೆ.ಎನ್. – 8ನೇ ರ‍್ಯಾಂಕ್
- ಸ್ವಾತಿ.ಎಸ್.ಜಿ. – 10ನೇ ರ‍್ಯಾಂಕ್
ಒಂದೇ ವಿಭಾಗದ ಹಲವು ವಿದ್ಯಾರ್ಥಿಗಳು ವಿಟಿಯು ಮಟ್ಟದಲ್ಲಿ ರ‍್ಯಾಂಕ್ ಗಳಿಸಿರುವುದು ವಿಭಾಗದ ಶೈಕ್ಷಣಿಕ ಸಾಧನೆಗೆ ಮತ್ತಷ್ಟು ಬಲ ನೀಡಿದೆ.
JNNCE : ಶೈಕ್ಷಣಿಕ ಶ್ರೇಷ್ಠತೆಗೆ ಮತ್ತೊಂದು ಮನ್ನಣೆ
ಜೆಎನ್’ಎನ್’ಸಿಇ ವಿದ್ಯಾರ್ಥಿಗಳ ಈ ಸಾಧನೆಯ ಕುರಿತು ಪ್ರತಿಕ್ರಿಯಿಸಿರುವ ಕಾಲೇಜಿನ ಪ್ರಾಂಶುಪಾಲರಾದ ಡಾ. ವೈ. ವಿಜಯಕುಮಾರ್, ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ರ‍್ಯಾಂಕ್ ಪಡೆಯುವ ಮೂಲಕ ಸಂಸ್ಥೆಯ ಶೈಕ್ಷಣಿಕ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಗುಣಮಟ್ಟದ ಬೋಧನೆ, ವಿದ್ಯಾರ್ಥಿಗಳ ಶಿಸ್ತುಬದ್ಧ ಅಧ್ಯಯನ, ನಿರಂತರ ಮಾರ್ಗದರ್ಶನ ಮತ್ತು ಪರಿಶ್ರಮದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವಿಟಿಯು ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ಸಾಧನೆಯನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿ ಸದಸ್ಯರು, ಕಾಲೇಜಿನ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ವಿದ್ಯಾರ್ಥಿಗಳು ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡುವಂತೆ ಶುಭ ಹಾರೈಸಿದ್ದಾರೆ.
ಒಟ್ಟಾರೆ, ವಿಟಿಯು 2025–26ನೇ ಸಾಲಿನ ರ‍್ಯಾಂಕ್ ಪಟ್ಟಿಯಲ್ಲಿ ಜೆಎನ್’ಎನ್’ಸಿಇ ವಿದ್ಯಾರ್ಥಿಗಳ ಈ ಸಾಧನೆ ಶಿವಮೊಗ್ಗದ ತಾಂತ್ರಿಕ ಶಿಕ್ಷಣ ಕ್ಷೇತ್ರಕ್ಕೆ ಮತ್ತೊಂದು ಹೆಮ್ಮೆಯ ಸಂಗತಿಯಾಗಿದ್ದು, ರಾಜ್ಯಮಟ್ಟದಲ್ಲಿ ಸಂಸ್ಥೆಯ ಶೈಕ್ಷಣಿಕ ಛಾಪನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









