ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕಡೂರು: ವಿಧಾನ ಪರಿಷತ್ ಉಪಸಭಾಪತಿ, ಜೆಡಿಎಸ್ ನಾಯಕ ಎಸ್. ಎಲ್. ಧರ್ಮೇಗೌಡ ಅವರು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರು ಮೃತದೇಹದ ಬಳಿಯಲ್ಲಿ ಡೆತ್ ನೋಟ್ ಪತ್ತೆಯಾಗಿದೆ.
ನಿನ್ನೆ ರಾತ್ರಿ ಅವರು ತಮ್ಮ ಮನೆಯಿಂದ ಒಬ್ಬರೇ ತೆರಳಿದ್ದರು. ರಾತ್ರಿ 10.30 ಆದರೂ ಹಿಂತಿರುಗದ ಕಾರಣ ಅವರನ್ನು ಬಹಳಷ್ಟು ಹುಡುಕಲಾಗಿತ್ತು. ಆದರೆ, ರಾತ್ರಿ ಬೆಂಗಳೂರು ರೈಲಿಗೆ ಸಿಲುಕಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದ್ದು, ದೇಹ ಛಿದ್ರಗೊಂಡಿದೆ.
ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತರ ಅಂತ್ಯಕ್ರಿಯೆ ಇಂದು ಸಂಜೆ ಸಖರಾಯಪಟ್ಟಣದ ಸರಪನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ.
ದೇವೇಗೌಡರ ಕುಟುಂಬಕ್ಕೆ ಧರ್ಮೇಗೌಡರು ಆಪ್ತರಾಗಿದ್ದರು. ಹೆಚ್.ಡಿ. ಕುಮಾರಸ್ವಾಮಿ ಆಪ್ತರಾಗಿದ್ದ ಧರ್ಮೇಗೌಡರು ನಿನ್ನೆ ರಾತ್ರಿ 7 ಗಂಟೆ ಸುಮಾರಿಗೆ ಒಬ್ಬರೇ ಮನೆಯಿಂದ ಕಾರ್ ನಲ್ಲಿ ತೆರಳಿದ್ದಾರೆ. ಗನ್ ಮ್ಯಾನ್ ಮತ್ತು ಎಸ್ಕಾರ್ಟ್ ಸಿಬ್ಬಂದಿಯನ್ನು ಮನೆಗೆ ಕಳುಹಿಸಿ ಒಬ್ಬರೇ ಕಾರ್ ನಲ್ಲಿ ತೆರಳಿದ್ದಾರೆ. ರಾತ್ರಿ 10 ಗಂಟೆಯಾದರೂ ಅವರು ಮನೆಗೆ ವಾಪಸ್ ಆಗದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಲಾಗಿದ್ದು, 11:30 ರ ವೇಳೆಗೆ ಗುಣಸಾಗರ ಸಮೀಪ ಅವರ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
1955 ಡಿಸೆಂಬರ್ 16 ರಂದು ಚಿಕ್ಕಮಗಳೂರು ತಾಲೂಕಿನ ಸರಪನಹಳ್ಳಿಯಲ್ಲಿ ಎಸ್.ಆರ್. ಲಕ್ಷ್ಮಯ್ಯ, ಕೃಷ್ಣಮ್ಮ ದಂಪತಿ ಮಗನಾಗಿ ಜನಿಸಿದ್ದು, ಮಮತಾ ಅವರೊಂದಿಗೆ ಮದುವೆಯಾಗಿದ್ದರು. ಅವರಿಗೆ ಮಗ ಸೋನಾಲ್, ಮಗಳು ಸಲೋನಿ ಇದ್ದಾರೆ. ಜೆಡಿಎಸ್ ಪಕ್ಷದಿಂದ ಕಡೂರು ಕ್ಷೇತ್ರದ ಶಾಸಕರಾಗಿದ್ದರು. ವಿಧಾನ ಪರಿಷತ್ ಸದಸ್ಯರಾಗಿ ಉಪಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಅವರ ಸಹೋದರ ಭೋಜೇಗೌಡ ಕೂಡ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.
ಧರ್ಮೇಗೌಡರ ಅಂತ್ಯಕ್ರಿಯೆಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.
ಧರ್ಮೇಗೌಡ ಅವರ ಆತ್ಮಹತ್ಯೆ ಸುದ್ದಿ ಕೇಳಿದ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆಘಾತ ವ್ಯಕ್ತಪಡಿಸಿದ್ದಾರೆ. ಧರ್ಮೇಗೌಡರು ತಾಳ್ಮೆಯ ಸಭ್ಯ ವ್ಯಕ್ತಿಯಾಗಿದ್ದರು. ಅವರ ನಿಧನ ಪಕ್ಷಕ್ಕೆ ಮತ್ತು ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಡೆತ್ ನೋಟ್’ನಲ್ಲಿ ಏನಿದೆ?
ಇನ್ನು ಸ್ಥಳದಲ್ಲಿ ಡೆತ್ ನೋಟ್ ದೊರೆತಿದ್ದು, ಪರಿಷತ್’ನಲ್ಲಿ ನಡೆದ ಗಲಾಟೆ ಬಗ್ಗೆ ಪ್ರಸ್ತಾಪ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಕುಟುಂಬದವರ ಕ್ಷಮೆ ಕೇಳಿರುವ ಅವರು, ತಾವು ನಿರ್ಮಿಸುತ್ತಿದ್ದ ಮನೆಯನ್ನು ಪೂರ್ಣಗೊಳಿಸುವಂತೆ ತಮ್ಮ ಮಗನಿಗೆ ಪತ್ರದಲ್ಲಿ ಸೂಚಿಸಿದ್ದಾರೆ. ಅಲ್ಲದೇ, ತಮ್ಮ ಆಸ್ತಿಪಾಸ್ತಿ, ಹಣ, ಸೇರಿದಂತೆ ಎಲ್ಲ ವಿವರಗಳನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post