ಶಿವಮೊಗ್ಗ: 2019ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪ್ರಚಾರ ಕಾರ್ಯಗಳೊಂದಿಗೆ ಸೋಲು ಗೆಲುವಿನ ಚರ್ಚೆಗಳು ಆರಂಭವಾಗಿದ್ದು, ಈಗಲೇ ಮತಗಳ ಅಂತರಗಳ ಕುರಿತಾಗಿಯೂ ಎಲ್ಲೆಡೆ ಚರ್ಚೆಯಾಗುತ್ತಲೇ ಇದೆ.
ಈ ಹಿನ್ನೆಲೆಯಲ್ಲಿ ವಿನೂತನ ಸಾಹಸಕ್ಕೆ ಕೈ ಹಾಕಿರುವ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ, ‘ಕಲ್ಪ ನ್ಯೂಸ್ ಲೋಕಾ ಯಾತ್ರೆ’ ಎಂಬ ಹೆಸರಿನ ಅಡಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡುವ ಸಾಹಸಕ್ಕೆ ಕೈಹಾಕಿದೆ.
ಚುನಾವಣಾ ನೀತಿ ಸಂಹಿತೆಯಿರುವ ಹಿನ್ನೆಲೆಯಲ್ಲಿ ಯಾವ ಪಕ್ಷ ಅಥವಾ ಅಭ್ಯರ್ಥಿಗೆ ಎಷ್ಟು ಶೇಕಡಾವಾರು ಮತ ಬೀಳಬಹುದು, ಒಟ್ಟಾರೆ ಯಾರ ಗೆಲುವು ನಿಶ್ಚಿತ ಎಂಬುದನ್ನು ನಾವು ಸ್ಪಷ್ಟವಾಗಿ ಹೇಳುವುದಿಲ್ಲ. ಇಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರವಾಗಿ ಅಥವಾ ವಿರೋಧವಾಗಿ ಸಮೀಕ್ಷೆ ನಡೆಸದೇ, ಸದರಿ ಭಾಗದ ಸಮಸ್ಯೆಗಳು, ಜನರ ಮನದಾಳದ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಜನರಿಗೆ ತಿಳಿಸುವ ಸಲುವಾಗಿ ಸ್ವತಂತ್ರವಾಗಿ ವಾಸ್ತವ ಸಮೀಕ್ಷೆಯನ್ನು ನಡೆಸಲಾಗಿದೆ. ಪ್ರತಿನಿತ್ಯ ನಮ್ಮ ತಂಡ ನೂರಾರು ಮತದಾರರನ್ನು ಮಾತನಾಡಿಸುತ್ತಿದ್ದು, ಇದರಲ್ಲಿ ಆಯ್ದ ಕೆಲವರ ಅನಿಸಿಕೆಗಳನ್ನು ಮಾತ್ರ ಪ್ರಕಟಿಸಿ, ಒಟ್ಟಾರೆಯಾಗಿ ಸದರಿ ಭಾಗದಲ್ಲಿನ ಒಲವು ಯಾರಿಗಿದೆ ಎಂಬುದನ್ನು ಓದುಗರಿಗೆ ತಿಳಿಸಿ, ನಿರ್ಧಾರವನ್ನೂ ಅವರಿಗೇ ಬಿಡುತ್ತೇವೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಾರ್ವಜನಿಕ ಚುನಾವಣೆ-2019: ರಿಪ್ಪನ್’ಪೇಟೆ, ಗರ್ತಿಕೆರೆ, ಕೋಣಂದೂರು, ಗೌತಮಪುರ, ಕನ್ನಂಗಿ ಭಾಗದಲ್ಲಿನ ಮತದಾರರ ಒಲವು, ನಿಲುವು:
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ:
ಶಾಸಕರು: ಆರಗ ಜ್ಞಾನೇಂದ್ರ
ಸಮೀಕ್ಷೆಯ ಒಟ್ಟಾರೆ ನಿರೀಕ್ಷಿತ ಫಲಿತಾಂಶ: ಬಿಜೆಪಿ-ಜೆಡಿಎಸ್-55:45
ರಾಘವೇಂದ್ರ ಅವಧಿಯಲ್ಲಿ ರೈಲು ನಿಲ್ದಾಣವಾಗಿದೆ. ಆದರೆ, ಕೃಷಿಕರಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕಿರುಕುಳ ನೀಡುತ್ತಿದ್ದು, ಇದರಿಂದ ಮುಕ್ತಿ ಬೇಕಿದೆ. ಅಲ್ಲದೇ, ಸುಮಾರು 4 ರಿಂದ 5 ಹಳ್ಳಿಗಳಿಗೆ ಸಹಾಯವಾಗುವ ಹಳಿಯಾರು ಸೇತುವೆ ನಿರ್ಮಾಣವಾಗಬೇಕಿದೆ. ಈ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಇದು ಲೋಕಸಭಾ ಚುನಾವಣೆಯಾದ್ದರಿಂದ ದೇಶವನ್ನೂ ನೋಡಬೇಕು. ಹೀಗಾಗಿ, ದೇಶವನ್ನು ರಕ್ಷಿಸುತ್ತಿರುವ ಮೋದಿ ಮತ್ತೆ ಪ್ರಧಾನಿಯಾಗಬೇಕು.

ಶಾಸಕರಿಂದ ಯಾವುದೇ ದೊಡ್ಡ ಕೆಲಸಗಳು ಆಗಿಲ್ಲ. ಅಲ್ಲದೇ ರಾಘವೇಂದ್ರ ಅವರು ಸಂಸದರಾದ ನಂತರ ಯಾವುದೇ ರೀತಿಯ ಮಹತ್ವದ ಕಾರ್ಯಗಳು ನಮ್ಮೂರಲ್ಲಿ ಆಗಿಲ್ಲ. ಹಿಂದೆ ಬಂಗಾರಪ್ಪ ಅವರಿಂದ ನಮಗೆಲ್ಲಾ ಕೆಲಸವಾಗಿದೆ. ಹೀಗಾಗಿ, ಅವರ ಪುತ್ರನನ್ನು ಬೆಂಬಲಿಸೋಣ ಎಂದುಕೊಂಡಿದ್ದೇವೆ. ಇದರ ಜೊತೆಯಲ್ಲಿ ಮೋದಿ ಅಲೆಯೂ ಸಹ ನಮ್ಮೂರಲ್ಲಿ ಇದ್ದು, ಇದು ಬಿಜೆಪಿಗೆ ಕೊಂಚ ಮತಗಳನ್ನುಕೊಡಿಸಬಹುದು. ಪ್ರಮುಖವಾಗಿ ನಮ್ಮೂರಿನ ಸನಿಹ ಕರಡಿಗ ಬಳಿಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಜನರಿಗೆ ಪ್ರಯೋಜನವಾಗುವ 100 ಮೀಟರ್ ಉದ್ದದ ಸೇತುವೆ ನಿರ್ಮಾಣವಾಗಬೇಕಿದೆ.

-ಶಿವಪ್ಪ, ನಾಗಣ್ಣ, ಸತ್ಯನಾರಾಯಣ, ನಾಗರಾಜ್: ಹೆದ್ದಾರಿಪುರ
ದೇಶ ಸೇವೆ ಮಾಡುವವರು, ಸರ್ವರನ್ನೂ ಸಮನಾಗಿ ಕಾಣುವವರು ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಲಿ. ನಮ್ಮೂರು ಗೌತಮಪುರದ ವಿಚಾರದಲ್ಲಿ ಹೇಳುವುದಾದರೆ, ಅಲ್ಲಿ ಆಸ್ಪತ್ರೆ ಸೌಕರ್ಯ ಬೇಕು, ವೈದ್ಯರು ಸದಾ ಸಿಗುವಂತಾಗಬೇಕು, ಮೊಬೈಲ್ ಟವರ್ ಬೇಕು ಹಾಗೂ ನಮ್ಮೂರಲ್ಲೇ ಪ್ರೌಢಶಾಲೆ ಬೇಕು.

ಹಿಂದೆ ಉಪಚುನಾವಣೆಯಲ್ಲಿ ರಾಘವೇಂದ್ರ ಲೀಡ್ ಪಡೆದಿದ್ದರು. ಆದರೆ ಈ ಬಾರಿ ಕೊಂಚ ಕಷ್ಟವಿದ್ದು, ಇಲ್ಲಿನ ಸರಾಸರಿ ಸಮ ಬಲ ಇದೆ ಎನ್ನಬಹುದು. ಅಲ್ಲದೇ, ಮೈತ್ರಿ ಪಕ್ಷವಾದ್ದರಿಂದ ಅವರಿಗೇ ಹೆಚ್ಚು ಲಾಭದಂತಿದೆ. ಅಲ್ಲದೇ, ಇಲ್ಲಿನ ಈಡಿಗ ಹಾಗೂ ಲಿಂಗಾಯತ ಸಮುದಾಯದವರೇ ನಿರ್ಣಾಯಕರು. ಯಡಿಯೂರಪ್ಪ ಹಾಗೂ ರಾಘವೇಂದ್ರ ಅವರಿಂದ ನಮ್ಮೂರಿಗೆ ಕೆಲಸವಾಗಿದೆ. ಇದು ಅವರಿಗೆ ಸಹಕಾರಿಯಾಗುವ ವಾತಾವರಣವಿದೆ.

ಯುವಕರಲ್ಲಿ ಮೋದಿ ಅಲೆ ಇದೆ. ಇದು ಬಿಜೆಪಿಗೆ ಸಹಕಾರಿಯಾಗಬಹುದು.
-ಶಿವಪ್ಪ, ಹೊಟೇಲ್ ಮಾಲೀಕ
ಇಲ್ಲಿ ಜೆಡಿಎಸ್’ಗೆ ಹೆಚ್ಚು ಬಲ ಎನ್ನಬಹುದಾಗಿದ್ದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ 50:50ರಷ್ಟು ಸೆಣೆಸಾಟವಿದೆ.
-ಚಂದ್ರಪ್ಪ, ಕೃಷಿಕರು
ಇಲ್ಲಿನ ಗ್ರಾಮ ಪಂಚಾಯ್ತಿ ಬಿಜೆಪಿಯದ್ದೇ ಆದ್ದರಿಂದ ರಾಘವೇಂದ್ರ ಅವರಿಗೆ ಸಹಕಾರಿಯಾಗಬಹುದು. ಇವರಿಂದ ಕೆಲವು ಕೆಲಸವೂ ಸಹ ಆಗಿದೆ. ಈಡಿಗರು ಹೆಚ್ಚಿರುವ ಇಲ್ಲಿ, ಮಧು ಬಂಗಾರಪ್ಪ ಅವರ ಕುರಿತಾಗಿ ಅನುಕಂಪವೂ ಸಹ ಇದೆ. ನಕ್ಸಲ್ ಪೀಡಿತ ಕೊರ್ನಕೋಟೆ ಭಾಗದಲ್ಲಿ ಹಿಂದೆ ಕಿಮ್ಮನೆ ರತ್ನಾಕರ್ ಅವರು ಕೆಲಸವನ್ನು ಮಾಡಿದ್ದಾರೆ. ಇನ್ನು, ಸಮಸ್ಯೆ ಕುರಿತಾಗಿ ಹೇಳುವುದಾದರೆ, ನಮ್ಮೂರಿನ ಪ್ರಾಥಮಿಕ ಶಾಲೆಯ ಕೊಠಡಿಗಳು ದುರಸ್ಥಿಯಾಗಬೇಕಿದೆ. ಇದರು ಆಗದೇ ಇದ್ದಲ್ಲಿ ಎಂದಾದರೂ ಅಪಾಯ ನಿಶ್ಚಿತ. ಇನ್ನು, ಇಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಶಿವಮೊಗ್ಗದಲ್ಲಿ ವಾಸವಾಗಿದ್ದಾರೆ. ಸಂಜೆ ನಂತರ ಯಾರಿಗಾದರೂ ಆರೋಗ್ಯ ಹದಗೆಟ್ಟರೆ ಕೋಣಂದೂರಿಗೇ ಹೋಗಬೇಕು. ಹೀಗಾಗಿ, ವೈದ್ಯರು ಇಲ್ಲೇ ವಾಸಿಸುವಂತೆ ಆಗಬೇಕು.

ನಮ್ಮೂರಿನ ಸ್ಮಶಾನದ ಸಮಸ್ಯೆ ವಿಚಾರದಲ್ಲಿ ಎಷ್ಟೇ ಪ್ರಯತ್ನಪಟ್ಟರೂ ಯಾರೂ ಇದನ್ನು ಪರಿಹಾರ ಮಾಡಲಿಲ್ಲ. ಹೀಗಾಗಿ, ಈ ಬಾರಿ ಬದಲಾವಣೆ ಮಾಡೋಣ ಎಂದು ನಿರ್ಧರಿಸಿದ್ದೇವೆ. ನಾವು ಜಾತಿ ನೋಡುವುದಿಲ್ಲ, ಬದಲಾಗಿ ಕೆಲಸ ನೋಡುತ್ತೇವೆ. ಸ್ಮಶಾನದ ಸಮಸ್ಯೆಯನ್ನು ಪರಿಹಾರ ಮಾಡಿಕೊಡುವವರಿಗೆ ನಮ್ಮ ಬೆಂಬಲ. ಇಲ್ಲೆಲ್ಲಾ ಮೋದಿ ಅಲೆ ಇಲ್ಲ. ನಮ್ಮ ಸಮಸ್ಯೆ ಮೊದಲು, ಆನಂತರ ದೇಶ.

ಇಲ್ಲಿ ಕಾಂಗ್ರೆಸ್ ಹೆಚ್ಚಾಗಿದೆ. ಆದರೆ, ಈ ಬಾರಿ ಮೈತ್ರಿ ಅಭ್ಯರ್ಥಿಗೆ ಬೆಂಬಲ. ರಾಘವೇಂದ್ರ ಅವರ ಬದಲಾಗಿ ಪರ್ಯಾಯ ವ್ಯಕ್ತಿಗೆ ಅವಕಾಶ ನೀಡೋಣ ಎಂದಿದ್ದೇವೆ. ಇಲ್ಲಿ ಕಿಮ್ಮನೆ ರತ್ನಾಕರ್ ಅವರಿಂದ ಕೆಲಸವಾಗಿದೆ. ಇನ್ನು, ಮೋದಿ ಅಲೆ ನಮ್ಮ ಊರಿನಲ್ಲಿ ಇಲ್ಲ. ನಮಗೆಲ್ಲಾ ಎಸ್. ಬಂಗಾರಪ್ಪ ಅವರ ಮೇಲೆ ಇಂದಿಗೂ ಅಭಿಮಾನವಿದೆ.

ಆರಗ ಜ್ಞಾನೇಂದ್ರ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಇಲ್ಲಿ ಮೋದಿ ಅಲೆಯೂ ಸಹ ಇದೆ. ಆದರೂ ಇಲ್ಲಿ ಸಮಾ ಸಮ ಸೆಣೆಸಾಟ ಇರುವುದಂತೂ ಸತ್ಯ. ಯಾರೇ ಮೈಮರೆತರೂ ಪೆಟ್ಟು ನಿಶ್ಚಿತ. ದೇಶದ ಮಟ್ಟಿಗೆ ನೋಡುವುದಾದರೆ, ದೇಶದ ಮುಂಚೂಣಿ ಹೋರಾಟಗಾರ, ದೇಶವನ್ನು ರಕ್ಷಿಸುತ್ತಿರುವ ಮೋದಿ ಮತ್ತೆ ಪ್ರಧಾನಿಯಾಗಲೇಬೇಕು.

-ಸಚಿನ್, ಕೋಣಂದೂರು
-ಸಚಿನ್, ಹೊಸನಗರ
(ವಿದ್ಯಾರ್ಥಿ ಯುವ ಮತದಾರರು)
ಇಲ್ಲಿ ಬಿಜೆಪಿಯದ್ದೇ ಹವಾ. ಇದರೊಂದಿಗೆ ಮೋದಿ ಅಲೆಯೂ ಸಹ ಇದೆ. ಎರಡೂ ಪಕ್ಷದವರು ಬಂದು ಹೋಗಿದ್ದಾರೆ. ಆದರೆ, ನಮ್ಮಲ್ಲಿನ ಬೆಂಬಲ ಮೋದಿ ಅವರಿಗೆ. ನಮ್ಮೂರಿನ ಮಟ್ಟಿಗೆ ನೋಡುವುದಾದರೆ, ಕೋಣಂದೂರಿಗೆ ಒಂದು ಡಿಗ್ರಿ ಕಾಲೇಜು ಬೇಕು.

ಸಾಲಮನ್ನಾ ಅಂತಾರೆ ಯಾರಿಗೆ ಬಂದಿದೆ. ನಮ್ಮೂರಲ್ಲಿಯಂತೂ ಯಾರಿಗೂ ಮನ್ನಾ ಆಗಿಲ್ಲ. ಬರೀ ದುಡ್ಡಿದ್ದವರಿಗೆ ಮನ್ನಾ ಮಾಡುತ್ತಾರೆ. ನಮ್ಮಂತವರನ್ನು ಯಾರೂ ಕೇಳುವುದಿಲ್ಲ. ನಮ್ಮಲ್ಲಿ ವಿದ್ಯುತ್ ಸಮಸ್ಯೆಯಿದ್ದು ದಿನದಲ್ಲಿ ಕೇವಲ 3 ಗಂಟೆ ಇರುತ್ತದೆ. ಇಲ್ಲಿ, ಯಾರಿಗೂ ಅನುಕಂಪವಿಲ್ಲ. ಬದಲಾಗಿ, ಸ್ಥಳೀಯ ಹಾಗೂ ದೇಶದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತವಿರಬೇಕು. ಗೊಬ್ಬರಕ್ಕೆ ಸಬ್ಸಿಡಿ ಬೇಕು. ಇದೊಂದು ವಿಚಾರ ಮಾಡಿದರೆ ನಮ್ಮ ಸಾಲವನ್ನು ನಾವೇ ತೀರಿಸಿಕೊಳ್ಳುತ್ತೇವೆ. ಯಾರೂ ಸಾಲಮನ್ನಾ ಮಾಡುವುದು ಬೇಡ.

ಈ ಭಾಗದ ಸಮೀಕ್ಷೆ ಕುರಿತಾಗಿ ನಮ್ಮ ಒಟ್ಟಾರೆ ಅಭಿಪ್ರಾಯ:
ಈ ಭಾಗದಲ್ಲಿ ಒಟ್ಟಾರೆಯಾಗಿ ಬಿಜೆಪಿ-ಮೈತ್ರಿ ಅಭ್ಯರ್ಥಿಗೆ 60:40 ಸೆಣೆಸಾಟವಿದ್ದರೂ ಕೆಲವು ಭಾಗದಲ್ಲಿ ಬಿಜೆಪಿ ಬಲವಾಗಿದ್ದರೆ, ಇನ್ನು ಕೆಲವು ಭಾಗದಲ್ಲಿ ಬಿಜೆಪಿಗೆ ವಿರೋಧವಿದ್ದು, ಜೆಡಿಎಸ್’ಗೆ ಮತ ಚಲಾವಣೆಯಾಗಲಿವೆ.
ಮಲೆನಾಡು ಭಾಗದಲ್ಲಿ ಹಲವಾರು ಸಮಸ್ಯೆಗಳು ಮಡುಗಟ್ಟಿದ್ದು, ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ದೊಡ್ಡ ಮಟ್ಟದ ನಾಯಕರೂ ಸಹ ಯಾವುದೇ ರೀತಿಯ ಸ್ಪಂದನೆಯಿಲ್ಲ ಎಂಬುದು ಇಲ್ಲಿನವರ ಆಕ್ರೋಶವಾಗಿದೆ. ಆದರೂ ಸಹ ಹಲವು ಅಭಿವೃದ್ಧಿ ಕಾರ್ಯಗಳು ಇಲ್ಲಿ ಕಾಣುತ್ತವೆ.
ಇದರ ನಡುವೆಯೇ ಮತದಾನಕ್ಕೆ ಇನ್ನೊಂದು ದಿನ ಬಾಕಿಯಿದ್ದು, ಈ ಭಾಗದ ಮಂದಿ ಯಾರಿಗೆ ಒಲಿಯಲಿದ್ದಾರೆ ಎಂಬ ಕುತೂಹಲ ಮೂಡಿದೆ.
-ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವಿಶೇಷ ಸೂಚನೆ: ಈ ಚುನಾವಣಾ ಸಮೀಕ್ಷಾ ವರದಿ ಯಾವುದೇ ಪಕ್ಷಕ್ಕೆ ಅಥವಾ ಅಭ್ಯರ್ಥಿಯ ಪರವಾಗಿ ನಡೆಸಲಾಗಿರುವುದಿಲ್ಲ. ಬದಲಾಗಿ, ನಮ್ಮ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಪ್ರತಿನಿಧಿಗಳು ಜನಸಾಮಾನ್ಯರನ್ನು ಖುದ್ದು ಸಂಪರ್ಕಿಸಿ, ಅವರ ಕಷ್ಟ-ಸುಖ ಹಾಗೂ ಚುನಾವಣೆ ಕುರಿತಾಗಿನ ಅವರ ಮನದಾಳದ ಭಾವನೆ ಹಾಗೂ ಅಭಿಪ್ರಾಯವನ್ನು ಸಂಗ್ರಹಿಸಿ, ಓದುಗರಿಗೆ ವಾಸ್ತವಾಂಶವನ್ನು ತೆರೆದಿಡುವ ಪ್ರಾಮಾಣಿಕ ಸೇವಾ ಕಾರ್ಯವನ್ನಷ್ಟೇ ಮಾಡಿದೆ.







Discussion about this post